ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ

ಬಿಬಿಎಂಪಿ ಬೇಗುದಿ
Last Updated 10 ಜನವರಿ 2014, 19:30 IST
ಅಕ್ಷರ ಗಾತ್ರ

ಹೂಳಿಗೂ ಭ್ರಷ್ಟರ ‘ಬಾಯಿ’
ರಾಜಕಾಲುವೆ ಹೂಳಿಗೂ ಭ್ರಷ್ಟರು ಬಾಯಿ ಹಾಕಿದ್ದಾರೆ. ಹೂಳೆತ್ತದ ಕಾಮ­ಗಾರಿಗೆ ₨ 400 ಕೋಟಿ ವೆಚ್ಚವಾಗಿದೆ. ‘ಜೆ–ನರ್ಮ್‌’ ಯೋಜನೆಯಲ್ಲಿ ‘ಕೈಗೊಂಡ’

ಈ ಕಾಮಗಾರಿಗೆ ಹಣ ಬಿಡು­ಗಡೆ ಮಾಡುವುದಿಲ್ಲ ಎಂದು ಕೇಂದ್ರ ಮೂಗು ಬಿಗಿಹಿಡಿದು ಕುಳಿತು­ಬಿಟ್ಟಿದೆ. ಕೇಂದ್ರದ ಅನುದಾನ ನಿರೀಕ್ಷಿಸಿ ಹಣವನ್ನು ಖರ್ಚು ಮಾಡಿರುವ ಬಿಬಿ­ಎಂಪಿಗೆ ಈಗ ಬಾಯಿ ಬಿಡಲೇಬೇಕಾದ ಸ್ಥಿತಿ ಬಂದೊದಗಿದೆ. ಈ ಭ್ರಷ್ಟಾಚಾರಕ್ಕೆ ಪ್ರಶಸ್ತಿ ನೀಡಬೇಕು ಎಂದು ಹೇಳುತ್ತಾರೆ ಸಚಿವ ರೋಷನ್‌ ಬೇಗ್‌. ಪ್ರಶಸ್ತಿ ನೀಡಿದರೆ ಸಾಲದು, ಅದಕ್ಕೆ ಕಾರಣ­ರಾದ­ವರನ್ನು ಹೊತ್ತು ಮೆರವಣಿಗೆ ಕೂಡ ಮಾಡ­ಬೇಕು, ಅದೂ ಪರಪ್ಪನ ಅಗ್ರಹಾರ­ದವರೆಗೆ ಎನ್ನುತ್ತಾರೆ ಜನ.

‘ಕಾಣಿಕೆ’ ಮೇಲೆ ಪ್ರೀತಿ
ಬಿಬಿಎಂಪಿ ವಿರುದ್ಧ 6,500ಕ್ಕೂ ಅಧಿಕ ಪ್ರಕರಣಗಳು ಹೈಕೋರ್ಟ್‌­ನಲ್ಲಿ ದಾಖ­ಲಾಗಿವೆ. ಅದರಲ್ಲಿ 3,200ಕ್ಕೂ ಅಧಿಕ ಪ್ರಕರಣಗಳಲ್ಲಿ ಬಿಬಿಎಂಪಿ ವಿರು­ದ್ಧವೇ ತೀರ್ಪು ಬಂದಿದೆ. ‘ನಮ್ಮ ಅಧಿ­ಕಾರಿ­ಗಳಿಗೆ ಸಂಸ್ಥೆಯ ಆಸ್ತಿ ಉಳಿಸು­ವುದ­ಕ್ಕಿಂತ ಎದುರಾಳಿಗಳಿಗೆ ಅನುಕೂಲ ಮಾಡಿ­­ಕೊಟ್ಟು, ಪಡೆಯುವ ‘ಕಾಣಿಕೆ’ ಮೇಲೆ ಹೆಚ್ಚು ಪ್ರೀತಿ’ ಎಂದು ಶಾಸಕ­ರೊಬ್ಬರು ಆರೋಪ ಮಾಡುತ್ತಾರೆ.

ಎರವಲು ಸೇವೆ: ಒಟ್ಟು ಸಿಬ್ಬಂದಿಯ ಶೇ 30ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎರವಲು ಸೇವೆ ಅಧಿಕಾರಿ­ಗಳನ್ನು ಪಡೆಯುವಂತಿಲ್ಲ ಎನ್ನು­ತ್ತದೆ ನಿಯಮ. ಆದರೆ, ಪ್ರಮುಖ ಹುದ್ದೆ­ಗಳಲ್ಲಿ ಎರವಲು ಬಂದವರೇ ರಾರಾ­ಜಿ­ಸುತ್ತಿದ್ದು, ಅವರು ಮಾಡುವ ತಪ್ಪು ಎದ್ದು­ಕಂಡರೂ ಕ್ರಮ ಕೈಗೊಳ್ಳ­ಲಾಗದ ಅಸಹಾ­ಯಕ ಸ್ಥಿತಿಯಲ್ಲಿ ಬಿಬಿ­ಎಂಪಿ ಇದೆ.

ಲಂಚದ ಲೆಕ್ಕಾಚಾರ
ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ವಿತರಣೆ­ಯಾಗುವ ಲಂಚ ಎಷ್ಟು? ಕುತೂಹಲಕ್ಕೆ ಗುತ್ತಿಗೆದಾರ­ರೊಬ್ಬ ಮುಂದೆ ಈ ಪ್ರಶ್ನೆ ಇಟ್ಟಾಗ ಸಿಕ್ಕ ಮಾಹಿತಿ: ‘ಎಲ್‌ಒಸಿ­ಯಿಂದ ಹಿಡಿದು ಚೆಕ್‌ ಪಡೆಯುವ­ವರೆಗೆ ಕೆಳಹಂತದ ಅಧಿಕಾರಿಗಳಿಂದ ಹಿರಿಯ ಅಧಿಕಾರಿ­ಗಳವರೆಗೆ ಒಟ್ಟು ಶೇ 23ರಷ್ಟು ಹಣವನ್ನು ಲಂಚದ ರೂಪ­ದಲ್ಲಿ ನೀಡ­ಬೇಕು. ಜನಪ್ರತಿನಿಧಿಗಳಿಗೆ ಶೇ 4ರಷ್ಟು ಪಾಲು ಕೊಡ­ಬೇಕು. ಬಳಿಕ ನಾವು ಹಾಕಿದ ಬಂಡವಾಳ ತೆಗೆಯ­ಬೇಕು. ಬ್ಯಾಂಕ್‌ ಬಡ್ಡಿಯನ್ನೂ ಕಟ್ಟಬೇಕು. ನಮ್ಮ ಲಾಭ ಕಳೆದು ಉಳಿಯುವ ಮೊತ್ತದಲ್ಲಿ ಕಾಮಗಾರಿ ನಡೆಯಬೇಕು. ಕೋಟಿ ಮೊತ್ತದ ಕಾಮಗಾರಿಯಲ್ಲಿ ₨ 27 ಲಕ್ಷ ಲಂಚದ ರೂಪದಲ್ಲಿ ಸೋರಿಕೆ ಆಗುತ್ತದೆ’  ಎಂದು ಅವರು ವಿವರಿಸುತ್ತಾರೆ.


             

               












ಸಡಿಲವಾದ ಆಡಳಿತ ಯಂತ್ರ

ಬಿಬಿಎಂಪಿ ಎಂಟು ವಲಯಗಳ ಪೈಕಿ ಆರು ವಲಯದ ಜಂಟಿ ಆಯುಕ್ತರ ಸ್ಥಾನದಲ್ಲಿ ಸದ್ಯ ಕಾರ್ಯ ನಿರ್ವಹಣೆ ಮಾಡುತ್ತಿರುವವರು ಕೆಎಎಸ್‌ಯೇತರ ಅಧಿಕಾರಿಗಳು. ಆ ಹುದ್ದೆಗೆ ಹಿರಿಯ ಕೆಎಎಸ್‌ ಇಲ್ಲವೆ ಪ್ರೊಬೇಷನರಿ ಐಎಎಸ್‌ಗಿಂತ ಕೆಳಗಿನ ಶ್ರೇಣಿಯ ಅಧಿಕಾರಿಗಳನ್ನು ನೇಮಕ ಮಾಡಬಾರದು ಎಂಬ ನಿಯಮವಿದೆ. ಪ್ರಥಮ ದರ್ಜೆ ಗುಮಾಸ್ತರೊಬ್ಬರು ವಲಯವೊಂದರ ಜಂಟಿ ಆಯುಕ್ತರಾಗಿದ್ದು, ಬಿ.ಇ ಓದಿದ ಮುಖ್ಯ ಎಂಜಿನಿಯರ್‌ಗಳು ಅವರ ಕೈಕೆಳಗೆ ಕೆಲಸ ಮಾಡುವಂತಾಗಿದೆ. ಆಡಳಿತ ಯಂತ್ರ ಸಡಿಲವಾಗಲು ಇಂತಹ ವ್ಯವಸ್ಥೆ ದೊಡ್ಡ ಕೊಡುಗೆ ನೀಡಿದೆ.

ಎಂಟು ಟಿವಿಸಿಸಿ ಬೇಕು
ಆಯುಕ್ತರ ತಾಂತ್ರಿಕ ತನಿಖಾ ಕೋಶ (ಟಿವಿಸಿಸಿ) ಕನಿಷ್ಠ ವಲಯಕ್ಕೊಂದು ಬೇಕು. ಇದರಿಂದ ಹಗರಣಗಳನ್ನು  ತಕ್ಷಣ ಬಯಲಿಗೆ ಎಳೆಯಲು ಸಾಧ್ಯವಾಗುತ್ತದೆ. ಬಿಬಿಎಂಪಿಗೆ ತನ್ನದೇ ಆದ ಗುಣಮಟ್ಟ ಪ್ರಯೋಗಾಲಯ ಬೇಕಾಗಿದೆ ಎನ್ನುತ್ತಾರೆ ಶಾಸಕ ಬಿ.ಎನ್‌. ವಿಜಯಕುಮಾರ್‌.

ಬರ್ತಾ ಇದ್ದಾರೆ ಕಳಕಳಿ ಜನ

ಬಿಬಿಎಂಪಿ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ–ಪ್ಯಾಕ್‌), ನಗರದ ಮೇಲೆ ಪ್ರೀತಿ ಇರುವ ಭವಿಷ್ಯದ ಕಾರ್ಪೊರೇಟರ್‌ಗಳನ್ನು ಸಿದ್ಧಪಡಿಸುವ ಕೆಲಸಕ್ಕೆ ಸದ್ದಿಲ್ಲದೆ ಕೈಹಾಕಿದೆ. ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ ಯಶಸ್ಸು ಅವರಲ್ಲಿ ಮತ್ತಷ್ಟು ಹುರುಪು ತಂದಿದೆ. ನಗರದ ಸಮಸ್ಯೆಗಳು, ಅದರಿಂದ ಹೊರಬರಲು ಇರುವ  ಮಾರ್ಗೋಪಾಯಗಳು, ಆರ್ಥಿಕ ನಿರ್ವಹಣೆ, ವಾರ್ಡ್‌ಗೆ ಒದಗಿಸಬೇಕಾದ ಸೌಲಭ್ಯ ಮತ್ತು ಜನರೊಂದಿಗೆ ಹೊಂದಿರಬೇಕಾದ ನಂಟು ಇವೇ ಮೊದಲಾದ ವಿಷಯಗಳ ಕುರಿತು ಯುವಕರಿಗೆ ತರಬೇತಿ ನೀಡುತ್ತಿದೆ.

ಶಿಫಾರಸು ಗಾಳಿಗೆ

2009ರಲ್ಲಿ ಸಿದ್ಧಪಡಿಸಲಾದ ಮಧ್ಯಂತರ ಅವಧಿಯ ಆರ್ಥಿಕ ಯೋಜನೆ, ನೈಜ ಮತ್ತು ವಾಸ್ತವ  ಬಜೆಟ್‌ ಸಿದ್ಧಪಡಿಸುವ ಉದ್ದೇಶದಿಂದ ಬಜೆಟ್‌ ನಿಯಂತ್ರಣ ಘಟಕ ರಚನೆಗೆ  ಶಿಫಾರಸು ಮಾಡಲಾಗಿತ್ತು. ಅದೇ ರೀತಿ ಆದಾಯ ಮತ್ತು ವೆಚ್ಚಗಳ ಮೇಲೆ ನಿಗಾ ಇಡಲು ವೆಚ್ಚ ನಿರ್ವಹಣಾ  ಸಮಿತಿ ರಚನೆಗೂ ಶಿಫಾರಸು ಮಾಡಲಾಗಿತ್ತು. ಆದರೆ, ಕಾಲಾನುಕ್ರಮದಲ್ಲಿ ಎಲ್ಲವನ್ನೂ ಗಾಳಿಗೆ ತೂರಲಾಗುತ್ತಿದೆ.

‘ಎಲ್ಲಾ ಬರೀ ಸುಳ್ಳು...’

ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಎರಡು ವಿಧದಲ್ಲಿ ನಡೆಯುತ್ತಿದೆ. ಒಂದು ಬಿಬಿಎಂಪಿಯೇ ಹೊಣೆ ನಿಭಾಯಿಸುವುದಾದರೆ, ಮತ್ತೊಂದು ಗುತ್ತಿಗೆದಾರರಿಗೆ ವಹಿಸಿಕೊಡುವುದು. ಗುತ್ತಿಗೆದಾರರಿಗೆ ಹೊಣೆ ವಹಿಸುವಾಗ ಅವರ ಬಳಿ ಇಂತಿಷ್ಟು ಸಿಬ್ಬಂದಿ, ವಾಹನ ಇರಬೇಕು ಎನ್ನುವ ಕರಾರು ಇರುತ್ತದೆ. ಹಾಗೆ ಒಪ್ಪಿ ಗುತ್ತಿಗೆದಾರರು ಮಾಹಿತಿ ನೀಡಿದಂತೆ ಒಟ್ಟು 16,800 ಗುತ್ತಿಗೆ ಆಧಾರಿತ ಪೌರ ಕಾರ್ಮಿಕರು, 4,780 ಬಿಬಿಎಂಪಿ ಪೌರಕಾರ್ಮಿಕರು, 13,000 ತಳ್ಳುವ ಗಾಡಿಗಳು, 2,794 ಆಟೊಗಳು, 791 ಟಿಪ್ಪರ್‌ಗಳು, 196 ಕಾಂಪ್ಯಾಕ್ಟ್‌ಗಳ ಸೌಲಭ್ಯ ನಗರಕ್ಕಿದೆ. ‘ಇದೆಲ್ಲ ಶುದ್ಧ ಸುಳ್ಳು. ಅರ್ಧದಷ್ಟೂ ಇಲ್ಲ. ಒಂದುವೇಳೆ ಇರುವುದು ನಿಜವಾದರೆ ಅರಮನೆ ಮೈದಾನದಲ್ಲಿ ಪೌರಕಾರ್ಮಿಕರು ಮತ್ತು ವಾಹನಗಳ ಪರೇಡ್‌ ಮಾಡಿಸಬೇಕು. ಆಗ ಸತ್ಯ ಗೊತ್ತಾಗುತ್ತದೆ’ ಎನ್ನುತ್ತಾರೆ ಎನ್‌.ಆರ್‌. ರಮೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT