ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಲಾರಿಗೆ ಬೈಕ್ ಡಿಕ್ಕಿ: ಮೂವರ ಸಾವು

Last Updated 25 ಡಿಸೆಂಬರ್ 2012, 19:41 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹುಳಿಮಾವು ಕೆರೆ ಸಮೀಪ ಸೋಮವಾರ ರಾತ್ರಿ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿದಂತೆ ಮೂರು ಮಂದಿ ಸಾವನ್ನಪ್ಪಿದ್ದಾರೆ.

ಹಿಮಾಚಲ ಪ್ರದೇಶ ಮೂಲದ ಅತುಲ್‌ಕುಮಾರ್ ಶರ್ಮಾ (21), ಮಹಮ್ಮದ್ ಅಸ್ಲಂ (20) ಮತ್ತು ವಿನಯ್‌ಕುಮಾರ್ ಠಾಕೂರ್ (22) ಮೃತಪಟ್ಟವರು.

ಅತುಲ್‌ಕುಮಾರ್, ಕನಕಪುರ ಮುಖ್ಯರಸ್ತೆಯ ಸಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಓದುತ್ತಿದ್ದ. ಅಸ್ಲಂ, ಜೆ.ಪಿ.ನಗರದ ನೊಬೆಲ್ ಸ್ಕೂಲ್ ಆಫ್ ಬ್ಯುಸಿನೆಸ್ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ. ವಿನಯ್‌ಕುಮಾರ್, ಗಂಗಾನಗರದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ಸ್ ಸಂಸ್ಥೆಯಲ್ಲಿ ಅಂಚೆ ತೆರಪಿನ ಶಿಕ್ಷಣದ ಮೂಲಕ ಬಿ.ಇ ಓದುತ್ತಿದ್ದ. ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಅವರು, ಅರಕೆರೆಯ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು. ವಿನಯ್‌ಕುಮಾರ್ ತನ್ನ ಬೈಕ್‌ನಲ್ಲಿ ಸ್ನೇಹಿತರೊಂದಿಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಸಂಚಾರ ನಿಯಮ ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ಬೈಕ್ ಚಾಲನೆ ಮಾಡಿಕೊಂಡು ಹೋದ ವಿನಯ್‌ಕುಮಾರ್, ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಯನ್ನು ಗಮನಿಸದೆ ಹಿಂದಿನಿಂದ ವಾಹನ ಗುದ್ದಿಸಿದ್ದಾನೆ. ಡಿಕ್ಕಿಯ ರಭಸಕ್ಕೆ ಮೂರೂ ಮಂದಿ ಬೈಕ್‌ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಅತುಲ್‌ಕುಮಾರ್ ಮತ್ತು ಅಸ್ಲಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳು ವಿನಯ್‌ಕುಮಾರ್‌ನನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಆತ ಸ್ವಲ್ಪ ಸಮಯದಲ್ಲೇ ಸಾವನ್ನಪ್ಪಿದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವೇಳೆ ಆ ಮೂರೂ ಮಂದಿ ಪಾನಮತ್ತರಾಗಿದ್ದರೆ ಎಂಬುದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಗೊತ್ತಾಗಲಿದೆ. ಲಾರಿ ಚಾಲಕ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲೇ ನೆಲೆಸಿರುವ ಅಸ್ಲಂನ ಚಿಕ್ಕಪ್ಪ ಮಹಮ್ಮದ್ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್‌ಎಫ್) ಉದ್ಯೋಗಿಯಾಗಿದ್ದು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಆತನ ಅಣ್ಣ ಹಿಮಾಚಲ ಪ್ರದೇಶದಲ್ಲಿ ಉದ್ಯೋಗಿಯಾಗಿದ್ದಾರೆ.

ವಿನಯ್‌ಕುಮಾರ್‌ನ ತಂದೆ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ಆತನ ಅಣ್ಣನ ಮದುವೆ ಮುಂದಿನ ತಿಂಗಳು ನಿಶ್ಚಯವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹುಳಿಮಾವು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT