ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಗೆ ನೋಟಿಸ್ ನೀಡಲು ಆಗ್ರಹ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕಸ ವಿಲೇವಾರಿಯನ್ನು ಸಮರ್ಪಕವಾಗಿ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯನ್ನು ಏಕೆ ವಿಸರ್ಜಿಸಬಾರದು ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡುವ ಮೂಲಕ ಸರ್ಕಾರ ಎಚ್ಚರಿಕೆ ನೀಡಬೇಕು~ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್ ಆಗ್ರಹಿಸಿದರು.

1976ರ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆಯ ಸೆಕ್ಷನ್ 99ರ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡುವ ಮೂಲಕ ಆಡಳಿತವನ್ನು ಸರಿದಾರಿಗೆ ತರಬೇಕು ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

`ಪಾಲಿಕೆ ಸ್ವಾಯತ್ತ ಸಂಸ್ಥೆ. ನನಗೆ ವಿಕೇಂದ್ರೀಕರಣದಲ್ಲಿ ನಂಬಿಕೆ ಇದೆ. ಆದರೆ ಪಾಲಿಕೆ ತನ್ನ ಜವಾಬ್ದಾರಿ ನಿಭಾಯಿಸಲು ವಿಫಲವಾದಾಗ ಕೈಕಟ್ಟಿಕೊಂಡು ಇರುವುದು ಸರಿಯಲ್ಲ. ಸರ್ಕಾರ ಮಧ್ಯಪ್ರವೇಶಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು~ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ನಗರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಉಪಮುಖ್ಯಮಂತ್ರಿ ಆರ್.ಅಶೋಕ ತಕ್ಷಣ ಮಧ್ಯಪ್ರವೇಶಿಸಿ ಎಲ್ಲ ಪಕ್ಷಗಳ ಪಾಲಿಕೆ ಸದಸ್ಯರ ಸಭೆ ಕರೆದು ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದು ಅವರು ಹೇಳಿದರು.

ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಆಸಕ್ತಿ ವಹಿಸುತ್ತಿಲ್ಲ ಎಂದು ಮೇಯರ್ ಡಿ.ವೆಂಕಟೇಶಮೂರ್ತಿ ಹೇಳಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಮೇಯರ್ ನೇರವಾಗಿ ಆರೋಪ ಮಾಡಿರುವುದು ಇದೇ ಮೊದಲು. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕಾರ್ಯೋನ್ಮುಖವಾಗಬೇಕು ಎಂದು ಆಗ್ರಹಿಸಿದರು.

ಸಮಸ್ಯೆ ನಿವಾರಣೆಗೆ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಯೋಜನೆ ರೂಪಿಸಬೇಕು. ಹಳೆ ಗುತ್ತಿಗೆದಾರರು ಮತ್ತು ಹೊಸ ಗುತ್ತಿಗೆದಾರರ ನಡುವಿನ ಸಂಘರ್ಷದಿಂದ ಸಮಸ್ಯೆ ಉಲ್ಬಣಿಸಿದೆ. ಹೈಕೋರ್ಟ್ ಛೀಮಾರಿ ಹಾಕಿದರೂ, ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ ಎಂದರು.

ಾಲಿಕೆಯ ವಿರೋಧ ಪಕ್ಷದ ನಾಯಕ ಎಂ.ಕೆ.ಗುಣಶೇಖರ್ ಮಾತನಾಡಿ, 13ನೇ ಹಣಕಾಸು ಆಯೋಗದ ಅನುದಾನದಡಿ ಘನತ್ಯಾಜ್ಯ ವಿಲೇವಾರಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ 400 ಕೋಟಿ ರೂಪಾಯಿ ಮಂಜೂರು ಮಾಡಿದೆ. ಮೊದಲ ಕಂತಿನಲ್ಲಿ ಈಗಾಗಲೇ 120 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಆದರೆ ರಾಜ್ಯ ಸರ್ಕಾರ ಇದನ್ನು ಪಾಲಿಕೆಗೆ ನೀಡಿಲ್ಲ ಎಂದು ಅವರು ಆರೋಪಿಸಿದರು.

`ಜೀವರಾಜ್ ರಾಜೀನಾಮೆ ಪಡೆಯಲಿ~
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಡಿ.ಎನ್.ಜೀವರಾಜ್ ಅವರು ಅಕ್ಕಪಕ್ಕದ ತಮ್ಮ ಎರಡೂ ನಿವೇಶನಗಳನ್ನು ಒಟ್ಟಿಗೆ ಸೇರಿಸಿ ಬಹುಮಹಡಿ ಕಟ್ಟಡ  ನಿರ್ಮಿಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂದು ಹೈಕೋರ್ಟ್ ನೇರವಾಗಿ ಹೇಳಿದೆ. ಹೀಗಾಗಿ ಜೀವರಾಜ್ ಸಚಿವರಾಗಿ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಪ್ರೊ.ಬಿ.ಕೆ.ಚಂದ್ರಶೇಖರ್ ಹೇಳಿದರು.
ಜೀವರಾಜ್ ಅವರ ರಾಜೀನಾಮೆ ಪಡೆಯುವ ಕುರಿತು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಿರ್ಧರಿಸಬೇಕು ಎಂದು ಅವರು ಆಗ್ರಹಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT