ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಗಾಳಿ ಸಹಿತ ಮಳೆ: ಅಪಾರ ಹಾನಿ

Last Updated 4 ಸೆಪ್ಟೆಂಬರ್ 2013, 5:56 IST
ಅಕ್ಷರ ಗಾತ್ರ

ಅರಕಲಗೂಡು: ಸೋಮವಾರ ಸಂಜೆ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ  ತಾಲ್ಲೂಕಿನ ಗರೀಘಟ್ಟ ಗ್ರಾಮದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಸಂಜೆ 6 ಗಂಟೆ ಸಮಯದಲ್ಲಿ ಸುರಿದ ಜಡಿ ಮಳೆ ಹಾಗೂ ಬೀಸಿದ ಬಿರುಗಾಳಿಗೆ ಗ್ರಾಮದಲ್ಲಿ 60 ಮರಗಳು ಧರೆಗುರುಳಿವೆ. ಮೂವತ್ತಕ್ಕೂ ಹೆಚ್ಚಿನ ಮನೆಗಳ ಹೆಂಚು, ಶೀಟು ಹಾರಿ ಹೋಗಿದೆ. 25 ಕ್ಕೂ ಹೆಚ್ಚಿನ ತೆಂಗಿನ ಮರಗಳು ಉರುಳಿ ಬಿದ್ದಿದೆ.

ಗ್ರಾಮದ ದೇವರಾಜೇಗೌಡ ಅವರ ಮನೆಯ ಶೀಟು ಮತ್ತು ಹೆಂಚುಗಳು ಬಿರುಗಾಳಿಗೆ ಹಾರಿ ಬಿದ್ದು ಮನೆಯ ಒಳಗಿದ್ದ ದೇವರಾಜೇಗೌಡರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಮನೆಯಲ್ಲಿದ್ದ ಕಣಜಕ್ಕೆ ನೀರು ಬಿದ್ದು ಸಂಗ್ರಹಿಸಿಡಲಾಗಿದ್ದ ಭತ್ತ ರಾಗಿ ಹಾಗೂ  ಮನೆಯ ವಸ್ತುಗಳು ಸಂಪೂರ್ಣ ಹಾಳಾಗಿದೆ. ಕುಟುಂಬದ ಸದಸ್ಯರು ಮನೆಯ ವಸ್ತುಗಳನ್ನು ಸಂರಕ್ಷಿಸಿಕೊಳ್ಳಲು ಹರಸಾಹಸ  ನಡೆಸಿದರೂ ಪ್ರಯೋಜನವಾಗಿಲ್ಲ.

ಗೋಪಾಲಯ್ಯ ಎಂಬುವವರ ಮನೆ ಮೇಲೆ ಮರ ಉರುಳಿ ಬಿದ್ದು ಹಾನಿ ಸಂಭವಿಸಿದೆ. ಸ್ವಾಮಿಗೌಡ ಎಂಬುವವರ ಮನೆಯ ಮೇಲೂ ಮರ ಉರುಳಿ ಬಿದ್ದಿದೆಯಲ್ಲದೆ ಅವರಿಗೆ ಸೇರಿದ ಕರುವೊಂದು ಮಳೆಗೆ ಸಿಲುಕಿ ಮೃತಪಟ್ಟಿದೆ. ಗ್ರಾಮದಲ್ಲಿ ಸುಮಾರು ನಾಲ್ಕು ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ವಿದ್ಯುತ್ ಸರಭರಾಜು ಸ್ಥಗಿತಗೊಂಡಿದ್ದು ಗ್ರಾಮ ಕತ್ತಲಲ್ಲಿ ಮುಳುಗಿದೆ.

ಶಾಸಕ ಎ.ಮಂಜು ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸುವುದಾಗಿ ತಿಳಿಸಿದರು. ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಬಸವರಾಜ್ ಮತ್ತು ಸಿಬ್ಬಂದಿ ಮಳೆ ಹಾನಿಯ ಅಂದಾಜು ನಡೆಸಿದ್ದಾರೆ.

ಕೃಷಿಗೆ ಸಹಕಾರಿ: ಭಾನುವಾರದಿಂದ ಮತ್ತೆ ಮಳೆ ಆರಂಭಗೊಂಡಿರುವುದು ರೈತರ ಆತಂಕ ದೂರ ಮಾಡಿದೆ. ಮಂಗಳವಾರ 8.30ಕ್ಕೆ ಮುಕ್ತಾಯಗೊಂಡ ಅವಧಿಗೆ ತಾಲ್ಲೂಕಿನಲ್ಲಿ ಬಿದ್ದ ಮಳೆ ವಿವರ.

ಅರಕಲಗೂಡು 10.4 ಮಿ.ಮೀ. ದೊಡ್ಡಮಗ್ಗೆ 16.4ಮಿ.ಮೀ. ರಾಮನಾಥಪುರ 46.2 ಮಿ.ಮೀ. ಬಸವಾಪಟ್ಟಣ 19.2.ಮಿ.ಮೀ. ಕೊಣನೂರು 10.4 ಮಿ.ಮೀ. ಮಲ್ಲಿಪಟ್ಟಣ 1.0 ಮಿ.ಮೀ. ದೊಡ್ಡ ಬೆಮ್ಮತ್ತಿಯಲ್ಲಿ 2.2.ಮಿ.ಮೀ. ಮಳೆಯಾಗಿದೆ.

ತಂಪೆರೆದ ಮಳೆ
ಬಾಣಾವರ: ಪಟ್ಟಣದಲ್ಲಿ ಮಂಗಳವಾರ ಒಂದು ಗಂಟೆ ಕಾಲ ಮಳೆ ಸುರಿದ ಪರಿಣಾಮ ಬಿಸಿಲಿನ ಜಳಕ್ಕೆ ಬಸವಳಿದ ಜನರಿಗೆ ತಂಪೆರೆದಂತಾಯಿತು.

ಮಳೆಗಾಲ ಮುಗಿಯುತ್ತ ಬಂದರೂ ಬಾಣಾವರ ಹೋಬಳಿಯತ್ತ ಮಳೆರಾಯ ಸುಳಿಯದಿದ್ದರಿಂದ ಹೆಚ್ಚಿದ ಬಿಸಿಲಿನ ತಾಪದಿಂದ ತತ್ತರಿಸಿದ ಪಟ್ಟಣದ ಜನರಿಗೆ ಮಂಗಳವಾರ ಬಂದ ಮಳೆ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತು.

ಮಧ್ಯಾಹ್ನ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಬಂದು ಸುಮಾರು 75 ಮೀ.ಮೀ ನಷ್ಟು ಮಳೆ ಬಂದು ಭೂಮಿ ತಂಪೆರೆಯುವಂತೆ ಮಾಡಿದೆ.

ಮಳೆಗಾಲವಾದರೂ ಕೊಳವೆ ಬಾವಿಗಳೆಲ್ಲ ಬತ್ತಿ ಕುಡಿಯುವ ನೀರಿಗೆ ತತ್ವರ ಉಂಟಾಗಿ ತತ್ತರಿಸುತ್ತಿದ್ದ ಜನರಿಗೆ ಕಳೆದೆರಡು ದಿನಗಳಿಂದ ಬಂದ ಮಳೆ ತುಸು ನೆಮ್ಮದಿಯನ್ನು ನೀಡಿದೆ. ಪಟ್ಟಣದ ಜನರಿಗೆ ರಾತ್ರಿ ಸಮಯ ಅತಿ ಹೆಚ್ಚು ಧಗೆಯಿಂದ ಹೊತ್ತು ಕಳೆಯುವುದೆ ದುಸ್ತರವಾಗಿತು. ಪಟ್ಟಣದ ರಸ್ತೆಗಳಲ್ಲಿ ಜನರ ಓಡಾಟ ಹೆಚ್ಚಿದ್ದರಿಂದ ಜನಜೀವನ ಮತ್ತು ಸಂಚಾರ ವ್ಯವಸ್ಥೆಗೆ ತುಸು ತೂಡಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT