ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ ತಯಾರಿಸಲು ವಿದ್ಯಾರ್ಥಿಗಳ ಬಳಕೆ !

ಸಮಾಜ ಕಲ್ಯಾಣ ಇಲಾಖೆ: ದಿನಗೂಲಿ ನೌಕರರ 50 ಲಕ್ಷ ವೇತನ ದುರ್ಬಳಕೆ
Last Updated 5 ಜುಲೈ 2013, 6:23 IST
ಅಕ್ಷರ ಗಾತ್ರ

ಕೋಲಾರ: ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕಿನ ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆ ದಿನಗೂಲಿ ನೌಕರರ 49.92 ಲಕ್ಷ ರೂಪಾಯಿ ವೇತನವನ್ನು ಬೇನಾಮಿ ಹೆಸರಿನಲ್ಲಿ ಪಡೆಯಲು ಬೇಕಾದ ಬೋಗಸ್ ಬಿಲ್‌ಗಳನ್ನು ತಯಾರಿಸಲು ಆರೋಪಿ ಅಧಿಕಾರಿ, ಸಿಬ್ಬಂದಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದಾರೆ. ಅವರ ಕೈಯಿಂದಲೇ ಬಿಲ್‌ಗಳನ್ನು ಬರೆಸಿದ್ದಾರೆ !

ದಿನಗೂಲಿ ನೌಕರರ ವೇತನ ದುರ್ಬಳಕೆ ಕುರಿತು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿರುವ ಸಂಗತಿ ಇದು.

ತಾವೇ ತಮ್ಮ ಕೈಯಲ್ಲಿ ಬರೆದರೆ ಸಿಕ್ಕಿ ಬೀಳಬಹುದು ಎಂಬ ಉದ್ದೇಶದಿಂದ ಅಧಿಕಾರಿ -ಸಿಬ್ಬಂದಿಯು ತಮ್ಮ ಅಧೀನದಲ್ಲೇ ಇದ್ದ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಬಳಸಿಕೊಂಡು ಬಿಲ್‌ಗಳನ್ನು ಸಿದ್ಧಪಡಿಸಿದ್ದಾರೆ. ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿದ್ದ ನಾಗರತ್ನಮ್ಮ ಎಂಬುವವರು ನಿಯೋಜನೆ ಮೇರೆಗೆ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದ ನಗರದ ಬೋವಿ ಕಾಲೊನಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.

ಹಿನ್ನೆಲೆ: ಅನುದಾನ ದುರ್ಬಳಕೆ ಹಿನ್ನೆಲೆಯಲ್ಲಿ ಕಳೆದ ನ.23ರಂದು ಇಲಾಖೆಯ ಇಬ್ಬರು ಮತ್ತು ಖಜಾನೆ ಇಲಾಖೆಯ ಒಬ್ಬರು ಸೇರಿದಂತೆ ನಗರದ ಮೂವರ ಮನೆ ಮೇಲೆ, ತ್ಲ್ಲಾಲೂಕು ಸಮಾಜ ಕಲ್ಯಾಣಾಧಿಕಾರಿಯಾಗಿದ್ದ ಫರೂಕ್ ಸುಲ್ತಾನ ಅವರ ಬೆಂಗಳೂರು ಮನೆಯ ಮೇಲೆ ಮತ್ತು ಪ್ರಕರಣದಲ್ಲಿ ಶಾಮೀಲಾಗಿರುವ ಚಿಂತಾಮಣಿ ವೇಣುಗೋಪಾಲರೆಡ್ಡಿ ಎಂಬುವವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಇಲಾಖೆಯ ಫರೂಕ್ ಸುಲ್ತಾನ, ನಚಿಕೇತ ಹಾಸ್ಟೆಲ್ ವಾರ್ಡನ್ ಆಜೀಂ, ಇಲಾಖೆ ದ್ವಿತೀಯ ದರ್ಜೆ ಸಹಾಯಕಿ ನಾಗರತ್ನಮ್ಮ, 4ನೇ ದರ್ಜೆ ನೌಕರ ಮಂಜುನಾಥ್, ಖಜಾನೆ ಇಲಾಖೆಯ ದ್ವಿತೀಯ ದರ್ಜೆ ಗುಮಾಸ್ತ ಎಸ್.ಎನ್ ವೆಂಕಟೇಶ್ ಮತ್ತು ಚಿಂತಾಮಣಿ ವೇಣುಗೋಪಾಲರೆಡ್ಡಿ ಮತ್ತು ಚಂದ್ರಶೇಖರರೆಡ್ಡಿ ಸೇರಿ ಏಳು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಬಿಡುಗೆಯಾಗಿದ್ದ ವೇತನವನ್ನು ದಿನಗೂಲಿ ನೌಕರರಿಗೆ ನೀಡದೆ, ಅಸ್ತಿತ್ವದಲ್ಲೇ ಇಲ್ಲದ ನೌಕರರ ಪಟ್ಟಿ ಸಿದ್ಧಪಡಿಸಿ ಅವರಿಗೆ ವೇತನ ನೀಡಿದಂತೆ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಬೋಗಸ್ ಬಿಲ್‌ಗಳನ್ನು ತಯಾರಿಸಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೂ ತಿಳಿಯದಂತೆ ಅವರ ಖಾತೆಯಲ್ಲಿದ್ದ ಅನುದಾನದ ಹಣವನ್ನು ಖಜಾನೆ ಇಲಾಖೆಯ ಸಿಬ್ಬಂದಿ ಜೊತೆ ಶಾಮೀಲಾಗಿ ಪಡೆಯಲಾಗಿದೆ ಎಂಬುದು ಪೊಲೀಸ್ ಮೂಲಗಳ ನುಡಿ.
ಇಲಾಖೆಯ ದ್ವಿತೀಯ ದರ್ಜೆ ಸಹಾಯಕಿಯಾಗಿ, ನಗರದ ಬೋವಿ ಕಾಲೊನಿಯ ಹಾಸ್ಟೆಲ್‌ನ ಮೇಲ್ವಿಚಾರಕಿಯಾಗಿ ನಿಯೋಜನೆಗೊಂಡಿದ್ದ ನಾಗರತ್ನಮ್ಮ ಅಲ್ಲಿನ ವಿದ್ಯಾರ್ಥಿಗಳ ಕೈಯಲ್ಲೇ ಬೋಗಸ್ ಬಿಲ್‌ಗಳನ್ನು ತಯಾರಿಸಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಮೂಲಗಳು ಹೇಳಿವೆ.

ಚೆಕ್ ಅವ್ಯವಹಾರ: ದಿನಗೂಲಿ ನೌಕರರ ಎಸ್‌ಬಿಎಂ ಬ್ಯಾಂಕ್ ಖಾತೆಗೆ ನೇರವಾಗಿ ವೇತನ ಪಾವತಿಯಾಗಬೇಕಿತ್ತು. ಆದರೆ ಅಸ್ತಿತ್ವದಲ್ಲೇ ಇಲ್ಲದ ನೌಕರರ ವೇತನವನ್ನು ಹಾಗೆ ಮಾಡಲು ಸಾಧ್ಯವಿರಲಿಲ್ಲ.

ನಗರದಲ್ಲಿ ಚೆಕ್‌ಗಳನ್ನು ಮುಖಬೆಲೆಗಿಂತಲೂ ಕಡಿಮೆ ಹಣ ನೀಡಿ ಪಡೆಯುವ ಚಂದ್ರಶೇಖರ ಶೆಟ್ಟಿ ಎಂಬ ಏಜೆಂಟರ ಮೂಲಕ ಅಧಿಕಾರಿ-ಸಿಬ್ಬಂದಿ ಆವ್ಯವಹಾರ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ವೇದಾ ಸೌಹಾರ್ದ ಸಹಕಾರ ಸೊಸೈಟಿಯ ಅಧ್ಯಕ್ಷ ವೇಣುಗೋಪಾಲ ರೆಡ್ಡಿ ಮೂಲಕ ಚೆಕ್‌ಗಳನ್ನು ಆ ಸೊಸೈಟಿಯ ಎಸ್‌ಬಿಎಂ ಖಾತೆಗೆ ವರ್ಗಾಯಿಸಿ ಹಣವನ್ನು ಪಡೆದಿರುವುದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

50 ಲಕ್ಷ ದುರ್ಬಳಕೆ: ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ದಿನಗೂಲಿ ನೌಕರರಿಗೆ ನೀಡಬೇಕಾಗಿದ್ದ ರೂ 49,92,957 ದುರ್ಬಳಕೆಯಾಗಿದೆ. 2012ರ ಮೇ 2ರಿಂದ ಜು.14ರವರೆಗೆ 13 ಬಾರಿ ಬೇನಾಮಿ ಹೆಸರಿನಲ್ಲಿ ಅಡುಗೆ ದಿನಗೂಲಿ ನೌಕರರ ವೇತನವನ್ನು ಡ್ರಾ ಮಾಡಲಾಗಿದೆ ಎಂದು ನ.23ರ ದಾಳಿಯ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ಬಿ.ಸುಧಾಕರ ಅವರು ಪ್ರಕರಣದ ಮಾಹಿತಿ ನೀಡಿದ್ದರು.

ನಂತರ ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಕೇಶ್ ಅವರ ನೇತೃತ್ವದಲ್ಲಿ ಶುರುವಾದ ತನಿಖೆಯು ಬಹುತೇಕ ಪೂರ್ಣಗೊಂಡಿದೆ.
ದೂರು ದಾಖಲಾಗಿರುವ ಒಟ್ಟು ಏಳು ಮಂದಿಯೂ ಅನುದಾನ ದುರ್ಬಳಕೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಶೀಘ್ರದಲ್ಲೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ವೇತನವಿಲ್ಲದ ಬಡಪಾಯಿ ನೌಕರರು..
ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರಿಗೆಂದು ಬಿಡುಗಡೆಯಾದ
ಅನುದಾನವನ್ನು ಅಧಿಕಾರಿ-ಸಿಬ್ಬಂದಿಯು ಅಸ್ತಿತ್ವದಲ್ಲೇ ಇಲ್ಲದ ದಿನಗೂಲಿ ನೌಕರರ ಹೆಸರಿನಲ್ಲಿ ಡ್ರಾ ಮಾಡಿರುವ ಪರಿಣಾಮವಾಗಿ ನಿಜವಾಗಿಯೂ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರಿಗೆ ವೇತನ ದೊರಕದಂತಾಗಿರುವುದು ವಿಷಾದನೀಯ ಎಂದು ಲೋಕಾಯುಕ್ತ ಪೊಲೀಸರು ಹೇಳುತ್ತಾರೆ.

ಯಾರೋ ಮಾಡಿದ ತಪ್ಪಿಗೆ ನಮ್ಮ ಸಂಬಳವನ್ನೇಕೆ ಹಿಡಿಯುತ್ತೀರಿ? ಹತ್ತಾರು ತಿಂಗಳಿಂದ ಏಕೆ ಅಲೆಸುತ್ತಿದ್ದೀರಿ ಎಂಬುದು ದಿನಗೂಲಿ ನೌಕರರು ಇಲಾಖೆಯನ್ನು ಕೇಳುತ್ತಿರುವ ಪ್ರಶ್ನೆ.

ವೇತನಕ್ಕಾಗಿ ಗುರುವಾರ ಜಿಲ್ಲಾ ಸಮಾಜಕ ಕಲ್ಯಾಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದ ಬಹುತೇಕ ದಿನಗೂಲಿ ನೌಕರರು ಬೇಸತ್ತಿದ್ದರು.
ಆದರೆ ಅವರಿಗೆ ಸೂಕ್ತ ಉತ್ತರವನ್ನು ನೀಡುವ ಸ್ಥಿತಿಯಲ್ಲಿ ಪ್ರಭಾರಿ ಅಧಿಕಾರಿ ಗುರುಮೂರ್ತಿ ಇರಲಿಲ್ಲ. ಇಲಾಖೆಯಲ್ಲಿ ಹಿಂದೆ ಏನಾಗಿದೆಯೋ ಅದರ ಬಗ್ಗೆ ನನ್ನನ್ನು ಕೇಳಬೇಡಿ. ನಾನೊಬ್ಬ ಪ್ರಭಾರಿ ಅಧಿಕಾರಿ ಅಷ್ಟೆ. ನಿಮ್ಮ ಮನವಿ ಇದ್ದರೆ ಕೊಡಿ. ಪಡೆಯುವೆ ಎಂದಷ್ಟೇ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT