ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲೆಯತ್ತ ಮುಖ ಮಾಡಿದ ರೈತರು

Last Updated 12 ಅಕ್ಟೋಬರ್ 2011, 6:50 IST
ಅಕ್ಷರ ಗಾತ್ರ

ಸಕಲೇಶಪುರ: ಬೆಳೆ ಕಾಡಾನೆ, ಕಾಟಿಗಳ ಪಾಲು.. ಮಳೆಗಾಲದಲ್ಲಿ ಮನೆಯಿಂದ ಹೊರ ಬರು ವಂತಿಲ್ಲ.. ಸರ್ಕಾರದ ಸೌಲಭ್ಯಗಳಿಲ್ಲದೆ ಮೂರಾ ಬಟ್ಟೆಯಾದ ಬದುಕು.. ಸರ್ಕಾರ ಸೂಕ್ತ ಪರಿಹಾರ ಕೊಟ್ಟರೆ ಬಿಸಿಲೆ ಅರಣ್ಯ ವಿಸ್ತರಣೆಗೆ ಭೂಮಿ ಕೊಡಲು ಸಿದ್ಧ.

ಬಿಸಿಲೆ ರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಂತೆ ಸುಮಾರು 23 ಸಾವಿರ ಎಕರೆ ಪ್ರದೇಶದ ಕಂದಾಯ ಭೂಮಿಯನ್ನು ಅರಣ್ಯ ಎಂದು ಘೋಷಣೆ ಮಾಡಲು ಮುಂದಾಗಿರುವ ಬೆಳವಣಿಗೆ ಕುರಿತಂತೆ,  ಬಿಸಿಲೆ ರಕ್ಷಿತ ಅರಣ್ಯ ಸಮೀಪದ ಪಟ್ಲ ಹಾಗೂ ಮಾಲ್ಮನೆ ಗ್ರಾಮದ ಕೆಲವು ರೈತರು `ಪ್ರಜಾವಾಣಿ~ಗೆ ನೀಡಿದ ಪ್ರತಿಕ್ರಿಯೆ ಇದು.

ತಾಲ್ಲೂಕು ಕೇಂದ್ರದಿಂದ 45 ರಿಂದ 50 ಕಿಮೀ ಅಂತದಲ್ಲಿ ಇರುವ ಈ ಗ್ರಾಮಗಳ ರೈತರ ಭತ್ತದ ಗದ್ದೆ, ಏಲಕ್ಕಿ ತೋಟಗಳು ಆನೆಗಳು ನಡೆದಾಡುವ ದಾರಿಯಾಗಿವೆ. ಸುಮಾರು 30 ರಿಂದ 40 ಕಾಡೆಮ್ಮೆಗಳೂ ರೈತರ ಬೆಳೆ ಹಾನಿ ಮಾಡುತ್ತಿವೆ. ಸಾವಿರಾರು ರೂಪಾಯಿ ವೆಚ್ಚ ಮಾಡಿ ಭತ್ತ ಬೆಳೆದರೆ ಬೆಳೆ ಕೊಯ್ಲು ಮಾಡುವ ಮುನ್ನವೇ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಇದರಿಂದಾಗಿ ಮಾಲ್ಮನೆ ಗ್ರಾಮದ ಗೋವಿಂದೇಗೌಡ, ವೀರೇಶ್, ಧರ್ಮೇಗೌಡ ಸೇರಿದಂತೆ ಹಲವರು ಭತ್ತ ಬೆಳೆಯುವುದನ್ನೇ ಬಿಟ್ಟಿದ್ದಾರೆ.
ಹೊರಗೆ ಹೋಗಿ ಬದುಕಲು ಶಿಕ್ಷಣ ಇಲ್ಲ. ಪಿತ್ರಾರ್ಜಿತ ಆಸ್ತಿ ಇರುವುದರಿಂದ ಅನಿವಾರ್ಯ ವಾಗಿ ಗ್ರಾಮದಲ್ಲೇ ಕಷ್ಟದ ಬದುಕು ನಡೆಸು ತ್ತಿದ್ದೇವೆ ಎಂದು ನೊಂದು ನುಡಿಯುತ್ತಾರೆ ಪಟ್ಲ ಗ್ರಾಮದ ರೈತ ರಾಜು.

15 ಲಕ್ಷ ಪರಿಹಾರಕ್ಕೆ ಆಗ್ರಹ: ಪ್ರತಿ ಎಕರೆ ಕೃಷಿ ಭೂಮಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡಿದರೆ, ಜಮೀನನ್ನು ಬಿಸಿಲೆ ಅರಣ್ಯ ವಿಸ್ತರಣೆಗೆ ಬಿಟ್ಟುಕೊಡಲು ಸಿದ್ಧ ಎಂದು ಯಸಳೂರು ವಲಯ ಅರಣ್ಯ ಇಲಾಖೆಗೆ 380 ಮಂದಿ ರೈತರು ಅರ್ಜಿ ಸಲ್ಲಿಸಿದ್ದಾರೆ. 5 ಎಕರೆಗಿಂತ ಹೆಚ್ಚು ಭೂಮಿ ಇರುವ ರೈತರು ಮಾತ್ರ ಜಮೀನು ಬಿಟ್ಟುಕೊಡಲು ಅರ್ಜಿ ಸಲ್ಲಿಸಿದ್ದಾರೆ.

5 ಎಕರೆಗಿಂತ ಕಡಿಮೆ ಇರುವವರು ತಮ್ಮ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿದರೆ, ಸರ್ಕಾರದಿಂದ ದೊರೆಯುವ ಅಲ್ಪ ಮೊತ್ತದ ಪರಿಹಾರ ಪಡೆದು ಬೇರೆಡೆ ಹೋಗಿ ಹೊಸ ಬದುಕು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ, ಭೂಮಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಸರ್ಕಾರದಿಂದ ಹಕ್ಕು ಪತ್ರ ದೊರೆಯದೆ ಇರುವವರಿಗೆ ಬಿಡಿಗಾಸು ಪರಿಹಾರ ದೊರೆಯಲಾರದು. ಅಂತವರು ಬೀದಿಪಾಲಾಗ ಬೇಕಾಗುತ್ತದೆ ಎಂಬ ಪರ-ವಿರೋಧ ಕೂಗುಗಳು ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT