ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಡಿ ಕಾರ್ಮಿಕರಿಗೆ ಹೆಚ್ಚುವರಿ 200 ಮನೆ

Last Updated 25 ಜನವರಿ 2012, 6:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಬಿಡ್ನಾಳ ಗ್ರಾಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಾಯಧನದಲ್ಲಿ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಜಿಲ್ಲಾ ಆಡಳಿತ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬೀಡಿ ಕಾರ್ಮಿಕರಿಗಾಗಿ ನಿರ್ಮಿಸುವ ಮನೆಗಳ ಸಾಲಿಗೆ 200 ಹೆಚ್ಚುವರಿ ಮನೆಗಳನ್ನು ಸೇರಿಸಲು ಸಹಾಯಧನ ನೀಡುವುದಾಗಿ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು.

ಮಂಗಳವಾರ ನಡೆದ 200 ಮನೆಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು ಮನೆಗಳ ನಿರ್ಮಾಣ ಕಾರ್ಯವನ್ನು ನಿರ್ಮಿತಿ ಕೇಂದ್ರದವರಿಗೆ ನೀಡಿದರೆ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಾಗಿದೆ, ನಿರ್ಮಿತಿ ಕೇಂದ್ರದ ಮೇಲೆ ಅನೇಕ ಆರೋಪಗಳಿರುವುದರಿಂದ ಅಧಿಕಾರಿಗಳು ಹುಷಾರಾಗಿರಬೇಕು, ಉಪ ಗುತ್ತಿಗೆ ನೀಡದಂತೆ ಎಚ್ಚರ ವಹಿಸಬೇಕು ಎಂದರು.

`ಬೀಡಿ ಕಾರ್ಮಿಕರು ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬೀಡಿ ಕಂಪೆನಿಯ ಮಾಲೀಕರಿಂದ ಕರ ವಸೂಲಿ ಮಾಡಿ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ~ ಎಂದು ಅವರು ತಿಳಿಸಿದರು.

`ಪ್ರಪಂಚದ ಎಲ್ಲ ಕಡೆಗಳಲ್ಲೂ ನುರಿತ ಕುಶಲ ಕರ್ಮಿಗಳ ಕೊರತೆ ಇದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ ಕೌಶಲಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲು ಹಾಗೂ ಇತರ ದೇಶಗಳೊಂದಿಗೆ ಸೇರಿ ಕೌಶಲಾಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಕಾರ್ಮಿಕ ಇಲಾಖೆ ಮುಂದಾಗಿದೆ~ ಎಂದು ಅವರು ತಿಳಿಸಿದರು.

ಸಚಿವ ಜಗದೀಶ ಶೆಟ್ಟರ ಮಾತನಾಡಿ, ರಾಜ್ಯದಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಸಂದರ್ಭದಲ್ಲಿ ವಸತಿ ಯೋಜನೆಯ ನಿಯಮಾವಳಿಗಳನ್ನು ಸಡಿಸಲಾಗುವುದು, ಕೆಲವು ಕಡೆ ವಸತಿ ಸಮುಚ್ಛಯಗಳನ್ನು ನಿರ್ಮಿಸಬೇಕಾದ ಅನಿವಾರ್ಯ ಸ್ಥಿತಿ ಇದ್ದು ಅಲ್ಲಿ ಮಹಡಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ಬಿಡ್ನಾಳದಲ್ಲಿ ಬೀಡಿ ಕಾರ್ಮಿಕರಿಗಾಗಿ ಇನ್ನೂ 400 ಮನೆಗಳನ್ನು ನಿರ್ಮಿಸಬೇಕಾಗಿದೆ ಎಂದ ಅವರು, ಕೊಳಚೆ ನಿವಾಸಿಗಳಿಗೆ ಸಾಲ ಪಡೆದುಕೊಳ್ಳಲು ಅನುಕೂಲವಾಗುವಂತೆ ನಿವೇಶನದ ಹಕ್ಕುಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಸಂಸದ ಪ್ರಹ್ಲಾದ ಜೋಶಿ, ನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಅನೇಕ ಕೊರತೆಗಳಿದ್ದು ಇದರ ನಿರ್ವಹಣೆಯನ್ನು  ಕೇಂದ್ರ ಸರ್ಕಾರ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

`ಎಂಟು ತಿಂಗಳೊಳಗೆ ಮನೆ ಸಿದ್ಧ~
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ದರ್ಪಣ ಜೈನ್, ಮುಂದಿನ ಎಂಟು ತಿಂಗಳಲ್ಲಿ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

`ವಿವಿಧ ಯೋಜನೆಗಳನ್ನು ಜೊತೆಗೂಡಿಸಿ ನಿರ್ಮಿಸಲಾಗುವ ಮೊದಲ ವಸತಿ ಯೋಜನೆ ಇದಾಗಿದ್ದು ಪ್ರತಿ ಮನೆಯನ್ನು  ತಲಾ 1,60,000 ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು~ ಎಂದು ಅವರು ತಿಳಿಸಿದರು.
ಫಲಾನುಭವಿಗಳ ನಿರಾಸಕ್ತಿ, ಸಾಲಸೌಲಭ್ಯದ ಕೊರತೆ ಇತ್ಯಾದಿಗಳಿಂದಾಗಿ ನಗರ ಪ್ರದೇಶಗಳಲ್ಲಿ ವಸತಿ ಯೋಜನೆಗಳು ಯಶಸ್ಸು ಕಾಣುತ್ತಿಲ್ಲ ಎಂದು ಹೇಳಿದ ಜಿಲ್ಲಾಧಿಕಾರಿಗಳು, ನೆಲಮಟ್ಟ ಹಾಗೂ ಎರಡು ಮಹಡಿಯ ಮನೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸುವ ಕುರಿತು ಚಿಂತನೆ ನಡೆಸಬೇಕಾಗಿದೆ ಎಂದರು.

ಶಾಸಕ ವೀರಭದ್ರಪ್ಪ ಹಾಲಹರವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಜಬ್ಬಾರ್ ಖಾನ್ ಹೊನ್ನಳ್ಳಿ, ಎ.ಎಂ. ಹಿಂಡಸಗೇರಿ, ಶಾಸಕರಾದ ಚಂದ್ರಕಾಂತ ಬೆಲ್ಲದ, ವೀರಣ್ಣ ಮತ್ತಿಕಟ್ಟಿ, ಶ್ರೀನಿವಾಸ ಮಾನೆ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಮತಾಜಬಿ ಹಜರೇಸಾಬ ನದಾಫ್, ಪಾಲಿಕೆ ಸದಸ್ಯೆ ಲಕ್ಷ್ಮಿಬಾಯಿ ಯಮನೂರ, ಪಾಲಿಕೆ ವಿರೋಧ ಪಕ್ಷದ ನಾಯಕ ದೀಪಕ ಚಿಂಚೋರೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಕಾಟವೆ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್. ಶಿವಳ್ಳಿ, ಬೀಡಿ ಕಾರ್ಮಿಕರ ಸಂಘದ ಕಾರ್ಯದರ್ಶಿ ಸಿರಾಜ್ ಅಹಮ್ಮದ್ ಕುಡಚಿವಾಲೆ, ಪಾಲಿಕೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ಮುಂತಾದವರು ಉಪಸ್ಥಿತರಿದ್ದರು.

ಖರ್ಗೆ ಮೇಲೆ ಹೊಗಳಿಕೆಯ ಮಳೆ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಗದೀಶ ಶೆಟ್ಟರ ಹಾಗೂ ಪ್ರಹ್ಲಾದ ಜೋಶಿ, ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಹೊಗಳಿಕೆಯ ಮಳೆ ಸುರಿಸಿದರು.

ಪ್ರಹ್ಲಾದ ಜೋಶಿ ಮಾತನಾಡಿ, ಈ ಭಾಗದ ಇಎಸ್‌ಐ ಆಸ್ಪತ್ರೆಗಳು ಹಾಗೂ ಪಿಎಫ್ ಕಚೇರಿಗಳ ಅಭಿವೃದ್ಧಿಗಾಗಿ ಖರ್ಗೆ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಜಗದೀಶ ಶೆಟ್ಟರ, ಕಾರ್ಮಿಕ ಇಲಾಖೆಯ ಅಸ್ತಿತ್ವವನ್ನು ತಿಳಿಸಿಕೊಟ್ಟವರು ಖರ್ಗೆ ಎಂದು ಹೇಳಿದರಲ್ಲದೆ ಇಲಾಖೆಯಿಂದ ರಾಜ್ಯಕ್ಕೆ ಅತಿಹೆಚ್ಚು ಹಣ ಬಿಡುಗಡೆ ಮಾಡಿದ ಖ್ಯಾತಿ ಖರ್ಗೆ ಅವರಿಗಿದೆ ಎಂದು ಹೇಳಿದರು.
ಇವರಿಬ್ಬರ ಮಾತುಗಳಿಗೆ ಧನ್ಯವಾದ ಅರ್ಪಿಸಿದ ಖರ್ಗೆ ಇದನ್ನು ಹೊಗಳಿಕೆ ಎಂದು ತಿಳಿಯದೆ ಅಭಿನಂದನೆಯಾಗಿ ಸ್ವೀಕರಿಸುತ್ತೇನೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT