ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಕಲ್ಲಿನ ‘ಬಾಳಿಕೆ’ ಮನೆ!

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ನೀವು ಏನೇ ಹೇಳಿ ಕಲ್ಲಿನ ಮನೆ ಅದರಲ್ಲೂ ಬೀದರ್ ಕಲ್ಲಿನ (ಲ್ಯಾಟ್ರೈಟ್ ಕಲ್ಲು) ಮನೆಯೇ ಚೆಂದ. ಅಷ್ಟೇ ಅಲ್ಲ ಬಾಳಿಕೆಯೂ ಹೆಚ್ಚು. ಒಂದು ಕಲ್ಲನ್ನು ಎತ್ತಿ ಇಡಲು ಇಬ್ಬರು ಬೇಕೇ ಬೇಕು! ಮೂರು ಇಟ್ಟಿಗೆ ಜಾಗದಲ್ಲಿ ಒಂದು ಕಲ್ಲನ್ನು ಇಡಬಹುದು ಗೊತ್ತ’.... ಎಂದೇ ಮಾತು ಆರಂಭಿಸಿದರು ಮನೆಯ ಮಾಲೀಕ ವಿಜಯಕುಮಾರ್‌ ಕುಲಕರ್ಣಿ.

ಗುಲ್ಬರ್ಗ ಹೊರವಲಯದ ರಾಜರಾಜೇಶ್ವರಿ ನಗರದಲ್ಲಿ 30X50 ಅಡಿ ನಿವೇಶನದಲ್ಲಿ ನಿರ್ಮಿಸಿರುವ ಕೆಂಪು ಕಲ್ಲಿನ ಮನೆ ನೋಡುತ್ತಿದ್ದಂತೆಯೇ ಗಮನ ಸೆಳೆಯುತ್ತದೆ. ಗೋವಾ, ಕರಾವಳಿ ಅದರಲ್ಲೂ ಉತ್ತರ ಕನ್ನಡ ಜಿಲ್ಲೆ, ಬೆಳಗಾವಿಯ ಕೆಲ ಭಾಗ ಹಾಗೂ ಬೀದರ್ ಜಿಲ್ಲೆಗಳಲ್ಲಿ ಈ ಕಲ್ಲು ಹೆಚ್ಚಾಗಿ ಸಿಗುತ್ತದೆ. ಶಿರಸಿಯಲ್ಲಿ ಇದನ್ನು ‘ಜಂಬಿಟ್ಟಿಗೆ’ ಎಂದು ಕರೆದರೆ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ‘ಬೀದರ್ ಕಲ್ಲು’ ಎಂದು ಕರೆಯಲಾಗುತ್ತದೆ.

ಸ್ಥಳೀಯವಾಗಿ ಲಭ್ಯವಿರುವ ಕಟ್ಟಡ ಸಾಮಗ್ರಿಗಳನ್ನು ಬಳಸಿ ಮನೆ ಕಟ್ಟಿಸಿದರೆ ಖರ್ಚು ಕಡಿಮೆ ಮತ್ತು ಬಾಳಿಕೆ ಹೆಚ್ಚು ಎಂಬ ಕಾರಣಕ್ಕೆ ಇವರು ಕಲ್ಲಿನ ಮನೆಯನ್ನೇ ಕಟ್ಟಿಸಿದ್ದಾರೆ. ಮನೆಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಚಿಕ್ಕದಾದ ಪಡಸಾಲೆ, ವಿಶಾಲವಾದ ಹಜಾರ ಸಿಗುತ್ತದೆ. ಈ ಹಜಾರದ  ಎದಿರಿಗೇ ತುಸು ತಗ್ಗಾದ ಜಾಗದಲ್ಲಿ ಇಂಗುಗುಂಡಿ ಮಾದರಿಯ ‘ಅಂಗಳ’ವನ್ನೂ (ಹಳೆ ಮೈಸೂರು ವ್ಯಾಪ್ತಿಯಲ್ಲಿನ ತೊಟ್ಟಿ ಮನೆ ಶೈಲಿ) ನಿರ್ಮಿಸಲಾಗಿದೆ. ಇಲ್ಲಿ ಕೈಕಾಲು, ಪಾತ್ರೆ ತೊಳೆಯಬಹುದು.

ಗಾಳಿ–ಬೆಳಕು ನೇರವಾಗಿ ಈ ಭಾಗಕ್ಕೆ ಪ್ರವೇಶ ಮಾಡುವುದರಿಂದ ಇಡೀ ಮನೆಯಲ್ಲಿ ಹಗಲು ಹೊತ್ತಿನಲ್ಲಿ ವಿದ್ಯುತ್ ದೀಪ ಬಳಸಬೇಕಾದ ಅಗತ್ಯವಿಲ್ಲ. ಅಲ್ಲದೇ, ಹೊರಗಿನ ಶುದ್ಧಗಾಳಿ ಒಳ ಪ್ರವೇಶಿಸಿ, ಮನೆಯ ಒಳಗಡೆ ಇರುವ ಬಿಸಿ ಗಾಳಿಯನ್ನು ಹೊರಹಾಕುತ್ತದೆ. ಹೀಗಾಗಿ, ಫ್ಯಾನ್ ಕೂಡ ಬೇಕಾಗಿಲ್ಲ. ಬೀದರ್ ಕಲ್ಲು ತಂಪು ಕೂಡ ಹೌದು. ಹೊರಗಡೆ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದರೂ ಮನೆಯ ಒಳಗಡೆ ಮಾತ್ರ ತಂಪು ವಾತಾವರಣ. ದಿನವಿಡೀ ಕೆಲಸ ಮಾಡಿ, ಮನೆಗೆ ಮರಳಿದಾಗ ಈ ಕಲ್ಲು ಹಿತಾನುಭವ ನೀಡುತ್ತದೆ.

ಮನೆಯ ಹೊರಭಾಗದಿಂದ ಗಾಳಿ, ಬೆಳಕು ಒಳ ಬರುವಂತೆ ಅಲ್ಲಲ್ಲಿ ಚಿಕ್ಕ ಚಿಕ್ಕ ಓಪ್‌ನಿಂಗ್ಸ್‌ (ಗಾಳಿ–ಬೆಳಕಿನ ರಂದ್ರಗಳು) ಬಿಡಲಾಗಿದೆ.
‘ನನ್ನ ಮಗ ಎಂಜಿನಿಯರಿಂಗ್ ಓದಿದ್ದರಿಂದ ಆತನ ಸ್ನೇಹಿತರೇ ನೀಲನಕ್ಷೆ ತಯಾರಿಸಿ ಕೊಟ್ಟರು. ಅಂದವಾದ ಕನಸಿನ ಮನೆ ಕಟ್ಟಿಸುವ ನಮ್ಮ ಆಸೆಗೆ ಲ್ಯಾಟ್ರೈಟ್ ಮತ್ತು ಶಹಾಬಾದ್ ಕಲ್ಲುಗಳನ್ನು ಬಳಸಿದೆವು. ಆರ್‌ಸಿಸಿ ಮನೆಗಳಿಗಿಂತ ಈ ಮನೆ ತಂಪಾಗಿದೆ.

ಹೀಗಾಗಿ, ಮನೆಯಲ್ಲಿ ಇದ್ದಷ್ಟು ಹೊತ್ತು ನೆಮ್ಮದಿಯಾಗಿ ಇರಬಹುದು. ನೋಡಲು ಹಳೆ ಮಾದರಿ ಮನೆ ಎನಿಸಿದರೂ ನೆಮ್ಮದಿಯಾಗಿರಲು ಈ ಮನೆ ಹೇಳಿ ಮಾಡಿಸಿದ ಹಾಗಿದೆ’ ಎಂದು ಕುಲಕರ್ಣಿ ತಮ್ಮದೇ ಆದ ಶೈಲಿಯಲ್ಲಿ ವಿವರಣೆ ನೀಡುತ್ತಾರೆ. ‘ಮನೆಯ ಯಾವುದೇ ಭಾಗದಲ್ಲಿ ಕೂತರೂ ಗಾಳಿ, ಬೆಳಕು ಬರುತ್ತದೆ. ಗುಲ್ಬರ್ಗದಲ್ಲಿ ಬೇಸಿಗೆಯಲ್ಲಿ ಬಿಸಿಲು ಹೆಚ್ಚು. ಆದರೆ, ನಮ್ಮ ಮನೆಯಲ್ಲಿ ಆ ಅನುಭವ ಆಗುವುದಿಲ್ಲ.

2013ರ ಮೇ ತಿಂಗಳಲ್ಲಿ ಗೃಹಪ್ರವೇಶ ಮಾಡುವಾಗ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. ಆದರೆ, ಗೃಹ ಪ್ರವೇಶಕ್ಕೆ ಬಂದ ಬಹುತೇಕರು ಈ ಮನೆ ತಂಪಾಗಿದೆ. ಒಳಗೆ ಬಂದರೆ ಬಿಸಿಯ ಅನುಭವ ಆಗುವುದಿಲ್ಲ ಎಂದು ಖುಷಿಯಿಂದಲೇ ಹೇಳಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ.

ಮುಂಬಾಗಿಲನ್ನು ಹಳ್ಳಿ ಶೈಲಿಯ ಮನೆಯ ಬಾಗಿಲ ಹಾಗೆ ಅಳವಡಿಸಲಾಗಿದೆ. ಇನ್ನುಳಿದಂತೆ ಮನೆಯ ಒಳಗಿನ ಬಾಗಿಲು, ಕಿಟಕಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಕಟ್ಟಿಗೆಯಿಂದ ತಯಾರಿಸಿ, ಬಳಸಲಾಗಿದೆ. ಮನೆಯ ಆವರಣದಲ್ಲಿರುವ ತುಳಸಿ ಕಟ್ಟೆಯನ್ನೂ ಲ್ಯಾಟ್ರೈಟ್ ಕಲ್ಲಿನಲ್ಲೇ ನಿರ್ಮಿಸಿರುವುದು ವಿಶೇಷ. ಕಡಿಮೆ ಖರ್ಚು, ದೀರ್ಘ ಬಾಳಿಕೆ ಎಲ್ಲಕ್ಕೂ ಮಿಗಿಲಾಗಿ ನೆಮ್ಮದಿ ಕೊಡುವ ಈ ಮನೆ, ‘ಕನಸಿನ ಮನೆ’ ಕಟ್ಟಿಸುವ ಇತರರಿಗೂ ಮಾದರಿಯಾಗಿದೆ.

‘ಕಲ್ಲಿನ ಮನೆ ಬಾಳಿಕೆ ಹೆಚ್ಚು’
ಬೀದರ್ ಕಲ್ಲಿನಲ್ಲಿ ಮನೆ ಕಟ್ಟಿಸಿದರೆ ಬಾಳಿಕೆ ಹೆಚ್ಚು. ಈ ಕಾರಣಕ್ಕಾಗಿಯೇ ಕಲ್ಲಿನ ಮನೆ ಕಟ್ಟಿಸಿದೆ. ಇಡೀ ಮನೆಗೆ ₨ 15 ಲಕ್ಷ ವೆಚ್ಚವಾಗಿದೆ. ನನ್ನ ಮಗ ದೀಪಕ್ ಎಂಜಿನಿಯರ್ ಆಗಿದ್ದು, ಆತನ ಸ್ನೇಹಿತ ಸಂಕೇತ ಎಂಬುವರು ನೀಲನಕ್ಷೆ ತಯಾರು ಮಾಡಿ ಕೊಟ್ಟಿದ್ದಾರೆ. ಬೇರೆ ಮನೆಗಳಿಗಿಂತ ಭಿನ್ನವಾಗಿ ಕಟ್ಟಬೇಕು ಎಂಬ ಆಲೋಚನೆಯಿಂದ ಮನೆಯಲ್ಲಿ ಗ್ರಾಮೀಣ ಸೊಗಡನ್ನು ಅನುಸರಿಸಲಾಗಿದೆ. ಇಟ್ಟಿಗೆ ಮನೆಗಿಂತಲೂ ಕಲ್ಲಿನ ಮನೆ ತಂಪಾಗಿರುತ್ತದೆ.
–ವಿಜಯಕುಮಾರ್ ಕುಲಕರ್ಣಿ. ಮನೆ ಮಾಲೀಕ.

‘ಲ್ಯಾಟ್ರೈಟ್ ಕಲ್ಲು ಬಹಳ ತಂಪು’
ಗೋವಾ, ಕರಾವಳಿ ಅದರಲ್ಲೂ ಉತ್ತರ ಕನ್ನಡ ಜಿಲ್ಲೆ ಹಾಗೂ ಬೀದರ್‌ನಲ್ಲಿ ದೊರಕುವ ಲ್ಯಾಟ್ರೈಟ್ ಕಲ್ಲು ನೋಡಲು ಅಂದವಾಗಿರುತ್ತದೆ. ಈ ಕಲ್ಲಿನಿಂದ ಮನೆ ಕಟ್ಟಿದರೆ ಬಿಸಿಲಿನ ಅನುಭವ ಆಗುವುದಿಲ್ಲ. ಅಲ್ಲದೇ, ಹೊರ ಮತ್ತು ಒಳ ಭಾಗದಲ್ಲಿ ಪ್ಲಾಸ್ಟರ್ ಮಾಡಿಸುವ ಅಗತ್ಯವಿಲ್ಲ. ಗಾಳಿ, ಬಿಸಿಲಿಗೆ ತೆರೆದುಕೊಂಡ ಬಳಿಕ ಈ ಕಲ್ಲು ಗಡಸಾಗುತ್ತ ಹೋಗುತ್ತದೆ. ನೆಲಕ್ಕೆ ಶಹಾಬಾದ್ ಕಲ್ಲು ಬಳಸಲಾಗಿದೆ. 150 ಕಿ.ಮೀ ವ್ಯಾಪ್ತಿಯ ಒಳಗೆ ಲಭ್ಯವಿರುವ ಸಾಮಗ್ರಿಗಳನ್ನು ಬಳಸಿ ಮನೆ ನಿರ್ಮಿಸಿದರೆ ಖರ್ಚು ಕಡಿಮೆ ಬರುತ್ತದೆ.
–ಸಂಕೇತ ಘಂಟಿ, ವಾಸ್ತುಶಿಲ್ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT