ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ದಕ್ಷಿಣ: 2ನೇ ಹಣಾಹಣಿ

Last Updated 8 ಏಪ್ರಿಲ್ 2013, 6:41 IST
ಅಕ್ಷರ ಗಾತ್ರ

ಬೀದರ್: ಅವಿಭಜಿತ ಬೀದರ್‌ಕ್ಷೇತ್ರದಲ್ಲಿ ಸೇರಿಕೊಂಡಿದ್ದ ಕೆಲವು ಭಾಗಗಳ ಜೊತೆಗೆ ನೆರೆಯ ಹುಮನಾಬಾದ್ ತಾಲ್ಲೂಕಿನ ಎರಡು ವೃತ್ತಗಳನ್ನೂ ಸೇರಿಕೊಂಡು, ಕ್ಷೇತ್ರ ಪುನರ್ವಿಂಗಡಣೆ ನಂತರ ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕ್ಷೇತ್ರವೇ ಬೀದರ್ ದಕ್ಷಿಣ. ಬಹುತೇಕ ಗ್ರಾಮೀಣ ಭಾಗಗಳೇ ಇರುವ ಕ್ಷೇತ್ರವೂ ಹೌದು.

2008ರ ಬಳಿಕ ಕ್ಷೇತ್ರ  ಎದುರು ನೋಡುತ್ತಿರುವ ಎರಡನೇ ಚುನಾವಣೆ. ಹಾಲಿ ಶಾಸಕ ಬಂಡೆಪ್ಪಾ ಕಾಶೆಂಪುರ್ ಪುನರಾಯ್ಕೆ ಬಯಸುತ್ತಿರುವ ಕ್ಷೇತ್ರ.

2008ರ ಚುನಾವಣೆಯಲ್ಲಿ ಇದ್ದಂತೆ ಮತದಾರರು 1,66,391. ಜನವರಿ 16, 2013ರಲ್ಲಿ ಇದ್ದಂತೆ ಈಗಚ 1,78,436 ಮತದಾರರಿದ್ದಾರೆ. ಇವರಲ್ಲಿ 85,276 ಮಹಿಳೆಯರು. ಬೀದರ್ ತಾಲ್ಲೂಕಿನ ಕಮಠಾಣ, ಬಗದಲ್, ಮನ್ನಳ್ಳಿ, ಬೀದರ್ ದಕ್ಷಿಣ ವೃತ್ತ ಮತ್ತು ಹುಮನಾಬಾದ್ ತಾಲ್ಲೂಕಿನ ನಿರ್ಣಾ, ಬೆಮಳಖೇಡಾ ವೃತ್ತಗಳು ಕ್ಷೇತ್ರದಲ್ಲಿವೆ. ಜಿಲ್ಲೆಯ ಮೂಲಕ ಪುಣೆಗೆ ಸಂಪರ್ಕವನ್ನು ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 9 ಈ ಕ್ಷೇತ್ರವನ್ನು ಹಾದುಹೋಗಲಿದೆ. ಪಶುವೈದ್ಯಕೀಯ ಮೀನುಗಾರಿಕೆ ವಿಶ್ವವಿದ್ಯಾಲಯ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುತ್ತದೆ.

ಅಭಿವೃದ್ಧಿ ಎಂಬುದು ನಗರಮುಖಿ ಆದಂತೆ ಹಳ್ಳಿಗಳು ಎದುರಿಸಲಿರುವ ಜಿಲ್ಲೆಯ ಇತರೆ ತಾಲ್ಲೂಕುಗಳ ಗ್ರಾಮಗಳಲ್ಲಿ ಇರುವಂತೇ ಗ್ರಾಮಗಳಲ್ಲಿ ಕಾಣಸಿಗುವ ಪ್ರಮುಖ ಸಮಸ್ಯೆಗಳು ಇಲ್ಲಿಯೂ ಕಾಣುತ್ತವೆ. ಜಿಲ್ಲಾ ಕೇಂದ್ರದ ಮಗ್ಗುಲಲ್ಲೇ ಇರುವ ಕಾರಣ ಯುವಜನರು ನಗರಮುಖಿ ಆಗುವ ಅವಕಾಶಗಳು ಹೆಚ್ಚು.

ಅಭಿವೃದ್ಧಿಗೆ ಒತ್ತು ನೀಡಿ ಇಂಥದೊಂದು ವಲಸೆಯನ್ನು ತಡೆಯುವ ಕೆಲಸಗಳು ಆಗಬೇಕು ಎಂಬ ದೊಡ್ಡ ನಿರೀಕ್ಷೆಯನ್ನು ಹೊಂದಿರುವ ಕ್ಷೇತ್ರವಿದು. ಉಳಿದಂತೆ, ಕುಡಿಯುವ ನೀರು, ಗುಣಮಟ್ಟದ ರಸ್ತೆ ಕೊರತೆ ಸಮಸ್ಯೆ ಇರುವುದೇ. ಅಭಿವೃದ್ಧಿಯ ನಿರೀಕ್ಷೆಗಳು ಹೆಚ್ಚಿರುವ ಕಾರಣದಿಂದ ಚುನಾವಣೆಯತ್ತ ಕುತೂಹಲವೂ ಹೆಚ್ಚಿದೆ.

2008ರ ಚುನಾವಣಾ ಫಲಿತಾಂಶದ ಅಂಕಿ-ಅಂಶಗಳನ್ನು ಗಮನಿಸಿದರೆ, ಆಗಷ್ಟೇ ಕ್ಷೇತ್ರ ಬದಲಿಸಿ ನೂತನ ಕ್ಷೇತ್ರಕ್ಕೆ ತೆರಳಿದ್ದ ಶಾಸಕ ಬಂಡೆಪ್ಪಾ ಕಾಶೆಂಪುರ ಅವರಿಗೆ ಗೆಲುವು ನಿರಾಯಾಸ ಆಗಿರಲಿಲ್ಲ. ಏಕೆಂದರೆ ಗೆಲುವಿನ ಅಂತರ ಕೇವಲ 1,271. ಆಗ ತೀವ್ರ ಸ್ಪರ್ಧೆ ನೀಡಿದ್ದವರು ಬಿಜೆಪಿ ಅಭ್ಯರ್ಥಿಯಾಗಿದ್ದ ಸಂಜಯ ಖೇಣಿ.

ಸದ್ಯದ ಮಾಹಿತಿಯಂತೆ ಈಗ ಸಂಜಯ್ ಖೇಣಿ ನಿಲ್ಲುತ್ತಿಲ್ಲ. ಆದರೂ, ಖೇಣಿ ಹೆಸರಿನ ಬಗೆಗೆ ಕಳೆದ ಚುನಾವಣೆಗಿಂತಲೂ ಹೆಚ್ಚಿನ ಕುತೂಹಲವಿದೆ. ಕಾರಣ, ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಶೋಕ್ ಖೇಣಿ ಅವರೇ ಖುದ್ದು ಈ ಬಾರಿ ಕಣಕ್ಕೆ ಇಳಿಯುತ್ತಾರೆ ಎಂಬ ಮಾತು. ಸ್ವತಃ ಖೇಣಿ ಇದನ್ನು ದೃಢಪಡಿಸಿದ್ದರೂ, ನಾಮಪತ್ರ ಸಲ್ಲಿಸುವವರೆಗೂ ಅಶೋಕ್ ಅವರೇ ಸ್ಪರ್ಧಿಸುತ್ತಾರಾ, ಅಥವಾ ಕೊನೆಗೇ ಸಂಜಯ ಅವರೇ ಸ್ಪರ್ಧಿಸಬಹುದಾ ಎಂಬ ಪ್ರಶ್ನಾರ್ಥಕ ಚಿಹ್ನೆಯಂತೂ ಉಳಿದಿದೆ.

ಉಳಿದಂತೆ ಕಾಂಗ್ರೆಸ್ ಪಕ್ಷ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ಮೀನಾಕ್ಷಿ  ಸಂಗ್ರಾಮ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದರೆ; ಕೆಜೆಪಿ ಹಾಲಿ ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ ಅವರನ್ನು, ಬಿಜೆಪಿ ಡಾ. ಬಸವರಾಜ ಪಾಟೀಲ ಅಷ್ಟೂರು ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.

ಮೊದಲ ಚುನಾವಣೆಯಲ್ಲೇ ತೀವ್ರ ಹಣಾಹಣಿ ಕಂಡ ಕ್ಷೇತ್ರ ಇದು. ಈ ಬಾರಿ ಚರ್ಚೆ ಇರುವಂತೆ ಅಶೋಕ್ ಖೇಣಿ ಸ್ಪರ್ಧಿಸುತ್ತಾರೋ  ಇಲ್ಲವೋ; ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳಿಗೆ ಗೆಲುವಿನ ಹಾದಿ ಮಾತ್ರ `ನೈಸ್' ಅಲ್ಲ ಎಂದಂತೂ ಸಲೀಸಾಗಿ ಹೇಳಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT