ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರನ ರಣಕಹಳೆ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ನಿರ್ದೇಶಕ ಸಂಜಯ್ ತಮ್ಮ `ಬೀರ~ ಚಿತ್ರದ ಶೂಟಿಂಗ್ ಅನ್ನು ಸದ್ದಿಲ್ಲದೆ ಮುಗಿಸಿದ್ದಾರೆ. ಅಂದಮಾತ್ರಕ್ಕೆ, `ಬೀರ~ ಸಿಕ್ಕಾಪಟ್ಟೆ ಸೈಲೆಂಟು ಎನ್ನುವಂತಿಲ್ಲ. ತೆರೆಯ ಮೇಲೆ ಆತ ಸಿಕ್ಕಾಪಟ್ಟೆ ವೈಲೆಂಟ್ ಎನ್ನುವ ಇಂಗಿತ ನಿರ್ದೇಶಕರ ಮಾತಿನಲ್ಲಿತ್ತು.

`ನಮ್ಮ ಪ್ರೀತಿಯ ರಾಮು~ ಎನ್ನುವ ಸದಭಿರುಚಿಯ ಚಿತ್ರ ನಿರ್ದೇಶಿಸಿದ್ದ ಸಂಜಯ್ ಈಗ ಸಂಪೂರ್ಣ ಭಿನ್ನವಾದ ಚಿತ್ರ ರೂಪಿಸುತ್ತಿದ್ದಾರೆ. ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಯುವಕನೊಬ್ಬ ಸಿಡಿದೇಳುವ ಕಥೆ `ಬೀರ~ ಚಿತ್ರದ್ದು. ಸಮಾಜದಲ್ಲಿನ ಕೆಡುಕಿನ ವಿರುದ್ಧ ಬೀರ ರಣಕಹಳೆ ಮೊಳಗಿಸುತ್ತಾನೆ. ಹಾಗೆಂದು ಇದು ಸಂಪೂರ್ಣ ಹೊಡಿಬಡಿ ಚಿತ್ರವಲ್ಲ, ಪ್ರೇಮದ ಆಯಾಮವೂ ಕಥೆಯಲ್ಲಿದೆ ಎಂದು ಸಂಜಯ್ ಸ್ಪಷ್ಟಪಡಿಸಿದರು.

`ಗುಂಡ್ರಗೋವಿ~ ಚಿತ್ರದ ಮೂಲಕ ಹೆಸರು ಮಾಡಿದ್ದ ಸತ್ಯ ಅಲಿಯಾಸ್ ಸರ್ದಾರ್ ಸತ್ಯ `ಬೀರ~ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೀರನಾಗಿ ಅವರ ನಟನೆ ನಿರ್ದೇಶಕರಿಗೆ ತುಂಬಾ ಇಷ್ಟವಾಗಿದೆ. ಹಾಗೆ ನೋಡಿದರೆ ಸತ್ಯರ ಬಗೆಗಿನ ಸಂಜಯ್ ಪ್ರೇಮ ಈ ಚಿತ್ರದಿಂದ ಶುರುವಾದದ್ದಲ್ಲ. `ಆ ದಿನಗಳು~ ಚಿತ್ರದ ಪುಟ್ಟ ಪಾತ್ರದಲ್ಲಿನ ಅವರ ನಿರ್ವಹಣೆ ಸಂಜಯ್‌ಗೆ ಇಷ್ಟವಾಗಿತ್ತು. ಈ ಹುಡುಗನ ಚಿತ್ರವನ್ನು ನಾನು ನಿರ್ದೇಶಿಸಿಬೇಕು ಎಂದು ಅವರಿಗೆ ಆಗಲೇ ಅನ್ನಿಸಿತ್ತಂತೆ.

`ಬೀರ~ ಚಿತ್ರದಲ್ಲಿನ ಸಾಹಸ ದೃಶ್ಯಗಳು ಸತ್ಯ ಅವರಿಗೆ ಹೊಸ ಅನುಭವ ನೀಡಿವೆ. ಥ್ರಿಲ್ಲರ್ ಮಂಜು ಹಾಗೂ ಕೌರವ ವೆಂಕಟೇಶ್ ವಿಭಿನ್ನ ದೃಶ್ಯಗಳನ್ನು ಸಂಯೋಜನೆ ಮಾಡಿದ್ದಾರಂತೆ. `ಬೀರ~ನ ಪಾತ್ರಕ್ಕೆ ವಿಭಿನ್ನ ಆಯಾಮಗಳು ಇರುವುದರಿಂದ ಸತ್ಯ ಅವರ ಪ್ರತಿಭೆಗೆ ಈ ಪಾತ್ರ ಸವಾಲಾಗಿ ಪರಿಣಮಿಸಿದೆ. ಬೀರ ಕ್ರಾಂತಿಕಾರಿಯಾದರೂ, ಪ್ರೇಮಿಸಲಿಕ್ಕೂ ಅವನಿಗೆ ಸಿಕ್ಕಾಪಟ್ಟೆ ಸಮಯ ಇದ್ದಂತಿದೆ. ಹಾಗಾಗಿಯೇ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಒಬ್ಬಾಕೆ ಶುಭಾ ಪೂಂಜಾ. ಮತ್ತೊಬ್ಬಳು ಚೆಲುವೆ ರೂಪಿಕಾ.
ಈಚಿನ ದಿನಗಳಲ್ಲಿ ಶುಭಾ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. `ಒಳ್ಳೆ ಪಾತ್ರಗಳಲ್ಲಷ್ಟೇ ಕಾಣಿಸಿಕೊಳ್ಳಲು ನಿರ್ಧರಿಸಿದ್ದು, ಬಂದ ಪಾತ್ರಗಳನ್ನೆಲ್ಲ ಒಪ್ಪಿಕೊಳ್ಳುತ್ತಿಲ್ಲ~ ಎಂದು ಶುಭಾ ಹೇಳಿದರು. `ಬೀರ~ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಮಗಳಾಗಿ ನಟಿಸುತ್ತಿರುವ ಅವರಿಗೆ, ತಮ್ಮದು ನಟನೆಗೆ ಅವಕಾಶವಿರುವ ಪಾತ್ರ ಅನ್ನಿಸಿದೆ. ಆಧುನಿಕ ಹುಡುಗಿಯ ಈ ಪಾತ್ರದಲ್ಲಿ ಚೆಲುವಿನ ಅನಾವರಣಕ್ಕೂ ಅವಕಾಶವಿದೆಯಂತೆ.

ಜಾನ್ ಪೀಟರ್ ಸಂಗೀತ ನೀಡುತ್ತಿರುವ, ಬಾಲ ನಾಗೇಶ್ ಛಾಯಾಗ್ರಹಣದ `ಬೀರ~ ಚಿತ್ರದ ಚಿತ್ರೀಕರಣ ಮುಗಿದಿದೆ. ಆದರೆ, ಗೀತೆಗಳ ಶೂಟಿಂಗ್ ಇನ್ನೂ ಬಾಕಿಯಿದೆ. ಬ್ಯಾಂಕಾಕ್‌ನಲ್ಲಿ ಬೀರನ ಪ್ರೇಮಯುಗಳದ ಚಿತ್ರೀಕರಣಕ್ಕೆ ನಿರ್ದೇಶಕರು ಯೋಜನೆ ರೂಪಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT