ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧ ಪ್ರಜ್ಞೆ ಚಿಂತಕನಿಗೆ ಮಿಡಿದ ಕಂಬನಿ

Last Updated 19 ಅಕ್ಟೋಬರ್ 2011, 9:50 IST
ಅಕ್ಷರ ಗಾತ್ರ

ಚಿತ್ರದುರ್ಗ: ಬುದ್ಧಪ್ರಜ್ಞೆ ಮತ್ತು ಗಾಂಧೀಜಿ ಸಿದ್ಧಾಂತದ ಬುನಾದಿಯ ಮೇಲೆ ತಮ್ಮ ವಿಚಾರ, ಚಿಂತನೆಗಳನ್ನು ಮಂಡಿಸುತ್ತಿದ್ದ ಹಿರಿಯ ರಾಜಕಾರಣಿ, ಮಾಜಿ ಸಚಿವ ಕೆ.ಎಚ್. ರಂಗನಾಥ್ ಅವರ ನಿಧನಕ್ಕೆ ಜಿಲ್ಲೆಯ ಗಣ್ಯರು, ಮಠಾಧೀಶರು, ಮುಖಂಡರು, ಅಭಿಮಾನಿಗಳು, ಬೆಂಬಲಿಗರು, ಕಂಬನಿ ಮಿಡಿದಿದ್ದಾರೆ.

ನಿಷ್ಠುರ, ನೊಂದವರ ಪರ ದನಿಯ ಕೆ.ಎಚ್. ರಂಗನಾಥ್ 6 ಬಾರಿ ಶಾಸಕರಾಗಿ ಮತ್ತು ಒಂದು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 1984ರ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗದ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಸಾಮಾನ್ಯ ಕ್ಷೇತ್ರದಿಂದ ದಲಿತ ವ್ಯಕ್ತಿಯೊಬ್ಬ ಗೆದ್ದು ಬಂದ ಅತಿ ವಿರಳ ಉದಾಹರಣೆಗಳ ಪೈಕಿ ಇದೂ ಒಂದು.

ಕೆ.ಎಚ್. ರಂಗನಾಥ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. 1942ರಲ್ಲಿ ನಗರದ ದಿವಂಗತ ಜಿ. ಬಸಪ್ಪ ಅವರ ಜತೆಗೆ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು. ಅಂದಿನಿಂದಲೂ ಬಸಪ್ಪ ಮತ್ತು ರಂಗನಾಥ್ ಅವರ ಒಡನಾಟ ಮುಂದುವರಿದಿತ್ತು.

ಸಭೆ: ಕೆ.ಎಚ್. ರಂಗನಾಥ್ ಅವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಶೋಕಾಚರಣೆ ಸಭೆ ನಡೆಯಿತು.

ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಎಐಸಿಸಿ ಸದಸ್ಯ ಎಚ್. ಹನುಮಂತಪ್ಪ ಮಾತನಾಡಿ, ಕೆ.ಎಚ್. ರಂಗನಾಥ್ ಅವರು ಪ್ರಾಮಾಣಿಕ, ನೇರ ಮತ್ತು ನಿಷ್ಠುರವಾದಿಯಾಗಿದ್ದರು. ಚಿತ್ರದುರ್ಗ ಜಿಲ್ಲೆಯ ಬಗ್ಗೆ ಕಳಕಳಿ, ಕಾಳಜಿ ಹೊಂದಿದ್ದರು. ದೇವರಾಜ್ ಅರಸು ಅವರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಾಜ್ಯದ ರಾಜಕೀಯಕ್ಕೆ ಹೊಸ ದಿಕ್ಕನ್ನು ರಂಗನಾಥ್ ತೋರಿಸಿದ್ದರು. ಇಂದಿರಾಗಾಂಧಿ ಅವರ 20 ಅಂಶಗಳ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಸ್ಮರಿಸಿದರು.
ಮಾಜಿ ಸಚಿವ ಏಕಾಂತಯ್ಯ ಮಾತನಾಡಿ, ಸಾಮಾಜಿಕ ಕಳಕಳಿವುಳ್ಳ ರಾಜಕಾರಣಿ ಕೆ.ಎಚ್. ರಂಗನಾಥ್ ಎಂದು ನುಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎ. ಸೇತುರಾಮ್ ಮಾತನಾಡಿ, ರಂಗನಾಥ್ ಅವರನ್ನು ಕಳೆದುಕೊಂಡಿರುವುದರಿಂದ ಜಿಲ್ಲೆಗೆ ಮತ್ತು ಪಕ್ಷಕ್ಕೆ ನಷ್ಟ ಉಂಟಾಗಿದೆ ಎಂದು ಶೋಕ ವ್ಯಕ್ತಪಡಿಸಿದರು.

ಕೆ.ಪಿ. ಸಂಪತ್‌ಕುಮಾರ್, ಜಿ.ಎಸ್. ಮಂಜುನಾಥ್, ಡಿ.ಎನ್.ಮೈಲಾರಪ್ಪ, ಆರ್.ಕೆ. ನಾಯ್ಡು, ಎಂ.ಚಂದ್ರಶೇಖರ್, ಬಾಲರಾಜ್, ಬಿ.ಜಿ. ಶ್ರೀನಿವಾಸ್, ಫಾತ್ಯರಾಜನ್, ಎಂ.ಜಿ. ಸದಾಶಿವರೆಡ್ಡಿ, ಜಿ.ಎಚ್. ಮೋಹನ್, ಲಕ್ಷ್ಮೀಕಾಂತ್, ಆರತಿ ಮಹಡಿ ಶಿವಮೂರ್ತಿ, ನಾಗರಾಜರೆಡ್ಡಿ, ಬಾಸೂರ್, ಸಿ.ಎನ್. ರಾಮಚಂದ್ರಪ್ಪ, ಶಿವು ಯಾದವ್, ಎಲ್.ಬಿ. ರಾಜಶೇಖರ್, ಮಲ್ಲಿಕಾರ್ಜುನ್, ಸುರೇಂದ್ರ, ವೀರಭದ್ರಬಾಬು, ಕೆ. ಪಾಪಯ್ಯ, ನಜ್ಮತಾಜ್, ತಿಮ್ಮಣ್ಣ, ಬಾಲಕೃಷ್ಣಸ್ವಾಮಿ, ಡಿ.ಟಿ. ವೆಂಕಟೇಶ್ ಮತ್ತಿತರರು ಶೋಕಸಭೆಯಲ್ಲಿ ಪಾಲ್ಗೊಂಡಿದ್ದರು.

ಸಂತಾಪ: ಕೆ.ಎಚ್. ರಂಗನಾಥ್ ಅವರ ನಿಧನಕ್ಕೆ ಮಾಜಿ ಸಂಸದ ಪಿ. ಕೋದಂಡರಾಮಯ್ಯ, ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ.  ಸದಸ್ಯ ಸಿ.ಎನ್. ಕುಮಾರ್, ಜೆಡಿಎಸ್ ಮುಖಂಡ ಶೇಷಣ್ಣಕುಮಾರ್, ಶಾಸಕ ಡಿ. ಸುಧಾಕರ್, ನಾರಾಯಣಪುರದ ಲಲಿತಮ್ಮ ಕೆ.ಎಚ್. ರಂಗನಾಥ್ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ವಿ. ಮಾಧವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಚ್. ಮಂಜುನಾಥ್, ಪುರಸಭಾ ಸದಸ್ಯ ಜಿ. ಧನಂಜಯಕುಮಾರ್, ಶಿಕ್ಷಣ ತಜ್ಞ ಎಚ್.ಎನ್. ನರಸಿಂಹಯ್ಯ, ಪುರಸಭೆ ಮಾಜಿ ಅಧ್ಯಕ್ಷ ಬಿ. ಕೆಂಚಪ್ಪ, ಕೆ.ಆರ್. ವೆಂಕಟೇಶ್, ಎ. ಮಂಜುನಾಥ್, ಈ. ಮಂಜುನಾಥ್, ಡಿ. ಶಿವಣ್ಣ, ಸ್ಫೂರ್ತಿ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷ ಕೆ. ಗಣೇಶ್, ಶಂಕರ್‌ನಾಗ್ ಕಲಾ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ದಿವುಶಂಕರ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ಮಹಮದ್ ರಫಿ, ತಾಲ್ಲೂಕು ಚಲವಾದಿ ಮಹಾಸಭಾ ಅಧ್ಯಕ್ಷ ಖಾದಿ ರಮೇಶ್, ಜಿ.ಎ. ನಾಜರ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ದಕ್ಷ ಆಡಳಿತಗಾರ: ಕೆ.ಎಚ್. ರಂಗನಾಥ್ ಆದರ್ಶ, ನಿಸ್ವಾರ್ಥ ಮತ್ತು ಪ್ರಾಮಾಣಿಕ ರಾಜಕಾರಣಿ. ದಕ್ಷ ಆಡಳಿತಗಾರರಾಗಿದ್ದ ರಂಗನಾಥ್ ಪ್ರಶ್ನಾತೀತ ನಾಯಕರಾಗಿದ್ದರು ಎಂದು ಮಾಜಿ ಶಾಸಕ ಎಚ್. ಆಂಜನೇಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT