ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧ ಸರ್ಕಿಟ್‌ನಲ್ಲಿ ತಾರಾ ಮೆರುಗು

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಗ್ರೇಟರ್ ನೊಯಿಡಾ (ಪಿಟಿಐ/ಐಎಎನ್‌ಎಸ್): ಜಗತ್ತಿನ ಖ್ಯಾತ ಫಾರ್ಮುಲಾ-1 ಚಾಲಕರ ಜೊತೆಗೆ ಭಾರತದ ಕ್ರಿಕೆಟ್ ಆಟಗಾರರು ಹಾಗೂ ಸಿನಿಮಾ ತಾರೆಯರು ಭಾನುವಾರ ಬುದ್ಧ ಇಂಟರ್‌ನ್ಯಾಷನಲ್ ಸರ್ಕಿಟ್‌ನಲ್ಲಿ ಮಿಂಚು ಹರಿಸಲಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಮಹೇಂದ್ರ ಸಿಂಗ್ ದೋನಿ ಒಳಗೊಂಡಂತೆ ಭಾರತ ಕ್ರಿಕೆಟ್ ತಂಡದ ಕೆಲವು ಆಟಗಾರರು ರೇಸ್ ವೀಕ್ಷಿಸಲು ಆಗಮಿಸುವರು.

ಮೋಟಾರು ಸ್ಪೋರ್ಟ್ಸ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ಸಚಿನ್ ತಮ್ಮ ಹಾಜರಿಯನ್ನು ಖಚಿತಪಡಿಸಿದ್ದಾರೆ ಎಂದು ಜೇಪಿ ಸ್ಪೋರ್ಟ್ಸ್ ಇಂಟರ್‌ನ್ಯಾಷನಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯುವರಾಜ್ ಸಿಂಗ್. ವಿರಾಟ್ ಕೊಹ್ಲಿ, ವಿವಿಎಸ್ ಲಕ್ಷ್ಮಣ್, ಗೌತಮ್ ಗಂಭೀರ್ ಹಾಗೂ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್‌ಸನ್ ಪಾಲ್ಗೊಳ್ಳುವರು.

`ರೇಸ್ ಮುಕ್ತಾಯಗೊಳ್ಳುವ ಸಂದರ್ಭದ ಧ್ವಜವನ್ನು ಸಚಿನ್ ತೋರಿಸುವ ಸಾಧ್ಯತೆಯೇ ಅಧಿಕ~ ಎಂದು ಅಧಿಕಾರಿಯೊಬ್ಬರು ನುಡಿದಿದ್ದಾರೆ. ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕೂಡಾ ರೇಸ್ ವೀಕ್ಷಿಸುವರು. ಇವರ ಜೊತೆಗೆ ಬಾಲಿವುಡ್ ತಾರೆಯರು, ರಾಜಕಾರಣಿಗಳು ಹಾಗೂ ಗಣ್ಯರು ನೆರೆಯಲಿದ್ದಾರೆ.

ಬಾಲಿವುಡ್ ಪ್ರತಿನಿಧಿಗಳಾಗಿ ಶಾರೂಖ್ ಖಾನ್, ಅರ್ಜುನ್ ರಾಂಪಾಲ್, ಹೃತಿಕ್ ರೋಶನ್ ಮತ್ತು ಅಭಿಷೇಕ್ ಬಚ್ಚನ್ ಆಗಮಿಸುವರು. `ಪ್ರಧಾನಿ ಮತ್ತು ಸೋನಿಯಾ ಗಾಂಧಿ ಅವರಿಗೂ ಆಹ್ವಾನ ನೀಡಲಾಗಿದೆ. ಆದರೆ ಪಾಲ್ಗೊಳ್ಳುವರೇ ಎಂಬುದು ಖಚಿತವಾಗಿಲ್ಲ~ ಎಂದು ಸಂಘಟಕರು ತಿಳಿಸಿದ್ದಾರೆ.

ಮಾಕನ್‌ಗೆ ಆಹ್ವಾನ ಇಲ್ಲ: ಸಂಘಟಕರು ಕ್ರೀಡಾ ಸಚಿವ ಅಜಯ್ ಮಾಕನ್ ಅವರನ್ನು ಕಡೆಗಣಿಸಿದ್ದು, ಭಾನುವಾರದ ರೇಸ್‌ಗೆ ಆಹ್ವಾನಿಸಿಲ್ಲ. ಸಂಘಟಕರಾದ ಜೇಪಿ ಸಮೂಹ ಮಾಕನ್‌ಗೆ ಆಹ್ವಾನ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಂಘಟಕರು ಈ ರೇಸ್‌ಗಾಗಿ 100 ಕೋಟಿ ರೂ. ತೆರಿಗೆ ವಿನಾಯಿತಿ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಕೇಳಿಕೊಂಡಿತ್ತು. ಆದರೆ ಸರ್ಕಾರ ಅದಕ್ಕೆ ಒಪ್ಪಿರಲಿಲ್ಲ.

`ಉತ್ತಮ ಸಾಧನೆ~
ಗ್ರೇಟರ್ ನೊಯಿಡಾ: ಅರ್ಹತಾ ಹಂತದಲ್ಲಿ ಎಂಟನೇ ಸ್ಥಾನ ಪಡೆದಿರುವುದು ಉತ್ತಮ ಸಾಧನೆ ಎಂದು ಫೋರ್ಸ್ ಇಂಡಿಯಾ ತಂಡದ ಅಡ್ರಿಯಾನ್ ಸುಟಿಲ್ ಹೇಳಿದ್ದಾರೆ.

`ಇದು ನಮಗೆ ವಿಶೇಷ ರೇಸ್ ಎಂದು ಆರಂಭದಿಂದಲೂ ಹೇಳುತ್ತಾ ಬಂದಿದ್ದೇನೆ. ಈ ಕಾರಣ ಭಾನುವಾರ ಎಂಟನೇ ಸ್ಥಾನದಿಂದ ಸ್ಪರ್ಧೆ ಆರಂಭಿಸಲು ಸಾಧ್ಯವಾಗಿರುವುದು ಸಂತಸದ ವಿಚಾರ~ ಎಂದರು.

`ಎಂಟನೇ ಸ್ಥಾನ ಈ ಋತುವಿನಲ್ಲಿ ನನ್ನ ಉತ್ತಮ ಸಾಧನೆಗಳಲ್ಲಿ ಒಂದಾಗಿದೆ. ಬುದ್ಧ ಟ್ರ್ಯಾಕ್ ನನ್ನ ಚಾಲನಾ ಶೈಲಿಗೆ ಹೊಂದಿಕೊಳ್ಳುತ್ತದೆ~ ಎಂದು ಸುಟಿಲ್ ಶನಿವಾರ ಹೇಳಿದರು. ಫೋರ್ಸ್ ಇಂಡಿಯಾ ತಂಡದ ಇನ್ನೊಬ್ಬ ಚಾಲಕ ಪೌಲ್ ಡಿ ರೆಸ್ಟಾ ಭಾನುವಾರ 12ನೇಯವರಾಗಿ ಸ್ಪರ್ಧೆ ಆರಂಭಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT