ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿ ಕಲಿಯದ ಭಾರತಕ್ಕೆ ಮತ್ತೊಂದು ಆಘಾತ

ಕ್ರಿಕೆಟ್: ನೆಚ್ಚಿನ ಈಡನ್ ಅಂಗಳದಲ್ಲಿಯೇ ಕುಸಿದು ಬಿದ್ದ ದೋನಿ ಬಳಗ; ಆಂಗ್ಲರಿಗೆ ಸರಣಿ ಮುನ್ನಡೆಯ ಆಲಿಂಗನ
Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಕೋಲ್ಕತ್ತ: ಈ ಟೆಸ್ಟ್ ಪಂದ್ಯದಲ್ಲಿ ತಮ್ಮ ಸೋಲು ತಪ್ಪಿಸಲು ಪವಾಡವೇ ನಡೆಯಬೇಕು ಎಂದು ಸೆಹ್ವಾಗ್ ಶನಿವಾರ ಹೇಳಿದ್ದರು. ಆದರೆ ಭಾನುವಾರ ಇಲ್ಲಿ ಯಾವುದೇ ಪ್ರವಾಹವೂ ಸಂಭವಿಸಲಿಲ್ಲ, ಭೂಕಂಪವೂ ಆಗಲಿಲ್ಲ, ಇ್ದ್ದದಕ್ಕಿದ್ದಂತೆ ಈಡನ್ ಗಾರ್ಡನ್ಸ್ ಅಂಗಳ ಮಾಯವೂ ಆಗಲಿಲ್ಲ.

ಪರಿಣಾಮ ಭಾರತ ತಂಡವನ್ನು ಸೋಲೆಂಬ ಭಾರಿ ಅನಾಹುತವೊಂದು ಬಂದಪ್ಪಳಿಸಿತು. ಸೇಡು ತೀರಿಸಿಕೊಳ್ಳಲು ಹೋಗಿ ತಾವೇ ತೋಡಿಕೊಂಡ ಗುಂಡಿಯೊಳಗೆ ಮತ್ತೊಮ್ಮೆ ನೆಗೆದು ಬಿದ್ದರು. ಭಾರತ ಆಡಿದ ವೈಖರಿ ನೋಡಿದರೆ ಇವರ ಸೋಲು ತಪ್ಪಿಸಲು ಆ ದೇವರಿಗೂ ಕಷ್ಟವಿತ್ತು.
“
ಇನ್ನು `ಮರಣೋತ್ತರ ಪರೀಕ್ಷೆ' ನಡೆಸಿ ಏನೂ ಪ್ರಯೋಜನವಿಲ್ಲ, ಸೂಕ್ತ ಕ್ರಮ ತೆಗೆದುಕೊಳ್ಳುವುದೊಂದೇ ಉಳಿದಿರುವ ಏಕೈಕ ದಾರಿ” ಎಂದು ಸುನಿಲ್ ಗಾವಸ್ಕರ್ ವೀಕ್ಷಕ ವಿವರಣೆ ವೇಳೆ ಬೇಸರ ವ್ಯಕ್ತಪಡಿಸಿರುವುದೇ ದೋನಿ ಬಳಗದ ಹಣೆಬರಹವನ್ನು ಬಯಲು ಮಾಡುತ್ತದೆ.

ಭಾನುವಾರ ಕೊನೆಗೊಂಡ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಸಂಪೂರ್ಣ ಪಾರಮ್ಯ ಮೆರೆದ ಇಂಗ್ಲೆಂಡ್ ತಂಡದವರಿಗೆ ಸರಣಿಯಲ್ಲಿ ಮುನ್ನಡೆಯ ಆಲಿಂಗನ ಲಭಿಸಿತು. ಅವರ ಛಲದಾಟಕ್ಕೆ ಏಳು ವಿಕೆಟ್‌ಗಳ ಅದ್ಭುತ ಗೆಲುವಿನ ಉಡುಗೊರೆ ಒಲಿದು ಬಂತು.
ಭಾರತ ನೀಡಿದ 41 ರನ್‌ಗಳ ಗುರಿಯನ್ನು ಆಂಗ್ಲರು ತಮ್ಮ ಎರಡನೇ ಇನಿಂಗ್ಸ್‌ನ ಐದನೇ ದಿನದಾಟದಲ್ಲಿ 12.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿದರು. ಜೊತೆಗೆ ಸರಣಿಯಲ್ಲಿ 2-1 ಮುನ್ನಡೆಯ ಬೋನಸ್. ಈ ತಂಡದವರಿಗೆ ಭಾರತದ ನೆಲದಲ್ಲಿ ಇದಕ್ಕಿಂತ ಸುಂದರ ಕ್ಷಣ ಮತ್ತೊಂದು ಇರಲಾರದೇನೊ?

ಆದರೆ ಕತ್ತಲಾದರೂ ತಮ್ಮ ಗೂಡು ಸಿಗದೆ ಚೀತ್ಕರಿಸುವ ಹಕ್ಕಿ ಮರಿಗಳಂತೆ ಆತಿಥೇಯ ಆಟಗಾರರ ಸದ್ಯದ ಪರಿಸ್ಥಿತಿ. ಅಷ್ಟೊಂದು ಕೆಟ್ಟದಾದ ಆಟವದು. ಟ್ವಿಟರ್, ಫೇಸ್‌ಬುಕ್‌ನ್ಲ್ಲಲೂ ದೋನಿ ಪಡೆಯನ್ನು ಕ್ರಿಕೆಟ್ ಪ್ರೇಮಿಗಳು ಹಾಗೂ ಮಾಜಿ ಆಟಗಾರರು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತ ಈ ರೀತಿ ಸೋಲಬಹುದೆಂದು ಪ್ರವಾಸ ಕೈಗೊಳ್ಳುವ ಮುನ್ನ ಇಂಗ್ಲೆಂಡ್ ಆಟಗಾರರು ಕನಸಿನ್ಲ್ಲಲೂ ಯೋಚಿಸಿರಲಿಕ್ಕಿಲ್ಲ.

ಹಿಂದಿನ 12 ವರ್ಷಗಳಲ್ಲಿ ಭಾರತ ಸತತವಾಗಿ ಎರಡು ಟೆಸ್ಟ್ ಸೋತಿದ್ದ ಉದಾಹರಣೆ ಇರಲಿಲ್ಲ. ಆದರೆ ಈ ತಂಡ ಈಗ ಇತಿಹಾಸ ಮರುಕಳಿಸಲು ಕಾರಣವಾಗಿದೆ. 1999-2000ರಲ್ಲಿ ದಕ್ಷಿಣ ಆಫ್ರಿಕಾ ಎದುರು ಭಾರತ ಸ್ವದೇಶದಲ್ಲಿ ಸತತ ಎರಡು ಟೆಸ್ಟ್‌ನಲ್ಲಿ ಸೋಲು ಕಂಡಿತ್ತು. ಮುಂಬೈ ಹಾಗೂ ಬೆಂಗಳೂರಿನಲ್ಲಿ ಆ ಆಘಾತ ಎದುರಾಗಿತ್ತು. ಆದರೆ ದೋನಿ ಬಳಗದ ಹೀನಾಯ ಸೋಲಿನಿಂದಾಗಿ ಈ ಹಿಂದೆ ಶ್ರೇಷ್ಠ ಆಟಗಾರರು ಈಡನ್ ಅಂಗಳದಲ್ಲಿ ಬರೆದಿದ್ದ ಸವಿ ನೆನಪುಗಳು ಕೊಚ್ಚಿಕೊಂಡು ಹೋಗುವಂತಾಯಿತು. ಈ ಅಂಗಳದಲ್ಲಿ 13 ವರ್ಷಗಳಿಂದ ಭಾರತಕ್ಕೆ ಸೋಲು ಎದುರಾಗಿರಲಿಲ್ಲ.

ಈ ಅಂಗಳದಲ್ಲಿ 2001ರಲ್ಲಿ ಲಕ್ಷ್ಮಣ್ ಜೊತೆಗೂಡಿ ಭಾರತದ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದಿದ್ದ ದ್ರಾವಿಡ್ ಎಷ್ಟು ಬೇಸರಪಟ್ಟುಕೊಂಡಿದ್ದಾರೋ ಏನೋ? ಏಕೆಂದರೆ ಸ್ಟಾರ್ ಕ್ರಿಕೆಟ್‌ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಭಾನುವಾರ ಭಾರತ ಹೀನಾಯ ಸೋಲು ಕಂಡಾಗ ಇಲ್ಲಿಯೇ ಇದ್ದರು. ಹೋರಾಟದ ಉತ್ಸಾಹವನ್ನೇ ಕಳೆದುಕೊಂಡಿರುವ ದೋನಿ ಬಳಗದ ಮುಖ ನೋಡಲು ಕೂಡ ಕ್ರೀಡಾ ಪ್ರೇಮಿಗಳು ಸದ್ಯಕ್ಕೆ ಇಷ್ಟಪಡಲಾರರು.

ಆತಂಕದಿಂದ ಪಾರಾದ ಆಂಗ್ಲರು: ಭಾರತ ನೀಡಿದ ಅಲ್ಪ ಗುರಿ ಎದುರು ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ ಕೆಲಕಾಲ ತಳಮಳಕ್ಕೆ ಒಳಗಾಗಿದ್ದು ನಿಜ. ಏಕೆಂದರೆ 8 ರನ್‌ಗಳಿಗೆ 3 ವಿಕೆಟ್ ಪತನಗೊಂಡಾಗ ಏನೋ ನಡೆಯಬಹುದು ಎಂಬ ಆಸೆ ಪ್ರೇಕ್ಷಕರಲ್ಲಿ ಚಿಗುರಿತ್ತು.
ಆದರೆ ಅದು ಅಲ್ಪ ಕಾಲ ಮಾತ್ರ. ಏಕೆಂದರೆ ಇಯಾನ್ ಬೆಲ್ ಬಿರುಸಿನ ಆಟದ ಮೂಲಕ ತಂಡವನ್ನು ಗೆಲುವಿನ ಗೆರೆ ದಾಟಿಸಿದರು. ಐದನೇ ದಿನದಾಟ ಆರಂಭವಾಗಿ ಒಂದು ಗಂಟೆಯಲ್ಲಿ ಪಂದ್ಯ ಮುಗಿದು ಹೋಯಿತು. ವಿಶೇಷವೆಂದರೆ ಇಂಗ್ಲೆಂಡ್‌ನ ಎಲ್ಲಾ ಆಟಗಾರರಿಗೆ ಈ ಅಂಗಳದಲ್ಲಿ ಇದು ಚೊಚ್ಚಲ ಪಂದ್ಯವಾಗಿತ್ತು.

ಅಜೇಯರಾಗುಳಿದ ಅಶ್ವಿನ್: ದಿನದಾಟದ ಆರಂಭದಲ್ಲಿ ಭಾರತ ತಂಡದ ಕೊನೆಯ ವಿಕೆಟ್ ಬಿದ್ದಾಗ ಹೆಚ್ಚಿನ ಪ್ರೇಕ್ಷಕರು ಇನ್ನೂ ಅಂಗಳ ಪ್ರವೇಶಿಸಿರಲಿಲ್ಲ. ಆ್ಯಂಡರ್ಸನ್ ಹಾಕಿದ ದಿನದ ಎರಡನೇ ಓವರ್‌ನಲ್ಲಿಯೇ ಆತಿಥೇಯರ ಎರಡನೇ ಇನಿಂಗ್ಸ್ ಕಥೆ ಮುಗಿದು ಹೋಯಿತು. ಅವರ ಎಸೆತದಲ್ಲಿ ಓಜಾ   ಬೌಲ್ಡ್ ಆದರು. ಈ ಮೂಲಕ 247 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡರು. 207 ರನ್‌ಗಳ ಇನಿಂಗ್ಸ್ ಹಿನ್ನಡೆಯನ್ನು ಚುಕ್ತಾ ಮಾಡಿ ಮುನ್ನಡೆ ಸಾಧಿಸಿದ್ದು ಕೇವಲ 40 ರನ್ ತಂಡವನ್ನು ಇನಿಂಗ್ಸ್ ಸೋಲಿನ ಅವಮಾನದಿಂದ ಪಾರು ಮಾಡಿದ ಅಶ್ವಿನ್‌ಗೆ (ಔಟಾಗದೆ 91; 157 ಎ, 15 ಬೌಂ.,) ದೋನಿ ಧನ್ಯವಾದ ಹೇಳಬೇಕು. ಹತ್ತನೇ ವಿಕೆಟ್ ಜೊತೆಯಾಟದಲ್ಲಿ ಓಜಾ ಅವರೊಂದಿಗೆ ಅಶ್ವಿನ್ 50 ರನ್ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT