ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿಗೊಂದು ಬೃಹತ್ ಫಲ

Last Updated 26 ಜುಲೈ 2013, 19:59 IST
ಅಕ್ಷರ ಗಾತ್ರ

ಬುದ್ಧಿ ಒಂದು ಮಹಾ ಶಕ್ತಿ. ಬುದ್ಧಿ ಇಲ್ಲದವರು ಪಶುವಿಗೆ ಸಮಾನ. ಈ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದಲ್ಲಿ ವಿಶಿಷ್ಟ ಔಷಧಿಗಳಿವೆ. ಇವೇ ಮೇಧ್ಯ ದ್ರವ್ಯಗಳು. ಇವುಗಳ ಶಕ್ತಿ ನಿಗೂಢ ಮತ್ತು ಅಚಿಂತ್ಯ. ತಮ್ಮ ಮಕ್ಕಳು ಬುದ್ಧಿವಂತರಾಗಬೇಕು ಎನ್ನುವ ಆಸೆ ಯಾವ ತಂದೆ-ತಾಯಿಗಿಲ್ಲ? ಮಾರುಕಟ್ಟೆಯಲ್ಲಿ ನೆನಪಿನ ಶಕ್ತಿ ಮತ್ತು ಬುದ್ಧಿಶಕ್ತಿ ಹೆಚ್ಚಿಸುವ ಔಷಧಿಗಳಿಗೆ ಮುಗಿಬೀಳುವ ಜನ, ಮನೆಯಲ್ಲಿರುವ ದಿವ್ಯ ಔಷಧಿಗಳನ್ನೇ ಮರೆತಿದ್ದಾರೆ. ನಮ್ಮ ಮನೆಗಳಲ್ಲಿ ದಿನನಿತ್ಯ ಬಳಸುವ ಕೆಲವು ಆಹಾರ ಪದಾರ್ಥಗಳು ಬುದ್ಧಿಶಕ್ತಿಯನ್ನು ಬಲಪಡಿಸುತ್ತವೆ ಎಂದರೆ ನಂಬಲು ಸಾಧ್ಯವೇ?

ತುಪ್ಪ, ಒಂದೆಲಗದ ಸೊಪ್ಪು, ಬಜೆ, ಬೂದುಗುಂಬಳಕಾಯಿ ಮುಂತಾದವು ಬುದ್ಧಿಯನ್ನು ಪ್ರಕಾಶಿಸುತ್ತವೆ. ಇಂತಹ ಗುಣ ಹೊಂದಿರುವುದರಿಂದ ಇವನ್ನು ಮೇಧ್ಯ ರಸಾಯನ ಎಂದು ಕರೆಯುತ್ತಾರೆ. ಕರಾವಳಿಯ ಕಡೆ ಸಾಮಾನ್ಯ ತರಕಾರಿಯಂತೆ, ಗೃಹ ಪ್ರವೇಶಗಳಲ್ಲಿ ಮನೆಗೆ ದೃಷ್ಟಿಯಾಗದಂತೆ ಮನೆ ಮುಂದೆ ಕಟ್ಟಲು, ದಸರಾ ಹಬ್ಬದಲ್ಲಿ ಬಲಿ ಕೊಡಲು, ಮದುವೆ ಮುಂಜಿಗಳಲ್ಲಿ ಸಿಹಿ ತಯಾರಿಸಲು, ದಾನ ಮಾಡಲು ಉಪಯೋಗಿಸುವ, ಬಳ್ಳಿಯಲ್ಲಿ ಬಿಡುವ ಕಾಯಿಗಳಲ್ಲೇ ಶ್ರೇಷ್ಠವಾದ ಬೂದುಗುಂಬಳಕಾಯಿಯೇ ಬುದ್ಧಿಗೊಂದು ಬೃಹತ್ ಫಲ.

ಬೂದುಗುಂಬಳಕಾಯಿಯ ಬಳ್ಳಿ ಹರಡುತ್ತದೆ. ಆಸರೆ ಸಿಕ್ಕರೆ ಮೇಲೇರುತ್ತದೆ. ಒಂದು ವರ್ಷ ಆಯಸ್ಸು ಇರುವ ಕುಂಬಳದ ಬಳ್ಳಿಯನ್ನು ತರಕಾರಿಗಾಗಿ ಬೆಳೆಸುತ್ತಾರೆ. ಸಂಸ್ಕೃತದಲ್ಲಿ ಕೂಷ್ಮಾಂಡ, ಹಿಂದಿಯಲ್ಲಿ ಪೇಠಾ, ಇಂಗ್ಲಿಷ್‌ನಲ್ಲಿ ಆ್ಯಷ್ ಗಾರ್ಡ್/ ವ್ಯಾಕ್ಸ್   ಗಾರ್ಡ್, ಮಲಯಾಳಂನಲ್ಲಿ ಕುಂಬಲಮ್, ಕನ್ನಡದಲ್ಲಿ ಬೂದುಗುಂಬಳ ಎನ್ನುತ್ತಾರೆ. 

ಜಗತ್ತಿನಾದ್ಯಂತ ಆಹಾರವಾಗಿ ಚಿರಪರಿಚಿತವಾಗಿರುವ ಬೂದುಗುಂಬಳಕಾಯಿ Cucurbitaceae ಕುಟುಂಬದ ಸದಸ್ಯ. ಅದರ ವೈಜ್ಞಾನಿಕ ಹೆಸರು benincasa hispida.`ಕು ನಾಸ್ತಿ ಉಷ್ಮ ಅಂಡೇಷು' ಎಂದರೆ ಶೀತ ಗುಣವನ್ನು ಹೊಂದಿರುವ ಈ ಕಾಯಿಯ ಬೀಜದಲ್ಲೂ ಉಷ್ಣತ್ವ ಇಲ್ಲ. ಈ ಕಾರಣದಿಂದ ಇದನ್ನು ಕೂಷ್ಮಾಂಡ ಎನ್ನುತ್ತಾರೆ. ಹಳದಿ ಹೂ ಬಿಡುವುದರಿಂದ ಪೀತ ಪುಷ್ಪ, ಕಾಯಿ ಬಹುಕಾಲ ಬಾಳಿಕೆ ಬರುವುದರಿಂದ ಸ್ಥಿರ ಫಲ, ಬಹುಗಾತ್ರ ಮತ್ತು ಕುಂಭದ ಆಕಾರ ಇರುವುದರಿಂದ ಬೃಹತ್ ಫಲ, ಕುಂಭ ಫಲ, ಹಾಗೆಯೇ ಹೆಚ್ಚು ನೀರಿನಾಂಶ ಹೊಂದಿರುವುದರಿಂದ ಸೋಮ ಸೃಷ್ಟ ಎಂದೆಲ್ಲ ಕರೆಯುತ್ತಾರೆ.

ಬೂದುಗುಂಬಳಕಾಯಿ ಪೋಷಕಾಂಶಗಳ ಕಣಜ. ಕಾರ್ಬೊಹೈಡ್ರೇಟ್, ಸಕ್ಕರೆ ಅಂಶ, ಫೈಬರ್, ಕೊಬ್ಬು, ಪ್ರೊಟೀನ್, ವಿಟಮಿನ್ ಎ, ಬಿ1, ಬಿ2, ಬಿ3, ಬಿ5, ಬಿ6, ಬಿ9, ಸಿ, ಕ್ಯಾಲ್ಷಿಯಂ, ಕಬ್ಬಿಣಾಂಶ, ಮೆಗ್ನೀಶಿಯಂ, ಪೊಟಾಶಿಯಂ, ಸೋಡಿಯಂ ಮತ್ತು ಜಿಂಕ್ ಅಂಶಗಳಿವೆ. ಉರಿಯೂತ, ಹಿಸ್ಟಮಿನ್ ಪ್ರತ್ಯಾಮ್ಲ, ಅಲ್ಸರ್ ಇತ್ಯಾದಿಗಳ ವಿರುದ್ಧ ಹೋರಾಡುವ ಗುಣವನ್ನು ಇದು ಹೊಂದಿದೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. 

ಉಪಯೋಗ
ಬೂದುಗುಂಬಳಕಾಯಿಯ ಎಲೆ, ಹೂ, ಕಾಯಿ, ಬೀಜ ಹೀಗೆ ಎಲ್ಲ ಭಾಗಗಳೂ ಉಪಯೋಗಕ್ಕೆ ಬರುತ್ತವೆ. ಕುಂಬಳಕಾಯಿಯ ಉಪಯೋಗ ಅದರ ಬೆಳವಣಿಗೆಯ ಮೇಲೆ ನಿರ್ಧಾರವಾಗುತ್ತದೆ. `ವೃಂತಾಕ ಬಹುಬೀಜಂ ಕುಷಾಂಡಂ ಕೋಮಲಂ ವಿಷಂ' ಅಂದರೆ ತುಂಬ ಬೀಜವುಳ್ಳ ಬದನೆಕಾಯಿ ಮತ್ತು ಎಳೆ ಕುಂಬಳಕಾಯಿ ವಿಷ. ಎಳೆ ಕುಂಬಳಕಾಯಿ ಪಿತ್ತ ಶಾಮಕವಾದರೆ, ಮಧ್ಯಮ ಪ್ರಮಾಣದ್ದು ಕಫ ಹರ ಹಾಗೂ ಪಕ್ವವಾದದ್ದು ತ್ರಿದೋಷ ಹರ.
ಕುಂಬಳಕಾಯಿ ಬೀಜಗಳನ್ನು ತಿನ್ನಬಹುದು. ಇವು ಸಹ ಪ್ರೊಟೀನ್, ಜಿಂಕ್, ವಿಟಮಿನ್, ಮ್ಯೋಂಗನೀಸ್, ಪ್ರಾಸ್ಫರಸ್ ಅಂಶಗಳನ್ನು  ಒಳಗೊಂಡಿವೆ ಮತ್ತು ಕೊಬ್ಬು ಕರಗಿಸುವ ಗುಣ ಹೊಂದಿವೆ. ಕುಂಬಳಕಾಯಿ ಬೀಜಗಳಿಂದ ಎಣ್ಣೆಯನ್ನು ತಯಾರಿಸುತ್ತಾರೆ. ಇದು ರಕ್ತನಾಳ ಮತ್ತು ನರಗಳನ್ನು ಕಾಪಾಡುತ್ತದೆ.

ಕುಂಬಳಕಾಯಿ ವಿಶೇಷವಾಗಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದರ ರಸಕ್ಕೆ ಕೆಂಪು ಕಲ್ಲುಸಕ್ಕರೆ ಹಾಕಿ ಕುಡಿದರೆ ಪಿತ್ತದೋಷ ಕಡಿಮೆಯಾಗುತ್ತದೆ. ಇದರಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ಮಲಬದ್ಧತೆ ನಿವಾರಿಸುತ್ತದೆ. ಖಾಲಿ ಹೊಟ್ಟೆಗೆ ರಸ ಕುಡಿಯುವುದರಿಂದ ವಿಶೇಷವಾಗಿ ಕರುಳಿನ ಹುಣ್ಣಿಗೆ ಉತ್ತಮ ಔಷಧಿ. ಇದು ಮೂತ್ರವನ್ನು ಹೆಚ್ಚಿಸುವುದರಿಂದ ಮೂತ್ರಕೋಶವನ್ನು ಶುದ್ಧಿ ಮಾಡುತ್ತದೆ. ಉರಿಮೂತ್ರ, ಮೂತ್ರಕೋಶದಲ್ಲಿ ಕಲ್ಲು, ಮೂತ್ರ ತಡೆ ಮುಂತಾದ ಮೂತ್ರ ವಿಕಾರಗಳನ್ನು ನಿವಾರಿಸುತ್ತದೆ.

ಶರೀರದ ತೂಕ ಹೆಚ್ಚಿಸಿಕೊಂಡು ದಪ್ಪವಾಗಿ, ಶಕ್ತಿವಂತರಾಗಿ ಮತ್ತು ಸುಂದರವಾಗಿ ಕಾಣಬೇಕೇ? ಹಾಗಾದರೆ ಬೂದುಗುಂಬಳಕಾಯಿ ಬಳಸಿ. `ಪಥ್ಯಂ ಚೇತೋವಿಕಾರಿಣಾಮ್' ಅಂದರೆ ಮನೋರೋಗಗಳಿಗೆ ಇದು ಪಥ್ಯವಾಗಿದೆ. ಖಿನ್ನತೆ ಪ್ರಮುಖ ಮನೋರೋಗ. ಇದನ್ನು ಕೂಷ್ಮಾಂಡ ಘೃತವೆಂಬ ಔಷಧಿಯು ಗುಣಪಡಿಸುತ್ತದೆ. ಇದರ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ತಂಪು ವೃಷ್ಯ ದ್ರವ್ಯ ಪುರುಷರ ವೀರ್ಯದ ಗುಣ ಮತ್ತು ಪ್ರಮಾಣವನ್ನು ವೃದ್ಧಿಸಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ತಲೆಗೆ ಹಚ್ಚುವುದರಿಂದ ಕೂದಲು ಬೆಳೆಯುತ್ತದೆ. ಒಣ ಮತ್ತು ಒರಟು ತಲೆಗೆ ಮೃದುತ್ವ ನೀಡುತ್ತದೆ.  ಬೂದುಗುಂಬಳಕಾಯಿ ಬಳಸಿ ಬೃಹತ್ ಫಲ ರಸಾಯನ, ಕೂಷ್ಮಾಂಡ ರಸಾಯನ, ಕೂಷ್ಮಾಂಡ ಅವಲೇಹ್ಯ, ಕೂಷ್ಮಾಂಡ ಖಂಡ, ಕೂಷ್ಮಾಂಡ ಪಾಕ, ಕೂಷ್ಮಾಂಡ ಗುಡ ಮುಂತಾದ ಔಷಧಿಗಳನ್ನು ತಯಾರಿಸುತ್ತಾರೆ. ಆದರೆ ಈ ಕಾಯಿಯ ಮಹತ್ವ ಗೊತ್ತಿಲ್ಲದವರೇ ಹೆಚ್ಚು ಮಂದಿ.

ಬೂದುಗುಂಬಳಕಾಯಿ ನೋಡಲು ತೀರಾ ಸಾಮಾನ್ಯ ಅಗ್ಗದ ತರಕಾರಿ. ಇದರಿಂದ ನೂರೆಂಟು ತಿನಿಸುಗಳನ್ನು ತಯಾರಿಸುತ್ತಾರೆ. ಉತ್ತರ ಭಾರತದ ಅಗ್ರಾ ಪೇಠ ಎಂಬ ಸಿಹಿ ಬಹು ಪ್ರಸಿದ್ಧವಾದದ್ದು. ಹೀಗೆ ಪೋಷಕಾಂಶಗಳು ಇರುವುದರಿಂದ ಆಹಾರವಾಗಿ ಮತ್ತು ರೋಗ ನಿವಾರಿಸುವುದರಿಂದ ಔಷಧಿಯಾಗಿ ಬೂದುಗುಂಬಳ ಬಹು ಉಪಯೋಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT