ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿವಿ: ದೈಹಿಕ ಶಿಕ್ಷಣ ಶಾಲೆಯಲ್ಲಿ ಸೌಕರ್ಯಗಳ ಕೊರತೆ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳ ಶಾರೀರಿಕ ವ್ಯಾಯಾಮಕ್ಕೆ ಅಗತ್ಯವಿರುವ ಈಜುಕೊಳ ಮತ್ತು ವ್ಯಾಯಾಮ ಶಾಲೆಯು ಸಂಪೂರ್ಣ ಶಿಥಿಲಗೊಂಡಿದೆ. ಮೂಲ ಸೌಕರ್ಯವನ್ನು ಸಂಪೂರ್ಣ ನಿರ್ಲಕ್ಷಿಸಿರುವ ಬೆಂಗಳೂರು ವಿ.ವಿ.ಯಲ್ಲಿ ಪ್ರಾಯೋಗಿಕ ತರಗತಿಗಳ ಅಗತ್ಯವನ್ನು ಕಡೆಗಣಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ಇದಕ್ಕೆ ಪೂರಕವೆಂಬಂತೆ ದೈಹಿಕ ಶಿಕ್ಷಣ ನಿರ್ದೇ ಶನಾಲಯಕ್ಕೆ ಸಂಬಂಧಪಟ್ಟ ಈಜಕೊಳ ಮತ್ತು ವ್ಯಾಯಾಮದ ಕಟ್ಟಡವೂ ಸಂಪೂರ್ಣ ಹಾಳಾಗಿದೆ!

ದೈಹಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗಾಗಿಯೇ ಇರುವ ಈಜುಕೊಳದಲ್ಲಿ ನೀರಿಲ್ಲ! ಈಜುಕೊಳದ ಹೊರಭಾಗದ ಕಟ್ಟಡವನ್ನು ಕಬ್ಬಿಣದ ದ್ವಾರದಿಂದ ಭದ್ರಪಡಿಸಲಾಗಿದೆ. ಆದರೆ ಒಳಗಿರುವ ಕೊಳವೂ ಹಾಳಾಗಿದೆ. ಕೊಳದ ಒಳಭಾಗದ ಟೈಲ್ಸ್‌ಗಳು ಕಿತ್ತು ಬಂದಿವೆ.
 
ಇಲ್ಲೇ ಇರುವ ಸ್ನಾನಗೃಹ ಹಾಗೂ ಶೌಚಾಲಯಗಳಲ್ಲಿ ನಲ್ಲಿಗಳು ಒಡೆದು ಹೋಗಿವೆ. ಅಲ್ಲಲ್ಲಿ ತ್ಯಾಜ್ಯವನ್ನು ಸುರಿಯಲಾಗಿದೆ. ಇದರ ಸುತ್ತಮುತ್ತ ತಂತಿ ಬೇಲಿ ಹಾಕಿ ಭದ್ರಪಡಿಸಲಾಗಿದೆ. ಆದರೆ ಒಳಗೆ ಅಗತ್ಯ ಮೂಲಸೌಕರ್ಯವಿಲ್ಲದೇ ಕೊಳದ ಕಟ್ಟಡವೂ ಬಡವಾಗಿದೆ.

ಈಜುಕೊಳ ನಿರ್ಮಾಣ ಮಾಡಿ ಸುಮಾರು 15 ವರ್ಷಗಳೇ ಕಳೆದಿದ್ದು, ಅದರ ನಿರ್ವಹಣೆಗೆ ವಿ.ವಿಯ ಆಡಳಿತ ಮಂಡಳಿಯು ಹೆಚ್ಚು ಒತ್ತು ನೀಡದ ಕಾರಣ ಐದು ವರ್ಷಗಳಿಂದ ಬಳಕೆಯಿಂದ ದೂರ ಉಳಿದಿದೆ. ಅದರ ನವೀಕರಣದ ಕಾರ್ಯಕ್ಕೆ ಚಾಲನೆ ನೀಡಿ ನಾಲ್ಕು ವರ್ಷಗಳಾಯಿತು. ಸದ್ಯಕ್ಕೆ ನವೀಕರಣದ ಹೆಸರಿನಲ್ಲಿ ಸಂಪೂರ್ಣವಾಗಿ ಮುಚ್ಚಲಾಗಿದ್ದು, ಈಜುಪಟುಗಳ ಉತ್ಸಾಹಕ್ಕೆ ತಣ್ಣಿರೇರಚಿ ದಂತಾಗಿದೆ.
 
ಈಜುಕೊಳವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬೇಸಿಗೆ ಶಿಬಿರಗಳು ನಡೆಯುತ್ತಿದ್ದವು. ನಿರ್ದಿಷ್ಟ ಶುಲ್ಕ ತೆತ್ತು ಶಿಬಿರಾರ್ಥಿಗಳು ಈಜು, ವ್ಯಾಯಾಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳಲ್ಲದೇ ಉತ್ಸುಕ ಈಜುಪಟುಗಳು ಸಹ ಶುಲ್ಕ ನೀಡಿ ವ್ಯಾಯಾಮ ನಡೆಸಲು ಅವಕಾಶ ನೀಡಲಾಗಿತ್ತು. ಆದರೆ ಈಗ ಇದಕ್ಕೆ ಸಂಪೂರ್ಣ ವಿರಾಮ ನೀಡಲಾಗಿದೆ.

ದೈಹಿಕ ಶಿಕ್ಷಣ ವಿದ್ಯಾರ್ಥಿಗಳಿಗಾಗಿಯೇ ನಿರ್ಮಿಸಿರುವ ವ್ಯಾಯಾಮ ಶಾಲೆಯದ್ದು ಕೂಡ ಇದೇ ಕಥೆ. ಒಂದು ದಾಸ್ತಾನು ಕೋಣೆಯಂತೆ ಕಾಣುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ವ್ಯಾಯಾಮಕ್ಕೆ ಅಗತ್ಯವಿರುವ ವ್ಯಾಯಾಮ ಪರಿಕರಗಳು ಹಾಳಾಗಿದ್ದು, ಇವುಗಳನ್ನು ಬದಲಾಯಿಸಲು ವಿ.ವಿ ಆಡಳಿತವು ಮೀನ ಮೇಷ ಎಣಿಸುತ್ತಿದೆ.

ವಿದ್ಯಾರ್ಥಿಗಳಲ್ಲದೇ ಇತರೆ ಸಿಬ್ಬಂದಿ ವರ್ಗವು ವರ್ಷಕ್ಕೆ 200 ರೂಪಾಯಿ ತೆತ್ತು ಗುರುತಿನ ಚೀಟಿ ಪಡೆದು ವ್ಯಾಯಾಮ ಮಾಡಬಹುದಾಗಿತ್ತು. ಆದರೆ ಅದಕ್ಕೆ ಈಗ ಅವಕಾಶವಿಲ್ಲದಂತಾಗಿದೆ. ವ್ಯಾಯಾಮಕ್ಕೆ ಹೆಚ್ಚು ಒತ್ತು ನೀಡುವ ದೈಹಿಕ ಶಿಕ್ಷಣ ತರಗತಿಗಳಲ್ಲಿ ಪ್ರಾಯೋಗಿಕ ತರಗತಿಯನ್ನು ಸಂಪೂರ್ಣ ನಿರ್ಲಕ್ಷ್ಯಿಸಿರುವುದು ಸ್ಪಷ್ಟಗೊಳ್ಳುತ್ತದೆ.

`ವಿ.ವಿ ಯ ಈಜುಕೊಳ ನವೀಕರಣ ಕಾಮಗಾರಿಯು ಆಮೆಗತಿಯಲ್ಲಿ ಸಾಗಿದೆ. ಕೊಳ ಕೆಟ್ಟು ಹಲವು ವರ್ಷಗಳೇ ಕಳೆದರೂ ಸಮರ್ಪಕವಾಗಿ ನವೀಕರಿಸಲು ಸಾಧ್ಯವಾಗದೇ ಇರುವುದು ವಿ.ವಿ.ಆಡಳಿತ ವೈಖರಿಯನ್ನು ಸೂಚಿಸುತ್ತದೆ. ಇದರಿಂದ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗೆ ಬೇಕಿರುವ ವ್ಯಾಯಾಮವು ಇಲ್ಲದಂತಾಗಿದೆ.
 
ಈ ಬಗ್ಗೆ ಸಾಕಷ್ಟು ಬಾರಿ ವಿ.ವಿಯ ಕುಲಸಚಿವ ಮತ್ತು ಕುಲಪತಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ~ ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಈ ಬಗ್ಗೆ ಮಾತನಾಡಿದ ದೈಹಿಕ ಶಿಕ್ಷಣ ನಿರ್ದೇಶನಾಲಯ ವಿಭಾಗದ ಮುಖ್ಯಸ್ಥ ಪಿ.ಸಿ. ಕೃಷ್ಣಸ್ವಾಮಿ, `ಒಂದು ಹಂತದವರೆಗೆ ಬಜೆಟ್ ಮೀರುವ ವಿ.ವಿಯ ಕಾಮಗಾರಿಗಳನ್ನು ಪರಿಶೀಲಿಸಲೆಂದೇ ವಿಶ್ವವಿದ್ಯಾಲಯದ ಕಾಮಗಾರಿ ಸಮಿತಿಯನ್ನು ರಚಿಸಲಾಗಿದೆ. ಇದರ ಜವಾಬ್ದಾರಿಯನ್ನು ಸಂಪೂರ್ಣ ಅದಕ್ಕೆ ವಹಿಸಲಾಗಿದೆ. ಮುಂದಿನ ಮೇ ತಿಂಗಳೊಳಗೆ ಕಾಮಗಾರಿ ಮುಕ್ತಾಯಗೊಳ್ಳುವ ಭರವಸೆ ದೊರೆತಿದೆ~ ಎಂದು ಹೇಳಿದರು.

`ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಅನುಸಾರವಾಗಿ ಅಗತ್ಯವಿರುವ ವ್ಯಾಯಾಮವನ್ನು ತರಗತಿಯಲ್ಲಿ ತಿಳಿಸಿಕೊಡಲಾಗುತ್ತಿದೆ. ಇನ್ನೂ ಕಾಮಗಾರಿಗೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿಯನ್ನು ವಿ.ವಿ ಯ ಕುಲಸಚಿವರ ಅನುಮತಿಯಿಲ್ಲದೇ ನೀಡುವಂತಿಲ್ಲ. ಈ ಬಗ್ಗೆ ಈಚೆಗೆ ಆದೇಶ ಪತ್ರವೂ ಬಂದಿದೆ. ಆದ್ದರಿಂದ ನಾನೇನು ಹೇಳಲಾರೆ~ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT