ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆ ನೀಡದ ಸರ್ಕಾರ ತಿರಸ್ಕರಿಸಿ

Last Updated 14 ಜುಲೈ 2012, 9:50 IST
ಅಕ್ಷರ ಗಾತ್ರ

ಅಮೀನಗಡ: ರಸಗೊಬ್ಬರ ಬೆಲೆ ಸೇರಿದಂತೆ ಸಾರ್ವಜನಿಕರು ದಿನನಿತ್ಯ ಬಳಕೆಯ ವಸ್ತುಗಳಿಗೆ ಬೆಲೆ ನಿಗದಿ ಮಾಡುವ ಕೇಂದ್ರ, ರಾಜ್ಯ ಸರ್ಕಾರವು, ರೈತರು ಬಿತ್ತಿ ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆ ನೀಡದೇ ರೈತ ಸಮುದಾಯವನ್ನು ಸತಾಯಿಸುತ್ತಿದೆ. ರೈತರ ಬಗ್ಗೆ ಕೇವಲ ಮೊಸಳೆ ಕಣ್ಣೀರಿಡುವ ಸರ್ಕಾರವನ್ನು ತಿರಸ್ಕರಿಸಬೇಕು ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ಗಡದನ್ನವರ ಕರೆ ನೀಡಿದರು.

ಭಾರತೀಯ ಕೃಷಿಕ ಸಮಾಜದ ಜಿಲ್ಲಾ ಘಟಕ ಹುನಗುಂದ ತಾಲ್ಲೂಕಿನ ಸೂಳೇ ಭಾವಿ ಗ್ರಾಮದ ವಿಜಯ ಮಹಾಂತೇ ಶ್ವರ ಮಠದ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ `ಕೃಷಿಕ ಸಮಾಜದ ಸೂಳೇಭಾವಿ ಗ್ರಾಮ ಪಂಚಾಯಿತಿ ಮಟ್ಟದ ಘಟಕದ~ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.


ರೈತ ಸಮುದಾಯ ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡದಿರುವ ಪರಿಣಾಮದಿಂದ ರೈತರು ಸಾಲ ಮಾಡಿ, ಮರುಪಾವತಿ ಮಾಡಲಾಗದೇ ಆತ್ಮಹತ್ಯೆ ಕಡೆಗೆ ಮುಖ ಮಾಡುತ್ತಿದ್ದಾರೆ. ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿ ಮಾಡಿದರೆ ರೈತರ ಸಾಲ ಮನ್ನಾ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಸರ್ಕಾರದ ತಪ್ಪು ಆರ್ಥಿಕ ನೀತಿಯ ಪರಿಣಾಮದಿಂದ ರೈತ ದಿವಾಳಿಯ ಅಂಚಿಗೆ ಬಂದು ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಉದ್ಧಾರ ಮಾಡುತ್ತೇವೆ ಎಂದು ಭಾಷಣ ಮಾಡಿ ಅಧಿಕಾರಕ್ಕೆ ಬರುವ ಸರ್ಕಾರಗಳು ನುಡಿದಂತೆ ನಡೆದುಕೊಳ್ಳುತ್ತಿಲ್ಲ. ಪ್ರಾಮಾಣಿಕವಾಗಿ ದುಡಿಯುವ ರೈತರಿಗೆ ಬೆಲೆ ಇಲ್ಲದಂತಾಗಿದೆ. ಸಮಾಜದಲ್ಲಿ ಸಂಘರ್ಷವನ್ನು ಸೃಷ್ಟಿಸುವ ಸಮಾಜಘಾತುಕರಿಗೆ ಬೆಲೆ ಇದೆ. ಇದು ಈ ದೇಶದ ದುಃಸ್ಥಿತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತೀಯ ಕೃಷಿಕ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ನವೀನಕುಮಾರ ಹೆಬ್ಬಳ್ಳಿ ಮಾತನಾಡಿ, ರೈತರನ್ನು ಒಂದುಗೂಡಿಸಿ, ಸರ್ಕಾರದಿಂದ ಸಿಗುವ ಎಲ್ಲಾ ಯೋಜನೆಗಳನ್ನು ರೈತರಿಗೆ ಮುಟ್ಟಿಸುವ ಮತ್ತು ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಈಗಾಗಲೇ ಸಭೆ, ಚರ್ಚಾಕೂಟಗಳನ್ನು ನಡೆಸಲಾಗುತ್ತಿದೆ. ರೈತರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಬದುಕಬೇಕು. ಸರ್ಕಾರದಿಂದ ಸಿಗುವ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಾಗಬೇಕು ಎಂದರು.

ಇಳಕಲ್ ಚಿತ್ತರಗಿ ಸಂಸ್ಥಾನಮಠದ ಡಾ.ಮಹಾಂತ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ಗುಳೇದಗುಡ್ಡದ ಗುರುಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಪ್ರಗತಿಪರ ರೈತ ಮಲ್ಲಣ್ಣ ನಾಗರಾಳ, ಸಹಾಯಕ ಕೃಷಿ ಅಧಿಕಾರಿ ಎಚ್.ಎನ್. ಕಡಪಟ್ಟಿ, ಮುತ್ತಪ್ಪ ಕೋಮಾರ ಮಾತನಾಡಿದರು.

ಹುನಗುಂದ ಬರ್ಡ್ಸ್ ಸಂಸ್ಥೆ ನಿರ್ದೇಶಕ ಮಹಾಂತೇಶ ಅಗಸಿಮುಂದಿನ, ಗ್ರಾ.ಪಂ ಅಧ್ಯಕ್ಷ ರ‌್ಯಾವಪ್ಪ ಭಾಪ್ರಿ, ರೈತ ಸಂಘದ ತಾಲ್ಲೂಕಾ ಕಾರ್ಯದರ್ಶಿ ಗುರು ಗಾಣಿಗೇರ, ಕೃಷಿಕ ಸಮಾಜದ ತಾಲ್ಲೂಕಾ ಅಧ್ಯಕ್ಷ ಹನಮಗೌಡ ಹೊಸಮನಿ,ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ, ಸದಸ್ಯ ಜಗದೀಶ ಹೊಸಮನಿ, ಹನಮಂತಗೌಡ ಬೇವೂರ, ಬಿ.ಎನ್. ಕೋಟೆಕಲ್, ಸಿ.ಪಿ. ಕುರಿ, ವೀರಯ್ಯ ಲೂತಿಮಠ, ಗ್ರಾಮ ಘಟಕ ಅಧ್ಯಕ್ಷ ಸಂಗಯ್ಯ ಮರಳಯ್ಯನಮಠ, ಕಾರ್ಯದರ್ಶಿ ಮಂಜುನಾಥ ಹಿರೇಮನಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಗ್ರಾಪಂ ಸದಸ್ಯ ನಾಗೇಶ ಗಂಜಿಹಾಳ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಸಂಗನಗೌಡ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT