ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಳಿತಕ್ಕೆ ಬಾಳೆ ಬೆಳೆಗಾರ ಕಂಗಾಲು

Last Updated 18 ಅಕ್ಟೋಬರ್ 2011, 10:00 IST
ಅಕ್ಷರ ಗಾತ್ರ

ವಿಶೇಷ ವರದಿ
ಚಾಮರಾಜನಗರ:
ಜಿಲ್ಲೆ ಯಲ್ಲಿ ಸಾಕಷ್ಟು ರೈತರು ಬಾಳೆ ಬೆಳೆದಿದ್ದಾರೆ. ಆದರೆ, ಮಧ್ಯವರ್ತಿಗಳ ಹಾವಳಿ ಪರಿಣಾಮ ಉತ್ತಮ ಧಾರಣೆ ಸಿಗದೆ ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ.

ಅರಿಶಿಣದ ಬೆಲೆ ಕುಸಿತ ದಿಂದ ಕಂಗಾಲಾದ ಹಲವು ರೈತರು ಬಾಳೆ ಬೆಳೆದಿರುವುದು ಉಂಟು. ಏಲಕ್ಕಿ, ಪಚ್ಚಬಾಳೆ ಕೂಡ ಬೆಳೆದಿದ್ದಾರೆ. ಜಿಲ್ಲೆಯ ಸುಮಾರು 30 ಸಾವಿರ ಎಕರೆ ಪ್ರದೇಶದಲ್ಲಿ ಈ ವರ್ಷ ಬಾಳೆ ಬೆಳೆ ಯಲಾಗಿದೆ. ಆದರೆ, ಬೆಲೆ ಏರಿಳಿತ ಹಾಗೂ ಬಾಳೆ ಸಂಸ್ಕರಣಾ ಘಟಕದ ಕೊರತೆಯಿಂದ ಹೆಚ್ಚಿನ ನಷ್ಟವಾಗುತ್ತಿದೆ.

ರೈತರ ಜಮೀನುಗಳಿಗೆ ನೇರವಾಗಿ ಖರೀದಿದಾರರು ಬರುತ್ತಾರೆ. ಇಂತಿಷ್ಟು ಹಣ ನಿಗದಿಪಡಿಸಿ ಬಾಳೆ ಕಟಾವು ಮಾಡಿಕೊಂಡು ಹೋಗುತ್ತಾರೆ. ಗೊನೆಗಳ ಲೆಕ್ಕದಲ್ಲಿ ಖರೀದಿ ಮಾಡಿ ಸ್ಥಳದ್ಲ್ಲಲೇ ಹಣ ನೀಡುವ ಪದ್ಧತಿ ಉಂಟು.

ಖರೀದಿದಾರರು ಬಂದು ಬೆಲೆ ನಿಗದಿಪಡಿಸುವುದರಿಂದ ಸಾಗಣೆ ವೆಚ್ಚ ಉಳಿತಾಯವಾಯಿತು ಎಂದು ರೈತರಿಗೆ ಅನಿಸಿದರೂ ಖರೀದಿದಾರ ಹೆಚ್ಚಿನ ಲಾಭ ಮಾಡಿಕೊಳ್ಳುವ ಬಗ್ಗೆ ಎಳ್ಳಷ್ಟು ಗಮನಹರಿಸು ವುದಿಲ್ಲ. ಇದರ ಪರಿಣಾಮ ಜಿಲ್ಲಾಮಟ್ಟದಲ್ಲಿ ನಿಖರ ಬೆಲೆ ಇಂದಿಗೂ ನಿಗದಿಯಾಗಿಲ್ಲ.

ಕೆಲವು ರೈತರು ಎಪಿಎಂಸಿಗೆ ಸರಕು ಸಾಗಣೆ ಆಟೋಗಳ ಮೂಲಕ ಬಾಳೆ ಗೊನೆ ಸಾಗಿಸು ತ್ತಾರೆ. ದುಬಾರಿ ಸಾಗಣೆ ವೆಚ್ಚದಿಂದ ಕೆಲವೊಮ್ಮೆ ಕಂಗಾಲಾಗುತ್ತಾರೆ. ಕೆಲವು ಖಾಸಗಿ ಬಾಳೆ ಅಂಗಡಿ ಮಳಿಗೆಗೆ ಸಾಗಿಸಿದರೂ ಗೊನೆಯೊಂದಕ್ಕೆ ರೂ 70ರಿಂದ 80 ರೂ ಧಾರಣೆ ಸಿಗುತ್ತದೆ. ಇದರಿಂದ ರೈತರಿಗೆ ನಷ್ಟ ಕಟ್ಟಿಟ್ಟಬುತ್ತಿ.
 
ಏಕೆಂದರೆ ಈಗ 1 ಕೆಜಿ ಬಾಳೆಗೆ 25 ರೂನಿಂದ 27 ರೂ ಧಾರಣೆಯಿದೆ. ವ್ಯಾಪಾರಿಗಳು ಕೆಜಿ ಲೆಕ್ಕದಲ್ಲಿ ಖರೀದಿ ಮಾಡುವುದು ಕಡಿಮೆ. ಹೀಗಾಗಿ, ರೈತರು ನಷ್ಟಕ್ಕೀಡಾಗುವುದು ಹೆಚ್ಚು. ಈಗ ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಹೀಗಾಗಿ, ಬಾಳೆ ಬೆಲೆ ಏರಿಕೆಯಾಗಲಿದೆ ಎಂಬ ಆಶಾಭಾವ ರೈತರಲ್ಲಿ ಮನೆ ಮಾಡಿದೆ.

ಉತ್ತಮ ಹವಾಗುಣ: ಜಿಲ್ಲೆಯಲ್ಲಿ ಬಾಳೆ ಬೆಳೆಗೆ ಉತ್ತಮ ಹವಾಗುಣವಿದೆ. ಹೀಗಾಗಿ, ಏಲಕ್ಕಿ ಬಾಳೆ ಬೆಳೆಯುವವರ ಸಂಖ್ಯೆ ಹೆಚ್ಚಿದೆ.  ಕೆಲವೆಡೆ ರಸಬಾಳೆ, ಪಚ್ಚಬಾಳೆ ಕೂಡ ಬೆಳೆದಿದ್ದಾರೆ. ಕಪ್ಪುಮಿಶ್ರಿತ ಮಣ್ಣು ಬಾಳೆ ಬೆಳೆಯಲು ಯೋಗ್ಯವಾಗಿದೆ. ಅಂಗಾಂಶ ಬಾಳೆ ಕೃಷಿ ಮಾಡಿರುವ ರೈತರು ಇದ್ದಾರೆ.

ಏಲಕ್ಕಿ ಬಾಳೆ ಕಂದಿಗೆ 4 ರೂ ಧಾರಣೆಯಿದೆ. ಒಂದು ಎಕರೆ ಪ್ರದೇಶದಲ್ಲಿ 700ರಿಂದ 800 ಬಾಳೆ ಗಿಡ ನೆಡಬಹುದು. ಸಮರ್ಪಕವಾಗಿ ನೀರು ಪೂರೈಕೆ ಮಾಡಿ ಗೊಬ್ಬರ ನೀಡಿದರೆ 7-8 ತಿಂಗಳಿಗೆ ಬೆಳೆ ಕಟಾವಿಗೆ ಬರುತ್ತದೆ.

ಸಂಸ್ಕರಣಾ ಘಟಕವಿಲ್ಲ: ಜಿಲ್ಲೆಯಲ್ಲಿ ಈಗ ಹಾಪ್‌ಕಾಮ್ಸ ಸ್ಥಾಪನೆಯಾಗಿದೆ. ಇನ್ನೂ ಮಾರುಕಟ್ಟೆ ತೆರೆದಿಲ್ಲ. ಸಂಸ್ಕರಣಾ ಘಟಕ ಸೇರಿದಂತೆ ಬಾಳೆಗೆ ಪ್ರತ್ಯೇಕ ಮಾರುಕಟ್ಟೆ ಸ್ಥಾಪಿಸಿದರೆ ರೈತರಿಗೆ ಹೆಚ್ಚಿನ ಲಾಭವಾಗಲಿದೆ. ಆದರೆ, ಹೆಚ್ಚಿನ ಪ್ರದೇಶದಲ್ಲಿ ಬಾಳೆ ಬೆಳೆ ಯುತ್ತಿದ್ದರೂ ಸಂಸ್ಕರಣಾ ಘಟಕ ಸ್ಥಾಪಿಸಲು ಜನಪ್ರತಿನಿಧಿಗಳು ಹಾಗೂ ತೋಟಗಾರಿಕೆ ಇಲಾಖೆ ಮುಂದಾಗಿಲ್ಲ ಎಂಬುದು ರೈತರ ಅಳಲು.

`ಜಮೀನಿಗೆ ಬಂದು ಖರೀದಿದಾರರು ನೇರವಾಗಿ ಬಾಳೆ ಕಟಾವು ಮಾಡಿಕೊಂಡು ಹೋಗುತ್ತಾರೆ. ಆದರೆ, ಪ್ರತ್ಯೇಕ ಮಾರುಕಟ್ಟೆ ತೆರೆದರೆ ರೈತರಿಗೆ ಹೆಚ್ಚಿನ ಲಾಭವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳುವ ಅಗತ್ಯವಿದೆ~ ಎಂಬುದು ರೈತರಾದ ಮಹೇಶ್ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT