ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಭಾಗ್ಯ ಕಾಣದ ರಾಯಗೋಪುರ

Last Updated 22 ಅಕ್ಟೋಬರ್ 2012, 5:20 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ (ಮಂಡ್ಯ): ದಸರಾ ಉತ್ಸವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಸರ್ಕಾರಿ ಕಚೇರಿ ಹಾಗೂ ವೃತ್ತಗಳಿಗೆ ವಿದ್ಯುತ್ ದೀಪಲಂಕಾರ ಮಾಡಲಾಗಿದೆ. ಆದರೆ, ಆರಾಧ್ಯ ದೈವವಾದ ರಂಗನಾಥಸ್ವಾಮಿ ದೇವಾಲಯ ಮತ್ತು ರಾಯಗೋಪುರಕ್ಕೆ ಮಾತ್ರ ದೀಪಂಲಕಾರದ ಭಾಗ್ಯ ಇಲ್ಲ. ಸುಣ್ಣ-ಬಣ್ಣವನ್ನೂ ಕಂಡಿಲ್ಲ.

ಶ್ರೀರಂಗಪಟ್ಟಣಕ್ಕೆ ಆಗಮಿಸುವ ದೇಶ, ವಿದೇಶಿ ಪ್ರವಾಸಿಗರು, ರಂಗನಾಥಸ್ವಾಮಿಯ ದರ್ಶನ ಮಾಡದೇ ತೆರಳುವುದಿಲ್ಲ. ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲವೂ ದೇವಾಲಯದ ಆವರಣದಲ್ಲಿಯೇ ನಡೆದಿವೆ. ರಂಗನಾಥಸ್ವಾಮಿ ದೇವಾಲಯದತ್ತ ಯಾರದ್ದೂ ಲಕ್ಷ್ಯ ಹರಿದಿಲ್ಲ.

ಕ್ರಿ.ಶ. 894ರಲ್ಲಿ ಗಂಗರ ಸಾಮಂತರಾಜ ತಿರುಮಲಯ್ಯ ಅವರ ಕಾಲದಲ್ಲಿ ದೇವಾಲಯದ ಗರ್ಭಗಡಿ ನಿರ್ಮಿಸಲಾಯಿತು. ಅದರ ಮುಂದಿನ ಪ್ರಾಂಗಣವನ್ನು 12ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿದ್ದಾರೆ.

ವಿಜಯನಗರ ಅರಸರ ಕಾಲದಲ್ಲಿ ಐದು ಅಂತಸ್ತಿನ ಈಗಿನ ರಾಯಗೋಪುರ ನಿರ್ಮಿಸಲಾಗಿದೆ.
1924ರಲ್ಲಿ ಹಾಗೂ ಅದಕ್ಕಿಂತ ಮುಂಚೆಯೂ ಒಡೆಯರ್ ವಂಶಸ್ಥರು ಜೀರ್ಣೋದ್ಧಾರ ಮಾಡಿದ್ದಾರೆ. ಆದಿ, ಮಧ್ಯ, ಅಂತ್ಯ ರಂಗದಲ್ಲಿ, ಇದು ಆದಿರಂಗ ಎಂದು ಖ್ಯಾತಿ ಪಡೆದಿದೆ.

ರಂಗನಾಥಸ್ವಾಮಿ ದೇವಾಲಯವೂ ಸೇರಿದಂತೆ ಹತ್ತು ಸ್ಮಾರಕಗಳು ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣ ಇಲಾಖೆಯ ಸುಪರ್ದಿಯಲ್ಲಿದೆ. ಸುಣ್ಣ, ಬಣ್ಣ ಬಳಿಯಲೂ ಇಲಾಖೆಯಿಂದ ಅನುಮತಿ ಪಡೆಯಬೇಕು. ಕಾವೇರಿ ಹೋರಾಟ ನಡೆಯುತ್ತಿದ್ದರಿಂದ ದಸರಾ ಉತ್ಸವ ನಡೆಯುವುದು ಅನುಮಾನವಾಗಿತ್ತು. ಕೊನೆಯ ನಾಲ್ಕೈದು ದಿನಗಳಿರುವಾಗ ದಸರಾ ಉತ್ಸವ ಮಾಡಲು ನಿರ್ಧರಿಸಿದ್ದರಿಂದ ಸುಣ್ಣ ಬಳಿಸುವತ್ತ ಗಮನ ಹರಿಸಲಾಗಲಿಲ್ಲ ಎನ್ನುವುದು ಜಿಲ್ಲಾಡಳಿತದ ವಿವರಣೆ.

ರಂಗನಾಥಸ್ವಾಮಿ ವೃತ್ತದಿಂದ ದೇವಸ್ಥಾನದವರೆಗೆ ಅಲ್ಲಲ್ಲಿ ದೊಡ್ಡ ಬಲ್ಬುಗಳನ್ನು ಹಾಕಲಾಗಿದೆ. ರಾಯಗೋಪುರಕ್ಕೆ ಯಾವುದೇ ದೀಪಲಂಕಾರ ಮಾಡಿಲ್ಲ. ಮಿನಿ ವಿಧಾನಸೌಧ, ಚಾಮರಾಜೇಂದ್ರ ಸ್ಮಾರಕ ವಸ್ತು ಸಂಗ್ರಹಾಲಯ ಹಾಗೂ ಅಲ್ಲಿಯೇ ಬರುವ ವೃತ್ತ, ದೇವಾಸ್ಥಾನದಲ್ಲಿ ಬರುವ ಮರಗಳಿಗೆ ಸಣ್ಣ, ಸಣ್ಣ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಅವು ದೀಪಗಳಿಂದ ಕಂಗೊಳಿಸುತ್ತಿವೆ. ಈ ಭಾಗ್ಯ ದೇವಾಲಯ ಹಾಗೂ ಗೋಪುರಕ್ಕೆ ಸಿಕ್ಕಿಲ್ಲ.

ಈ ಹಿಂದಿನ ವರ್ಷದ ದಸರಾ ಉತ್ಸವಗಳಲ್ಲಿ ದೀಪಲಂಕಾರ ಮಾಡಲಾಗಿತ್ತು. ಲಕ್ಷ ದೀಪೋತ್ಸವ ಸಂದರ್ಭದಲ್ಲಿಯೂ ಮಾಡಲಾಗುತ್ತದೆ. ಗೋಪುರದ ಜಾಲಂದ್ರಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತಿತ್ತು. ಈಗ ಅಲ್ಲಿಯೂ ದೀಪಗಳಿಲ್ಲ.

ರಂಗನಾಥಸ್ವಾಮಿ ಪ್ರಮುಖ ಧಾರ್ಮಿಕ ಕೇಂದ್ರ. ವಿದ್ಯುತ್ ದೀಪ ಹಾಕಿದ್ದರೆ ಅದಕ್ಕೊಂದು ಮೆರಗು ಬರುತ್ತಿತ್ತು ಎನ್ನುತ್ತಾರೆ ರೈತ ಸಂಘದ ಮುಖಂಡ ಕೆ.ಎಸ್. ನಂಜುಂಡೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT