ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಪಾಲಿಕೆ ನೌಕರರಿಂದ ಪ್ರತಿಭಟನೆ

Last Updated 9 ಏಪ್ರಿಲ್ 2013, 8:37 IST
ಅಕ್ಷರ ಗಾತ್ರ

ಬೆಳಗಾವಿ: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಸಿಆರ್‌ಸಿ) ಕೇಂದ್ರದ ಸಿಪಿಐ ಕರಿಬಸನಗೌಡ ಅವರು ಅವಾಚ್ಯವಾಗಿ ನಿಂದಿಸಿರುವುದನ್ನು ಖಂಡಿಸಿ ಮಹಾನಗರ ಪಾಲಿಕೆ ನೌಕರರು ಸೋಮವಾರ ಸಂಜೆ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟಿಸಿದರು.

ಪಾಲಿಕೆಯ ನೌಕರರನ್ನು `ಕಚಡಾ'ಗಳೆಂದು ನಿಂದಿಸಿರುವುದನ್ನು ಖಂಡಿಸಿ ನೂರಕ್ಕೂ ಹೆಚ್ಚು ನೌಕರರು ಸಂಜೆ 4 ಗಂಟೆಯ ಹೊತ್ತಿಗೆ ಕೆಲಸವನ್ನು ಸ್ಥಗಿತಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕೇಂದ್ರದ ಎದುರು ಸೇರಿ ಪ್ರತಿಭಟಿಸಿದರು. ಪೊಲೀಸ್ ಅಧಿಕಾರಿ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

ಸಿಆರ್‌ಸಿ ಕೇಂದ್ರದ ಜಿಲ್ಲಾ ವರಿಷ್ಠಾಧಿಕಾರಿ ಅಶೋಕ ಖುರೇರ ಅವರಿಗೆ ಈ ಕುರಿತು ದೂರು ನೀಡಲು ಪಾಲಿಕೆ ನೌಕರರು ಆಗಮಿಸಿದಾಗ, ಪೊಲೀಸರು ಮಧ್ಯದಲ್ಲೇ ತಡೆದರು. ಘೋಷಣೆಗಳನ್ನು ಕೂಗದಂತೆ ಪೊಲೀಸರು ಒತ್ತಡ ಹೇರಿದಾಗ, ನೌಕರರ ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಬಳಿಕ ಸುಮಾರು ಒಂದು ಗಂಟೆಗಳ ಕಾಲ ನೌಕರರು ಧರಣಿ ನಡೆದರು.

`ಪಾಲಿಕೆಯಲ್ಲಿನ ಶೇ. 22.75 ಅನುದಾನ ಬಳಕೆಯ ವರದಿಯನ್ನು ನೀಡುವಂತೆ ಸಿಆರ್‌ಸಿ ಕೇಂದ್ರದವರು ಕೇಳಿದ್ದರು. ಏಪ್ರಿಲ್ 15ರಂದು ನಾನು ಖುದ್ದಾಗಿ ಹೋಗಿ ವರದಿ ನೀಡಿ, ಸ್ವೀಕೃತಿ ರಸೀದಿ ಪಡೆದಿದ್ದೆ. ಆದರೆ, ಸಿಆರ್‌ಸಿ ಕೇಂದ್ರದ ನೌಕರೊಬ್ಬರು ಸೋಮವಾರ ನಮ್ಮ ಕಚೇರಿಗೆ ದೂರವಾಣಿಯಲ್ಲಿ ಕರೆ ಮಾಡಿ ವರದಿ ಕಳುಹಿಸಿಕೊಡುವಂತೆ ಹೇಳಿದರು. ಹೀಗಾಗಿ ಅವರ ಕಚೇರಿಗೆ ಹೋಗಿ ಏ. 15ರಂದೇ ವರದಿ ನೀಡಿದ ಬಗ್ಗೆ ಸ್ವೀಕೃತಿ ಬರಹ ತೋರಿಸಿದೆ. ಬಳಿಕ ತಮ್ಮ ಕಚೇರಿಯಲ್ಲೇ ಇದ್ದ ವರದಿಯನ್ನು ನೋಡಿದ, ಸಿಪಿಐ ಕರಿಬಸನಗೌಡ,  ವರದಿ ಸರಿಯಾಗಿಲ್ಲ. ಇದೇನು ಕಚಡಾ ಪಟ್ಟಿ ಕೆಲಸ ಮಾಡಿದ್ದೀರಿ. ನೌಕರರೆಲ್ಲ ಕಚಡಾ ಇದ್ದೀರಿ. ಪಾಲಿಕೆಗೆ ಬಂದರೆ, ನಾನೂ ಹೊಲಸಾಗುತ್ತೇನೆ ಎಂದು ನಿಮ್ಮನ್ನು ಇಲ್ಲಿಗೇ ಕರೆಸಿದ್ದೇನೆ ಎಂದು ಅವಾಚ್ಯವಾಗಿ ನಿಂದಿಸಿದರು' ಎಂದು ಪಾಲಿಕೆಯ ಪ್ರಥಮ ದರ್ಜೆ ಸಹಾಯಕ ಸುರೇಶ ದ್ಯಾಮಣ್ಣವರ `ಪ್ರಜಾವಾಣಿ'ಗೆ ತಿಳಿಸಿದರು.

`ಮಂಗಳವಾರ ಸಂಜೆಯೊಳಗೆ ಕೇಳಿದಂತೆ ವರದಿಯನ್ನು ಸಿದ್ಧಪಡಿಸಿಕೊಡುವುದಾಗಿ ಹೇಳಿದೆ. ಆದರೆ, ಇಂದು ಸಂಜೆಯೊಳಗೆ ವರದಿ ನೀಡದಿದ್ದರೆ ಪಾಲಿಕೆ ಆಯುಕ್ತರ ಹಾಗೂ ಸಹಾಯಕ ಆಯುಕ್ತರ ಮೇಲೆ ದೂರು ದಾಖಲಿಸುತ್ತೇನೆ ಎಂದು ಬೆದರಿಸಿ ಪಾಲಿಕೆಯ ನೌಕರರನ್ನು ನಿಂದಿಸತೊಡಗಿದರು' ಎಂದು ದ್ಯಾಮಣ್ಣವರ  ವಿವರಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ ಕುಮಾರ, `ಘಟನೆ ಕುರಿತು ಮನವಿ ನೀಡಿರಿ. ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ, ಪ್ರತಿಭಟನೆ ಮುಂದುವರಿಸಿ. ಚುನಾವಣೆ ಕೆಲಸಕ್ಕೆ ತೊಂದರೆಯಾಗುತ್ತದೆ' ಎಂದು ಮನವಿ ಮಾಡಿದರು.

`ಒಬ್ಬ ದಲಿತ ನೌಕರರನ್ನು ಹಾಗೂ ಪಾಲಿಕೆಯ ನೌಕರರನ್ನು ದ್ಯಾಮಣ್ಣವರ ಅವಾಚ್ಯವಾಗಿ ನಿಂದಿಸಿದ್ದಾರೆ. ಸಿಆರ್‌ಸಿ ಕೇಂದ್ರದ ಎಸ್ಪಿಗೆ ದೂರು ನೀಡಲು ಬಂದರೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗರೆಡ್ಡಿ, ಮಾರ್ಕೆಟ್ ಡಿವೈಎಸ್‌ಪಿ ಮುತ್ತುರಾಜು ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ನಾಗರಾಜ ಅವರು ನಮ್ಮ ಕಚೇರಿ ಒಳಗಡೆ ಬರದಂತೆ ತಡೆದರು. ಪೊಲೀಸರು ನೌಕರರ ಮೇಲೆ ಹೀಗೆ ದೌರ್ಜನ್ಯ ಮಾಡಿದರೆ, ಹೇಗೆ? ಎಂದು ಪಾಲಿಕೆ ಸಹಾಯಕ ಆಯುಕ್ತೆ ಸುಳಗೇಕರ ಪ್ರಶ್ನಿಸಿದರು.

ಪೊಲೀಸ್  ದೂರು ದಾಖಲಿಸಿ, ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಿರಿ ಎಂದು ಪ್ರವೀಣ ಕುಮಾರ ಸಲಹೆ ನೀಡಿದರು. ಬಳಿಕ ನೌಕರರು   ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT