ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಬಹುಮತ ಪಡೆದ ಪಕ್ಷಕ್ಕೇ ಅಧಿಕಾರ!

Last Updated 17 ಏಪ್ರಿಲ್ 2013, 11:06 IST
ಅಕ್ಷರ ಗಾತ್ರ

ಬೆಳಗಾವಿ: ಅತಿ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಯಾವ ಪಕ್ಷ ಬಹುಮತ ಪಡೆಯುತ್ತದಯೋ ಆ ಪಕ್ಷವೇ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂಬ ನಂಬಿಕೆ ಜಿಲ್ಲೆಯ ನಾಯಕರಲ್ಲಿದೆ. 18 ಕ್ಷೇತ್ರಗಳಿರುವ ಜಿಲ್ಲೆಯಲ್ಲಿ ಇದುವರೆಗೆ ನಡೆದ ಚುನಾವಣೆಗಳ ಫಲಿತಾಂಶಗಳು ಈ ಸಂಪ್ರದಾಯಕ್ಕೆ ಪುಷ್ಠಿ ನೀಡಿವೆ.

ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ರೂಪಿಸುವಲ್ಲಿ ಜಿಲ್ಲೆಯ ಕೊಡುಗೆ ಅಪಾರವಾಗಿತ್ತು. ಜಿಲ್ಲೆಯಲ್ಲಿ ನಡೆದ 2008ರ ವಿಧಾನಸಭೆ ಚುನಾವಣೆಯಲ್ಲಿ 9 ಬಿಜೆಪಿ ಅಭ್ಯರ್ಥಿಗಳನ್ನು ಮತದಾರರು ಗೆಲ್ಲಿಸಿದ್ದರು. ಕಾಂಗ್ರೆಸ್‌ನ 7 ಅಭ್ಯರ್ಥಿಗಳನ್ನು ಹಾಗೂ ಜೆಡಿಎಸ್‌ನ ಇಬ್ಬರನ್ನು ಮಾತ್ರ ಆಯ್ಕೆ ಮಾಡಿದ್ದರು. ಇದರ ಜೊತೆಗೆ `ಆಪರೇಷನ್ ಕಮಲ'ದ ಮೂಲಕ ಬಿಜೆಪಿಗೆ ಬಂದ ಸಚಿವರಾದ ಉಮೇಶ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರನ್ನು ಅದೇ ವರ್ಷದಲ್ಲಿ ನಡೆದ ಉಪ ಚುನಾವಣೆಯಲ್ಲೂ ಗೆಲ್ಲಿಸುವ ಮೂಲಕ ಸರ್ಕಾರವನ್ನು ಇನ್ನಷ್ಟು ಸುಭದ್ರಗೊಳಿಸಿದ್ದರು.

ಹೀಗಾಗಿಯೇ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ಬೆಳಗಾವಿ ಮೇಲೆ ವಿಶೇಷ ಪ್ರೀತಿ ಇತ್ತು. ಜಿಲ್ಲೆಯಲ್ಲಿ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನವನ್ನೂ ನೀಡಿದ್ದರು. ಅಲ್ಲದೇ, ಬೆಳಗಾವಿಗೆ ವಿಶ್ವ ಕನ್ನಡ ಸಮ್ಮೇಳನ, ಸುವರ್ಣ ವಿಧಾನಸೌಧದಂತಹ ಅವಿಸ್ಮರಣೀಯ ಕೊಡುಗೆಗಳನ್ನು ನೀಡಿದ್ದು ಈಗ ಇತಿಹಾಸ.

2004ರ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಬಿಜೆಪಿಯತ್ತಲೇ ಹೆಚ್ಚು ಒಲವು ತೋರಿಸಿದ್ದರು. 8 ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರೆ, ಕಾಂಗ್ರೆಸ್ 5 ಅಭ್ಯರ್ಥಿಗಳ ಗೆಲುವಿಗೆ ತೃಪ್ತಿಪಟ್ಟುಕೊಳ್ಳುವಂತಾಗಿತ್ತು. ಎಂಇಎಸ್ ಬೆಂಬಲಿತ ಮೂವರು ಪಕ್ಷೇತರರು ಹಾಗೂ ಜೆಡಿಎಸ್ ಮತ್ತು ಜೆಡಿಯು ತಲಾ ಒಬ್ಬೊಬ್ಬರು ಆಯ್ಕೆಯಾಗಿದ್ದರು. ಜಿಲ್ಲೆಯಲ್ಲಿ ಯಾವ ಪಕ್ಷವೂ ಬಹುಮತ ಪಡೆದಿರಲಿಲ್ಲ. ಇದರಂತೆ ರಾಜ್ಯದಲ್ಲೂ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದೇ ಇರುವುದರಿಂದ ಆರಂಭದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾದರು. 20 ತಿಂಗಳ ಬಳಿಕ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಕೈಜೋಡಿಸಿ ಮುಖ್ಯಮಂತ್ರಿಗಳಾದರು. ಒಳ ಒಪ್ಪಂದದಂತೆ ಬಿಜೆಪಿಗೆ ಅಧಿಕಾರವನ್ನು ಕುಮಾರಸ್ವಾಮಿ ಹಸ್ತಾಂತರಿಸದೇ ಇರುವುದರಿಂದ ಉಂಟಾದ ಗೊಂದಲದಿಂದಾಗಿ ಒಂದು ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಬಳಿಕ ಬಿಜೆಪಿಯಿಂದ ಯಡಿಯೂರಪ್ಪನವರು 7 ದಿನಗಳ ಕಾಲ ಮುಖ್ಯಮಂತ್ರಿಯಾದರು. ಬಹುಮತ ಸಾಬೀತು ಪಡಿಸುವಲ್ಲಿ ಅವರು ವಿಫಲರಾಗಿದ್ದರಿಂದ ವಿಧಾನಸಭೆಯನ್ನು ವಿಸರ್ಜಿಸಿ ಪುನಃ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು.

1999ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 10 ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಬಂದಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಬಹುಮತ ದೊರೆತಿದ್ದರಿಂದ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದರು. ಜೆಡಿಯು 5 ಸ್ಥಾನಗಳನ್ನು ಪಡೆದಿದ್ದರೆ, ಬಿಜೆಪಿ 1 ಸ್ಥಾನಕ್ಕೇ ತೃಪ್ತಿ ಪಟ್ಟಿತ್ತು. ಎಂಇಎಸ್ ಬೆಂಬಲಿತ ಇಬ್ಬರು ಪಕ್ಷೇತರರು ಗೆದ್ದಿದ್ದರು.

1994ರ ಚುನಾವಣೆಯಲ್ಲಿ ಜನತಾದಳದ 11 ಅಭ್ಯರ್ಥಿಗಳನ್ನು ಗೆಲ್ಲಿಸಿದ್ದ ಮತದಾರರು, ಜನತಾದಳ ಸರ್ಕಾರ ರಚಿಸಲು ಆಶೀರ್ವಾದ ಮಾಡಿದ್ದರು. ಕಾಂಗ್ರೆಸ್‌ನ ನಾಲ್ವರು, ಎಂಇಎಸ್ ಬೆಂಬಲಿತ ಮೂವರು ಪಕ್ಷೇತರರನ್ನು ಗೆಲ್ಲಿಸಿದ್ದರು. ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದರು. ಬಳಿಕ ಅವರು ಪ್ರಧಾನಿ ಹುದ್ದೆಯನ್ನೂ ಅಲಂಕರಿಸಿದ್ದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ.

1989ರಲ್ಲಿ ಜಿಲ್ಲೆಯಲ್ಲಿ `ಕೈ' ಹಿಡಿದ ಮತದಾರರು 10 ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಹಕರಿಸಿದ್ದರು. ಜನತಾದಳದ 3 ಅಭ್ಯರ್ಥಿಗಳು, ರೈತ ಸಂಘದ ಒಬ್ಬರು ಹಾಗೂ ಮೂವರು ಪಕ್ಷೇತರರು ಆಯ್ಕೆಗೊಂಡಿದ್ದರು. ಈ ಅವಧಿಯಲ್ಲಿ ಕಾಂಗ್ರೆಸ್‌ನ ವೀರೇಂದ್ರ ಪಾಟೀಲ, ಎಸ್. ಬಂಗಾರಪ್ಪ ಹಾಗೂ ಎಂ. ವೀರಪ್ಪ ಮೊಯ್ಲಿ ಕ್ರಮವಾಗಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು.

1985ರಲ್ಲಿ ಜಿಲ್ಲೆಯ ಮತದಾರರು ಜನತಾ ಪಕ್ಷದ 12 ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಮಕೃಷ್ಣ ಹೆಗಡೆ ಅವರನ್ನು ಪುನಃ ಮುಖ್ಯಮಂತ್ರಿಗಳನ್ನಾಗಿ ಮಾಡುವಲ್ಲಿ ಸಹಕರಿಸಿದ್ದರು. ಕಾಂಗ್ರೆಸ್ ಕೇವಲ 2 ಸ್ಥಾನ ಪಡೆದಿದ್ದರೆ, ನಾಲ್ವರು ಪಕ್ಷೇತರರು ಗೆಲುವು ಸಾಧಿಸಿದ್ದರು.

1983ರಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 8 ಸ್ಥಾನ ಪಡೆದಿದ್ದರೆ, ಜನತಾ ಪಕ್ಷವು 5 ಸ್ಥಾನ ಪಡೆದಿತ್ತು. ಐವರು ಪಕ್ಷೇತರರು ಗೆಲುವು ಸಾಧಿಸಿದ್ದರು. ಜಿಲ್ಲೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ದೊರೆತಿರಲಿಲ್ಲ. ಹೀಗಿದ್ದರೂ ರಾಜ್ಯದಲ್ಲಿ ಜನತಾ ಪಕ್ಷವು ಅಧಿಕಾರಕ್ಕೆ ಬಂದಿತ್ತು. ಆದರೆ, ಬಹುಮತವನ್ನು ಕಳೆದುಕೊಂಡಿದ್ದರಿಂದ 1985ರಲ್ಲಿ ಪುನಃ ಚುನಾವಣೆ ನಡೆಯುವಂತಾಗಿತ್ತು.

1978ರಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 11 ಸ್ಥಾನ ಪಡೆದಿದ್ದರೆ, ಐವರು ಪಕ್ಷೇತರರು ಹಾಗೂ ಇಬ್ಬರು ಜನತಾ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಈ ಅವಧಿಯಲ್ಲಿ ದೇವರಾಜ ಅರಸು ಹಾಗೂ ಗುಂಡೂರಾವ್ ಮುಖ್ಯಮಂತ್ರಿಗಳಾಗಿದ್ದರು.

1972ರಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗಳಿಸಿದ್ದರೆ, ಮೂವರು ಪಕ್ಷೇತರರು ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

1967ರಲ್ಲಿ ಜಿಲ್ಲೆಯಲ್ಲಿ 14 ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರೆ, ಪಕ್ಷೇತರರು ನಾಲ್ವರು ಆಯ್ಕೆಯಾಗಿದ್ದರು. ಮುಖ್ಯಮಂತ್ರಿ ವೀರೇಂದ್ರ ಪಾಟೀಲ ನಾಯಕತ್ವದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆಗೆ ಏರಿತ್ತು.

1962ರಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 12 ಸ್ಥಾನ ಪಡೆದಿದ್ದರೆ, ಐವರು ಎಂಇಎಸ್ ಅಭ್ಯರ್ಥಿಗಳು ಹಾಗೂ ಒಬ್ಬ ಪಕ್ಷೇತರರು ಗೆಲುವು ಸಾಧಿಸಿದ್ದರು. ಈ ಅವಧಿಯಲ್ಲೂ ಕಾಂಗ್ರೆಸ್ ಸರ್ಕಾರ ಬಂದಿದ್ದು, ಎಸ್.ಆರ್. ಕಂಠಿ ಹಾಗೂ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಗಳಾಗಿರುವುದನ್ನು ಇತಿಹಾಸದ ಪುಟುಗಳು ಹೇಳುತ್ತಿದೆ.

`ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕನಿಷ್ಠ 12 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಮೂಲಕ ರಾಜ್ಯದಲ್ಲಿ ಪುನಃ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುತ್ತೇವೆ' ಎಂದು ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಬಹುಮತ ಪಡೆದ ಪಕ್ಷವೇ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದ ಇದುವರೆಗಿನ ಸಂಪ್ರದಾಯವೇ ಮುಂದುವರಿಯಲಿದೆಯೋ? ಎಂಬುದಕ್ಕೆ ಮೇ 8ರಂದು ಪ್ರಕಟಗೊಳ್ಳುವ ಫಲಿತಾಂಶ ಉತ್ತರ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT