ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ: ಕನಿಷ್ಠ ಪರಿಹಾರ!

Last Updated 22 ಜೂನ್ 2012, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಬೆಳೆ ಹಾನಿಯಾಗಿ ಸಂಕಷ್ಟಕ್ಕೆ ಸಿಲುಕುವ ಜಿಲ್ಲೆಯ ರೈತರಿಗೆ ನೆರವು ನೀಡುವುದಾಗಿ ತಿಳಿಸಿ, ಬೆಳೆವಿಮೆ ಯೋಜನೆಯಡಿ ಲಕ್ಷಾಂತರ ರೂಪಾಯಿ ಪ್ರೀಮಿಯಂ ಕಟ್ಟಿಸಿಕೊಂಡ ಖಾಸಗಿ ವಿಮಾ ಕಂಪೆನಿಗಳು ಪ್ರತಿ ಹೆಕ್ಟೇರ್‌ಗೆ ರೂ 50ರಿಂದ ರೂ 250 ಪರಿಹಾರ ನೀಡಿವೆ!

ಹವಾಮಾನ ಆಧಾರಿತ ವಿಮೆ ಯೋಜನೆ ಅಡಿ ವಿವಿಧ ಬೆಳೆಗಳಿಗೆ ವಿಮೆ ಮಾಡಿಸಿದ್ದ ಈ ಕಂಪೆನಿಗಳು 2011-12ನೇ ಸಾಲಿನಲ್ಲಿ ಬರ ಪರಿಸ್ಥಿತಿ ಇದ್ದರೂ ಅಲ್ಪ ಪ್ರಮಾಣದ ಮಳೆಯ ಕೊರತೆಯಾಗಿದೆ ಎಂದು ತಿಳಿಸಿ, ಕನಿಷ್ಠ ಮೊತ್ತದ ಪರಿಹಾರ ಘೋಷಿಸಿವೆ.

`ಚೋಳಮಂಡಳಂ ಜನರಲ್ ಇನ್ಶುರೆನ್ಸ್, ಇಫ್ಕೋ ಟೋಕಿಯೋ, ಐಸಿಐಸಿಐ ಲ್ಯಾಂಬರ್ಡ್, ಎಚ್‌ಡಿಎಫ್‌ಡಿ ಮತ್ತಿತರ ಕಂಪೆನಿಗಳು ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಮೆ ಮಾಡಿಸಿದ್ದವು. ನಾವು ಕಟ್ಟಿದ್ದ ಪ್ರೀಮಿಯಂ ಹಣದಲ್ಲೇ ಸ್ವಲ್ಪ ಭಾಗವನ್ನು ಮಾತ್ರ ಪರಿಹಾರ ರೂಪದಲ್ಲಿ ವಾಪಸ್ ಕೊಟ್ಟಿವೆ~ ಎಂದು ರೈತರು ಆರೋಪಿಸಿದ್ದಾರೆ.

`ಕಳೆದ ಮುಂಗಾರು ಹಂಗಾಮಿನಲ್ಲಿ ಬಳ್ಳಾರಿ ತಾಲ್ಲೂಕು ಹೊರತುಪಡಿಸಿ ಜಿಲ್ಲೆಯಾದ್ಯಂತ ಒಟ್ಟು 5,598 ರೈತರನ್ನು ವಿಮೆ ವ್ಯಾಪ್ತಿಗೆ ತಂದು, ಅವರಿಂದ ಒಟ್ಟು ರೂ 49 ಲಕ್ಷ ವಿಮೆ ಪ್ರೀಮಿಯಂ ಪಡೆದಿದ್ದ ಚೋಳಮಂಡಳಂ ಕಂಪೆನಿಯೊಂದೇ ಕೇವಲ ರೂ 12.34 ಲಕ್ಷ ಪರಿಹಾರ ಘೋಷಿಸಿದೆ. ಇದು ಪಡೆದಿದ್ದ ಪ್ರೀಮಿಯಂ ಮೊತ್ತದ ಕಾಲು ಭಾಗಕ್ಕಿಂತಲೂ ಕಡಿಮೆಯಾಗಿದೆ. ಇದು ಅವೈಜ್ಞಾನಿಕ~ ಎಂದು  ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹೊಸಕೋಡಿಹಳ್ಳಿ ಗ್ರಾಮದ ರೈತ ಎಲ್.ಭರಮಣ್ಣ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

`ಒಂಬತ್ತು ಎಕರೆಯಲ್ಲಿ ಬೆಳೆದ ಶೇಂಗಾ ಮತ್ತು ಮೆಕ್ಕೆಜೋಳಕ್ಕೆ ವಿಮೆ ಮಾಡಿಸಿ, ರೂ 2,500 ಪ್ರೀಮಿಯಂ ಪಾವತಿಸಿದ್ದರೂ ಫಲಾನುಭವಿಗಳ ಪಟ್ಟಿಯಲ್ಲಿ ನನ್ನ ಹೆಸರನ್ನೇ ಕೈಬಿಡಲಾಗಿದೆ~ ಎಂದು ಕೊಟ್ಟೂರು ಬಳಿಯ ಹನುಮನಹಳ್ಳಿ ಗ್ರಾಮದ ಎ.ಬಸವನಗೌಡ ತಿಳಿಸಿದ್ದಾರೆ.

ಇಳುವರಿ ಮಾನದಂಡವಲ್ಲ: `ಹವಾಮಾನ ಆಧರಿತ ವಿಮೆ ಯೋಜನೆಯಲ್ಲಿ ಇಳುವರಿ ನಷ್ಟ ಪರಿಗಣಿಸುವುದಿಲ್ಲ. ಬದಲಿಗೆ, ಮಳೆ ಸುರಿದ ಪ್ರಮಾಣವನ್ನೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಜಿಲ್ಲೆಯ ವಿವಿಧೆಡೆ ಇರುವ ಉಪಗ್ರಹ ಆಧಾರಿತ ಮಳೆ ಮಾಪನ ಕೇಂದ್ರಗಳ ನೆರವಿನಿಂದ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮುನ್ನೆಚ್ಚರಿಕೆ ಘಟಕ ನೀಡುವ ವರದಿ ಆಧರಿಸಿ ಆಯಾ ಹೋಬಳಿ ಮಟ್ಟದಲ್ಲಿ, ವಿವಿಧ ಹಂತದಲ್ಲಿ ಸುರಿದ ಮಳೆ ಪ್ರಮಾಣಕ್ಕೆ ಅನುಗುಣವಾಗಿ ಪರಿಹಾರ ನಿಗದಿ ಮಾಡಲಾಗುತ್ತದೆ. ಈ ವರ್ಷವೂ ವಿಮೆ ಮಾಡಿಸುವ ಕಾರ್ಯ ಆರಂಭವಾಗಲಿದೆ~ ಎಂದು    ಚೋಳಮಂಡಳಂ ಕಂಪೆನಿ ಪ್ರತಿನಿಧಿ ಸಂಜಯ್ ಹೇಳುತ್ತಾರೆ.

`ಮಳೆ, ಗಾಳಿ, ಬಿಸಿಲು ಒಳಗೊಂಡಂತೆ ಒಟ್ಟಾರೆ ಹವಾಮಾನವನ್ನೇ ಆಧರಿಸಿರುವ ಈ ವಿಮಾ ಯೋಜನೆಯಡಿ ಪ್ರೀಮಿಯಂ ಕಟ್ಟಿರುವ ರೈತರಿಗೆ ಇದೀಗ ಖಾಸಗಿ ವಿಮಾ ಕಂಪೆನಿಗಳು ಪರಿಹಾರ ನೀಡುತ್ತಿವೆ. ವೈಜ್ಞಾನಿಕವಾಗಿಯೇ ಪರಿಹಾರ ನಿರ್ಧರಿಸಲಾಗಿದೆ. ಈ ಕಂಪೆನಿಗಳಿಗೆ ಸರ್ಕಾರವೇ ಅನುಮತಿ ನೀಡಿದೆ~ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಮಪ್ಪ ತಿಳಿಸಿದ್ದಾರೆ.

ವಿವಿಧ ಬ್ಯಾಂಕ್‌ಗಳಲ್ಲಿ ಕೃಷಿಸಾಲ ಪಡೆದ ರೈತರಿಂದ ರಾಷ್ಟ್ರೀಯ ಕೃಷಿ ವಿಮೆ ಯೋಜನೆ ಅಡಿಯೂ ಕಡ್ಡಾಯ ವಿಮೆ ಮಾಡಿಸಲಾಗಿದೆ. ಆ ರೈತರಿಗೂ ಪರಿಹಾರ ಘೋಷಣೆ ಆಗಬೇಕಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT