ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಯದ ಪ್ರವಾಸೋದ್ಯಮ

Last Updated 26 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ


ಧಾರವಾಡ ಜಿಲ್ಲೆ ಈಗ ಪ್ರೇಕ್ಷಣೀಯ ಸ್ಥಳಗಳ ಕೊರತೆಯನ್ನು ಅನುಭವಿಸುತ್ತಿದೆ. ಹಲವಾರು ಪ್ರಾಚೀನ ದೇವಾಲಯಗಳನ್ನು ಹೊರತುಪಡಿಸಿದರೆ ಹೇಳಿಕೊಳ್ಳುವಂಥ ಪ್ರೇಕ್ಷಣೀಯ ಸ್ಥಳಗಳಿಲ್ಲ.ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿದ್ದವು. ವಿಭಜನೆ ನಂತರ ಧಾರವಾಡ ಜಿಲ್ಲೆಯ ವ್ಯಾಪ್ತಿ ಕೇವಲ ಐದು ತಾಲ್ಲೂಕುಗಳಿಗೆ ಸೀಮಿತವಾಯಿತು. ಈಗ ಜಿಲ್ಲೆಯಲ್ಲಿ ಬೆರಳಣಿಕೆಯ ಪ್ರೇಕ್ಷಣೀಯ ಸ್ಥಳಗಳಿವೆ.

ಧಾರವಾಡದ ಮಾಳಮಡ್ಡಿಯ ಯು.ಬಿ. ಹಿಲ್ಸ್‌ನಲ್ಲಿರುವ ಉಳವಿ ಬಸವೇಶ್ವರ ದೇವಸ್ಥಾನ ಕಲ್ಯಾಣ ಕ್ರಾಂತಿಯ ನಂತರ ನಿರ್ಮಾಣವಾಯಿತು. ಧಾರವಾಡ- ಕಲಘಟಗಿ ರಸ್ತೆಯಲ್ಲಿರುವ ಸೋಮೇಶ್ವರ ದೇವಾಲಯ 12ನೇ ಶತಮಾನದಲ್ಲಿ ನಿರ್ಮಾಣವಾಯಿತು. ಮರಾಠಾ ಕಾಲನಿಯ ದುರ್ಗಾದೇವಿ ದೇವಸ್ಥಾನವೂ ಹೆಚ್ಚು ಕಡಿಮೆ ಇದೇ ಕಾಲದಲ್ಲಿ ನಿರ್ಮಾಣವಾಯಿತೆಂದು ಹೇಳಲಾಗಿದೆ. ಇಲ್ಲಿನ ಹಾವೇರಿ ಪೇಟೆಯ ದಾರಿಯಲ್ಲಿ ಆದಿಲ್‌ಶಾಹಿ ಕಾಲದ ಕೋಟೆ ಮಹಾದ್ವಾರ ಇದೆ. ಅದರ ಮೇಲೆ ಪರ್ಷಿಯನ್ ಭಾಷೆ ಬರಹ ಕಾಣಬಹುದು.

ಧಾರವಾಡದ ಪೆಂಡಾರ ಓಣಿಯ ಮಸೀದಿ ಅತ್ಯಂತ ಪ್ರಾಚೀನವಾದದ್ದು. ಇದರೊಂದಿಗೆ ಮದನಿ ಮಸೀದಿ, ರೌನಕ್‌ಪುರ ಮಸೀದಿ, ಸೌದಾಗರ ಹೆಸರಿನ ಮಸೀದಿಗಳೂ ಇವೆ.ನವಲಗುಂದ ತಾಲ್ಲೂಕಿನ ಅಣ್ಣಿಗೇರಿಯಲ್ಲಿ ಪ್ರಾಚೀನ ಕಾಲದ ಅಮೃತೇಶ್ವರ ದೇವಾಲಯ ಪ್ರವೇಶಿಸಲು ದಕ್ಷಿಣ ಹಾಗೂ ಪೂರ್ವದಿಂದ ದ್ವಾರಗಳಿದ್ದು, ದಕ್ಷಿಣ ದ್ವಾರಕ್ಕೆ ಮುಖಮಂಟಪವಿದೆ. ಈ ದೇವಸ್ಥಾನದ ನವರಂಗದ ಮುಖ್ಯದ್ವಾರ ದೇವಾಲಯದ ಅತ್ಯಾಕರ್ಷಕ ಭಾಗ. ಇಂದು ಭಾಗಶಃ ಹಾಳಾಗಿರುವ ಈ ದ್ವಾರಬಂಧವು (ಚೌಕಟ್ಟು) ಅಲಂಕಾರಿಕ ಚಿಕಣಿಯ ಸೂಕ್ಷ್ಮ ಕೆತ್ತನೆಗಳು ಇಲ್ಲಿವೆ. ಧಾರವಾಡ ತಾಲ್ಲೂಕಿನ ಅಮ್ಮಿನಭಾವಿಯಲ್ಲಿ 10 ಅಥವಾ 12ನೇ ಶತಮಾನದಲ್ಲಿ ರಚನೆಯಾಗಿರಬಹುದಾದ ವಿಶಾಲವಾದ ಪಾರ್ಶ್ವನಾಥ ಬಸದಿ ಇದೆ.

ಹುಬ್ಬಳ್ಳಿ ತಾಲ್ಲೂಕಿನ ಉಣಕಲ್ಲದಲ್ಲಿ ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿರುವ ದೇವಸ್ಥಾನವು ಉತ್ಕೃಷ್ಟ ಕಲಾಕೃತಿಗಳಿಂದ ಕೂಡಿದೆ. ಈ ದೇವಸ್ಥಾನದ ಗರ್ಭಗೃಹಕ್ಕೆ ಪ್ರವೇಶಿಸಲು ನಾಲ್ಕೂ ದಿಕ್ಕಿನಿಂದಲೂ ದ್ವಾರವಿದೆ. ಇದಕ್ಕೆ ಪೂರಕವಾಗಿ ನಾಲ್ಕೂ ದಿಕ್ಕಿನಲ್ಲೂ ಎರಡು ಅಂಕಣದ ಮುಖಮಂಟಪವಿದೆ. ಸುಮಾರು 12ನೇ ಶತಮಾನದಲ್ಲಿ ರಚನೆಯಾದ ಈ ಗುಡಿಯ ಮೇಲೆ ಹೊಯ್ಸಳರ ವಾಸ್ತುಶಿಲ್ಪದ ಪ್ರಭಾವವನ್ನು ಗುರುತಿಸಬಹುದಾಗಿದೆ.

ಹುಬ್ಬಳ್ಳಿ- ಧಾರವಾಡದಲ್ಲಿರುವ ಮಠಗಳಲ್ಲಿ ಸಿದ್ಧಾರೂಢಮಠ, ಮೂರುಸಾವಿರ ಮಠ ಮತ್ತು ಮುರುಘಾಮಠ ಪ್ರಮುಖ. 1877ರಲ್ಲಿ ಸಿದ್ಧಾರೂಢ ಸ್ವಾಮಿಗಳು ಬೀದರ್ ಜಿಲ್ಲೆಯ ಚಳಕಾಪುರದಿಂದ ಹುಬ್ಬಳ್ಳಿಗೆ ಬಂದು ಈ ಮಠ ಸ್ಥಾಪಿಸಿದರು. ಎಲ್ಲ ಸಮಾಜದವರು ಈ ಮಠದ ಭಕ್ತರಾಗಿರುವುದು ವಿಶಾಲ ಮನೋಧರ್ಮ ತೋರುತ್ತದೆ. ಈ ಮಠಗಳು ಕೇವಲ ಧಾರ್ಮಿಕ ಜಾಗೃತಿ ಮೂಡಿಸುವ ಕೆಲಸವನ್ನು ಮಾತ್ರ ಮಾಡದೇ, ಜ್ಞಾನ ಹಾಗೂ ದಾಸೋಹಕ್ಕೂ ಹೆಸರಾಗಿವೆ. ಧಾರವಾಡ ಸಣ್ಣ ಜಿಲ್ಲೆಯಾದ ನಂತರ ಪ್ರಾಚೀನ ದೇವಾಲಯಗಳು, ಮಠಗಳು ಮಾತ್ರ ಪ್ರೇಕ್ಷಣೀಯ ಮತ್ತು ಶ್ರದ್ಧಾ-ಭಕ್ತಿಯ ಕೇಂದ್ರಗಳಾಗಿ ಕಂಡುಬರುತ್ತವೆ. ಇತ್ತೀಚೆಗೆ ಈ ಜಿಲ್ಲೆಯಲ್ಲೂ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಪಡಿಸುವ ಪ್ರಯತ್ನ ಆರಂಭವಾಗಿದೆ.

ದ.ರಾ.ಬೇಂದ್ರೆಯವರ ಕಾವ್ಯ ಕೃಷಿಗೆ ಉತ್ತೇಜನ ನೀಡಿದ ಸಾಧನಕೇರಿಯ ಕೆರೆ ಹೊಸ ರೂಪ ಪಡೆಯುತ್ತಿದೆ. ‘ಬಾರೋ ಸಾಧನಕೇರಿ’ಗೆ ಯೋಜನೆಯಡಿಯಲ್ಲಿ ಬೇಂದ್ರೆಯವರ ಮನೆಯ ಎದುರಿಗಿರುವ ಕೆರೆಯನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ, ಉದ್ಯಾನವನ, ರಂಗಮಂದಿರ, ಬೇಂದ್ರೆ ಭವನ ಎಲ್ಲವೂ ಸೇರಿ ಆಕರ್ಷಕ ಪ್ರವಾಸಿ ತಾಣವಾಗುತ್ತಿದೆ.  ಶತಮಾನದ ಸಂಭ್ರಮದಲ್ಲಿರುವ ಕೆಲಗೇರಿ ಕೆರೆ, ಉಣಕಲ್ ಕೆರೆಗಳನ್ನು ಅಭಿವೃದ್ಧಿಪಡಿಸಿ ಪ್ರೇಕ್ಷಣೀಯ ಸ್ಥಳಗಳನ್ನಾಗಿ ಪರಿವರ್ತಿಸುವ ಕೆಲಸ ನಡೆದಿದೆ. ಅಲ್ಲದೇ ಹುಬ್ಬಳ್ಳಿಯ ನೃಪತುಂಗಬೆಟ್ಟವನ್ನು ಅಭಿವೃದ್ಧಿಪಡಿಸಿ, ಅಲ್ಲಿರುವ ನೈಸರ್ಗಿಕ ವಾತಾವರಣ ಬಳಸಿಕೊಂಡು ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ನಡೆಯುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT