ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಾಬಿಟ್ಟಿ ಕಾಮಗಾರಿ ತಂದ ಕಿರಿಕಿರಿ

Last Updated 1 ಫೆಬ್ರುವರಿ 2011, 6:00 IST
ಅಕ್ಷರ ಗಾತ್ರ

ಕೆಜಿಎಫ್: ಕಳೆದ ಒಂದು ವರ್ಷಗಳಿಂದ ರಾಬರ್ಟಸನ್‌ಪೇಟೆ-ಆಂಡರಸನ್‌ಪೇಟೆ ರಸ್ತೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆ ಕೈ ಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಒಂದಲ್ಲ ಒಂದು ರೀತಿ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಲೇ ಇದೆ.

ಕೇವಲ ಅರ್ಧ ಕಿ.ಮೀ. ದೂರದ ಜೋಡಿ ರಸ್ತೆ ಕಾಮಗಾರಿಗೆ ಒಂದು ವರ್ಷದ ಕಾಲಾವಧಿ ತೆಗೆದುಕೊಂಡು ದಾಖಲೆ ಕಾಮಗಾರಿ ನಡೆಸಿದ ಲೋಕೋಪಯೋಗಿ ಇಲಾಖೆ ಜನವರಿ ತಿಂಗಳ ಮೊದಲ ವಾರದಲ್ಲಿ ಜೋಡಿ ರಸ್ತೆಯ ಡಾಂಬರೀಕರಣ ಮುಗಿಸಿತು. ಆದರೆ ರಸ್ತೆ ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಜೋಡಿ ರಸ್ತೆಗೆ ಹಾಕಲಾಗಿದ್ದ ರಸ್ತೆ ದೀಪಗಳ ವೈರುಗಳನ್ನು ಮತ್ತು ಪಾದಚಾರಿ ಮಾರ್ಗದಲ್ಲಿ ಹಾಕಲಾಗಿದ್ದ ಸಿಮೆಂಟ್ ಬ್ಲಾಕ್‌ಗಳನ್ನು ಕಿತ್ತುಹಾಕಲಾಗಿತ್ತು.

ರಾಬರ್ಟಸನ್‌ಪೇಟೆಯ ಜೋಡಿ ರಸ್ತೆ ನಗರದಲ್ಲೇ ಮೊದಲ ಜೋಡಿ ರಸ್ತೆಯಾಗಿದ್ದು, ಅದನ್ನು ಸುಂದರವಾಗಿರಿಸಲು ನಗರಸಭೆ ಲಕ್ಷಾಂತರ ರೂಪಾಯಿಗಳನ್ನು ವ್ಯಯ ಮಾಡಿತ್ತು. ರಸ್ತೆ ಬದಿಯಲ್ಲಿ ಸಿಮೆಂಟ್ ಬ್ಲಾಕ್‌ಗಳನ್ನು ಸುಂದರವಾಗಿ ಜೋಡಿಸಿ ಪಾದಚಾರಿಗಳು ಅಡತಡೆ ಇಲ್ಲದೆ ನಡೆಯಲು ಅನುಕೂಲ ಮಾಡಿತ್ತು. ರಸ್ತೆಯ ಮಧ್ಯದಲ್ಲಿ ಎರಡೂ ಬದಿಗೂ ಬೆಳಕು ಚೆಲ್ಲುವ ದೀಪಗಳನ್ನು ಜೋಡಿಸಿತ್ತು.

ಇದ್ಯಾವುದರ ಪರಿವೇ ಇಲ್ಲದ ಲೋಕೋಪಯೋಗಿ ಇಲಾಖೆ ಪಾದಚಾರಿಗಳ ರಸ್ತೆಯ ಕಲ್ಲನ್ನು ಜೆಸಿಬಿ ಮೂಲಕ ಕಿತ್ತುಹಾಕಿತ್ತು. ರಸ್ತೆಯಡಿ ಹಾಕಲಾಗಿದ್ದ ವಿದ್ಯುತ್ ತಂತಿಗಳನ್ನು ಸಹ ಹಾಳುಗೆಡವಿತ್ತು. ಈ ಸಂಬಂಧವಾಗಿ ನಗರಸಭೆಯ ಅಧಿಕಾರಿಗಳು ಅನೇಕ ಬಾರಿ ಲೋಕೋಪಯೋಗಿ ಇಲಾಖೆಗೆ ಎಚ್ಚರಿಕೆ ನೀಡಿದ್ದರು. ರಸ್ತೆ ಕಾಮಗಾರಿ ಆದ ನಂತರ ಗುತ್ತಿಗೆದಾರರು ದುರಸ್ತಿ ಮಾಡಿಕೊಡುತ್ತಾರೆ ಎಂಬ ಆಶ್ವಾಸನೆಯನ್ನು ಇಲಾಖೆ ನೀಡಿತ್ತು. ಆದರೆ ಇದುವರೆವಿಗೂ ಯಾವುದೇ ದುರಸ್ತಿಯನ್ನು ಕೈಗೊಳ್ಳದಿರುವುದರಿಂದ ಪಾದಚಾರಿಗಳು ಜೋಡಿ ರಸ್ತೆಯಲ್ಲಿ ಕತ್ತಲಲ್ಲೆ ನಡೆಯಬೇಕಾಗಿದೆ.

ರಸ್ತೆಯ ಮಧ್ಯದಲ್ಲಿ ಕಿತ್ತುಹಾಕಲಾಗಿರುವ ಸಿಮೆಂಟ್ ಬ್ಲಾಕ್‌ಗಳು ಮತ್ತು ಬಂಡೆ ಕಲ್ಲುಗಳ ಮೇಲೆ ಬಿದ್ದು ಪಾದಚಾರಿಗಳು ಗಾಯಗೊಳ್ಳುತ್ತಿರುವ ಘಟನೆ ಪ್ರತಿನಿತ್ಯವೂ ನಡೆಯುತ್ತಿದೆ. ಅಲ್ಲದೆ ಈ ರಸ್ತೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಹೋಗುವ ಮುಖ್ಯ ರಸ್ತೆಯಾಗಿರುವುದರಿಂದ ರೋಗಿಗಳೂ ಸಂಕಟ ಅನುಭವಿಸುತ್ತಿದ್ದಾರೆ.

ಲೋಕೋಪಯೋಗಿ ಇಲಾಖೆ ಮಾಡಿರುವ ಕರ್ತವ್ಯಲೋಪ ಹಾಗೂ ನಷ್ಟದ ಬಗ್ಗೆ ಈಗಾಗಲೇ ಹಲವಾರು ಬಾರಿ ಮೌಖಿಕವಾಗಿ ಹೇಳಲಾಗಿದೆ.ಆದರೂ ಅವರು ಕ್ರಮ ಕೈಗೊಂಡಿಲ್ಲ.ಈ ಸಂಬಂಧವಾಗಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ನಗರಸಭಾಧ್ಯಕ್ಷ ಪಿ.ದಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.                                                                    
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT