ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿದ ವರ ಕರುಣಿಸುವ ಭಕ್ತರ ತಾಯಿ

Last Updated 12 ಅಕ್ಟೋಬರ್ 2012, 10:40 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹೃದಯಭಾಗದಲ್ಲಿ ಕೋಡೂರಿನಿಂದ ಸುಮಾರು 3ಕಿ.ಮೀ. ಸಾಗಿದರೆ ಬೆಟ್ಟಗುಡ್ಡಗಳ ಪರ್ವತ ಶ್ರೇಣಿಯ ಪ್ರಶಾಂತತೆಯ ರಮಣೀಯ ತಾಣದಲ್ಲಿ ನೆಲೆ ನಿಂತಿರುವ ದೇವಿ ಜೇನುಕಲ್ಲಮ್ಮ.

ಸುಮಾರು 800 ವರ್ಷಗಳ ಇತಿಹಾಸವಿರುವ ಈ ಕ್ಷೇತ್ರವು ಆಗ್ನೇಯ ಭಾಗದ ಹಳೆಯಮ್ಮನಘಟ್ಟದಲ್ಲಿ ಮುಕ್ಕಾಲು ಭಾಗ ಮೇಲ್ಭಾಗದಲ್ಲಿ ಇರುವ ಗುಹೆಯಲ್ಲಿ ದೇವಿಯ ಮೂಲ ಸ್ಥಳವಿದೆ ಎಂಬ ಪ್ರತೀತಿ ಇದೆ. ತಕ್ಕ ಪುರಾವೆಗಳೂ ಇವೆ.

ಪುರಾಣ ಕಾಲದಲ್ಲಿ ಪರಶುರಾಮ ಮಹರ್ಷಿಗಳು ನಡೆದಾಡಿದ ಪುಣ್ಯಕ್ಷೇತ್ರವೂ ಇದಾಗಿದ್ದು, ಕ್ಷತ್ರಿಯ ಸಂಹಾರದ ನಂತರ ಈ ಕ್ಷೇತ್ರವನ್ನು ತಪೋಭೂಮಿಯನ್ನಾಗಿ ಮಾಡಿ ತಪಸ್ಸನ್ನಾಚರಿಸಿದ ಲಕ್ಷಣಗಳೂ ಇವೆ.
ಹಳೇ ಅಮ್ಮನಘಟ್ಟ ದೇವಿ ಸಾನಿಧ್ಯವಾಗಿಯೂ, ಪ್ರಕೃತಿ ದತ್ತವಾಗಿರುವ ಈಗಿನ ಹೊಸ ಅಮ್ಮನಘಟ್ಟ ಶಿವನ ನೆಲೆಯಾಗಿ ಕಂಡು ಬಂದಿದೆ. 

400 ವರ್ಷದ ಹಿಂದೆ ಹಳೆಯಮ್ಮಘಟ್ಟ ಪ್ರದೇಶದಲ್ಲಿ ಸಂಭವಿಸಿದ ಅಶುದ್ಧ ಮಾಲಿನ್ಯದಿಂದಾಗಿ ಕೋಪಾವಿಷ್ಠಳಾದ ದೇವಿ ಆ ಸ್ಥಳವನ್ನು ಬಿಟ್ಟು ತನ್ನ ಗಂಡನಾದ ಶಿವನ ಸಾನಿಧ್ಯದಲ್ಲಿ ಅಡಕವಾಗಿದ್ದಾಳೆ ಎನ್ನಲಾಗಿದೆ.

ದಟ್ಟವಾದ ಅರಣ್ಯದಲ್ಲಿ ಬೇಡನೊಬ್ಬ ಬೇಟೆಯಾಡಿದ ಪ್ರಾಣಿಯು ಪ್ರಾಣಬಿಟ್ಟ ಸ್ಥಳವನ್ನು ಅರಸುತ್ತಾ ಬಂದಾಗ  ಹೆಬ್ಬಂಡೆಯ ಎಡೆಯಿಂದ ಬಂದ ಜೇನು ನೋಣಗಳು ಮುತ್ತಿ ಬೇಟೆಗಾರನನ್ನು ದೂರ ಮಾಡುತ್ತವೆ. ಈ ಸಂದರ್ಭದಲ್ಲಿ ಬಂಡೆಯಲ್ಲಿ ಮೂಡಿ ಬಂದಿರುವ ದೇವಿಯ ಸಾನಿಧ್ಯವನ್ನು ಗುರುತಿಸಿ ಪೂಜಿಸಿ ಬೇಟೆಯಾಡಿದ ಪ್ರಾಣಿಯನ್ನೇ ನೈವೇದ್ಯವಾಗಿ ಸಮರ್ಪಿಸುತ್ತಾನೆ

ಅಂದಿನಿಂದ ಜೇನುಕಲ್ಲಮ್ಮ ದೇವಿ ಎಂದು ನಾಮಾಂಕಿತಗೊಂಡಳೆಂದು ಪ್ರತೀತಿ ಇದೆ.
ಇದರ ಪ್ರತೀಕವಾಗಿ ಇಂದಿಗೂ ಬಹುಸಂಖ್ಯಾತ ಈಡಿಗ ಸಮುದಾಯದವರು ಕುಲದೇವರನ್ನಾಗಿ ಈ ದೇವಿಯನ್ನು ಪೂಜಿಸಿ, ತದ ನಂತರದಲ್ಲಿ ಮೂಲ ಪುರುಷನನ್ನು ಪೂಜಿಸಿ, ಬಲಿ ಕರ್ಮಾದಿಗಳನ್ನು ಮಾಡಿ, ಎಡೆಯಿಟ್ಟು ಪ್ರಸಾದ ಸ್ವೀಕರಿಸುವುದು ವಾಡಿಕೆ ನಡೆದುಬಂದಿದೆ.

ಈ ದೇವಿಯ ಉತ್ತರ ಭಾಗದ ಬೆಟ್ಟದ ಪಾದ ಮೂಲದಲ್ಲಿ ಈಶ್ವರನ ಸಾನಿಧ್ಯವಿದೆ. ಅಲ್ಲಿ ವಾಸಮಾಡುತ್ತಿದ್ದ ದೇವಿ ಉಪಾಸಕನಾದ ಬೋವಿ ಜನಾಂಗದ ಒಬ್ಬ ಮೂಲ ಪುರುಷನಿಗೆ ಆವೇಶ ರೂಪದಲ್ಲಿ ಕಾಣಿಸಿಕೊಂಡು ತನ್ನನ್ನು ಆರಾಧಿಸಿಕೊಂಡು ಬರಬೇಕು ಎಂದು ಕೇಳಿಕೊಂಡ ಹಿನ್ನಲೆಯಲ್ಲಿ ಹೆಗಡೆ ಮನೆತನದವರು ಈ ದೇವಿಯ ಪೂಜೆ ಪುನಃಸ್ಕಾರವನ್ನು ಶತಮಾನ ಕಾಲದಿಂದಲೂ  ನಡೆಸಿಕೊಂಡು ಬಂದಿದ್ದಾರೆ.

ದೇವಿಗೆ ಉದ್ದಿನಿಂದ ತಯಾರಿಸಿದ ಕಜ್ಜಾಯ,  ತುಪ್ಪ ಮತ್ತು ಬೆಲ್ಲದಿಂದ ತಯಾರಿಸಿದ ಪಾಯಸ ಹಾಗೂ ಅನ್ನ ನೈವೇದ್ಯ ವಿಶೇಷವಾಗಿದೆ.

ವಿವಾಹ ಸಿದ್ಧಿ, ಸಂತಾನ ಪ್ರಾಪ್ತಿ, ಚರ್ಮರೋಗ ನಿವಾರಣೆ ಇನ್ನಿತರ ಭಕ್ತರ ಇಷ್ಟಾರ್ಥಗಳನ್ನು ಪೊರೈಸುವ ಮೂಲಕ ದೇವಿಯ ಪ್ರಸಿದ್ಧಿಗೊಂಡಿದ್ದಾಳೆ. ತ್ರಿಶಕ್ತಿ ಸ್ವರೂಪಿಣಿಯಾದ ಮಹಾಲಕ್ಷ್ಮೀ, ಮಹಾಕಾಳಿ, ಮಹಾಸರಸ್ವತಿ ದೇವಿಯೂ ಅಂತರ್ಗತಳಾಗಿ ಜಗದಂಬೆ ರೇಣುಕಾದೇವಿ ಸ್ವರೂಪಿಯಾಗಿ ದಿವ್ಯವಾದ ಶಕ್ತಿ ಕ್ಷೇತ್ರದಲ್ಲಿ ನೆಲೆಸಿದ್ದು, ನಾಡಿನೆಲ್ಲೆಡೆ ಖ್ಯಾತಳಾಗಿದ್ದಾಳೆ.

ಪ್ರಶಾಂತ ವಾತಾವರಣ ಹಾಗೂ ದೇವಿಸನ್ನಿಧಿಯಿದ್ದು, ಸಾಕಷ್ಟು ತಪಸ್ವಿಗಳೂ ತಪಸ್ಸನ್ನಾಚರಿಸಿ ತಮ್ಮ ಸಾಧನೆಗಳಲ್ಲಿ ಮೆರದಿದ್ದಾರೆ. ಈ ಕ್ಷೇತ್ರ ಪರಿಸರದಲ್ಲಿ ಆಗ್ನೇಯ ದಿಕ್ಕಿನ ಉಗಮ ಸ್ಥಾನದಲ್ಲಿ ಚೌಡಿ, ಮಾಸ್ತಿ, ಹುಲಿದೇವರು (ಹುಲಿಬೀರಪ್ಪ) ಮತ್ತು ಸಿಡಿ ಸಾನಿಧ್ಯಗಳು ಇವೆ.

ಕ್ಷೇತ್ರದ ಪರಿಸರದಲ್ಲಿ 6 ಜಲಾಶಯಗಳಿದ್ದು, ಮೂರು ಮಾತ್ರ ಪವಿತ್ರತೆಯನ್ನು ಹೊಂದಿದ್ದು, ಒಂದು ಬೆಟ್ಟದ ಪಾಧಭಾಗದಲ್ಲಿಯೂ ದೇವಾಲಯದ ಬಲಭಾಗದಲ್ಲಿಯೂ ಮತ್ತೊಂದು ಶಿಖರದ ಮೇಲ್ಭಾಗದಲ್ಲಿಯೂ ಇವೆ.
ವಾರ್ಷಿಕವಾಗಿ ದಿನವಹಿ ಪೂಜೆಗಳಿದ್ದು, ಭಾದ್ರಪದ ಮಾಸ ಬಹುಳ ಮತ್ತು ನವರಾತ್ರಿಗಳಲ್ಲಿ ವಿಶೇಷ ಪೂಜೆಗಳು ಅಲ್ಲದೇ ಚಂಡಿಕಾಯಾಗಗಳು ನಡೆಯುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT