ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈರಮಂಗಲ ಕೆರೆಯಲ್ಲಿ ರಾಸಾಯನಿಕ ತಾಂಡವ

ಅರ್ಕಾವತಿ ಒಡಲಾಳ 4
Last Updated 17 ಏಪ್ರಿಲ್ 2013, 20:11 IST
ಅಕ್ಷರ ಗಾತ್ರ

ಬೆಂಗಳೂರು: `ನಮ್ಮೂರ ಮಂದಾರ ಹೂವೇ... ನನ್ನೆದೆಯ ಬಾಂದಳದ ಚೆಲುವೆ' ಎಂಬ ಮಾಧುರ್ಯ ತುಂಬಿದ ಗೀತೆ, ಹಿಂದಿನ ತಲೆಮಾರಿನ ಸಿನಿಮಾ ಪ್ರಿಯರಿಗೆ ಇನ್ನೂ ನೆನಪಿರಲಿಕ್ಕೆ ಸಾಕು. `ಆಲೆಮನೆ' ಚಿತ್ರದಲ್ಲಿ ಅದರ ನಾಯಕ, ಒಂದು ಜೀವಂತ ಕಾವ್ಯದಂತೆ ಕಂಗೊಳಿಸುವ ಕೆರೆ ದಂಡೆ ಮೇಲೆ ಸುತ್ತಾಡುತ್ತಾ ಈ ಹಾಡು ಹಾಡುತ್ತಾನೆ. ಚಿತ್ರೀಕರಣಕ್ಕೆ ಬಳಸಿಕೊಂಡ ನಿಸರ್ಗದ ಆ ರಮಣೀಯ ನೋಟ ಬೈರಮಂಗಲ ಕೆರೆಯದಾಗಿದೆ.

ಅಂತಹ ಸೊಬಗಿನ ಕೆರೆಯನ್ನು ಒಮ್ಮೆ ಕಣ್ತುಂಬಿಕೊಂಡು ಬಂದರಾಯಿತು ಎಂಬ ಬಯಕೆ ಹೊತ್ತು ನೀವೀಗ ಬಂದಿದ್ದಾದರೆ ಹರ್ಷದ ಹೊನಲಿನಲ್ಲಿ ತೇಲುವ ಬದಲು ವಿಷಾದದ ಮಡುವಿನಲ್ಲಿ ಹೂತು ಹೋಗುವ ಸನ್ನಿವೇಶ ಎದುರಾಗುತ್ತದೆ. ಒಂದೊಮ್ಮೆ ಪರಿಶುದ್ಧ ಜಲ ಸಂಪತ್ತಿನಿಂದ ತುಂಬಿ ತುಳುಕುತ್ತಿದ್ದ ಕೆರೆ ಸದ್ಯ ಕೆಸರಿನ ಸಾಗರವಾಗಿದೆ.

ವೃಷಭಾವತಿ ನದಿಯಿಂದ ಪಡೆದ ನೀರು ಸಂಗ್ರಹಿಸಲು 1942ರಲ್ಲಿ ಬ್ರಿಟಿಷರು ಕಟ್ಟಿದ ಕೆರೆ ಇದು. 412 ಹೆಕ್ಟೇರ್ ಪ್ರದೇಶದಲ್ಲಿ ತನ್ನ ಮೈಚಾಚಿಕೊಂಡಿರುವ ಈ ಕೆರೆ, ಸುತ್ತಲಿನ ಹಳ್ಳಿಗಳ ಸುಮಾರು 1,600 ಹೆಕ್ಟೇರ್ ಪ್ರದೇಶಕ್ಕೆ ಉಣಿಸುವಷ್ಟು ನೀರು ಇಟ್ಟುಕೊಂಡು ಹೆಚ್ಚಾಗಿದ್ದನ್ನು ಅರ್ಕಾವತಿಗೆ ಕಳುಹಿಸಿ ಕೊಡುತ್ತಿತ್ತು. ಸ್ಫಟಿಕದಷ್ಟು ಸ್ವಚ್ಛವಾಗಿದ್ದ ಈ ಕೆರೆ ನೀರು 1960ರ ದಶಕದ ಬಳಿಕ ಹಂತ-ಹಂತವಾಗಿ ಕೆಡುತ್ತಾ ಹೋಯಿತು. ಕೈಗಾರಿಕಾ ತ್ಯಾಜ್ಯ ಮತ್ತು ಬೆಂಗಳೂರಿನ ಮಾಲಿನ್ಯ ಎರಡನ್ನೂ ತನ್ನ ಒಡಲಾಳದಲ್ಲಿ ತುಂಬಿಕೊಂಡಿರುವ ವಿಶಾಲವಾದ ಕೆರೆ, ಈಗ ರೋಗದಿಂದ ನರಳುತ್ತಿದೆ.

ವೃಷಭಾವತಿ ನದಿ ಬೆಂಗಳೂರಿನ ತ್ಯಾಜ್ಯವನ್ನೆಲ್ಲ ಒಯ್ಯುವ ಚರಂಡಿಯಾಗಿ ಮಾರ್ಪಟ್ಟ ಮೇಲೆ ಅಂತಹ ಚರಂಡಿಯನ್ನೇ ಜಲ ಮೂಲವನ್ನಾಗಿ ಪಡೆದ ಕೆರೆ ಸಹ ಕೊಳಚೆ ನೀರನ್ನೇ ಪಡೆಯುತ್ತಿದೆ. ಕೆರೆಯ ಆಸುಪಾಸಿನಲ್ಲೇ ಸಾವಿರಾರು ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ತಂಪುಪಾನೀಯ ಮತ್ತು ಕಾರು ಉತ್ಪಾದನಾ ಘಟಕಗಳು ಕೆರೆ ಉಸಿರು ಕಟ್ಟಿಸಿವೆ. ಬಿಡದಿಯಲ್ಲಿ ತಳವೂರಿದ ಕೈಗಾರಿಕೆಗಳಿಗೆ ಕೆರೆ ಭಾಗದ ಜಾಗವೇ ಪ್ರಶಸ್ತ ಎನಿಸಿದೆ. ಬಹುತೇಕ ಕಾರ್ಖಾನೆಗಳು ನೀರನ್ನು ಸಂಸ್ಕರಿಸದೆ ನೇರವಾಗಿ ಪರಿಸರಕ್ಕೆ ಬಿಡುತ್ತಿವೆ. ಘನತ್ಯಾಜ್ಯವನ್ನು ಸಹ ತಂದು ಕಾಲುವೆಗಳಿಗೆ ಸುರಿಯುತ್ತಿರುವ ಕಾರಣ ಕೆರೆಯಲ್ಲಿ ಭಾರಿ ಪ್ರಮಾಣದ ಹೂಳು ತುಂಬಿದೆ.

ಕೈಗಾರಿಕೆಗಳು ಈ ಭಾಗದಲ್ಲಿ ಲಗ್ಗೆ ಇಡುವ ಮುನ್ನ ಬೈರಮಂಗಲ ಕೆರೆಯಲ್ಲಿ ಮೀನುಗಾರಿಕೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು. ಪ್ರತಿ ವರ್ಷ 200 ಟನ್‌ಗಳಷ್ಟು ಮೀನುಗಳು ಇಲ್ಲಿ ಸಿಗುತ್ತಿದ್ದವು. ವೃಷಭಾವತಿ ನದಿ, ನೀರಿನ ಬದಲು ರಾಸಾಯನಿಕ ಹರಿಸಲು ಆರಂಭಿಸಿದ ಮೇಲೆ ದೇಶೀ ಮೀನು ತಳಿಗಳ ಸಂತತಿಯೇ ಮರೆಯಾಯಿತು. ರಾಸಾಯನಿಕವನ್ನು ಜೀರ್ಣಿಸಿಕೊಳ್ಳಬಲ್ಲ ಆಫ್ರಿಕನ್ ಕ್ಯಾಟ್‌ಫಿಶ್ ತಳಿ ಮೀನುಗಳಷ್ಟೇ ಈಗ ಸಿಗುತ್ತಿವೆ.

ಬೈರಮಂಗಲ ಮಾತ್ರವಲ್ಲದೆ ಅಂಚಿಪುರ, ಬೆಣ್ಣಿಗೆರೆ, ಮರಿಗೌಡನ ದೊಡ್ಡಿ, ಸಣ್ಣಮಂಗಲ, ಕುಂಟನಹಳ್ಳಿ, ಪರಸನಪಾಳ್ಯ, ತಿಮ್ಮೇಗೌಡನ ದೊಡ್ಡಿ ಮತ್ತು ವೃಷಭಾವತಿಪುರ ಹಳ್ಳಿಗಳ ಜನರಿಗೆ ಜೀವಸೆಲೆಯಾಗಿತ್ತು ಈ ಕೆರೆ. ಕೃಷಿಕರು, ತರಕಾರಿ ಮಾರುವವರು, ಮೀನುಗಾರರು, ಸೌದೆ ಮಾರುವವರು, ಗಿಡಮೂಲಿಕೆ ತರುವವರು, ಹೈನುಗಾರಿಕೆ ಮಾಡುವವರು ಸೇರಿದಂತೆ ಸಾವಿರಾರು ಕುಟುಂಬಗಳು ನಿತ್ಯದ ಉಪಜೀವನಕ್ಕೆ ಕೆರೆಯನ್ನೇ ನೇರವಾಗಿ ಅವಲಂಬಿಸಿದ್ದವು. ಕೆರೆ ಜೀವ ಕಳೆದುಕೊಂಡ ಮೇಲೆ ಅವರೆಲ್ಲ ಕೆಲಸಕ್ಕಾಗಿ ನಿತ್ಯ ಬೆಂಗಳೂರಿಗೆ ಎಡತಾಕಲು ಆರಂಭಿಸಿದ್ದಾರೆ.

ಬೈರಮಂಗಲದ ಸುತ್ತಲಿನ ಪ್ರದೇಶದಲ್ಲಿ ಹಲವು ತಳಿಗಳ ಭತ್ತ ಬೆಳೆಯಲಾಗುತ್ತಿತ್ತು. ರಾಗಿ, ಕಬ್ಬು, ಸೂರ್ಯಕಾಂತಿ ಬೆಳೆ ನಳನಳಿಸುತ್ತಿತ್ತು. ತೆಂಗಿನ ಮರಗಳು ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದವು. ಹೈನುಗಾರಿಕೆ, ಕೋಳಿ ಮತ್ತು ಹಂದಿ ಸಾಕಾಣಿಕೆದಾರರು ಸಹ ಅಲ್ಲಿ ನೆಲೆ ಕಂಡುಕೊಂಡಿದ್ದರು. ಒಂದು ವಿಶಿಷ್ಟವಾದ ನಾಗರಿಕತೆಯೇ ಅಲ್ಲಿ ಬೆಳೆದು ನಿಂತಿತ್ತು. ಈಗ ಎಲ್ಲವೂ ಬುಡಮೇಲು ಆಗಿದೆ.

ಕೈಗಾರಿಕೆ ಹಾಗೂ ಚರಂಡಿ ನೀರು ಸಂಸ್ಕರಣೆಯಾಗದೆ ನೇರವಾಗಿ ಕೆರೆಗೆ ಸೇರ್ಪಡೆ ಆಗುತ್ತಿರುವ ಕಾರಣ, ಯಾವ ರೀತಿಯ ಬಳಕೆಗೂ ಅದು  ಯೋಗ್ಯವಾಗಿಲ್ಲ. ಮಿತಿಮೀರಿದ ಗಡಸುತನ ಅದರಲ್ಲಿದೆ. ಕ್ಯಾಲ್ಸಿಯಂ, ಮ್ಯಾಗ್ನೇಸಿಯಂ, ಸೋಡಿಯಂ, ಪೋಟಾಸಿಯಂ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿ ಇದೆ. ಪಾಸ್ಫೇಟ್, ಸಲ್ಫೇಟ್, ನೈಟ್ರೇಟ್, ಫ್ಲೋರೈಡ್, ಕ್ಲೋರೈಡ್, ಜಿಂಕ್, ಕಬ್ಬಿಣ ಮತ್ತು ಸೀಸ ಮೊದಲಾದ ಪದಾರ್ಥಗಳು ನೀರಿನಲ್ಲಿ ಕಂಡುಬಂದಿವೆ ಎಂದು ನೀರಿನ ಪರೀಕ್ಷೆ ನಡೆಸಿದ ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ತಜ್ಞರ ತಂಡ ವರದಿ ನೀಡಿದೆ.
ಕಲುಷಿತ ನೀರು ಬಳಕೆ ಮಾಡಿದ್ದರಿಂದ ಸುತ್ತಲಿನ ಕೃಷಿಭೂಮಿಯಲ್ಲಿ ಬೆಳೆಯಲಾದ ಫಸಲು ಕೂಡ ರಾಸಾಯನಿಕಗಳಿಂದ ಕೂಡಿದ್ದು ಬಳಕೆಗೆ ಯೋಗ್ಯವಾಗಿಲ್ಲ ಎಂಬ ಗಂಭೀರ ವಿಷಯವನ್ನೂ ಆ ವರದಿಯಲ್ಲಿ ದಾಖಲಿಸಲಾಗಿದೆ. ಸುದೀರ್ಘ ಅವಧಿಗೆ ಇಲ್ಲಿಯ ನೀರು ಇಲ್ಲವೆ ಅದರಿಂದ ಬೆಳೆಯಲಾದ ಕೃಷಿ ಉತ್ಪನ್ನ ಬಳಕೆ ಮಾಡುವುದರಿಂದ ಜೀವ ಸಂಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಎಚ್ಚರಿಕೆಯನ್ನೂ ತಜ್ಞರು ನೀಡಿದ್ದಾರೆ.

`ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಬೈರಮಂಗಲದ ಸಮಸ್ಯೆ ಕರಾವಳಿಯ ಎಂಡೋಸಲ್ಫಾನ್ ದುರಂತಕ್ಕಿಂತ ಭೀಕರವಾಗಲಿದೆ. ನೀರು ಮತ್ತು ಮಣ್ಣು ಎರಡನ್ನೂ ವಿಷಮಯ ಮಾಡಿಕೊಂಡ ಮೇಲೆ ಬದುಕು ನಡೆಸುವುದಾದರೂ ಹೇಗೆ' ಎಂದು ಪ್ರಶ್ನಿಸುತ್ತಾರೆ ಡಾ. ಎಲೆ ಲಿಂಗರಾಜು.

ಕೈಗಾರಿಕೆಗಳ ಕುರುಡು ನರ್ತನ
ನಾಲ್ಕು ದಶಕಗಳ ಹಿಂದೆ ನಾವು   `ಆಲೆಮನೆ' ಸಿನಿಮಾ ಚಿತ್ರೀಕರಣಕ್ಕೆ ಹೋದಾಗ ಆ ಕೆರೆ ಎಷ್ಟೊಂದು ರಮಣೀಯವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಯಾವುದೋ ಸರೋವರದ ದಂಡೆ ಮೇಲೆ ಓಡಾಡುತ್ತಿರುವಂತೆ ಭಾಸವಾಗುತ್ತಿತ್ತು. ಚಿತ್ರತಂಡದ ಎಲ್ಲ ಸದಸ್ಯರು ಆ ಕೆರೆಯ ಸಿಹಿಯಾದ ನೀರು ಕುಡಿದು ಸಂತಸಪಟ್ಟಿದ್ದೇವೆ. ನಮ್ಮ ಸಿನಿಮಾಕ್ಕೆ ಅತ್ಯಂತ ಮನೋಹರ ದೃಶ್ಯಗಳನ್ನು ಕೊಟ್ಟ ತಾಣವೂ ಅದಾಗಿದೆ. ಬೆಂಗಳೂರು ಪರಿಸರದಲ್ಲೇ ಅತ್ಯಂತ ದೊಡ್ಡದಾದ ಕೆರೆ ಅದು.

ಅದರ ಇಂದಿನ ಸ್ಥಿತಿ ನೋಡಿದಾಗ ದುಃಖ ಉಮ್ಮಳಿಸಿ ಬರುತ್ತದೆ. ಸರ್ಕಾರಗಳ, ಅವುಗಳ ನೇತಾರರ ಹಣದ ದಾಹಕ್ಕೆ ಕೆರೆಯೇ ಬಲಿಯಾಗಿದೆ. ಕೈಗಾರಿಕೆಗಳ ಕುರುಡು ನರ್ತನದಲ್ಲಿ ಯಾವ ಪರಿಸರ ತಾನೇ ಉಳಿದೀತು? ಕಾಲಿಗೆ ಸಿಕ್ಕ ಕೆರೆಗಳನ್ನೆಲ್ಲ ಅವುಗಳು ತುಳಿದುಬಿಟ್ಟಿವೆ. ನಮ್ಮ ಜೀವಿತಾವಧಿಯಲ್ಲಿ ಇನ್ನೂ ಏನೇನು ಕಾಣಲಿಕ್ಕಿದೆಯೋ ಏನೋ?
-ಸುರೇಶ್ ಹೆಬ್ಳೀಕರ್, ಆಲೆಮನೆ ಚಿತ್ರದ ನಾಯಕ, ಪರಿಸರವಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT