ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲೂರ: ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಆಗ್ರಹ

Last Updated 14 ಜೂನ್ 2012, 8:00 IST
ಅಕ್ಷರ ಗಾತ್ರ

ಭಟ್ಕಳ: ಕರ್ನಾಟಕ ಗೃಹಮಂಡಳಿಯು ಭಟ್ಕಳ ತಾಲ್ಲೂಕಿನ ಬೈಲೂರು ಗ್ರಾಮದಲ್ಲಿ 57ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಬುಧವಾರ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ನೂರಾರು ಕೃಷಿಕರು ಇಲ್ಲಿನ ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

`ತಾಲ್ಲೂಕಿನ ಗಡಿ ಗ್ರಾಮವಾದ ಬೈಲೂರು ಬಸ್ತಿಮಕ್ಕಿ ಮಜೀರೆಯಲ್ಲಿ  ಒಟ್ಟು 83 ಸರ್ವೆ ನಂಬರ್‌ಗಳಲ್ಲಿ ಸುಮಾರು 330 ಕುಟುಂಬಗಳು ಕೃಷಿಯಾಧಾರಿತ ಬದುಕು ಸಾಗಿಸುತ್ತಿದೆ. ಈ ಗ್ರಾಮವು ಸಮುದ್ರದ ಅಂಚಿನಲ್ಲಿರುವುದರಿಂದ ಸಿ.ಆರ್.ಝೆಡ್ ವ್ಯಾಪ್ತಿಗೆ ಒಳಪಟ್ಟಿದ್ದು ಮನೆ ನಿರ್ಮಿಸಲು ಸಹ ತೊಂದರೆಯಿದೆ.
 
ಗೃಹಮಂಡಳಿ ಈ ಗ್ರಾಮದಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಜಮೀನುಗಳ ಪೂರ್ವದಿಕ್ಕಿಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ಕೊಂಕಣ ರೈಲ್ವೆ ಹಾದುಹೋಗಿದೆ. ಈಗಾಗಲೇ ಗ್ರಾಮಸ್ಥರು ಸಾಕಷ್ಟು ಜಮೀನನ್ನು ಈ ಎರಡೂ ಯೋಜನೆಗೆ ನೀಡಿದ್ದಾರೆ. ಈಗ ಉಳಿದಿರುವ ಜಮೀನನ್ನೂ ವಶಪಡಿಸಿಕೊಂಡರೆ ಎಲ್ಲರೂ ನಿರ್ಗತಿಕರಾಗಬೇಕಾಗುತ್ತದೆ.
 
ಅಲ್ಲದೇ ಈ ಜಮೀನಿನ ನಡುವೆಯೇ ಎರಡು ಪ್ರಾಚೀನ ಜೈನ ಬಸದಿಗಳು, ಒಂದು ಅಂಗನವಾಡಿ ಕೇಂದ್ರವಿದೆ. ಈ ಜಮೀನು ತೂದಳ್ಳಿ ಮಹಾಸತಿ ದೇವಸ್ಥಾನದ ವ್ಯಾಪ್ತಿಯ ಒಂದು ಭಾಗವೂ ಆಗಿದೆ. ಸುಮಾರು 45 ವಾಸ್ತವ್ಯದ ಮನೆ ಇದೆ. ಬಡ ಕೃಷಿಕರೇ ಇರುವ ಈ ಗ್ರಾಮದಲ್ಲಿನ ಭೂಮಿಯನ್ನು ವಶಪಡಿಸಿಕೊಂಡು ಶ್ರೀಮಂತರಿಗೆ ಗೃಹ ನಿರ್ಮಿಸಿಕೊಡುವುದರಿಂದ ಸಂವಿಧಾನ ಬದ್ಧವಾದ ವಾಸ್ತವ್ಯದ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ~ ಎಂದು ಮನವಿಯಲ್ಲಿ ತಿಳಿಸಲಾಗಿದೆ.

`ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಎರಡು ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿದ್ದರೂ,ಈಗ ಜಂಟಿಸರ್ವೆ ಕಾರ್ಯ ನಡೆಸಲಾಗುತ್ತಿದೆ. ಒಂದು ವೇಳೆ ಪ್ರಕ್ರಿಯೆಯನ್ನು ಕೈಬಿಡದಿದ್ದಲ್ಲಿ ಗ್ರಾಮದಲ್ಲಿರುವ 330 ಕುಟುಂಬಗಳ ಎಲ್ಲಾ ಸದಸ್ಯರೂ ಭೂಮಿಗಾಗಿ ಯಾವುದೇ ರೀತಿಯ ಉಗ್ರ ಹೋರಾಟಕೂ ಸಿದ್ಧರಿದ್ದೇವೆ~ ಎಂದು ಮನವಿಯಲ್ಲಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಶಿರಸ್ತೆದಾರ್ ಗನಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಕಿಶನ್‌ಬಲ್ಸೆ, ಭಾ.ಕಿ. ಸಂಘದ ಅಧ್ಯಕ್ಷ ಈಶ್ವರ ದೊಡ್ಮನೆ ಮುಂತಾದವರು ಉಪಸ್ಥಿತರಿದ್ದರು.

ಬಾಡಿಗೆ ಬಾಕಿ: ಅಂಗಡಿಗೆ ಬೀಗ
ಶಿರಸಿ: ಸಕಾಲದಲ್ಲಿ ಬಾಡಿಗೆ ಪಾವತಿಸಲು ಮಾಲೀಕರು ನಿರಾಕರಿಸಿದ ಅಂಗಡಿಗಳಿಗೆ ನಗರಸಭೆ ಸಿಬ್ಬಂದಿ ಬೀಗ ಜಡಿದ ಘಟನೆ ಬುಧವಾರ ಹಳೆ ನಗರಸಭೆ ಕಟ್ಟಡದಲ್ಲಿ ನಡೆಸಿದೆ.ಒಂದು ವರ್ಷದಿಂದ ನಗರಸಭೆ ಕಟ್ಟಡದಲ್ಲಿ ಬಾಡಿಗೆ ಇದ್ದ ಕೆಲ ಅಂಗಡಿಕಾರರು ಬಾಡಿಗೆ ನೀಡಿರಲಿಲ್ಲ.
 
ಈ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ಕೆ.ಬಿ.ವೀರಾಪುರ ಮತ್ತು ಸಿಬ್ಬಂದಿ ನಗರಸಭೆ ಅಧೀನದ ವಾಣಿಜ್ಯ ಸಂಕೀರ್ಣಗಳಲ್ಲಿ ಬಾಡಿಗೆ ನೀಡದ ಅಂಗಡಿಗಳಿಗೆ ಭೇಟಿ ನೀಡಿ ಬಾಡಿಗೆ ಮೊತ್ತ ಪಾವತಿಸಲು ಮಾಲೀಕರನ್ನು ಒತ್ತಾಯಿಸಿದರು. ಸಂದರ್ಭದಲ್ಲಿ ಬಾಡಿಗೆ ನೀಡಲು ನಿರಾಕರಿಸಿದ ಅಂಗಡಿಗಳಿಗೆ ನಗರಸಭೆ ಸಿಬ್ಬಂದಿ ಬೀಗ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT