ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಪಯ್ಯ ಸ್ಪೀಕರ್ ಸ್ಥಾನ ತೊರೆಯಲಿ

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸುಪ್ರೀಂಕೋರ್ಟ್ ತೀರ್ಪು ನೀಡಿದ ತಕ್ಷಣವೇ ಸ್ಪೀಕರ್ ಹುದ್ದೆ ತೊರೆಯುವ ಮೂಲಕ ರಾಜ್ಯದ ವಿಧಾನಸಭೆಯ ಗೌರವವನ್ನು ಕಾಪಾಡಬೇಕಿತ್ತು. ನಮಗೆ ಸಲಹೆ ನೀಡುವ ಬದಲು ಈಗಲಾದರೂ ಬೋಪಯ್ಯ ಅವರು ಸ್ಪೀಕರ್ ಸ್ಥಾನ ತ್ಯಜಿಸಲಿ~ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಗ್ರಹಿಸಿದರು.


ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಕೆಪಿಸಿಸಿ ಪದಾಧಿಕಾರಿಗಳ ಸಭೆಯ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪ್ರತಿಪಕ್ಷಗಳು ಕಲಾಪದಲ್ಲಿ ಪಾಲ್ಗೊಳ್ಳಬೇಕೆಂದು ವಿಧಾನಸಭೆಯ ಸ್ಪೀಕರ್ ಮನವಿ ಮಾಡಿರುವ ಕುರಿತು ಕೇಳಿದಾಗ ಅವರು ಈ ಉತ್ತರ ನೀಡಿದರು.

ವಿಧಾನಮಂಡಲದ ಕಲಾಪದಲ್ಲಿ ಪಾಲ್ಗೊಳ್ಳುವ ಬಗ್ಗೆ ಪದಾಧಿಕಾರಿಗಳ ಸಭೆಯಲ್ಲೂ ಚರ್ಚೆ ನಡೆಸಲಾಗಿದೆ. ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕೆಪಿಸಿಸಿ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರಿಗೆ ನೀಡಲು ತೀರ್ಮಾನಿಸಲಾಯಿತು~ ಎಂದರು.

ಅಧಿವೇಶನ ಬಹಿಷ್ಕಾರದ ವಿಷಯದಲ್ಲಿ ಕಾಂಗ್ರೆಸ್‌ನ ಬೆಂಬಲ ಕೋರುವುದಿಲ್ಲ ಎಂಬ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, `ನಾವು ಬೆಂಬಲಿಸುವುದಾಗಿ ಹೇಳಿಯೇ ಇಲ್ಲ. ಅವರು ಕೇಳುವ ಪ್ರಶ್ನೆಯೂ ಉದ್ಭವಿಸಿಲ್ಲ. ವಿಧಾನಸಭೆಯ ಒಳಗೆ ಕಾಂಗ್ರೆಸ್ ಮತ್ತು ಜೆಡಿಎಸ್ ವಿಷಯಗಳನ್ನು ಆಧರಿಸಿ ಒಟ್ಟಾಗಿ ಹೋರಾಟ ನಡೆಸಿವೆ. ಆದರೆ ಅಧಿವೇಶನದ ವಿಷಯದಲ್ಲಿ ನಾವು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ~ ಎಂದರು.

ಸಂಘಟನೆ: ಮುಂದಿನ ಮೂರು ತಿಂಗಳ ಕಾಲ ಎಲ್ಲ ಮುಖಂಡರೂ ಒಟ್ಟಾಗಿ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಪಕ್ಷ ಸಂಘಟನೆಯ ಕಾರ್ಯವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಪಕ್ಷ ಸಂಘಟನೆಗೆ ಒಂದು ಸಾಂಸ್ಥಿಕ ಸ್ವರೂಪ ನೀಡುವ ಬಗ್ಗೆ ಚಿಂತನೆ ನಡೆಸಿದ್ದು, ಗುರುವಾರ ನಡೆಯುವ ಸಾಮಾನ್ಯ ಸದಸ್ಯರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಪಕ್ಷ ಸಂಘಟನೆ ಜೊತೆಯಲ್ಲೇ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸವನ್ನೂ ಮಾಡಲಾಗುವುದು. ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿರುವ `ಸಾಧನಾ ಕೈಪಿಡಿ~ಯಲ್ಲಿರುವ ಸುಳ್ಳುಗಳನ್ನು ಜನರಿಗೆ ತಿಳಿಸುತ್ತೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಪ್ರಗತಿ ಕುಂಠಿತವಾಗಿರುವ ಬಗ್ಗೆಯೂ ಜನಜಾಗೃತಿ ಮೂಡಿಸಲಾಗುವುದು ಎಂದರು.

ಕಠಿಣ ಕ್ರಮ: ಪಕ್ಷದಲ್ಲಿ ಅಶಿಸ್ತಿನ ಘಟನೆಗಳು ಹೆಚ್ಚುತ್ತಿದ್ದು, ಶಿಸ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ. ಪ್ರತಿಭಟನೆ ನಡೆಸಲು ಲಂಚ ಪಡೆದ ಆರೋಪದ ಮೇಲೆ ಬಂಧಿತರಾಗಿರುವ ಹುಬ್ಬಳ್ಳಿಯ ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಶಿಸ್ತು ಸಮಿತಿ ತನಿಖೆಯ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

`ಇದೇ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಧಾರವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತ್ ವಿರುದ್ಧವೂ ಕ್ರಮ ಜರುಗಿಸುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಪೂರ್ಣ ಮಾಹಿತಿ ಲಭ್ಯವಾದ ಬಳಿಕ ಕ್ರಮ ಕೈಗೊಳ್ಳಲಾಗುವುದು~ ಎಂದು ಉತ್ತರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT