ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋರ್ಡ್‌ರೂಂನಲ್ಲಿ ವನಿತೆ ಅಲ್ಪಸಂಖ್ಯಾತೆ!

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಸಿಂಗಪುರ(ಪಿಟಿಐ): `ಭಾರತ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ಕಾರ್ಪೊರೇಟ್ ಕಂಪೆನಿಗಳಲ್ಲಿ ಈಗಲೂ ಪುರುಷ ಪ್ರಧಾನ ವ್ಯವಸ್ಥೆಯೇ ಮುಂದುವರೆದಿದೆ. 21ನೇ ಶತಮಾನದ ಈ ಸಂದರ್ಭದಲ್ಲೂ ಕಂಪೆನಿಗಳ ನಿರ್ದೇಶಕ ಮಂಡಳಿಯಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರಿದ್ದಾರೆ~! ಕಂಪೆನಿಗಳ ಬೋರ್ಡ್‌ರೂಂಗಳಲ್ಲಿ ವನಿತೆಯರಿಲ್ಲದ ವಿಚಾರದತ್ತ ಇತ್ತೀಚಿನ ಸಮೀಕ್ಷೆಯೊಂದು ಗಮನ ಸೆಳೆದಿದೆ.

ಸದ್ಯ ಏಷ್ಯಾದಲ್ಲಿನ ಕಂಪೆನಿಗಳ ನಿರ್ದೇಶಕ ಮಂಡಳಿಯಲ್ಲಿ ಶೇ 8ರಷ್ಟು ಮಹಿಳೆಯರಿದ್ದರೆ, ಪುರುಷ ಪ್ರಾಧಾನ್ಯ ಶೇ 92ರಷ್ಟು! ಯೂರೋಪ್ (ಶೇ 10)  ಮತ್ತು ಅಮೆರಿಕಕ್ಕೆ (ಶೇ 14)  ಹೋಲಿಸಿದರೆ ಏಷ್ಯಾದಲ್ಲಿ `ನಿರ್ದೇಶಕಿ~ಯರ ಪ್ರಾತಿನಿಧ್ಯ ತುಂಬಾ ಕಡಿಮೆ ಎಂದು ಜಾಗತಿಕ ಉದ್ಯಮ ಸಲಹಾ ಸಂಸ್ಥೆ `ಮೆಕೆನ್ಸಿ ಅಂಡ್ ಕಂಪೆನಿ~ಯ ಸಮೀಕ್ಷೆ ಸ್ಪಷ್ಟಪಡಿಸಿದೆ. ಈ ವರದಿ ಮಂಗಳವಾರ ಪ್ರಕಟಗೊಳ್ಳಲಿದೆ.

ಷೇರುಪೇಟೆಯಲ್ಲಿ ನೋಂದಾಯಿಸಿಕೊಂಡಿರುವ 744 ಕಂಪೆನಿಗಳಲ್ಲಿನ 1,500ಕ್ಕೂ ಅಧಿಕ `ಹಿರಿಯ ವ್ಯವಸ್ಥಾಪಕಿ~ಯರನ್ನು ಸಮೀಕ್ಷಾ ತಂಡ ಸಂದರ್ಶಿಸಿದೆ. ನಿರ್ದೇಶಕ ಮಂಡಳಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸಿದರೆ ಕಂಪೆನಿಯ ಹಣಕಾಸು ಸಾಧನೆ ಮತ್ತು ಆಡಳಿತಾತ್ಮಕ ಆರೋಗ್ಯ ಕೂಡ ಚೇತರಿಸುತ್ತದೆ ಎಂದು `ಮೆಕೆನ್ಸಿ~ ಸಮೀಕ್ಷೆ ಆಧರಿಸಿ `ವಾಲ್ ಸ್ಟ್ರೀಟ್ ಜರ್ನಲ್~ ವರದಿ ಮಾಡಿದೆ.

ಮಹಿಳಾ `ಪ್ರತಿಭೆ~ ವ್ಯರ್ಥವಾಗುವುದಕ್ಕೆ ಇದೊಂದು ದೊಡ್ಡ ಉದಾಹರಣೆ. ಏಷ್ಯಾದಲ್ಲಿನ ಪದವೀಧರರಲ್ಲಿ ಮಹಿಳೆಯರ ಸಂಖ್ಯೆ ಅರ್ಧಕ್ಕಿಂತಲೂ ಹೆಚ್ಚಿದೆ. ಆದರೆ, ಕಾರ್ಪೊರೇಟ್ ಸಂಸ್ಥೆಗಳು ಅವರ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಲೇ ಇಲ್ಲ ಎಂದು ವರದಿ ಗಮನ ಸೆಳೆದಿದೆ.

ಆಸ್ಟ್ರೇಲಿಯ, ಹಾಂಕಾಂಗ್ ಮತ್ತು ಚೀನಾದ ಕಂಪೆನಿಗಳಲ್ಲಿನ ನಿರ್ದೇಶಕ ಮಂಡಳಿಯಲ್ಲಿ ಮಹಿಳೆಯರು ಕ್ರಮವಾಗಿ ಶೇ 13, ಶೇ 9 ಮತ್ತು ಶೇ 8ರಷ್ಟು ಸ್ಥಾನ ಪಡೆದಿದ್ದರೆ, ಭಾರತ, ದಕ್ಷಿಣ ಕೋರಿಯ ಮತ್ತು ಜಪಾನ್‌ನಲ್ಲಿ ಈ ಸಂಖ್ಯೆ ಕನಿಷ್ಠ ಮಟ್ಟದಲ್ಲಿದೆ. 

`ಕುಟುಂಬ ಮತ್ತು ಉದ್ಯೋಗ~ ಎರಡನ್ನೂ ಒಟ್ಟಿಗೆ ನಿಭಾಯಿಸಿಕೊಂಡು ಹೋಗಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಏಷ್ಯಾದಲ್ಲಿ ಅನೇಕ ಮಹಿಳೆಯರು ಉನ್ನತ ಹುದ್ದೆಗಳನ್ನು ತ್ಯಜಿಸಿದ್ದಾರೆ ಎಂಬುದನ್ನೂ ಸಮೀಕ್ಷೆ ಕಂಡುಕೊಂಡಿದೆ.

ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಸಂಘಟನೆ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ ಸಾಮಥ್ಯ ಹೆಚ್ಚಿದೆ. ಆದರೆ, ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳುವಲ್ಲಿ ಪುರುಷರು ಮಹಿಳೆಯರಿಗಿಂತ ಮುಂದಿದ್ದಾರೆ ಎಂದು `ಮೆಕೆನ್ಸಿ~ ಮುಖ್ಯ ವಿಶ್ಲೇಷಕ ವಾಂಗ್ ಜಿನ್ ಅಭಿಪ್ರಾಯಪಟ್ಟಿದ್ದಾರೆ.

ಕಂಪೆನಿಯ ಪ್ರಮುಖ ಹುದ್ದೆಗಳಿಗೆ ಬಡ್ತಿ ಪಡೆಯುತ್ತಿದ್ದಂತೆ ಅನೇಕ ಮಹಿಳೆಯರು ಕೌಟುಂಬಿಕ ಕಾರಣಗಳಿಂದ ಸ್ವಯಂ ನಿವೃತ್ತಿ ಪಡೆಯುತ್ತಿರುವುದು ಸಾಮಾನ್ಯವಾಗಿದೆ. ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟಾರೆ ಮಹಿಳೆಯರ ಸಂಖ್ಯೆ ಕಡಿಮೆ ಇರುವುದೂ ಇದಕ್ಕೆ ಮತ್ತೊಂದು ಕಾರಣ ಎನ್ನುತ್ತಾರೆ ವಾಂಗ್.

ಪ್ರಪಂಚದಲ್ಲಿಯೇ ಕಾರ್ಮಿಕ ವಲಯದಲ್ಲಿ ಮಹಿಳೆಯರ ಸಹಭಾಗಿತ್ವ ಅತ್ಯಂತ ಕಡಿಮೆ ಇರುವ ದೇಶ ಭಾರತ ಎಂದು ಸಮೀಕ್ಷೆ ಬೊಟ್ಟು ಮಾಡಿದೆ. ತೈವಾನ್ ಮತ್ತು ಮಲೇಷಿಯಾಗಳಲ್ಲಿ ಶೇ 50ರಷ್ಟು ಮಹಿಳೆಯರು ಕಾರ್ಮಿಕ ವಲಯದಲ್ಲಿ ಇದ್ದರೆ, ಭಾರತದಲ್ಲಿ ಈ ಪ್ರಮಾಣ ಕೇವಲ ಶೇ 3ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT