ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌಲರ್‌ಗಳ ಮೇಲಿದೆ ನಿರೀಕ್ಷೆಯ ಹೊರೆ

ರಣಜಿ: ಸಂಕಷ್ಟದಲ್ಲೂ ಚೆಂದದ ಆಟವಾಡಿದ ರಾಹುಲ್‌; ಕರ್ನಾಟಕದ ಗೆಲುವಿಗೆ ಬೇಕಿದೆ 9 ವಿಕೆಟ್‌
Last Updated 10 ಜನವರಿ 2014, 19:32 IST
ಅಕ್ಷರ ಗಾತ್ರ

ಬೆಂಗಳೂರು: ಆರಂಭದಲ್ಲಿ ಎದುರಾದ ಸಂಕಷ್ಟವನ್ನು ಮಂಜಿನಂತೆ ಕರಗಿಸಿದ ಕೆ.ಎಲ್‌. ರಾಹುಲ್‌ಗೆ ಶಹಬ್ಬಾಸ್‌್ ಹೇಳಲೇಬೇಕು. ಅವರ ಆಟ ಕರ್ನಾಟಕದ ಸೆಮಿಫೈನಲ್‌ ಪ್ರವೇಶದ ಆಸೆಯನ್ನು ಹೆಚ್ಚಿಸಿದೆ. ಈ ಕನಸು ನನಸಾಗಬೇಕಾದರೆ, ಎದುರಾಳಿ ಉತ್ತರ ಪ್ರದೇಶ ತಂಡವನ್ನು 277 ರನ್‌ ಒಳಗೆ ಕಟ್ಟಿಹಾಕಬೇಕು.

ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯ ನಾಲ್ಕೇ ದಿನದಲ್ಲಿ ಮುಗಿಯುವುದು ಬಹುತೇಕ ಖಚಿತವಾಗಿದೆ. ಆದರೆ, ಉಭಯ ತಂಡಗಳಿಗೂ ಗೆಲುವಿನ ಅವಕಾಶವಿದೆ. ಒಟ್ಟಿನಲ್ಲಿ ಕುತೂಹಲದ ಗಣಿಯಾಗಿರುವ ಚಿನ್ನಸ್ವಾಮಿ ಕ್ರೀಡಾಂಗಣ ಕ್ರಿಕೆಟ್ ಪ್ರೇಮಿಗಳ ಚಿತ್ತವನ್ನು ತನ್ನತ್ತ ಸೆಳೆದುಕೊಂಡಿದೆ.

ಗುರುವಾರದ ಅಂತ್ಯಕ್ಕೆ ಉತ್ತರ ಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 70.3 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 221 ರನ್‌ ಕಳೆದುಕೊಂಡಿತ್ತು. ಈ ತಂಡದ ನಾಯಕ ಆರ್‌.ಪಿ. ಸಿಂಗ್‌ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಶುಕ್ರವಾರ ಬೆಳಿಗ್ಗೆ ಒಂದೂ ಎಸೆತ ಆಡದೇ ಡಿಕ್ಲೇರ್‌ ಮಾಡಿಕೊಂಡರು. ಇದರಿಂದ ಆತಿಥೇಯರು 128 ರನ್‌ಗಳ ಮುನ್ನಡೆ ತಮ್ಮದಾಗಿಸಿಕೊಂಡರು. ಎರಡನೇ ಇನಿಂಗ್ಸ್‌ನಲ್ಲಿ ವಿನಯ್‌ ಬಳಗ 66.5 ಓವರ್‌ಗಳಲ್ಲಿ 204 ರನ್‌ ಕಲೆ ಹಾಕಿತು. ಗೆಲುವಿಗೆ ಒಟ್ಟು 333 ರನ್ ಗುರಿ ಪಡೆದ ಉತ್ತರ ಪ್ರದೇಶ ಶುಕ್ರವಾರದ ಅಂತ್ಯಕ್ಕೆ 18 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 55 ರನ್‌ ಗಳಿಸಿದೆ.

ಎರಡನೇ ಇನಿಂಗ್ಸ್‌ನಲ್ಲೂ ತಪ್ಪದ ಸಂಕಷ್ಟ: ಮೊದಲ ಇನಿಂಗ್ಸ್‌ನಲ್ಲಿ ಅನುಭವಿಸಿದ್ದ ಆರಂಭಿಕ ಆಘಾತವನ್ನು ಕರ್ನಾಟಕ ಮತ್ತೊಮ್ಮೆ ಎದುರಿಸಬೇಕಾಯಿತು. ಹಿಂದಿನ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ರಾಬಿನ್‌ ಉತ್ತಪ್ಪ ಸೊನ್ನೆ ಸುತ್ತಿದರು. ಆರ್‌. ಸಮರ್ಥ್‌ ಗಾಯಗೊಂಡಿದ್ದ ಕಾರಣ ವಿನಯ್‌ ಕುಮಾರ್‌  ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿ 9 ರನ್‌ಗಳನ್ನಷ್ಟೇ ಗಳಿಸಿದರು.

ಅಬ್ರಾರ್‌ ಖಾಜಿ ಮತ್ತು ಮನೀಷ್‌ ಪಾಂಡೆ ಕೂಡಾ ಕ್ರೀಸ್‌ಗೆ ಬಂದಷ್ಟೇ ವೇಗವಾಗಿ ವಾಪಸ್ಸಾದರು. ಮೊದಲ ಮೂರು ವಿಕೆಟ್ ಕಳೆದುಕೊಂಡಾಗ ಆತಿಥೇಯ  ತಂಡದ ಮೊತ್ತ 15 ಆಗಿತ್ತು. ವಿಪರ್ಯಾಸವೆಂದರೆ, ಮೊದಲ ಇನಿಂಗ್ಸ್‌ನಲ್ಲಿ ಇಷ್ಟೇ ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು!

ರಾಹುಲ್ ಏಕಾಂಗಿ ಹೋರಾಟ: ಒಂದು ಹಂತದಲ್ಲಿ 33 ರನ್‌ ಗಳಿಸುವಷ್ಟರಲ್ಲಿ ಕರ್ನಾಟಕದ ನಾಲ್ಕು ವಿಕೆಟ್‌ ಪತನವಾಗಿದ್ದವು.

ಆದರೆ, ಆರಂಭಿಕ ಬ್ಯಾಟ್ಸ್‌ಮನ್‌ ರಾಹುಲ್‌ ಮಾತ್ರ ಅಲುಗಾಡಲಿಲ್ಲ. ತೀರಾ ಕೆಳಮಟ್ಟದಲ್ಲಿ ನುಗ್ಗಿಬರುತ್ತಿದ್ದ ಚೆಂಡನ್ನು ಜಾಗರೂಕತೆಯಿಂದ ಎದುರಿಸಿದರು. ಜೊತೆಗೆ ರನ್‌ ಗಳಿಸಲು ಅವಸರಿಸದೇ ಕ್ರೀಸ್‌ಗೆ ಹೊಂದಿಕೊಳ್ಳಲು ಪ್ರಯತ್ನಿಸಿದರು.

ಆರಂಭದಲ್ಲಿ ಅವರು ತೋರಿದ ತಾಳ್ಮೆಯ ಫಲವಾಗಿ ನಂತರ ಸರಾಗವಾಗಿ ರನ್‌ಗಳು ಹರಿದು ಬಂದವು. ಐದನೇ ವಿಕೆಟ್‌ಗೆ ಕರುಣ್‌ ನಾಯರ್‌ (25, 43 ನಿಮಿಷ, 30 ಎಸೆತ, 5 ಬೌಂಡರಿ) ಜೊತೆ ಸೇರಿ 40 ರನ್‌ ಕಲೆ ಹಾಕಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಕರುಣ್‌ 26ನೇ ಓವರ್‌ನಲ್ಲಿ ಅಂಕಿತ್‌ ರಜಪೂತ್‌ ಎಸೆತದಲ್ಲಿ ಔಟ್‌ ಆದರು. ಈ ವೇಳೆ ಪರದಾಡುತ್ತಿದ್ದ ತಂಡಕ್ಕೆ ಆಪದ್ಭಾಂದವನಂತೆ ಬಂದಿದ್ದು ಉಪನಾಯಕ ಸಿ.ಎಂ. ಗೌತಮ್‌.

ಮೊದಲ ಇನಿಂಗ್ಸ್‌ನ ಶತಕ ವೀರ ಗೌತಮ್‌ 36 ರನ್‌ ಗಳಿಸಿ ರಾಹುಲ್‌ಗೆ ಉತ್ತಮ ಬೆಂಬಲ ನೀಡಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ ಈ ಜೋಡಿ 22.5 ಓವರ್‌ಗಳಲ್ಲಿ 63 ರನ್‌ ಕಲೆ ಹಾಕಿತು. ಆದರೆ, ಗೌತಮ್‌ ಸ್ವ್ಕಾಯರ್‌ ಲೆಗ್‌ ಬಳಿ ಅನಗತ್ಯ ಒಂದು ರನ್‌ ಕಬಳಿಸಲು ಮುಂದಾದರು. ಮುಕುಲ್‌ ದಾಗರ್‌ ಚುರುಕಿನ ಫೀಲ್ಡಿಂಗ್‌ ಮಾಡಿ ಗೌತಮ್‌ ಅವರನ್ನು ರನ್‌ ಔಟ್‌ ಬಲೆಗೆ ಕೆಡವಿದರು.

ಮತ್ತೆ ತಪ್ಪಿದ ಶತಕ: ಶತಕ ಗಳಿಸುವ ಹಾದಿಯಲ್ಲಿ ರಾಹುಲ್‌ಗೆ ಅದೃಷ್ಟ ಸರಿಯಿಲ್ಲವೆಂದು ಕಾಣುತ್ತದೆ. ಅವರು ಮೂರನೇ ಸಲ ಶತಕದಂಚಿನಲ್ಲಿ ಎಡವಿದರು. ಲೀಗ್‌  ಪಂದ್ಯಗಳಲ್ಲಿ ಹರಿಯಾಣ (98) ಮತ್ತು ಪಂಜಾಬ್‌ (92) ಎದುರು  ಔಟ್‌ ಆಗಿದ್ದರು. ಆದರೆ, ಇಲ್ಲಿ ಔಟಾಗದಿದ್ದರೂ ಅವರಿಗೆ ಶತಕ ಗಳಿಸಲು ಸಾಧ್ಯವಾಗಲಿಲ್ಲ.

ಆರಂಭಿಕ ಕ್ರಮಾಂಕದಲ್ಲಿ ಬಂದು ಎಲ್ಲ ಬೌಲರ್‌ಗಳನ್ನು ಎದುರಿಸಿದ ರಾಹುಲ್‌ಗೆ ಇನ್ನೊಂದು ತುದಿಯ ಬ್ಯಾಟ್ಸ್‌ಮನ್‌ನಿಂದ ಸಹಕಾರ ಸಿಗಲಿಲ್ಲ. ಸ್ಕ್ವಾಯರ್‌ ಲೆಗ್‌ ಬಳಿ ಮೂರು, ಮಿಡ್‌ ವಿಕೆಟ್‌ ಬಳಿ ಎರಡು ಮತ್ತು ಫೆನ್‌ ಲೆಗ್‌ ನಾಲ್ಕು ಮೂರು ಸೊಗಸಾದ ಬೌಂಡರಿಗಳನ್ನು ಬಾರಿಸಿ 500ಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಕ್ರಿಕೆಟ್‌ ಪ್ರೇಮಿಗಳನ್ನು ರಂಜಿಸಿದರು.

ಐದು ಗಂಟೆ ಕ್ರೀಸ್‌ನಲ್ಲಿದ್ದ ರಾಹುಲ್‌ 188 ಎಸೆತಗಳಲ್ಲಿ 13 ಬೌಂಡರಿ ಸೇರಿದಂತೆ 92 ರನ್‌ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಅವರು ಕರ್ನಾಟಕದ ರಣಜಿ ಇತಿಹಾಸದಲ್ಲಿ ವಿಶಿಷ್ಟ ಸಾಧನೆ ಮಾಡಿದರು. ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಬಂದು ಅಜೇಯರಾಗಿ ಉಳಿದ ರಾಜ್ಯದ ಮೊದಲ ಆಟಗಾರ ಎನ್ನುವ ಕೀರ್ತಿ ಪಡೆದರು.

ಗೌತಮ್‌ ಔಟಾದ ನಂತರ ಬಂದ ಶ್ರೇಯಸ್‌ ಗೋಪಾಲ್‌ (9), ಆರ್‌. ಸಮರ್ಥ್‌ (6) ತುಂಬಾ ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ, ಅಭಿಮನ್ಯು ಮಿಥುನ್‌ ಮೂರು ಬೌಂಡರಿ ಸೇರಿದಂತೆ 19 ರನ್‌ ಗಳಿಸಿದರು. ಬೌಂಡರಿ ಬಾರಿಸುವ ಹುಮ್ಮಸ್ಸಿನಲ್ಲಿದ್ದ ಮಿಥುನ್‌ ಉತ್ತರ ಪ್ರದೇಶದ ಅಲಿ ಮುರ್ತಜಾ ತೋರಿದ ‘ಖೆಡ್ಡಾ’ದಲ್ಲಿ ಬಿದ್ದರು. ಗಾಯಗೊಂಡಿದ್ದ ಶರತ್‌ ಕೊನೆಯ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಬಂದು ಎದುರಿಸಿದ ಮೊದಲ ಎಸೆತದಲ್ಲಿಯೇ ಎಲ್‌ಬಿ ಬಲೆಯಲ್ಲಿ ಬಂದಿಯಾದರು.

ಪ್ರಭಾವಿಯಾದ ಮುರ್ತಜಾ: ಕರ್ನಾಟಕ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಶ್ರೇಯ ಅಲಿ ಮುರ್ತ ಜಾಗೆ ಸಲ್ಲಬೇಕು. ಮೊದಲ ಇನಿಂಗ್ಸ್‌ನಲ್ಲಿ ಎರಡು ವಿಕೆಟ್‌ ಪಡೆದಿದ್ದ ಈ ಬೌಲರ್‌ ಶುಕ್ರವಾರ ಆರು ವಿಕೆಟ್‌ ಉರುಳಿಸಿದರು.

ಯಾರಿಗೆ ಗೆಲುವಿನ ತೋರಣ?: ಗೆಲುವಿಗೆ 333 ರನ್‌ ಗುರಿ ಪಡೆದು ಕ್ರೀಸ್‌ಗೆ ಇಳಿದ ಉತ್ತರ ಪ್ರದೇಶ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದಿದೆ.
ತನ್ಮಯ್‌ ಶ್ರೀವಾತ್ಸವ್‌ (ಬ್ಯಾಟಿಂಗ್‌ 23) ಮತ್ತು ಮುಕುಲ್‌ ದಾಗರ್‌ (23) ಮೊದಲ ವಿಕೆಟ್‌ಗೆ 53 ರನ್‌ ಕಲೆ ಹಾಕಿದ್ದಾರೆ. ದಿನದಾಟ ಮುಗಿಯಲು ಒಂದು ಓವರ್‌ ಬಾಕಿ ಇದ್ದಾಗ ಶ್ರೇಯಸ್‌ ಗೋಪಾಲ್‌ ಸ್ಪಿನ್‌ ಮೋಡಿಯಿಂದ ಮುಕಲ್‌ ಅವರನ್ನು ಔಟ್‌ ಮಾಡಿದರು.

ಉಭಯ ತಂಡಗಳು ಸೆಮಿಫೈನಲ್‌ ಪ್ರವೇಶಿಸುವ ಆಸೆ ಹೊಂದಿವೆ. ಆದರೆ, ಪ್ರತಿ ಅವಧಿಯಲ್ಲೂ ಪಿಚ್‌ ದಿಕ್ಕು ಬದಲಿಸುತ್ತಿದೆ. ಆದ್ದರಿಂದ ಗೆಲುವಿನ ತೋರಣ ಕಟ್ಟುವ ಅವಕಾಶ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಗರಿಗೆದರಿದೆ.

                                                     ಸ್ಕೋರ್ ವಿವರ 

ಕರ್ನಾಟಕ ಮೊದಲ ಇನಿಂಗ್ಸ್‌ 100.5 ಓವರ್‌ಗಳಲ್ಲಿ 349

ಉತ್ತರ ಪ್ರದೇಶ ಪ್ರಥಮ ಇನಿಂಗ್ಸ್‌ 70.3 ಓವರ್‌ಗಳಲ್ಲಿ 9 ವಿಕೆಟ್‌ಗೆ 221ಡಿಕ್ಲೇರ್ಡ್‌

ಕರ್ನಾಟಕ ದ್ವಿತೀಯ ಇನಿಂಗ್ಸ್‌ 66.5 ಓವರ್‌ಗಳಲ್ಲಿ 204
ರಾಬಿನ್‌ ಉತ್ತಪ್ಪ ಎಲ್‌ಬಿಡಬ್ಲ್ಯು ಬಿ ಅಂಕಿತ್‌ ರಜಪೂತ್‌  00
ಕೆ.ಎಲ್‌. ರಾಹುಲ್‌ ಔಟಾಗದೆ  92
ಆರ್‌. ವಿನಯ್‌ ಕುಮಾರ್‌ ಎಲ್‌ಬಿಡಬ್ಲ್ಯು ಬಿ ಅಲಿ ಮುರ್ತಜಾ  09
ಅಬ್ರಾರ್‌ ಖಾಜಿ ಸಿ ಏಕಲವ್ಯ ದ್ವಿವೇದಿ ಬಿ ಅಲಿ ಮುರ್ತಜಾ  00
ಮನೀಷ್‌ ಪಾಂಡೆ ಸಿ ಅಲಿ ಮುರ್ತಜಾ ಬಿ ಅಮಿತ್‌ ಮಿಶ್ರಾ  06
ಕರುಣ್‌ ನಾಯರ್‌ ಸಿ ಮುಕುಲ್‌ ದಾಗರ್‌ ಬಿ ಅಂಕಿತ್‌ ರಜಪೂತ್‌  25
ಸಿ.ಎಂ. ಗೌತಮ್‌ ರನ್‌ಔಟ್‌ (ಮುಕುಲ್‌ ದಾಗರ್‌/ಏಕಲವ್ಯ ದ್ವಿವೇದಿ)  36
ಶ್ರೇಯಸ್‌ ಗೋಪಾಲ್‌ ಸಿ ಮುಕುಲ್‌ ದಾಗರ್‌ ಬಿ ಅಲಿ ಮುರ್ತಜಾ  09
ಆರ್‌. ಸಮರ್ಥ್‌ ಎಲ್‌ಬಿಡಬ್ಲ್ಯು ಬಿ ಅಲಿ ಮುರ್ತಜಾ  06
ಅಭಿಮನ್ಯು ಮಿಥುನ್‌ ಬಿ ಅಲಿ ಮುರ್ತಜಾ  19
ಎಚ್‌.ಎಸ್‌. ಶರತ್‌ ಎಲ್‌ಬಿಡಬ್ಲ್ಯು ಬಿ ಅಲಿ ಮುರ್ತಜಾ  00
ಇತರೆ: (ಬೈ-1, ಲೆಗ್‌ ಬೈ-1)  02
ವಿಕೆಟ್‌ ಪತನ: 1-0 (ಉತ್ತಪ್ಪ; 0.6), 2-11 (ವಿನಯ್‌; 9.4), 3-15 (ಖಾಜಿ; 11.2), 4-33 (ಪಾಂಡೆ; 15.4), 5-73 (ಕರುಣ್‌; 25.3), 6-136 (ಗೌತಮ್‌; 48.2), 7-160 (ಶ್ರೇಯಸ್‌; 56.4), 8-178 (ಸಮರ್ಥ್‌; 60.4), 9-204 (ಮಿಥುನ್‌; 66.4), 10-204 (ಶರತ್‌; 66.5).
ಬೌಲಿಂಗ್‌: ಅಂಕಿತ್‌ ರಜಪೂತ್‌ 17-9-30-2, ಅಮಿತ್‌ ಮಿಶ್ರಾ 16-4-55-1, ಅಲಿ ಮುರ್ತಜಾ 16.5-2-64-6, ಪಿಯೂಷ್‌ ಚಾವ್ಲಾ 17-4-53-0.

ಉತ್ತರ ಪ್ರದೇಶ ಎರಡನೇ ಇನಿಂಗ್ಸ್‌ 18 ಓವರ್‌ಗಳಲ್ಲಿ 1 ವಿಕೆಟ್‌ಗೆ 55
ತನ್ಮಯ್‌ ಶ್ರೀವಾತ್ಸವ್‌ ಬ್ಯಾಟಿಂಗ್‌  23
ಮುಕುಲ್‌ ದಾಗರ್‌ ಸಿ ರಾಬಿನ್‌ ಉತ್ತಪ್ಪ ಬಿ ಶ್ರೇಯಸ್‌ ಗೋಪಾಲ್‌  23
ಅಲಿ ಮುರ್ತಜಾ ಬ್ಯಾಟಿಂಗ್‌  02
ಇತರೆ: (ಬೈ-4, ಲೆಗ್‌ ಬೈ-3) 07
ವಿಕೆಟ್‌ ಪತನ: 1-53 (ಮುಕುಲ್; 16.2).
ಬೌಲಿಂಗ್‌: ವಿನಯ್‌ ಕುಮಾರ್‌ 8-3-18-0, ಅಭಿಮನ್ಯು ಮಿಥುನ್‌ 7-1-25-0, ರಾಬಿ ನ್ ಉತ್ತಪ್ಪ 1-0-2-0, ಶ್ರೇಯಸ್‌ ಗೋಪಾಲ್‌1-0-3-1, ಅಬ್ರಾರ್‌ ಖಾಜಿ 1-1-0-0

ಇತರ ಕ್ವಾರ್ಟರ್‌ ಫೈನಲ್‌ ಪಂದ್ಯಗಳ ಸಂಕ್ಷಿಪ್ತ ಸ್ಕೋರ್‌
*ಕೋಲ್ಕತ್ತ: ಬಂಗಾಳ ಮೊದಲ ಇನಿಂಗ್ಸ್‌ 101.5 ಓವರ್‌ಗಳಲ್ಲಿ 317 ಮತ್ತು 51  ಓವರ್‌ಗಳಲ್ಲಿ 4 ವಿಕೆಟ್‌ಗೆ 133 (ಶೋಭಮಯ್‌ ದಾಸ್‌ 19, ವೃದ್ಧಿಮಾನ್‌ ಸಹಾ ಬ್ಯಾಟಿಂಗ್‌ 30, ಲಕ್ಷ್ಮಿ ರತನ್‌ ಶುಕ್ಲಾ ಬ್ಯಾಟಿಂಗ್‌ 63; ಅನುರೀತ್‌ ಸಿಂಗ್‌ 41ಕ್ಕೆ3). ರೈಲ್ವೇಸ್‌ ಪ್ರಥಮ ಇನಿಂಗ್ಸ್‌ 93.3 ಓವರ್‌ಗಳಲ್ಲಿ 314.

*ಮುಂಬೈ: ಮುಂಬೈ ಮೊದಲ ಇನಿಂಗ್ಸ್‌ 116.3 ಓವರ್‌ಗಳಲ್ಲಿ 402 ಮತ್ತು 38.1 ಓವರ್‌ಗಳಲ್ಲಿ 129 (ಆದಿತ್ಯ ತಾರೆ 16, ಸೂರ್ಯಕುಮಾರ್‌ ಯಾದವ್‌ 33, ಇಕ್ಬಾಲ್‌ ಅಬ್ದುಲ್ಲಾ 27, ಶಾರ್ದುಲ್‌ ಠಾಕೂರ್‌ 33; ಸಮದ್‌ ಫಲ್ಹಾ 45ಕ್ಕೆ3, ಅನುಪಮ್‌ ಸಂಕ್ಲೇಚಾ 57ಕ್ಕೆ4, ಶ್ರೀಕಾಂತ್‌ ಮುಂದೆ 26ಕ್ಕೆ3).
ಮಹಾರಾಷ್ಟ್ರ 84.3 ಓವರ್‌ಗಳಲ್ಲಿ 280 ಹಾಗೂ ದ್ವಿತೀಯ ಇನಿಂಗ್ಸ್‌ 8.4 ಓವರ್‌ಗಳಲ್ಲಿ 1 ವಿಕೆಟ್‌ಗೆ 28. (ಹರ್ಷದ್‌ ಖಾಡೇವಾಲೆ  ಬ್ಯಾಟಿಂಗ್‌ 6; ಜಹೀರ್ ಖಾನ್‌ 5ಕ್ಕೆ1).

*ವಡೋದರ: ಪಂಜಾಬ್‌ ಮೊದಲ ಇನಿಂಗ್ಸ್‌ 81.2 ಓವರ್‌ಗಳಲ್ಲಿ 304 ಮತ್ತು 72. ಓವರ್‌ಗಳಲ್ಲಿ 296. (ಯುವರಾಜ್‌ ಸಿಂಗ್‌ 40, ಮನ್‌ದೀಪ್‌ ಸಿಂಗ್‌ 101, ಗುರುಕೀರತ್‌ ಸಿಂಗ್‌ 66, ಮನ್‌ಪ್ರೀತ್‌ ಗೋನಿ 31; ಉಮರ್‌ ನಜೀರ್‌ 72ಕ್ಕೆ2, ಪರ್ವೇಜ್‌ ರಸೂಲ್‌ 58ಕ್ಕೆ5).  ಜಮ್ಮು ಮತ್ತು ಕಾಶ್ಮೀರ  76.4 ಓವರ್‌ಗಳಲ್ಲಿ 277 ಹಾಗೂ ಎರಡನೇ ಇನಿಂಗ್ಸ್‌ 20  ಓವರ್‌ಗಳಲ್ಲಿ 77ಕ್ಕೆ2. (ಅದಿಲ್‌ ರಿಷಿ 34, ಹರ್‌ದೀಪ್ ಬ್ಯಾಟಿಂಗ್‌ 20; ಮನ್‌ಪ್ರೀತ್ ಗೋನಿ 18ಕ್ಕೆ1, ವಿಕ್ರಮ್‌ ಸಿಂಗ್‌ 16ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT