ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿ: ಮಾಹಿತಿಗೆ ಸೂಚನೆ

Last Updated 1 ಜೂನ್ 2013, 7:15 IST
ಅಕ್ಷರ ಗಾತ್ರ

ಶಿವಮೊಗ್ಗ: ಕೇಂದ್ರ ಸರ್ಕಾರದ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಯೋಜನೆ ಬಗ್ಗೆ ಬ್ಯಾಂಕ್‌ಗಳು ಗ್ರಾಹಕರಿಗೆ ಅಗತ್ಯ ಮಾಹಿತಿ ಹಾಗೂ ಪ್ರಚಾರ ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದರು. 

ನಗರದ ಕೆನರಾ ಬ್ಯಾಂಕ್ ಲೀಡ್ ಬ್ಯಾಂಕ್ ಕಚೇರಿಯಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ನೇರ ಸಹಾಯಧನ ಯೋಜನೆಯ ಅನುಷ್ಠಾನ ಪೂರ್ವ ತಯಾರಿಗಾಗಿ ಬ್ಯಾಂಕರುಗಳ ವಿಶೇಷ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಕೇಂದ್ರ ಸರ್ಕಾರ ನೇರ ಹಣ ವರ್ಗಾವಣೆ ಯೋಜನೆಯನ್ನು ದೇಶದ 43 ಜಿಲ್ಲೆಗಳಲ್ಲಿ ಜೂನ್ 1 ರಿಂದ ಪ್ರಾರಂಭಿಸಿದ್ದು, 78 ಜಿಲ್ಲೆಗಳಲ್ಲಿ ಜುಲೈ 1ರಿಂದ ಪ್ರಾರಂಭಿಸುತ್ತಿದೆ. ಸರ್ಕಾರದ ವಿವಿಧ ಸಬ್ಸಿಡಿ (ಸಹಾಯಧನ)ಗಳಾದ, ಪ್ರಿ-ಮ್ಯೋಟ್ರಿಕ್, ಪೊಸ್ಟ್-ಮ್ಯೋಟ್ರಿಕ್ ವಿದ್ಯಾರ್ಥಿ ವೇತನ, ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಾಗೂ ಇತರ 26 ಯೋಜನೆಗಳಿಗೆ ಕೇಂದ್ರ ಸರ್ಕಾರ ನೇರವಾಗಿ ಫಲಾನುಭವಿಗಳ ಬ್ಯಾಂಕಿನ ಖಾತೆಗೆ ಹಣ ವರ್ಗಾವಣೆಯನ್ನು ಮಾಡಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಈ ವ್ಯವಸ್ಥೆಯನ್ನು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಶೀಘ್ರವಾಗಿ ತರುವ ಉದ್ದೇಶ ಹೊಂದಿದೆ. ನೇರ ಸಹಾಯಧನದ ಫಲಾನುಭವಿಗಳು ಬ್ಯಾಂಕಿನಲ್ಲಿ ಖಾತೆ ತೆರೆದು ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕಿಗೆ ನೀಡಬೇಕಾಗಿದ್ದು, ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಸಬ್ಸಿಡಿಯನ್ನು ಬ್ಯಾಂಕಿನ ಖಾತೆಗೆ ಜಮಾ ಮಾಡುವುದರಿಂದ, ಗ್ಯಾಸ್ ಸಂಪರ್ಕ ಹೊಂದಿರುವವರು, ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ವಿವರವನ್ನು ಗ್ಯಾಸ್ ಕಂಪೆನಿಗೆ ನೀಡಬೇಕು ಎಂದರು.

ಆಧಾರ್ ನೋಂದಣಿಯನ್ನು ತ್ವರಿತವಾಗಿ ಮಾಡಲು ಹೆಚ್ಚು ನೋಂದಣಿ ಕೇಂದ್ರಗಳನ್ನು ತೆರೆಯಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದ ಅವರು, ಬ್ಯಾಂಕ್‌ಗಳು ಈಗಾಗಲೇ ಮೊಬೈಲ್‌ಗಳಿಗೆ ಎಸ್ಸೆಮೆಸ್ ಕಳುಹಿಸುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಪ್ರಚಾರ ಮಾಡುವಂತೆ ಹೇಳಿದರು.

ಸಭೆಯಲ್ಲಿ ಕೆನರಾ ಬ್ಯಾಂಕಿನ ಉಪ ಮಹಾಪ್ರಬಂಧಕ ಎಂ.ಎಂ.ಚಿನಿವಾರ್, ಆರ್‌ಬಿಐ ಅಧಿಕಾರಿ ಶಂಕರ್ ಬಿಸ್ವಾಸ್, ಜಿಲ್ಲಾ ನಬಾರ್ಡ್ ಅಧಿಕಾರಿ ರಾಘವೇಂದ್ರ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಬ್ಬರಾವ್ ಹಾಗೂ ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT