ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣನಾಗುವ ದಲಿತ; ಇದು ಜಾತ್ರೆಯ ವಿಶೇಷ

Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ತುಮಕೂರು ಜಿಲ್ಲೆಯ ಉಜ್ಜನಿ ಗ್ರಾಮದಲ್ಲೆಗ ಚೌಡಮ್ಮನ ಜಾತ್ರೆಯ ಸಂತಸ. ಕೊಂಡದ ಸೌದೆ, ಅಗ್ನಿಕೊಂಡ, ಆರತಿ, ಮಡೆ, ರಥೋತ್ಸವ ಹೀಗೆ ಶುಕ್ರವಾರದವರೆಗೂ ವಿಶಿಷ್ಟ ಆಚರಣೆಗಳು, ವಿಭಿನ್ನ ಸಂಪ್ರದಾಯಗಳು.

1429ರಷ್ಟು ಹಳೆಯದಾದ ಚೌಡಮ್ಮನ ಉಜ್ಜನಿ ಚೌಡಮ್ಮಳ ಅಕ್ಕ ನಿಡಸಾಲೆ ಚೌಡಮ್ಮ ಮತ್ತು ದಲಿತರ ದೇವತೆಯಾದ ಹೆಬ್ಬಾರಮ್ಮ ಈ ಮೂರು ದೇವರುಗಳದ್ದೂ ಉತ್ಸವದ ಸಂಭ್ರಮ. ಅಗ್ನಿ ಕೊಂಡದ ನಂತರ ಈ ದೇವರುಗಳ ಮೆರವಣಿಗೆ. ಅಂದು ಊರ ಹೆಬ್ಬಾಗಿಲಿನಲ್ಲಿ ನಿಡಸಾಲೆ ಚೌಡಮ್ಮ, ಉಜ್ಜನಿ ಚೌಡಮ್ಮ ಹಾಗೂ ಹೆಬ್ಬಾರಮ್ಮ ಅವರ ಭಾವನಾತ್ಮಕ ಸಂಬಂಧ ಸಾರುವ ಸಾಂಪ್ರದಾಯಿಕ ಅಪರೂಪದ ಆಟ ಇಲ್ಲಿಯ ವಿಶೇಷತೆ.

ಹಬ್ಬ ಆರಂಭವಾಗುವ ಮುನ್ನವೇ ದಲಿತರಿಗೆ ಜನಿವಾರವನ್ನು ಹಾಕಲಾಗುವುದು. ಇವರು ಬ್ರಾಹ್ಮಣರಂತೆ ಪರಿವರ್ತನೆಯಾಗಿ ಹೆಬ್ಬಾರಮ್ಮನ ದೇವಸ್ಥಾನದಲ್ಲಿ ವಾಸ್ತವ್ಯ ಹೂಡುತ್ತಾರೆ. ಹಬ್ಬ ಮುಗಿಯುವವರೆಗೂ ಬ್ರಾಹ್ಮಣರಾಗೇ ಇರಬೇಕಾದ ಪದ್ಧತಿ ಬಹಳ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಸಾಮಾನ್ಯವಾಗಿ ವರ್ಣಸಂಘರ್ಷದ ಕಥೆಯೊಂದಿಗೆ ಮಿಳಿತವಾಗುವ ಹೆಬ್ಬಾರಮ್ಮ ಮತ್ತು ಚೌಡಮ್ಮನ ಕಥೆಯನ್ನು ಇಲ್ಲೂ ಕಾಣಬಹುದು.

ಯುಗಾದಿ ಹಬ್ಬ ಆದ 15 ದಿನಕ್ಕೆ ಸರಿಯಾಗಿ ಪ್ರತಿ ವರ್ಷ ಚಾಚೂ ತಪ್ಪದಂತೆ ನೆರವೇರುವ ಹಬ್ಬ ಇದಾಗಿದ್ದು, ದಲಿತರಿಗೆ ಜನಿವಾರ ಹಾಕುವುದು, ವೈಭವದ ಅಗ್ನಿ ಕೊಂಡ ವಿಶೇಷವಾದ ಆಕರ್ಷಣೆಯಾಗಿರುತ್ತದೆ. ಜನಿವಾರದ ಪ್ರಸಂಗ ಈ ಸುತ್ತಲ ಹಳ್ಳಿಗಳಿಗೆಲ್ಲಾ ಒಂದು ದಂತಕಥೆಯಂತೆ ಬಾಯಿಪಾಠವಾಗಿದೆ. ಏಳು ಜನ ದಲಿತರು ಉರಿಯುವ ಅಗ್ನಿಕೊಂಡದಲ್ಲಿ ಹಾಯುತ್ತಾರೆ. ಬೇರೆ ಬೇರೆ ರಾಜ್ಯಗಳಿಂದ ಬರುವ ಅಪಾರ ಭಕ್ತರು ಇಲ್ಲಿ ಸೇರುತ್ತಾರೆ. ವಿಶಾಲವಾದ ಚೌಡಮ್ಮನ ದೇವಸ್ಥಾನದ ಮುಂಭಾಗದಲ್ಲಿ ಅಂಗಡಿ ಮುಂಗಟ್ಟುಗಳು, ಆಧುನಿಕ ವಾದ್ಯಗೋಷ್ಠಿಗಳು ಅಪಾರ ಭಕ್ತರನ್ನು ಮನಸೆಳೆಯುತ್ತದೆ.

ಭಕ್ತರಿಂದ ಕಾಳುಕಡ್ಡಿ ಸ್ವೀಕಾರ
ಹಬ್ಬಕ್ಕೆ ಮುನ್ನ ಜನಿವಾರ ಧರಿಸಿಕೊಂಡ ದಲಿತರು ಸುತ್ತ ಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡುತ್ತಾರೆ. ಹಬ್ಬದ ಮುನ್ಸೂಚನೆ ರೂಪದಲ್ಲಿ ದಾನ, ಕಾಳು ಕಡ್ಡಿಗಳನ್ನು ಭಕ್ತರಿಂದ ಸ್ವೀಕರಿಸಿಕೊಂಡು ಹಬ್ಬದ ಸಂದೇಶವನ್ನು ನೀಡುತ್ತಾರೆ. ಬಾಯಿಗೆ ಬಟ್ಟೆ ಕಟ್ಟಿಕೊಂಡು ಏನನ್ನೂ ಮಾತನಾಡದೇ ವ್ರತದಂತೆ ಆಚರಿಸುವ ಇವರ ಆಚರಣೆ ತುಂಬಾ ಕಟ್ಟುನಿಟ್ಟು. ಹಬ್ಬ ಮುಗಿಯುವವರೆಗೂ ತಮ್ಮ ತಮ್ಮ ಮನೆಗಳಿಗೆ ಹೋಗುವಂತಿಲ್ಲ. ತಮಟೆ ಸದ್ದಿನೊಂದಿಗೆ ಊಟಮಾಡುವ ಇವರ ದಿನಚರಿ ಹಲವು ಕುತೂಹಲಗಳಿಗೆ ಅವಕಾಶಮಾಡಿಕೊಡುತ್ತದೆ.

ಮಡೆ, ಪೂಜೆ, ಕೊಂಡ, ಬಂಡಿ ನಡೆಯುವಾಗ ಈ ಊರಿನ ಹೆಂಗಸರು ಚೌಡಮ್ಮನ ಮೇಲೆ ಪದ ಕಟ್ಟಿ ಹಾಡುವುದು ಸೊಗಸೋ ಸೊಗಸು. ಸುಮಾರು ಏಳೆಂಟು ಊರುಗಳು ಸೇರಿ ನಡೆಸುವ ಈ ಜಾತ್ರೆ ಯುಗಾದಿ ಹಬ್ಬದ ನಂತರ ಈ ಭಾಗಕ್ಕೆ ಬಾರಿ ದೊಡ್ಡ ಹಬ್ಬ. ಸಾಮಾನ್ಯವಾಗಿ ತಮ್ಮ ಮಕ್ಕಳು, ಸಂಬಂಧಿಕರು ತಪ್ಪದೆ ಹಾಜರಾಗುವ ಹಬ್ಬವೆಂದರೆ ಉಜ್ಜನಿಯ ಸುತ್ತಮುತ್ತ ಜನಕ್ಕೆ ಇದೇ ಆಗಿರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT