ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್ ಅರಸೊತ್ತಿಗೆ: ಮಹಿಳೆಗೂ ಅಧಿಕಾರ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪರ್ತ್ (ಪಿಟಿಐ): ಸಂವಿಧಾನದ ಸಂಪ್ರದಾಯದಂತೆ ಮೂನ್ನೂರು ವರ್ಷಗಳಿಂದ ಜಾರಿಯಲ್ಲಿದ್ದ ಅರಸೊತ್ತಿಗೆ ಉತ್ತರಾಧಿಕಾರ ನಿಯಮದ ಬದಲಾವಣೆಗೆ 16 ಕಾಮನ್‌ವೆಲ್ತ್ ರಾಷ್ಟ್ರಗಳ ಶೃಂಗಸಭೆಯು ಶುಕ್ರವಾರ ಒಪ್ಪಿಗೆ ನೀಡಿತು.

ಈ ಮೂಲಕ ಬ್ರಿಟಿಷ್ ರಾಜಮನೆತನದ ಉತ್ತರಾಧಿಕಾರದಲ್ಲಿ ಶತಮಾನಗಳಿಂದ ನಡೆಯುತ್ತ ಬಂದಿರುವ ಲಿಂಗತಾರತಮ್ಯಕ್ಕೆ ತೆರೆಬಿದ್ದಂತಾಗಿದೆ.

ಇದುವರೆಗೆ ಹಿರಿಯ ರಾಜಕುಮಾರ ಮಾತ್ರ ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗುವ ಹಕ್ಕು ಪಡೆದಿದ್ದ. ಈಗ ಬದಲಾಗಿರುವ ನಿಯಮದ ಪ್ರಕಾರ ಹಿರಿಯ ಪುತ್ರಿಗೆ ಸಿಂಹಾಸನವನ್ನು ಏರುವ ಅಧಿಕಾರ ದೊರಕಿದೆ ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಅವರು ತಿಳಿಸಿದರು.

ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಕಠಿಣ ನಿಲುವು ತಾಳಬೇಕು ಎಂಬ ಬೇಡಿಕೆಯ ಮಧ್ಯೆ ಬಿಟನ್‌ನ ರಾಣಿ 2ನೇ ಎಲಿಜಬೆತ್ ಅವರು, 21ನೇ ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಶೃಂಗ ಸಭೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.

ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಶೃಂಗ ಸಭೆಯ ನಿರ್ಗಮಿತ ಅಧ್ಯಕ್ಷರಾದ, ಟ್ರಿನಿಡಾಡ್ ಹಾಗೂ ಟೊಬಾಗೊ ಪ್ರಧಾನಿ  ಕಮಲಾ ಪ್ರಸಾದ್ ಬಿಸ್ಸೆಸ್ಸರ್ ಅವರು ಆಸ್ಟ್ರೇಲಿಯಾದ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಈ ಇಬ್ಬರು ಪ್ರಭಾವಿ ಮಹಿಳೆಯರಲ್ಲದೆ ಜಗತ್ತಿನ ಅತಿ ಪ್ರಭಾವಿ ಮಹಿಳೆ ಬ್ರಿಟನ್‌ನ ರಾಣಿ ಎಲಿಜಬೆತ್ ಅವರ ಉಪಸ್ಥಿತಿಯಿಂದ ಶೃಂಗಸಭೆಯಲ್ಲಿ ಮಹಿಳೆಯರ ಪಾರಮ್ಯ ಎದ್ದು ಕಾಣುತ್ತಿತ್ತು.

ಶೃಂಗಸಭೆ ಉದ್ದೇಶಿಸಿ ಮಾತನಾಡಿದ ರಾಣಿ ಎಲಿಜಬೆತ್, ಹೊಸತನವನ್ನು ಮೈಗೂಡಿಸಿಕೊಂಡು ಭವಿಷ್ಯದ ಸವಾಲುಗಳನ್ನು ಎದುರಿಸಬೇಕು~ ಎಂದು ಕರೆ ನೀಡಿದರು. ಸಭೆಯ ಫಲಿತಾಂಶವು ಇಡೀ ವಿಶ್ವದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಭಾರತವನ್ನು ಪ್ರತಿನಿಧಿಸಿದ್ದಾರೆ.

ಮರಣ ದಂಡನೆ ರದ್ದತಿಗೆ ಆಗ್ರಹ:  ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಮರಣ ದಂಡನೆಯನ್ನು ರದ್ದುಪಡಿಸಬೇಕೆಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ವಿಲಿಯಂ ಹಾಗ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT