ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿ, ಶ್ರದ್ಧೆಯ ಹನುಮ ಜಯಂತಿ ಉತ್ಸವ

Last Updated 25 ಡಿಸೆಂಬರ್ 2012, 20:21 IST
ಅಕ್ಷರ ಗಾತ್ರ

ಬೆಂಗಳೂರು: ಕೋಟೆ ಆಂಜನೇಯ ಸ್ವಾಮಿ, ರಾಗಿಗುಡ್ಡ ಆಂಜನೇಯ ಸ್ವಾಮಿ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ನಗರದ ವಿವಿಧ ಹನುಮ ಮಂದಿರಗಳಲ್ಲಿ ಹನುಮ ಜಯಂತಿಯನ್ನು ಮಂಗಳವಾರ ಅತ್ಯಂತ ಭಕ್ತಿ ಭಾವದಿಂದ ಆಚರಿಸಲಾಯಿತು.

ದರ್ಶನಕ್ಕಾಗಿ ನಸುಕಿನ ವೇಳೆಯಲ್ಲೇ ಆಗಮಿಸಿದ್ದ ಭಕ್ತರ ದಂಡು ಸಂಜೆಯಾದರೂ ಹಾಗೆಯೇ ಉಳಿದಿತ್ತು.  ವಿವಿಧ ಬಡಾವಣೆಗಳ ಆಂಜನೇಯ ಮಂದಿರಗಳಲ್ಲಿ ಕಾಲಿಡಲು ಜಾಗ ಇಲ್ಲದಷ್ಟು ಭಕ್ತರಿದ್ದರು. ಕ್ರಿಸ್‌ಮಸ್ ಹಬ್ಬದಂದು ರಜಾ ದಿನವಾದ್ದರಿಂದ ಎಲ್ಲೆಡೆ ದಟ್ಟಣೆ ಮತ್ತಷ್ಟು ಹೆಚ್ಚಾಗಿತ್ತು.

ಕೆ.ಆರ್.ಮಾರುಕಟ್ಟೆ ರಸ್ತೆಯಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಹನುಮನ ಮೂರ್ತಿಗೆ ಬೆಣ್ಣೆಯಿಂದ ಅಲಂಕಾರ ಮಾಡಲಾಗಿದ್ದ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡರು. ಜನದಟ್ಟಣೆ ಹೆಚ್ಚಿದ್ದರಿಂದ ಈ ಭಾಗದಲ್ಲಿ ಸಂಚಾರಕ್ಕೆ ಸ್ವಲ್ಪ ಮಟ್ಟಿಗೆ ತೊಂದರೆಯಾಯಿತು.

ರಾಗಿಗುಡ್ಡ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪವಮಾನ ಹೋಮ, ನವಧಾನ್ಯ ಅಲಂಕಾರ, ಅಲ್ಲದೇ ಪಂಚಾಮೃತ ಅಭಿಷೇಕ, ಮಹಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು.

ಸಿ.ವಿ.ರಾಮನ್ ರಸ್ತೆಯಲ್ಲಿರುವ ದಾರಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ `ದೀಪಪ್ರಜ್ವಲನ' ಸಹಸ್ರಾರ್ಚನೆ, ಹೋಮ-ಹವನ ಕಾರ್ಯಕ್ರಮಗಳು ನಡೆದವು. ಕೊತ್ತನೂರಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲೂ `ಮುಖ್ಯಪ್ರಾಣ'ನಿಗೆ ಬಗೆ ಬಗೆಯ ಪೂಜೆ ನಡೆಯಿತು.

ಹನುಮನಲ್ಲದೇ ಶ್ರೀರಾಮ ಗುಡಿಗಳಲ್ಲೂ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಗಿರಿನಗರ, ಬನಶಂಕರಿ, ಪದ್ಮನಾಭನಗರ ಮತ್ತಿತರ ಪ್ರದೇಶಗಳ ಹನುಮ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು.

ಬಗೆಬಗೆಯ ಹೂವು ಹಣ್ಣಿನ ಅಲಂಕಾರದಿಂದ ಸೀತಾರಾಮಾಂಜನೇಯ ಮೂರ್ತಿಗಳು ಕಂಗೊಳಿಸಿದವು. ಭಕ್ತಿಯಲ್ಲಿ ತೇಲಿಸಲು ರಾಮ, ಹನುಮ ಕುರಿತ ಭಜನೆಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯನಗರದ ಮಾರುತಿ ಮಂದಿರ, ಮಹಾಲಕ್ಷ್ಮಿ ಬಡಾವಣೆಯ ಪ್ರಸನ್ನ ವೀರಾಂಜನೇಯ ದೇವಸ್ಥಾನಗಳಲ್ಲೂ ವಿಶೇಷ ಪೂಜೆ, ಅಲಂಕಾರ ನಡೆದಿದ್ದು ಭಾರಿ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ಹೊಸಕೋಟೆಯ ಕೋಟೆ ಭಾಗದ ಖಿಲ್ಲೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಾಡಲಾದ ತರಕಾರಿ ಅಲಂಕಾರ ಗಮನಸೆಳೆಯಿತು. ಸುತ್ತಲಿನ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಕೆಂಗೇರಿ ವರದಿ: ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಯ ಸೊಣ್ಣೇನಹಳ್ಳಿ ಉದ್ಭವಮೂರ್ತಿ ವೀರಾಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ಸಾವಿರಾರು ಭಕ್ತರು ಮಂಗಳವಾರ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ದೇವಾಲಯದ ವತಿಯಿಂದ ಸಿದ್ಧಗಂಗಾ ಮಠದ ಶಿವಕುಮಾರಸ್ವಾಮೀಜಿ, ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವದೂತ ಸ್ವಾಮೀಜಿ, ಮಾರುತಿನಗರದ ದಯಾನಂದ ಸ್ವಾಮೀಜಿ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ಆಂಜನೇಯಸ್ವಾಮಿಗೆ ಪಂಚಾಮೃತ ಅಭಿಷೇಕ, ಗಣಪತಿ ಪೂಜೆ, ನವಗ್ರಹ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ಲಕ್ಷ್ಮೀ ಹೋಮ, ಮೃತ್ಯುಂಜಯ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ವೀರಾಂಜನೇಯಸ್ವಾಮಿ ಉತ್ಸವ ಬಹು ವಿಜ್ರಂಭಣೆಯಿಂದ ಜರುಗಿದ್ದು ಅಪಾರ ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT