ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿಯ ನೆಪದಲ್ಲಿ ಅರಣ್ಯ ಲೂಟಿ!

Last Updated 15 ಫೆಬ್ರುವರಿ 2012, 7:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲ್ಲೂಕಿನ ಅಣಶಿ- ದಾಂಡೇಲಿ ಹುಲಿ ಸಂರಕ್ಷಿತ ತಾಣದಲ್ಲಿರುವ ಉಳವಿ ಚನ್ನಬಸವೇಶ್ವರ ದೇಗುಲದ ಜಾತ್ರೆಗೆ ಭಕ್ತಿಯ ನೆಪದಲ್ಲಿ ಬರುವ ಭಕ್ತರು ಹಿಂತಿರುಗುವಾಗ ಬೆಲೆ ಬಾಳುವ ಅಪರೂಪದ ಮರಗಳನ್ನು ಕಡಿದು ಸಾಗಿಸುತ್ತಿರುವುದು ಪತ್ತೆಯಾಗಿದೆ.

ಹರಕೆಗೆಂದು ದೇಗುಲಕ್ಕೆ ಬಂದ ಭಕ್ತರು ಅಲ್ಲಿಂದ ಮರಳುವಾಗ ತಮ್ಮ ಚಕ್ಕಡಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಉತ್ಕೃಷ್ಟ ಜಾತಿಯ ಅಡಚರಿ ಹಾಗೂ ಸಾಗವಾನಿಯ ಎಳೆಗಳು ಸೇರಿದಂತೆ ಬಿದಿರು, ಬೆತ್ತಗಳನ್ನು ಅಕ್ರಮವಾಗಿ ಒಯ್ಯುತ್ತಿದ್ದಾರೆ.
 
ಸ್ಥಳೀಯರ ಸಹಕಾರದೊಂದಿಗೆ ಇದೇ 10ರಂದು ಜೋಯಿಡಾ ವಲಯದಲ್ಲಿ ರಾತ್ರಿಯಿಂದ ಬೆಳಗ್ಗಿನವರೆಗೆ ಸುಮಾರು 30 ಚಕ್ಕಡಿಗಳನ್ನು ತಡೆದು ಕಾರ್ಯಾಚರಣೆ ನಡೆಸಿರುವ ವಲಯಾರಣ್ಯಾಧಿಕಾರಿ  ಸತೀಶ್ ಎಚ್. ಪೂಜಾರ್ ಹಾಗೂ ಸಿಬ್ಬಂದಿ ಮೂರು ಲಕ್ಷ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಅಡಚರಿ ಹಾಗೂ ಸಾಗವಾನಿಯ ಎಳೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಭಕ್ತರಿಂದ ಈ ದಂಧೆ ಪ್ರತಿ ವರ್ಷವೂ ನಡೆಯುತ್ತಿದೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಎಳೆಗಳನ್ನು ವಶಕ್ಕೆ ತೆಗೆದುಕೊಂಡಿರುವುದು ಇದೇ ಮೊದಲು ಎಂದು ಸತೀಶ್ ಪ್ರಜಾವಾಣಿಗೆ ತಿಳಿಸಿದರು. ಅಡಚರಿ ಅತ್ಯಂತ ಗಟ್ಟಿ ಜಾತಿಯ ಮರ. ನಿತ್ಯ ಹರಿದ್ವರ್ಣದ ಅಣಶಿ ಕಾಡಿನಲ್ಲಿ ಮಾತ್ರ ವಿಶೇಷವಾಗಿ ಸಿಗುವುದು. ಈ ಮರಕ್ಕೆ ಬಯಲು ಸೀಮೆಯಲ್ಲಿ ಹೆಚ್ಚು ಬೇಡಿಕೆ ಇರುವುದೇ ಈ ಅಕ್ರಮಕ್ಕೆ ಕಾರಣ.
 

ಉಳವಿಯಿಂದ ಬೆಳಗಾವಿ ಕಡೆಗೆ ಹೊರಟ ಭಕ್ತರಿಗೆ ಮೊದಲು ಸಿಗುವ ತಪಾಸಣಾ ಗೇಟು ಅಂಬೋಲಿ, 2ನೇ ಗೇಟು ಕುಂಬಾರವಾಡ, 3ನೇ ಗೇಟು ಬಾಪೇಲಿ ಕ್ರಾಸ್ ಬಳಿಕ ಗಣೇಶಗುಡಿ, ಜಗಲ್‌ಪೇಟ್ ಅಲ್ಲಿಂದ ರಾಮನಗರ. ಇನ್ನು ಹುಬ್ಬಳ್ಳಿ- ಧಾರವಾಡ ಕಡೆಗೆ ಹೊರಟ ಭಕ್ತರಿಗೆ ಹೆಂಡಕೊಳ ಗೇಟ್, ಗುಂದ್ ಕ್ರಾಸ್ ಗೇಟ್, ಪೊಟೋಳಿ ಗೇಟ್, ಬೈಲ್‌ಪಾರು ಗೇಟ್, ಬಳಿಕ ದಾಂಡೇಲಿ, ಹಳಿಯಾಳ. ಇಷ್ಟೆಲ್ಲ ಗೇಟ್‌ಗಳಲ್ಲಿ ಪಾರಾಗಿ ಕೆಲವರು ಎಳೆಗಳನ್ನು ಸಾಗಿಸುತ್ತಿದ್ದಾರೆ ಎಂದು ಅವರು ಹೇಳಿದರು.

ವನ್ಯಜೀವಿ ಸಂರಕ್ಷಣಾ ಕಾಯಿದೆ (1972) ಪ್ರಕಾರ ಹುಲಿ ಯೋಜನೆ ತಾಣದಿಂದ ಹುಲ್ಲುಕಡ್ಡಿಯನ್ನೂ  ತೆಗೆಯುವಂತಿಲ್ಲ. ಹೀಗಿದ್ದರೂ ಭಕ್ತರು ಕಾಡಿ ನೊಳಗೆ ನುಗ್ಗಿ ಈ ಪ್ರಮಾಣದಲ್ಲಿ ಅಡಚರಿ ಎಳೆಗಳನ್ನು ಸಂಗ್ರಹಿಸಲು ಹೇಗೆ ಸಾಧ್ಯವಾಯಿತು? ಎಂದು ಪ್ರಶ್ನಿಸಿದರೆ, `ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ.

ವಿಸ್ತಾರವಾದ ಅರಣ್ಯದೊಳಗೆ ಎಲ್ಲೆಲ್ಲಿ ನುಗ್ಗುತ್ತಾರೆ ಎಂದು ತಿಳಿಯುವುದಿಲ್ಲ. ಹಲವರಿಗೆ ಸಂರಕ್ಷಿತ ಅರಣ್ಯದೊಳಗೆ ನುಗ್ಗಿ ಎಳೆಗಳನ್ನು ಕಡಿಯುವುದು ಕಾನೂನು ಉಲ್ಲಂಘನೆ ಎಂಬುದೇ ಗೊತ್ತಿಲ್ಲ. ತಿಳಿವಳಿಕೆ ನೀಡಿದ್ದೇವೆ. ಬಹುತೇಕರು ತಾವಾಗಿಯೇ ಎಳೆಗಳನ್ನು ಒಪ್ಪಿಸಿದ್ದಾರೆ~ ಎನ್ನುತ್ತಾರೆ ಜೋಯಿಡಾ ಸತೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT