ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಣಗುಡುತ್ತಿರುವ ರೈತ ಸಂಪರ್ಕ ಕೇಂದ್ರಗಳು!

Last Updated 13 ಜುಲೈ 2012, 7:15 IST
ಅಕ್ಷರ ಗಾತ್ರ

ಕುಷ್ಟಗಿ:  ತಾಲ್ಲೂಕಿನಲ್ಲಿ ಮುಂಗಾರು ಮಳೆ ಸಂಪೂರ್ಣ ವಿಫಲವಾಗಿದ್ದು ಬಿತ್ತನೆ ಬೀಜಗಳನ್ನು ಕೇಳುವವರೇ ಇಲ್ಲದಂಥ ಸ್ಥಿತಿ ಎದುರಾಗಿದೆ.

ಹಿಂದಿನ ವರ್ಷಗಳಲ್ಲಿ ಈ ಅವಧಿಯಲ್ಲಿ ಬಿತ್ತನೆ ಬೀಜಗಳ ವಿತರಣೆ ಕೆಲಸವೇ ಕೃಷಿ ಇಲಾಖೆಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿರುತ್ತಿತ್ತು. ಸಿಬ್ಬಂದಿಗೆ ಊಟ, ನಿಸರ್ಗ ಕರೆಗಳಿಗೆ ಹೋಗುವುದಕ್ಕೂ ಸಾಧ್ಯವಾಗುತ್ತಿತರಲಿಲ್ಲ.

ಸರ್ಕಾರದ ಸಹಾಯಧನದಲ್ಲಿ ಬೀಜ ಪಡೆಯುವುದಕ್ಕಾಗಿ ರೈತರ ಉದ್ದನೆ ಸಾಲುಗಳು, ಮಳೆಗಾಳಿ ಲೆಕ್ಕಿಸದೇ ಸರದಿಯಲ್ಲಿ ನಿಂತು ಬೀಜಕ್ಕಾಗಿ ಹಂಬಲಿಸುವ ರೈತರು, ರೈತ ಮಹಿಳೆಯರು, ಗದ್ದಲ ನಿಯಂತ್ರಿಸುವುದಕ್ಕೆ ಪೊಲೀಸರು ಹೆಣಗಾಡುತ್ತಿರುವುದು, ರೈತರ ಪ್ರತಿಭಟನೆ ಮೊದಲಾದವು ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ದೃಶ್ಯಗಳು.

ಭಣ ಭಣ: ಆದರೆ ಮಳೆಯೇ ಅಪರೂಪವಾಗಿರುವುದರಿಂದ ಮುಂಗಾರು ಅವಧಿ ಮುಗಿದರೂ ಈ ಬಾರಿ ಇವ್ಯಾವ ಸಂಗತಿಗಳು ಕಂಡುಬರುತ್ತಿಲ್ಲ, ರೈತರಿಂದ ತುಂಬಿತುಳುಕುತ್ತಿದ್ದ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಕಚೇರಿಗಳಲ್ಲಿ ಅವರ ಸುಳಿವು, ಸದ್ದುಗದ್ದಲವೇ ಮಾಯವಾಗಿ ಭಣಗುಡುತ್ತಿವೆ.

ಕರಗದ ದಾಸ್ತಾನು: ಸರ್ಕಾರ ಸಹಾಯಧನದಲ್ಲಿ ವಿತರಿಸುವ ಸಲುವಾಗಿ ವಿವಿಧ ಖಾಸಗಿ ಕಂಪೆನಿಗಳ ಮೂಲಕ ಲಾರಿಗಟ್ಟಲೇ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ರೈತರ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹಿಸಿದೆ. ಆದರೆ ಬೀಜಗಳನ್ನು ಕೇಳುವವರಿಲ್ಲ. ಬಣ್ಣ ಬಣ್ಣದ ಆಕರ್ಷಕ ಚೀಲಗಳಲ್ಲಿರುವ ಬಿತ್ತನೆಬೀಜಗಳ ಮೂಟೆ ಕರಗಿಲ್ಲ. ಸಂಗ್ರಹಿಸಿದ ಬೀಜದ ದಾಸ್ತಾನು ಕೋಣೆಗಳಲ್ಲಿ ಭದ್ರವಾಗಿದೆ.

ಅಂದಾಜಿನ ಪ್ರಕಾರ ರೈತರ ಸಂಪರ್ಕ ಕೇಂದ್ರದ ಮೂಲಕ ಮುಂಗಾರು ಹಂಗಾಮಿನಲ್ಲೇ ರೂ 50 ಲಕ್ಷಕ್ಕೂ ಅಧಿಕ ಮೊತ್ತದ ಬಿತ್ತನೆ ಬೀಜಗಳು ಮಾರಾಟವಾಗುತ್ತಿದ್ದವು. ಆದರೆ ಇಲ್ಲಿಯವರೆಗೆ ಕೇವಲ ರೂ 3-4 ಲಕ್ಷ ಮೊತ್ತದ ಬೀಜಗಳು ಮಾರಾಟವಾಗಿವೆ. ಆದರೆ ಇದು ಕೇವಲ ಕೊಳವೆಬಾವಿ ನೀರಾವರಿ ಆಶ್ರಯ ಹೊಂದಿದ ಪ್ರದೇಶಕ್ಕೆ ಮಾತ್ರ ಎಂಬುದನ್ನು ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಿಲ್ಲ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಕೈಕಟ್ಟಿದ ಸಿಬ್ಬಂದಿ: ನಮಸಾಗರ, ಹನಮನಾಳ ಹೋಬಳಿಗಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ಅಲ್ಪಸ್ವಲ್ಪ ಮಳೆಯಾಗಿದ್ದು ಅಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಪಡೆಯುವುದಕ್ಕಾಗಿ ರೈತರು ಬರುತ್ತಿದ್ದಾರೆ. ಆದರೆ ಕುಷ್ಟಗಿ, ತಾವರಗೇರಾ ರೈತರ ಸಂಪರ್ಕ ಕೇಂದ್ರ ಹಾಗೂ ಬೀಜ ವಿತರಣಾ ಉಪ ಕೇಂದ್ರಗಳಾದ ಚಳಗೇರಿ, ದೋಟಿಹಾಳ ವ್ಯಾಪ್ತಿಯಲ್ಲಿ ಮಳೆಯ ಅಂಶವೇ ಇಲ್ಲದ ಕಾರಣ ಯಾರೊಬ್ಬ ರೈತರ ಮುಖಗಳೇ ಅಪರೂಪ ಎನಿಸಿದ್ದು ಕೇಂದ್ರಗಳ ಸಿಬ್ಬಂದಿಗೆ ಕೆಲಸವೇ ಇಲ್ಲದಂತಾಗಿದೆ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

ಅಲ್ಲದೇ ಖಾಸಗಿ ಬೀಜ ಮತ್ತು ಗೊಬ್ಬರ ಮಾರಾಟ ಕೇಂದ್ರಗಳಲ್ಲಿಯೂ ಅದೇ ಸ್ಥಿತಿ ಕಂಡುಬರುತ್ತಿದೆ, ಬಿತ್ತನೆ ಬೀಜಗಳಿಗೆ ಬೇಡಿಕೆಯೇ ಇಲ್ಲ, ರಸಗೊಬ್ಬರ ಒಯ್ಯುವುದಂತೂ ದೂರದ ಮಾತು ಎಂದು ಒಬ್ಬ ವ್ಯಾಪಾರಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT