ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ನಾಡಲ್ಲಿ `ಪ್ಯಾಕೇಜ್'

Last Updated 25 ಏಪ್ರಿಲ್ 2013, 9:30 IST
ಅಕ್ಷರ ಗಾತ್ರ

ಕೊಪ್ಪಳ: ಹೈದರಾಬಾದ್-ಕರ್ನಾಟಕ ಭಾಗದ ಬಿರುಬಿಸಿಲಿನ ಪ್ರದೇಶಗಳಲ್ಲಿ ಒಂದಾದ ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ತಾಲ್ಲೂಕಿನ ಕೆಲ ಭಾಗವನ್ನು ಹೊರತುಪಡಿಸಿದರೆ ಉಳಿದೆಡೆ ನೀರಿನ ಕೊರತೆ ತೀವ್ರವಾಗಿದ್ದು ರೈತರ ಸ್ಥಿತಿ ಮೂರಾಬಟ್ಟೆಯಾಗಿದೆ.

ಕೊಪ್ಪಳದ ಕೋಟೆ ಸುತ್ತಲೂ ಕಳೆದ ಎರಡು ದಶಕಗಳಲ್ಲಿ ಕೈಗಾರಿಕೆಗಳು ದಾಳಿ ಇಟ್ಟ ಪರಿಣಾಮವಾಗಿ ಕೃಷಿ ಭೂಮಿ ಕಡಿಮೆಯಾಗಿದೆ. ಜನರ ಜೀವನ ಮಟ್ಟ ಮತ್ತಷ್ಟು ಅಧೋಗತಿಗೆ ಇಳಿದಿದೆ. ಕೈಗಾರಿಕೆಗಳ ವಿಷಗಾಳಿ ರೈತರನ್ನು ಚಿಂತಾಜನಕ ಸ್ಥಿತಿಗೆ ನೂಕಿದೆ. ಪ್ರಖರ ಬಿಸಿಲು, ವಿಷಗಾಳಿ, ಕುಂಠಿತಗೊಂಡ ಕೃಷಿ, ಮೂರಾಬಟ್ಟೆಯಾದ ಬದುಕು- ಇದ್ಯಾವುದೂ ರಾಜಕೀಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿಲ್ಲ.

ಮರಳುಗಾಡಿನಲ್ಲಿ ಬೆಳೆಯುವ ಪಾಪಾಸ್ ಕಳ್ಳಿಯಂತೆ ಚುನಾವಣೆ ಘೋಷಣೆ ಬೆನ್ನಲ್ಲೇ ಬಿಸಿಲ ನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಪುಟಿದೆದ್ದು ನಿಂತಿವೆ. ನೀರು ಹರಿಯದ ಕಾಲುವೆಗಳಲ್ಲಿ ಖಾಲಿ `ಪ್ಯಾಕೆಟ್'ಗಳು ಹರಿದಾಡುತ್ತಿವೆ ಎನ್ನುವ ಮೂಲಕ ರಾಜಕೀಯ ವ್ಯವಸ್ಥೆಯ ಚಿತ್ರಣವನ್ನು ತೆರೆದಿಡುತ್ತಾರೆ ಗ್ರಾಮಸ್ಥರು.

ತಾಂಬೂಲದ ವಿನಿಮಯದಲ್ಲಿ, ಬಸ್ ನಿಲ್ದಾಣದ ಬೆಂಚುಗಳಲ್ಲಿ ಮಾತಿಗೆ ಸಿಕ್ಕವರ ನಡುವೆ  ಸೋಲು-ಗೆಲುವಿನ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ. ಊರು-ಊರುಗಳ ಮತಗಳನ್ನು ಕೈಬೆರಳಲ್ಲೇ ಲೆಕ್ಕ ಹಾಕಿ, ಜಾತಿ, ಜಾತಿಗಳ ಮತ ಸಂಖ್ಯೆಯನ್ನು ಕಳೆದು, ಕೂಡಿಸುವ ಲೆಕ್ಕಶಾಸ್ತ್ರಜ್ಞರು ಎಲ್ಲೆಡೆ ಹುಟ್ಟಿಕೊಂಡಿದ್ದಾರೆ. 

ಹಳ್ಳಿಗಳ ದೇವಸ್ಥಾನಗಳಿಗೆ ಎಲ್ಲಿಂದಲೋ ಹೊಸ, ಹೊಸ ಭಜನಾ ಬ್ಯಾಂಡ್ ಸೆಟ್‌ಗಳು ಬರುತ್ತಿವೆ. ಮಸೀದಿ ಕಡೆಗೆ ಮೈಕ್ ಸೆಟ್‌ಗಳು ಹೊರಟಿವೆ. `ಇಷ್ಟು' ಮತಗಳಿಗೆ `ಇಂತಿಷ್ಟು' ಪ್ಯಾಕೇಜ್‌ಎನ್ನುವ ಯೋಜನೆಗಳು ಆಗಲೇ ಚಾಲ್ತಿಗೆ ಬಂದಿವೆ ಎಂಬ ಗುಸುಗುಸು ಹರಡಿದೆ. ನೀರು ಹರಿಸುವ ಕಾಲುವೆಗಳ ನಿರ್ಮಾಣ ಕುರಿತ ಚರ್ಚೆಗಿಂತ, ಯಾರ ಹೊಲದಲ್ಲಿ ರಾತ್ರಿ `ಗುಂಡು' ಪೂರೈಕೆಯಾಗಲಿದೆ ಎನ್ನುವ ವಿಷಯವೇ ಇಲ್ಲಿ ಮುಖ್ಯ ಚರ್ಚಾ ವಸ್ತುವಾಗಿಬಿಟ್ಟಿದೆ.

ಒಂದೊಂದು ಮತಕ್ಕೆ `ಇಂತಿಷ್ಟು' (ಹಣ, ಹೆಂಡ ಇತ್ಯಾದಿ) ಎಂಬ ಆಮಿಷ ಒಡ್ಡಿದ್ದರಿಂದ ಬೇರೆ ಊರುಗಳಿಗೆ ದುಡಿಯಲು ಹೋದವರಿಗೆ ಓಟು ಹಾಕಲು ಬರುವಂತೆ `ಬುಲಾವ್' ಹೊರಟಿದೆ. ಗ್ರಾಮಗಳ `ಗುರು-ಹಿರಿಯರು' ತುಂಬಾ ಬಿಜಿಯಾಗಿದ್ದು, ಕೈಗೆ ಸಿಗುತ್ತಿಲ್ಲ.

ಜಿಲ್ಲೆಯ ಒಂದು ಭಾಗದ ರೈತರು ಒಣಗಿದ ಭೂಮಿ ಮುಂದೆ ಚಿಂತಾಜನಕ ಸ್ಥಿತಿಯಲ್ಲಿ ಇದ್ದರೆ, ಇನ್ನೊಂದು ಭಾಗದಲ್ಲಿ ಸಮೃದ್ಧಿ ಇದೆ. ಗಂಗಾವತಿ ನಗರದ ಸುತ್ತಮುತ್ತ ಕಣ್ಣು ಹಾಯಿಸಿದಷ್ಟು ದೂರಕ್ಕೂ ಭತ್ತದ ಗದ್ದೆಯೇ ಕಾಣಿಸುತ್ತದೆ.

ಕಾರಟಗಿ, ಹೊಸಕೇರಿ, ಹೇರೂರು, ಆರಾಳ, ವಡ್ಡರಟ್ಟಿ, ಮಲಕನಮರಡಿ, ಬಸವಾಪಟ್ಟಣ ಮೊದಲಾದ ಗ್ರಾಮಗಳು ಗಂಗಾವತಿಗೆ `ಭತ್ತದ ಕಣಜ' ಎಂಬ ಖ್ಯಾತಿ ತಂದುಕೊಟ್ಟಿವೆ. ಆನೆಗೊಂದಿಯಲ್ಲಿ ಮಾತ್ರ ಭತ್ತದ ಗದ್ದೆಗಳಿಗಿಂತ ಬಾಳೆತೋಟಗಳೇ ಹೆಚ್ಚಾಗಿ ಕಾಣುತ್ತವೆ. ಗದ್ದೆ-ತೋಟಗಳಲ್ಲೂ ಈಗ ಚುನಾವಣೆಯದ್ದೇ ಮಾತು.

ತುಂಗಭದ್ರೆಯ ಕೃಪೆಯಿಂದ ಆ ಪ್ರದೇಶದಲ್ಲಿ ಹಸಿರು ತುಂಬಿದೆ. ಸಹಸ್ರಾರು ಮಂದಿ ಬೋರ್‌ವೆಲ್ ಮೂಲಕ ನೀರು ಮೇಲೆತ್ತಿ ಭತ್ತ ಬೆಳೆಯುತ್ತಿದ್ದಾರೆ. ಹಳ್ಳಿಗಳಲ್ಲಿ  ಮನೆಗಳ ಮುಂದೆ ಭತ್ತದ ರಾಶಿ, ಹುಲ್ಲಿನ ಮೆದೆಗಳು ಯಥೇಚ್ಛವಾಗಿ ಕಾಣ ಸಿಗುತ್ತವೆ.

ಅವಿಭಜಿತ ಗಂಗಾವತಿ ತಾಲ್ಲೂಕಿನಲ್ಲಿ ವರ್ಷಕ್ಕೆ ಎರಡು ಬೆಳೆ ಭತ್ತ ಬೆಳೆಯಲಾಗುತ್ತಿದೆ. ಇಲ್ಲಿ 87 ಅಕ್ಕಿ ಗಿರಣಿಗಳಿವೆ ಎಂದರೆ ಭತ್ತ ಬೆಳೆಯುವ ಪ್ರಮಾಣವನ್ನು ಊಹಿಸಿಕೊಳ್ಳಬಹುದು. ಇಲ್ಲಿಯ ಭತ್ತದ ಲಾಬಿ ಸಹ ಜಿಲ್ಲೆಯ ಚುನಾವಣೆಯಲ್ಲಿ ತನ್ನ ದಟ್ಟ ಪ್ರಭಾವ ಬೀರುತ್ತಿರುವುದು ಗುಟ್ಟಾಗಿ ಏನೂ ಉಳಿದಿಲ್ಲ. ಇದೇ ಪರಿಸ್ಥಿತಿ, ಹೆಚ್ಚಾಗಿ ಭತ್ತ ಬೆಳೆಯುವ ಬಳ್ಳಾರಿಯ ಕಂಪ್ಲಿ, ಸಿರುಗುಪ್ಪ, ರಾಯಚೂರಿನ ಸಿಂಧನೂರು, ಮಸ್ಕಿ, ಲಿಂಗಸುಗೂರುಗಳಲ್ಲೂ ಇದೆ.

ಜಾತಿಗಳ ಲೆಕ್ಕಾಚಾರಕ್ಕಿಂತ ಗಿರಣಿಗಳು, ಅವುಗಳು ಹೊಂದಿರುವ ರೈತರು ಮತ್ತು ಕಾರ್ಮಿಕರ ಲೆಕ್ಕಾಚಾರವೇ ಈ ಭಾಗದ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.


ನಿವೃತ್ತರಾದ ನಂತರ ಈ ಯೋಜನೆಯನ್ನು ರೂಪಿಸಲು ಕಾರಣವೇನು?
ನಾನು ಮೂಲತಃ ಗಂಗಾವತಿ ತಾಲ್ಲೂಕಿನ ವಡ್ಡರಹಳ್ಳಿಯವನು. ಓದುವಾಗ ಎಂ.ಪಿ.ಪ್ರಕಾಶ್ ಅವರ ಸಹಪಾಠಿ. ಜಲಾಶಯ ಭರ್ತಿಯಾದ ನಂತರ ಸುಮಾರು 232 ಟಿಎಂಸಿ ಅಡಿ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ. ಇದನ್ನು ಬಳಸಿಕೊಳ್ಳಬೇಕು ಎಂಬ ವಿಷಯ ಕುರಿತು ಪ್ರಕಾಶ್ ನನ್ನೊಂದಿಗೆ ಚರ್ಚಿಸಿದ್ದರು. ಹಾಗಾಗಿ ಯೋಜನೆ ಸಿದ್ಧಪಡಿಸಲು ಮುಂದಾದೆ.

ಈಗ ನೀವು ಚುನಾವಣೆಗೆ ನಿಲ್ಲಲು ಕಾರಣವೇನು?
ಎಂ.ಪಿ.ಪ್ರಕಾಶ್ ಅವರು ಉಪ ಮುಖ್ಯಮಂತ್ರಿ ಆಗಿದ್ದಾಗ ಯೋಜನೆ ಸಿದ್ಧವಾಯಿತು. ಯೋಜನೆಯ ಲಾಭ ಆಂಧ್ರದ ರಾಯಲಸೀಮೆಗೂ ದೊರೆಯುವುದರಿಂದ ಆಗ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ ಅವರನ್ನು ಭೇಟಿ ಮಾಡಿ ಯೋಜನೆ ವಿವರಿಸಿದಾಗ ತಕ್ಷಣವೇ ಒಪ್ಪಿ ಕರ್ನಾಟಕಕ್ಕೆ 2000 ಕೋಟಿ ರೂಪಾಯಿ ಕೊಡುವುದಾಗಿ ಭರವಸೆ ನೀಡಿದ್ದರು.

ಆದರೆ ಅವರ ಅಕಾಲಿಕ ಮರಣದಿಂದ ಅದು ಮುಂದುವರಿಯಲಿಲ್ಲ. ರಾಜ್ಯ ಸರ್ಕಾರವೂ ಯೋಜನೆಯ ಸಮೀಕ್ಷೆಗೆ 2012 ಫೆಬ್ರುವರಿ 13 ರಂದು ನಡೆದ ಜಲ ಸಂಪನ್ಮೂಲ ಇಲಾಖೆ ಸಭೆಯಲ್ಲಿ ಮಂಜೂರಾತಿ ನೀಡಿ, ನಂತರ ಸುಮ್ಮನಾಯಿತು. ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕಂಡರೂ ಪ್ರಯೋಜನವಾಗಲಿಲ್ಲ. ರಾಜಕೀಯ ಅಧಿಕಾರ ಸಿಕ್ಕರೆ ಈ ಯೋಜನೆಯನ್ನು ಅನುಷ್ಠಾನ ಮಾಡಬಹುದು ಎಂದು ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡೆ. ಜನತೆ ಕೂಡ ರಾಜಕೀಯಕ್ಕೆ ಬರುವಂತೆ ಒತ್ತಡ ಹೇರಿದರು. ನಾನು ಈ ಹಿಂದಿನ ಚುನಾವಣೆಯಲ್ಲೂ ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿದಿದ್ದೆ. ಆಗ ಚುನಾವಣೆಯನ್ನು ಇಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಯೋಜನೆಯನ್ನು ಚುನಾವಣೆಗೆ ಹೇಗೆ ಬಳಸಿಕೊಳ್ಳುತ್ತೀರಿ?
ಇದೇ ನನ್ನ ಕಾರ್ಯಸೂಚಿ. ಪ್ರಚಾರದಲ್ಲಿ ನಕ್ಷೆಯನ್ನೇ ನಾನು ಜನರಿಗೆ ತೋರಿಸುತ್ತಿದ್ದೇನೆ. ನಾನು ಚುನಾಯಿತನಾದರೆ ಮುಖ್ಯಮಂತ್ರಿಯ ಮನವೊಲಿಸಿ ಅಡಿಗಲ್ಲು ಹಾಕಿಸಿ, ವರ್ಷದಲ್ಲಿ ಕಾರ್ಯಗತಗೊಳಿಸುವ ವಾಗ್ದಾನವನ್ನು ಜನತೆಗೆ ನೀಡಿದ್ದೇನೆ.

ಯೋಜನೆಯ ಲಾಭ ಏನು?
ಜಲಾಶಯ ಭರ್ತಿಯಾದ ನಂತರ ಕ್ರೆಸ್ಟ್‌ಗೇಟ್‌ನಿಂದ ನದಿಗೆ ನೀರು ಬಿಡುವ ಬದಲಿಗೆ ಪ್ರತ್ಯೇಕವಾಗಿ ಎಡದಂಡೆ ನಾಲೆ ನಿರ್ಮಿಸಿ ಅಲ್ಲಿಂದ ನವಲಿ-ಕನಕಗಿರಿ ಭಾಗದ ಒಣಭೂಮಿಗೆ ನೀರುಣಿಸಬಹುದು.

ಜತೆಗೆ 200 ಮೆ.ವಾ  ವಿದ್ಯುತ್ ಉತ್ಪಾದಿಸಬಹುದು. ಅದೇ ರೀತಿ ಬಲದಂಡೆ ನಾಲೆ (ತ್ವರಿತ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ) ಮೂಲಕ ವ್ಯರ್ಥ ನೀರನ್ನು 350 ಕಿ.ಮೀವರೆಗೆ ಕೊಂಡೊಯ್ದು ರಾಯಲಸೀಮೆ, ರಾಜ್ಯದ ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರಿಗೆ ಕುಡಿಯುವ ನೀರು ಪೂರೈಸಬಹುದು. ಎರಡೂ ಯೋಜನೆಗಳಿಗೆ ಒಟ್ಟು 36 ಸಾವಿರ ಕೋಟಿ ರೂಪಾಯಿ ಬೇಕು.

ಚುನಾವಣೆಗೆ ಹಣ ಹೇಗೆ ಹೊಂದಿಸುತ್ತೀರಿ?
ಈ ಬಾರಿ ಚುನಾವಣಾ ಆಯೋಗ ಬಿಗಿಕ್ರಮ ಕೈಗೊಂಡಿರುವುದರಿಂದ ಹಣದ ಹೊಳೆ ಹರಿಯುವುದು ಕಷ್ಟ.
ಹಲವೆಡೆ ತಪಾಸಣೆ ನಡೆಸಿ ಹಣದ ಜತೆಗೆ ಹಲವಾರು ಬಗೆಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಮ್ಮಂಥವರೂ ಈಗ ಹಣವಿಲ್ಲದೆ ಚುನಾವಣೆ ಎದುರಿಸಬಹುದು.

ಕನಕಗಿರಿ ಕಣದಲ್ಲಿ `ಭಗೀರಥ'
ಕೊಪ್ಪಳ:  ರೈತರ ಬದುಕಿಗೆ ಆಶಾಕಿರಣವಾಗಿ ನಿವೃತ್ತ ಎಂಜಿನಿಯರ್ ವಿ. ತಿಪ್ಪಣ್ಣ ಉರುಫ್ ತಿಪ್ಪಯ್ಯ ಸ್ವಾಮಿ ವಡ್ಡರಹಳ್ಳಿ ಅವರು ತುಂಗಭದ್ರಾ ನದಿಯ ಪ್ರವಾಹದ ನೀರನ್ನು ಬಳಸಿಕೊಂಡು ಸುಮಾರು 5.50 ಲಕ್ಷ ಎಕರೆಗೆ ನೀರುಣಿಸುವ ಯೋಜನೆ ರೂಪಿಸ್ದ್ದಿದಾರೆ. ಅದನ್ನೇ ಮುಂದಿಟ್ಟುಕೊಂಡು ಕನಕಗಿರಿ ಮೀಸಲು (ಪರಿಶಿಷ್ಟ ಜಾತಿ) ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಈ ಯೋಜನೆಯ ನಕ್ಷೆಯನ್ನೇ ತೋರಿಸಿ ಕನಕಗಿರಿ ಕ್ಷೇತ್ರದಲ್ಲಿ ಮತ ಯಾಚನೆಯಲ್ಲಿ ತೊಡಗಿದ್ದಾರೆ.

ಗಂಗಾವತಿಯಲ್ಲಿ `ಪ್ರಜಾವಾಣಿ' ಪ್ರತಿನಿಧಿಯೊಂದಿಗೆ ಮಾತಿಗೆ ಸಿಕ್ಕ ರಾಜ್ಯ ನೀರಾವರಿ ರಕ್ಷಣಾ ವೇದಿಕೆಯ ಅಧ್ಯಕ್ಷರೂ ಆದ ತಿಪ್ಪಣ್ಣ ಯೋಜನೆಯಿಂದಾಗುವ ಲಾಭವನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT