ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಬೆಲೆ ಕುಸಿತ: ರಾಜ್ಯದ ಮಧ್ಯಪ್ರವೇಶ

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭತ್ತದ ಬೆಲೆ ಕುಸಿದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ತೀರ್ಮಾನಿಸಿದ್ದು, 100 ರೂಪಾಯಿ ಪ್ರೋತ್ಸಾಹ ಧನದೊಂದಿಗೆ ಒಂದೆರಡು ದಿನಗಳಲ್ಲಿ ಭತ್ತ ಖರೀದಿಸಲು ತೀರ್ಮಾನಿಸಿದೆ.

ದಾವಣಗೆರೆ, ಕೊಪ್ಪಳ, ರಾಯಚೂರು, ಸಿಂಧನೂರು ಮತ್ತು ಗಂಗಾವತಿ ಭಾಗದಲ್ಲಿ ಮೊದಲ ಹಂತದಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಸೂಚಿಸಲಾಗಿದೆ. ಇದರ ನಂತರವೂ ಅಗತ್ಯ ಇರುವ ಕಡೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕೃಷಿ ಸಚಿವ ಉಮೇಶ ಕತ್ತಿ ಶುಕ್ರವಾರ ಇಲ್ಲಿ ತಿಳಿಸಿದರು.

ಇದೇ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ತಿಳಿಸಿದ್ದು, ಎ-ಗ್ರೇಡ್ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ರೂ 1030 ಮತ್ತು ಬಿ-ಗ್ರೇಡ್ ಭತ್ತಕ್ಕೆ 1000 ರೂಪಾಯಿ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಇದರ ಜತೆಗೆ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಕ್ವಿಂಟಲ್‌ಗೆ ಹೆಚ್ಚುವರಿಯಾಗಿ 100 ರೂಪಾಯಿ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈ ದರದಲ್ಲಿ ಆಗಸ್ಟ್ 31ರವರೆಗೆ ಭತ್ತ ಖರೀದಿ ಮಾಡಲಾಗುವುದು. ಆನಂತರ ಅಂದರೆ ಸೆ.1ರ ಬಳಿಕ ಕೇಂದ್ರ ಸರ್ಕಾರದ ಪರಿಷ್ಕೃತ ದರ ಅನ್ವಯವಾಗಲಿದೆ. ಅದರ ಪ್ರಕಾರ ಎ-ಗ್ರೇಡ್ ಭತ್ತಕ್ಕೆ ರೂ 1080, ಬಿ-ಗ್ರೇಡ್ ಭತ್ತಕ್ಕೆ ರೂ 1110 ಕೊಟ್ಟು ಖರೀದಿ ಮಾಡಲಾಗುವುದು. ಇದು ಇತ್ತೀಚೆಗೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಬೆಂಬಲ ಬೆಲೆಯ ದರ ಎಂದು ಕತ್ತಿ ವಿವರಿಸಿದರು.

ಪ್ರಸಕ್ತ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ ಅಂದರೆ, 57.84 ಲಕ್ಷ ಟನ್ ಭತ್ತ ಬೆಳೆದಿದ್ದು, ಈ ಹಿನ್ನೆಲೆಯಲ್ಲಿ ದರ ಕುಸಿದಿದೆ. ಈ ಕಾರಣಕ್ಕೆ ಕನಿಷ್ಠ 1500 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡುವಂತೆ ಕೋರಿದ್ದು, ಆ ಪ್ರಕಾರ ಕೇಂದ್ರ ಸರ್ಕಾರ ನಡೆದುಕೊಂಡಿಲ್ಲ ಎಂದು ದೂರಿದರು.

ನಿಯೋಗ: ಭತ್ತಕ್ಕೆ ಬೆಂಬಲ ಬೆಲೆಯನ್ನು ಕನಿಷ್ಠ 1500 ರೂಪಾಯಿಗೆ ನಿಗದಿಪಡಿಸುವಂತೆ ಒತ್ತಾಯಿಸಿ ಕೇಂದ್ರಕ್ಕೆ ಇದೇ 14ರಂದು ನಿಯೋಗ ತೆಗೆದುಕೊಂಡು ಹೋಗಲಾಗುವುದು. ಕೇಂದ್ರ ಕೃಷಿ, ರಸಗೊಬ್ಬರ ಸಚಿವರು ಸೇರಿದಂತೆ ಇತರರನ್ನು ಭೇಟಿ ಮಾಡಲಾಗುವುದು. ನಿಯೋಗದ ಜತೆ ಭತ್ತ ಬೆಳೆಯುವ ಭಾಗಗಳ ಕೆಲ ಶಾಸಕರು ಮತ್ತು ರೈತರನ್ನೂ ಕರೆದೊಯ್ಯಲಾಗುವುದು ಎಂದು ಹೇಳಿದರು. ಈ ತಿಂಗಳ 20ರಂದು ಸುವರ್ಣ ಭೂಮಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಕತ್ತಿ ತಿಳಿಸಿದರು.

ಮಲತಾಯಿ ಧೋರಣೆ: ಕೇಂದ್ರ ಸರ್ಕಾರ ರಸಗೊಬ್ಬರ ಪೂರೈಕೆಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನಿರೀಕ್ಷೆಯಂತೆ ಸರಬರಾಜು ಮಾಡುತ್ತಿಲ್ಲ ಎಂದು ದೂರಿದರು. ಇದರ ನಡುವೆಯೂ ರಸಗೊಬ್ಬರ ಮತ್ತು ಬೀಜದ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.

ಮುಂಗಾರು ಹಂಗಾಮಿನಲ್ಲಿ 74.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹಾಕಿಕೊಂಡಿದ್ದು, ಇದರಲ್ಲಿ 3.92 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT