ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರದಿಂದ ನಡೆದ ಸ್ಮಾರಕಗಳ ಸಂರಕ್ಷಣಾ ಕಾರ್ಯ

Last Updated 29 ಜೂನ್ 2012, 8:50 IST
ಅಕ್ಷರ ಗಾತ್ರ

ಹಂಪಿ (ಹೊಸಪೇಟೆ): ಕೃಷ್ಣ ಬಜಾರ್, ವಿಜಯವಿಠ್ಠಲ ಸೇರಿದಂತೆ ಐತಿಹಾಸಿಕ ಹಂಪಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಸ್ಮಾರಕಗಳ ಸಂರಕ್ಷಣಾ ಕಾರ್ಯವನ್ನು ಚುರುಕುಗೊಳಿಸಿದೆ.

ಪ್ರಸಕ್ತ ವರ್ಷದ ಸಂರಕ್ಷಣಾ ಆರ್ಥಿಕ ಅನುದಾನದಲ್ಲಿ ಪ್ರಮುಖವಾಗಿ ಹಂಪಿಯ ಶ್ರೀಕೃಷ್ಣ ಬಜಾರ್ ಸಾಲು ಮಂಟಪಗಳು, ಪುಷ್ಕರಣಿಗಳು, ದೇವಾಲಯಗಳ ನೆಲಹಾಸು ಗೋಡೆಗಳನ್ನು ಮರು ಜೋಡಣೆ ಮಾಡುವ ಮೂಲಕ ಅವಸಾನದ ಅಂಚಿನಲ್ಲಿದ್ದ ಅನೇಕ ಸ್ಮಾರಕಗಳನ್ನು ಸಂರಕ್ಷಿಸಲು ಮುಂದಾಗಿದೆ.

ಕೃಷ್ಣ ಬಜಾರ್‌ನ 200 ಮೀಟರ್‌ಗೂ ಅಧಿಕ ಉದ್ದವಾಗಿದ್ದ ಸಾಲು ಮಂಟಪಗಳು, ವಿಷ್ಣು ದೇವಾಲಯದ ನೆಲಹಾಸು ಮತ್ತು ಗೋಡೆಗಳು, ಹಳೆ ಶಿವಾಲಯ ಮತ್ತು ವಿಜಯವಿಠ್ಠಲನ ಬಳಿ ಇರುವ ಪುಷ್ಕರಣಿಯ ಗೋಡೆಗಳ ಅನೇಕ ಹಂತದಲ್ಲಿ ಹಾಳಾಗಿದ್ದು ಮರು ಜೋಡಣೆ ಹಾಗೂ ಸಂರಕ್ಷಣಾ ಕಾರ್ಯಕ್ಕೆ ಕ್ರಿಯಾ ಯೋಜನೆ ಸಲ್ಲಿಸಿದಂತೆ ಕೇಂದ್ರ ಸರ್ಕಾರ ಸ್ಮಾರಕಗಳ ಗಂಭೀರತೆಯನ್ನು ಅರಿತು ಈ ವರ್ಷದ ಅನುದಾನ ಬಿಡುಗಡೆ ಮಾಡಿದ್ದು ಜೋಡಣಾ ಕಾರ್ಯವನ್ನು ಭರದಿಂದ ಸಾಗಿದೆ.

ಬಹುತೇಕ ಹಾಳಾಗಿದ್ದ ಕೃಷ್ಣ ಬಜಾರ್ ಸಾಲು ಮಂಟಪಗಳ ಜೋಡಣಾ ಕಾರ್ಯ ಪೂರ್ಣಗೊಂಡಿದ್ದು ಪ್ರವೇಶದ್ವಾರವಾಗಿರುವ ಮಂಟಪದ ಕೆಲಸ ಮಾತ್ರ ಸ್ವಲ್ಪ ಬಾಕಿ ಉಳಿದಿದೆ. ವಿಷ್ಣು ದೇವಾಲಯ, ವಿಜಯವಿಠ್ಠಲ ಬಳಿಯ ಪುಷ್ಕರಣಿ ಜೋಡಣಾ ಕಾರ್ಯವೂ ತ್ವರಿತಗತಿಯಲ್ಲಿ ನಡೆದಿದೆ.

ಇದು ಇಲಾಖೆಯ ನಿರಂತರ ಕಾರ್ಯವಾಗಿದ್ದು ಈ ವರ್ಷದ ಅನುದಾನ ಬಿಡುಗಡೆಯಾಗಿರುವ ಕಾರಣ ತ್ವರಿತವಾಗಿ ಕಾರ್ಯಾರಂಭ ಮಾಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಸುಮಾರು 200 ಮೀಟರ್‌ಗೂ ಅಧಿಕ ಉದ್ದದ ಈ ಸಾಲು ಮಂಟಪಗಳ ಜೋಡಣೆಯಿಂದ ಕೃಷ್ಣ ಬಜಾರ್ ಸುಂದರವಾಗಿ ಕಂಗೊಳಿಸುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT