ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದ ನಾಯಕಿ?

Last Updated 24 ಜನವರಿ 2019, 12:02 IST
ಅಕ್ಷರ ಗಾತ್ರ

ಪ್ರಿಯಾಂಕಾ ಗಾಂಧಿ. ಅದೇ ನಗು. ಅದೇ ಆಕರ್ಷಣೆ. ಚುನಾವಣಾ ಪ್ರಚಾರ ಸಭೆಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿ ಹದಿಮೂರು ವರ್ಷಗಳೇ ಕಳೆದಿವೆ. ಆದರೂ ರಾಜಕೀಯದ ಜತೆ ಸೋಕಿಯೂ ಸೋಕದಂತಹ ನಂಟು. ವೇದಿಕೆಯಲ್ಲಿಯೋ ರೋಡ್ ಶೋ ಭಾಗವಾಗಿಯೋ ಒಂದು ಕ್ಷಣ ಮಿಂಚಿ ಮರೆಯಾಗಿಬಿಡುತ್ತಾರೆ.

ಪುನಃ ಅದೇ ಕುತೂಹಲ. ಅದೇ ಪ್ರಶ್ನೆ- ರಾಜಕೀಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದಿಲ್ಲವೆ? ಉತ್ತರ ಅಂದೂ ಇಂದೂ ಒಂದೇ- `ಅಮ್ಮನ ಸಲುವಾಗಿ ಪ್ರಚಾರ ಮಾಡುತ್ತಿದ್ದೇನೆ. ಈ ಪಾಲ್ಗೊಳ್ಳುವಿಕೆ ಅಣ್ಣ ರಾಹುಲ್‌ಗೆ ನೆರವಾಗಲಷ್ಟೇ ಸೀಮಿತ!

ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸುವ ಕುರಿತು ಅವರು ತಮ್ಮ ನಿರಾಸಕ್ತಿಯನ್ನು ಹೀಗೆ ಪದೇ ಪದೇ ತೋಡಿಕೊಂಡಿರುವುದು ಎಷ್ಟು ನಿಜವೋ ಅವರ ಬರುವಿಕೆಗಾಗಿ ಕಾಂಗ್ರೆಸ್ ಕಾರ್ಯಕರ್ತರು ಹಂಬಲಿಸುತ್ತಿರುವುದೂ ಅಷ್ಟೇ ನಿಜ. `ಪಕ್ಷಕ್ಕೆ ಅವರೇ ಭವಿಷ್ಯ ಎಂದು ಭಾವಿಸಿರುವ ದೊಡ್ಡ ಬಳಗವೇ ಕಾಂಗ್ರೆಸ್‌ನಲ್ಲಿದ್ದು, ಪ್ರಿಯಾಂಕಾ ಅವರಿಗಾಗಿ ಅವರ ಮನಸ್ಸು ಸದಾ ತುಡಿಯುತ್ತಲೇ ಇದೆ.

ಲೋಕಸಭೆಯಲ್ಲಿ ಅಮ್ಮ ಸೋನಿಯಾ ಗಾಂಧಿ ಮತ್ತು ಅಣ್ಣ ರಾಹುಲ್ ಪ್ರತಿನಿಧಿಸುವ ಉತ್ತರಪ್ರದೇಶದ ರಾಯಬರೇಲಿ ಮತ್ತು ಅಮೇಥಿ ಕ್ಷೇತ್ರಗಳನ್ನು ಬಿಟ್ಟರೆ ಬೇರೆಲ್ಲೂ ಅವರು ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಒಮ್ಮೆ ಸುಲ್ತಾನಪುರದಲ್ಲಿ ಪ್ರಚಾರ ಮಾಡಿದ್ದಾರೆ. ಈ ಎಲ್ಲ ಪ್ರಚಾರ ಬಹುಮಟ್ಟಿಗೆ ಲೋಕಸಭಾ ಚುನಾವಣೆಗೆ ಸೀಮಿತ ಆಗಿತ್ತು.

ಆದರೆ, ಈ ಸಲ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೂ ಪ್ರಚಾರದ ರಥ ಏರಿದ್ದಾರೆ. ನೆಹರೂ ಕುಟುಂಬದ `ಕರ್ಮಭೂಮಿ~ ರಾಯಬರೇಲಿ, ಅಮೇಥಿ ಕ್ಷೇತ್ರಗಳ ಎಲ್ಲೆಗಳನ್ನು ದಾಟಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚಿಸಿದ್ದಾರೆ. ಪುತ್ರರಾದ ರೇಹನ್ ಮತ್ತು ಮಿರಯಾ ಕೂಡ ಅಮ್ಮನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಪತಿ ರಾಬರ್ಟ್ ವಾದ್ರಾ ಅವರೂ ಪ್ರಚಾರ ಕಣದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. `ಜನರು ಬಯಸಿದರೆ ರಾಜಕೀಯಕ್ಕೆ ಬರುತ್ತೇನೆ~ ಎಂದು ರಾಬರ್ಟ್ ಹೇಳಿಕೆ ನೀಡಿ ಪಕ್ಷದೊಳಗೆ ಗುಸುಗುಸುಗೆ ಗ್ರಾಸ ಒದಗಿಸಿದ್ದಾರೆ.

ಪ್ರಿಯಾಂಕಾ ರಾಜಕೀಯ ರಂಗಪ್ರವೇಶ ಕುರಿತು ಸಾರ್ವಜನಿಕ ವಲಯದಲ್ಲಿ ಇಷ್ಟು ಆಸಕ್ತಿ ಏಕೆ ಎಂಬ ಪ್ರಶ್ನೆಗೆ ಕೆಲವರು ರಾಹುಲ್ ಗಾಂಧಿ ಬಗೆಗಿನ ನಿರೀಕ್ಷೆಗಳ ಸಾಫಲ್ಯ-ವೈಫಲ್ಯದ ನೆರಳಿನಲ್ಲಿ ಉತ್ತರ ಹುಡುಕಲು ಯತ್ನಿಸುತ್ತಾರೆ. ನಾಯಕತ್ವದ ವಿಚಾರದಲ್ಲಿ ಅಣ್ಣನ ಸಾಮರ್ಥ್ಯಕ್ಕೆ ಮೀರಿದ ಮೋಡಿಯೊಂದನ್ನು ತಂಗಿಯಿಂದ ನಿರೀಕ್ಷಿಸುತ್ತಿದ್ದಾರೆ ಎಂದು ಅನಿಸುತ್ತದೆ.

ಪ್ರಿಯಾಂಕಾ ಅವರಿಗೆ ಕಳೆದ ತಿಂಗಳಷ್ಟೇ ನಲವತ್ತು ತುಂಬಿತು. ಅವರ ಮುಖ ಕಂಡ ಕೂಡಲೇ ಜನರು ಅವರನ್ನು ಅಜ್ಜಿ ಇಂದಿರಾ ಗಾಂಧಿ ಜತೆ ಹೋಲಿಸಲು ಆರಂಭಿಸುತ್ತಾರೆ. ಆಕರ್ಷಕ ಹತ್ತಿ ಸೀರೆ, ಕೇಶವಿನ್ಯಾಸ, ನಡೆಯುವ ಶೈಲಿ ಎಲ್ಲವೂ ಇಂದಿರಾ ಅವರನ್ನು ನೆನಪಿಸುತ್ತವೆ. ನೆಹರೂ ಪುತ್ರಿ ಇಂದಿರಾ ಎಷ್ಟೇ ವಿವಾದಾಸ್ಪದ ರಾಜಕಾರಣಿ ಆಗಿದ್ದರೂ ದೇಶದ ರಾಜಕೀಯ ನಾಯಕರಲ್ಲಿ ಹೆಚ್ಚು ಗೌರವಕ್ಕೆ ಪಾತ್ರರಾದವರು. ಸಮೀಕ್ಷೆಗಳೇ ಈ ಅಂಶವನ್ನು ದೃಢಪಡಿಸಿವೆ. ಪ್ರಿಯಾಂಕಾ ಬಗೆಗಿನ ಅಭಿಮಾನಕ್ಕೆ ಈ ಅಂಶವೂ ಕಾರಣ ಆಗಿರಬಹುದು.

ಹೋಲಿಕೆ ಅಜ್ಜಿಯೊಂದಿಗೆ ಮಾತ್ರವಲ್ಲ; ಅಣ್ಣನವರೆಗೂ ವಿಸ್ತರಿಸುತ್ತದೆ. ರಾಹುಲ್ ಜನರ ಜತೆ ವ್ಯವಹರಿಸುವ ಶೈಲಿ, ಎನ್‌ಜಿಒ (ಸರ್ಕಾರೇತರ ಸಂಸ್ಥೆ)- ಕಾರ್ಪೊರೇಟ್ ನಿರ್ವಹಣಾ ತಂತ್ರಗಳ ಮಿಶ್ರಣದಂತೆ ಕಾಣುತ್ತದೆ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ. ಆದರೆ ಪ್ರಿಯಾಂಕಾ ಅವರದು ಸಂಯಮದ ಸ್ನೇಹಪೂರ್ವಕ ನಡೆ.

ಜನಸಾಮಾನ್ಯರ ಜತೆ ಸಲೀಸಾಗಿ ಬೆರೆತು ಅವರ ಕಷ್ಟಸುಖಗಳಿಗೆ ಮಿಡಿಯುವ ಮನಸ್ಸು. ಅವರು ಹೋದಲ್ಲೆಲ್ಲ ಜನ ಮುಗಿ ಬೀಳಲು ಈ ಎಲ್ಲ ಅಂಶಗಳು ಪೂರಕವಾಗಿ ಕೆಲಸ ಮಾಡಿವೆ ಎಂದು ಹೇಳಲಾಗುತ್ತಿದೆ.

ಪ್ರಿಯಾಂಕಾ ಅವರಲ್ಲಿ ಜನರು ಇಂದಿರಾ ಗಾಂಧಿಯನ್ನು ಕಾಣಲುಬಯಸುತ್ತಾರೆ. ಆದರೆ, ಅವರು ಮಾತ್ರ ತಾನು ಅಪ್ಪನ ಮಗಳು ಎನ್ನುತ್ತಾರೆ. `ನಮ್ಮ ಅಜ್ಜಿ ವಿಭಿನ್ನ ವ್ಯಕ್ತಿತ್ವದವರು. ಅಪ್ಪ ತುಂಬ ವಿನಯಶೀಲ. ನನ್ನದು ಅಪ್ಪನಿಗಿಂತ ಸುಕೋಮಲ ಸ್ವಭಾವ~ ಎಂದು ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಅವರೇ ಹೇಳಿಕೊಂಡಿದ್ದಾರೆ.

ವನ್ಯಜೀವಿಗಳ ಮತ್ತು ವ್ಯನ್ಯಜೀವಿ ಫೋಟೊಗ್ರಫಿ ಬಗ್ಗೆ ರಾಜೀವ್‌ಗೆ ತೀವ್ರ ಆಸಕ್ತಿ. ಅದೇ ಆಸಕ್ತಿ ಮಗಳಿಗೂ ರಕ್ತಗತವಾಗಿ ಬಂದಿದೆ. ಕೆಲವು ತಿಂಗಳುಗಳ ಹಿಂದೆ ಹುಲಿಗಳ ಬಗ್ಗೆ ಒಂದು ಪುಸ್ತಕವೊಂದನ್ನು ಹೊರತಂದಿದ್ದಾರೆ. ಹೆಸರು: `ರಣತಂಬೂರ್: ದಿ ಟೈಗರ್ಸ್‌ ರೆಲ್ಮ್.

ಅಣ್ಣನಂತೆ ಪ್ರಿಯಾಂಕಾ ಕೇಂಬ್ರಿಜ್, ಹಾರ್ವರ್ಡ್ ವಿಶ್ವವಿದ್ಯಾಲಯಗಳಿಗೆ ಹೋಗಿಲ್ಲ. ದೆಹಲಿಯಲ್ಲೇ ವ್ಯಾಸಂಗ ಮಾಡಿದ್ದಾರೆ. ಜೀಸಸ್ ಅಂಡ್ ಮೇರಿ ಕಾಲೇಜಿನಲ್ಲಿ ಮನಃಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಬೌದ್ಧ ವಿಚಾರಗಳ ಬಗ್ಗೆ ಸ್ನಾತಕೋತ್ತರ ಪದವಿ ಅಭ್ಯಸಿಸುತ್ತಿದ್ದಾರೆ ಎಂದು ಒಂದೆರಡು ವರ್ಷಗಳ ಹಿಂದೆ ವರದಿ ಆಗಿತ್ತು. ಈ ವೇಳೆಗೆ ಮುಗಿದಿರಲೂಬಹುದು.

ಪ್ರಚಾರಕ್ಕೆ ಹಾತೊರೆಯುವುದಿಲ್ಲ. ವಾದ-ವಿವಾದಗಳ ಸುಳಿಗೆ ಸಿಲುಕಿದ ನಿದರ್ಶನಗಳೂ ಇಲ್ಲ. ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುತ್ತಾರೆ. ಆಡುವ ಮಾತು ತೂಕದಿಂದ ಕೂಡಿರುತ್ತದೆ. ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸುಲಲಿತವಾಗಿ ಮಾತನಾಡಬಲ್ಲರು. `ಹಿಂದಿ ಭಾಷೆಯಲ್ಲಿ ನಾನು ತಕ್ಕಮಟ್ಟಿಗೆ ಪ್ರಭುತ್ವ ಸಾಧಿಸಲು ತೇಜಿ ಬಚ್ಚನ್ (ನಟ ಅಮಿತಾಬ್ ಬಚ್ಚನ್‌ರ ತಾಯಿ) ಅವರೇ ಕಾರಣ. ಎಳವೆಯಲ್ಲಿ ಅವರೊಂದಿಗೆ ಹೆಚ್ಚಿನ ಸಮಯ ಕಳೆದಿದ್ದೇನೆ. ಅವರು ಓದಲು ನನಗೆ ಹರಿವಂಶ ರಾಯ್ ಬಚ್ಚನ್‌ಜೀ ಅವರ ಕವನಗಳನ್ನು ನೀಡುತ್ತಿದ್ದರು. ಅವುಗಳನ್ನು ನಾನು ಆಸಕ್ತಿಯಿಂದ ಓದುತ್ತಿದ್ದೆ. ಈ ಮೂಲಕ ಹಿಂದಿ ಸಾಹಿತ್ಯದ ಬಗ್ಗೆ ಒಲವು ಮೂಡಿತು~ ಎಂದು ಸ್ಮರಿಸಿದ್ದಾರೆ.

ಅಮ್ಮನ ಜತೆ ಓಡಾಡುವಾಗ, ಚುನಾವಣಾ ಪ್ರಚಾರ ಸಭೆಗಳಿಗೆ ಬರುವಾಗ ಸೀರೆಯಲ್ಲಿ ಗಂಭೀರವಾಗಿ ಕಾಣಿಸುವ ಪ್ರಿಯಾಂಕಾ, ದೆಹಲಿಯಲ್ಲಿ ಆಪ್ತರ ಔತಣಕೂಟಗಳಿಗೆ ಹೋದಾಗ ಆಧುನಿಕ ದಿರಿಸಿನಲ್ಲೇ ಕಾಣಿಸಿಕೊಂಡಿದ್ದಾರೆ. ಫ್ಯಾಷನ್ ವಿನ್ಯಾಸದ ಬಗ್ಗೆ ಆಸಕ್ತಿಯೂ ಇದೆ. ದೈನಂದಿನ ಜೀವನದಲ್ಲಿ ಸಂಸಾರ, ಇಬ್ಬರು ಮಕ್ಕಳನ್ನು ನೋಡಿಕೊಳ್ಳುವುದಕ್ಕೇ ಹೆಚ್ಚು ಸಮಯ ಕಳೆಯುತ್ತಾರೆ.

ರಾಷ್ಟ್ರೀಯ ರಾಜಕಾರಣದ ಸಾಧಕ-ಬಾಧಕಗಳನ್ನು ಪ್ರಿಯಾಂಕಾ ಅವರು ಎರಡು ದಶಕಗಳಿಂದ ತೀರ ಹತ್ತಿರದಿಂದ ನೋಡಿದ್ದಾರೆ. ಕಾಂಗ್ರೆಸ್ ಮೇಲೆ ಸೋನಿಯಾ ನಿಯಂತ್ರಣ ಸಾಧಿಸಿದ ನಂತರ ಅವರ ನಿವಾಸಕ್ಕೆ ಬರುತ್ತಿದ್ದ ಪಕ್ಷದ ಮುಖಂಡರನ್ನು, ಅವರ ವರ್ತನೆಗಳನ್ನು ಕಣ್ಣಾರೆ ಕಂಡಿದ್ದಾರೆ. ಭಟ್ಟಂಗಿತನಕ್ಕೆ ರೋಸಿಹೋಗಿ ವ್ಯಕ್ತಿ ಪೂಜೆ ಬಿಡುವಂತೆಯೂ ಸೂಚಿಸಿದ್ದಾರೆ.

ಹತ್ತೊಂಬತ್ತು ವರ್ಷ ವಯಸ್ಸಿಗೇ ತಂದೆಯನ್ನು ಕಳೆದುಕೊಂಡದ್ದು ಅಂತಿಂಥ ಆಘಾತ ಅಲ್ಲ. ಅದರ ತೀವ್ರತೆ ಎಂತಹದು ಎಂಬುದಕ್ಕೆ 2004ರಲ್ಲಿ ನಡೆದ ಒಂದು ಘಟನೆಯನ್ನು ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಅವರೇ ನೆನಪಿಸಿಕೊಂಡಿದ್ದಾರೆ. `ತಾಯಿಯ ಕಚೇರಿಯೊಳಗೆ ಹೋದಾಗ ಮುಖಂಡರು ಅನೇಕರು ಅಮ್ಮನನ್ನು ಸುತ್ತುವರಿದಿದ್ದರು. ಎಲ್ಲರದೂ ಒಂದೇ ಆಗ್ರಹ- ನೀವು ಪ್ರಧಾನಿ ಆಗಬೇಕು. ಆ ಕ್ಷಣ ನನಗೆ ಏನಾಯಿತೋ ಏನೋ ಚೀರಿಕೊಂಡುಬಿಟ್ಟೆ.

ತಂದೆಯನ್ನು ಕಳೆದುಕೊಂಡು ಪಟ್ಟ ವೇದನೆಯಿಂದ ಹೊರಬರುವ ಪ್ರಯತ್ನವಾಗಿಯೇ ತಮಿಳುನಾಡಿನ ವೆಲ್ಲೂರು ಜೈಲಿನಲ್ಲಿ ನಳಿನಿಯನ್ನು ಭೇಟಿ ಆಗಿದ್ದರು. ರಾಜೀವ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ನಳಿನಿ ಒಬ್ಬರು. ಜೈಲಿನಲ್ಲಿ ಆಕೆಯೊಂದಿಗೆ ಒಂದು ತಾಸು ಕುಳಿತು ಮಾತನಾಡಿದ್ದಾರೆ. `ನನ್ನ ತಂದೆಯಿಂದ ನಿಮಗೆ ತೊಂದರೆ ಏನಿತ್ತು? ಅವರನ್ನು ಏಕೆ ಕೊಲ್ಲಲಾಯಿತು ಎಂದು ಕೇಳಿದ್ದಾರೆ. ಕೋಪ, ದ್ವೇಷದಲ್ಲಿ ತಮಗೆ ನಂಬಿಕೆ ಇಲ್ಲ ಎಂದು ಆ ಸಂದರ್ಭದಲ್ಲಿ ಹೇಳಿಕೆ ನೀಡಿ ಪ್ರಿಯಾಂಕಾ ಪ್ರಬುದ್ಧತೆ ಮೆರೆದರು.

ಪ್ರಿಯಾಂಕಾ ಅವರ ಪತಿ ರಾಬರ್ಟ್ ಉತ್ತರಪ್ರದೇಶದ ಮೊರದಾಬಾದ್ ಮೂಲದವರು. ಆಭರಣ ರಫ್ತು ಉದ್ಯಮ ಸಂಸ್ಥೆ `ಆರ್ಟೆಕ್ಸ್~ ನೋಡಿಕೊಳ್ಳುತ್ತಿದ್ದಾರೆ. `ಜನರು ಕರೆದರೆ ಬರುವೆ~ ಎಂದು ರಾಜಕೀಯ ರಂಗಪ್ರವೇಶಕ್ಕೆ ಅವರು ತುದಿಗಾಲ ಮೇಲೆ ನಿಂತಿದ್ದಾರೆ.

ಆದರೆ, ಬನ್ನಿ ಅಂತ ಅವರನ್ನು ಬಹಿರಂಗವಾಗಿ ಯಾರೂ ಆಹ್ವಾನಿಸಿಲ್ಲ. ಆದರೆ, ಅಪಾರ ಭರವಸೆ ಇಟ್ಟು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಪ್ರಿಯಾಂಕಾ ಅವರನ್ನು ಮತ್ತೆ ಮತ್ತೆ ಒತ್ತಾಯಿಸಿದರೂ ಅವರು ಸಕ್ರಿಯ ರಾಜಕೀಯದಿಂದ ದೂರ ಸರಿಯುತ್ತಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT