ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗಮಂಡಲದಲ್ಲೇ ಮಳೆಗೆ ಬರ!

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು: ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿಯೇ ಈ ಬಾರಿ ಮಳೆಯ ಕೊರತೆ ಉಂಟಾಗಿದೆ. ತ್ರಿವೇಣಿ ಸಂಗಮ ಭಾಗಮಂಡಲದಲ್ಲಿಯೂ ವಾಡಿಕೆಯ ಮಳೆ ಇಲ್ಲ. ಇದೇ ಮೊದಲ ಬಾರಿಗೆ ಇಲ್ಲಿ ಬರಗಾಲದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ.ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಸರಾಸರಿ 300 ಇಂಚು ಮಳೆಯಾಗುತ್ತದೆ. ಆದರೆ ಈ ವರ್ಷ (ಸೆಪ್ಟೆಂಬರ್ ಕೊನೆ ವರೆಗೆ) ಸುರಿದದ್ದು ಕೇವಲ 145 ಇಂಚು.
 
ಅಂದರೆ ವಾಡಿಕೆಯ ಅರ್ಧದಷ್ಟೂ ಇಲ್ಲ. ಕಳೆದ ವರ್ಷ ಕೂಡ ಇಲ್ಲಿ ಮಳೆ ಕಡಿಮೆಯಾಗಿತ್ತು. ಈ ಬಾರಿ ಅದಕ್ಕಿಂತಲೂ ಕಡಿಮೆ. ಕಳೆದ ವರ್ಷ ಅಕ್ಟೋಬರ್ ವೇಳೆಗೆ 5409.2 ಮಿಮೀ (212 ಇಂಚು) ಮಳೆಯಾಗಿತ್ತು. ಈ ಬಾರಿ ಕಳೆದ ಸಲಕ್ಕಿಂತ 67 ಇಂಚು ಕಡಿಮೆಯಾಗಿದೆ. ಕಾವೇರಿ ಮಾತೆ ಹುಟ್ಟುವ ಸ್ಥಳದಲ್ಲಿಯೇ ಬರದ ಛಾಯೆ ಕಾಣಿಸಿಕೊಳ್ಳುತ್ತಿದೆ.

ತಲಕಾವೇರಿಯಲ್ಲಿ ಉದ್ಭವವಾಗುವ ಕಾವೇರಿ ನದಿ ಭಾಗಮಂಡಲಕ್ಕೆ ಬಂದಾಗಿ ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ ನದಿಗಳ ಸಂಗಮವಾಗುತ್ತದೆ. ಉಳಿದೆರಡು ನದಿಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡು ಕಾವೇರಿ ನಾಪೋಕ್ಲು, ಸಿದ್ದಾಪುರ, ಕುಶಾಲನಗರ ಮಾರ್ಗವಾಗಿ ಮುಂದೆ ಹರಿಯುತ್ತಾಳೆ.

ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಈವರೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ. ಆದರೆ ಕಳೆದ 2 ವರ್ಷಗಳಿಂದ ಬೇಸಿಗೆ ವ್ಯವಸಾಯಕ್ಕೆ ಇಲ್ಲಿ ನೀರಿನ ಕೊರತೆ ಉಂಟಾಗಿದೆ. ಈ ಬಾರಿ ಕುಡಿಯುವ ನೀರಿಗೂ ಸಮಸ್ಯೆಯಾದರೆ ಅಚ್ಚರಿ ಏನಲ್ಲ ಎಂದು ಭಾಗಮಂಡಲ ಗ್ರಾಮದ ಶ್ರೀಪಾದ ಹೇಳುತ್ತಾರೆ.

ಕಾಫಿ, ಬತ್ತ, ಏಲಕ್ಕಿ ಇಲ್ಲಿನ ಪ್ರಮುಖ ಬೆಳೆ. ಮಳೆಯ ಕೊರತೆಯಿಂದ ಈ ಬಾರಿ ಕಾಫಿ  ಮತ್ತು ಏಲಕ್ಕಿಗೆ ತೊಂದರೆಯಾಗಿದೆ. ಮಳೆಗಾಲದ ಬತ್ತಕ್ಕೆ ತೊಂದರೆ ಇಲ್ಲ. ಆದರೆ  `ಮಾಣಿ ಗದ್ದೆ~ (ಎತ್ತರ ಪ್ರದೇಶದಲ್ಲಿರುವ ಗದ್ದೆ) ಗಳಿಗೆ ನೀರಿನ ಕೊರತೆಯಾಗುತ್ತದೆ ಎಂದು ರೈತರು ಆತಂಕದಲ್ಲಿದ್ದಾರೆ.

ಕೊಡಗಿನ ಕಾವೇರಿ, ವಯ್ಯಾರಿ ಎಂದು ಹೊಗಳುವ, ಜೀವ ನದಿ ಎಂದು ಕೊಂಡಾಡುವ ಕೊಡಗಿನಲ್ಲಿ ಕಾವೇರಿ ಹೋರಾಟ ಮಾತ್ರ ತೀವ್ರವಾಗಿಲ್ಲ. ಕೊಡಗಿನ ಬಹುತೇಕ ಮನೆಗಳಲ್ಲಿ ಕಾವೇರಿ ಪೂಜೆ ನಡೆಯುತ್ತದೆ. ಆದರೆ ಕಾವೇರಿ ನದಿಯ ಉಪಯೋಗ ಮಾತ್ರ ಇಲ್ಲಿನ ಜನಕ್ಕೆ ಸಿಕ್ಕಿಲ್ಲ. ಕಾವೇರಿ ನದಿಗೆ ಸಂಬಂಧಿಸಿದಂತೆ ಇಲ್ಲಿ ನೀರಾವರಿ ಯೋಜನೆಗಳಿಲ್ಲ. ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯಗಳಿದ್ದರೂ ಅವುಗಳಿಂದ ಕೊಡಗಿನ ರೈತರಿಗೆ ಹೆಚ್ಚಿನ ಲಾಭವೇನೂ ಆಗಿಲ್ಲ.

ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಹುದುಗೂರು ಗ್ರಾಮದ ಬಳಿ 1982ರಲ್ಲಿ ನಿರ್ಮಿಸಲಾದ ಹಾರಂಗಿ ಅಣೆಕಟ್ಟಿನ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ 8.5 ಟಿ.ಎಂ.ಸಿ. ಸದ್ಯಕ್ಕೆ ಇರುವ ಸಂಗ್ರಹ ಕೇವಲ 4.75 ಟಿ.ಎಂ.ಸಿ. ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಯ 54,491 ಹೆಕ್ಟೇರ್ ಜಮೀನುಗಳಿಗೆ ಈ ಅಣೆಕಟ್ಟಿನ ನೀರೇ ಜೀವಾಳ. ಇದರಲ್ಲಿ ಕೊಡಗು ಜಿಲ್ಲೆಯ ಪಾಲು (ಸೋಮವಾರಪೇಟೆ ತಾಲ್ಲೂಕು) ಕೇವಲ 2,446 ಹೆಕ್ಟೇರ್ ಪ್ರದೇಶ ಮಾತ್ರ.

ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರಮುಖವಾಗಿ ಬತ್ತ, ರಾಗಿ, ಮುಸುಕಿನ ಜೋಳ ಬೆಳೆಯಲಾಗುತ್ತದೆ.  ಈ ವರ್ಷ ಮಳೆ ಸಕಾಲಕ್ಕೆ ಬಾರದ ಹಿನ್ನೆಲೆಯಲ್ಲಿ ರಾಗಿ ಬಿತ್ತನೆಯಾಗಿಲ್ಲ. ಸೋಮವಾರಪೇಟೆ ಏತ ನೀರಾವರಿ ಯೋಜನೆಯಡಿ 607 ಹೆಕ್ಟೇರ್ ಪ್ರದೇಶಗಳಿಗೆ ನೀರು ಉಣಿಸಲಾಗುತ್ತದೆ. ಈ ಬಾರಿ ಏತ ನೀರಾವರಿಗೂ ನೀರಿಲ್ಲ. 

ಕಳೆದ 10 ವರ್ಷಗಳಿಂದ ಕೊಡಗಿನಲ್ಲಿ ಬೇಸಿಗೆ ಬತ್ತ ಬೆಳೆಯುವುದನ್ನು ಕಡಿಮೆ ಮಾಡಿ ನೆಲಗಡಲೆ, ದ್ವಿದಳ ಧಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಈಗ ಬೇಸಿಗೆಯಲ್ಲಿ ಗದ್ದೆಗಳು ಖಾಲಿ ಇರುತ್ತವೆ. ಭಾಗಮಂಡಲಕ್ಕೇ ಈ ಬಾರಿ ಬಾಗೀರಥಿ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT