ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 5-2-1962

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನಾಳೆ ನಗರಕ್ಕೆ ನೆಹರೂ ಆಗಮನ
ಬೆಂಗಳೂರು, ಫೆ. 4 - ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನೆಹರೂ ಅವರು ಮಂಗಳವಾರ ಮಧ್ಯಾಹ್ನ 12-45ಕ್ಕೆ ಕಾರಿನಲ್ಲಿ ಮೈಸೂರಿನಿಂದ ನಗರಕ್ಕೆ ಆಗಮಿಸುವರು.
ಅಂದು ಮಧ್ಯಾಹ್ನ 3 ಗಂಟೆಗೆ ಸೆಂಟ್ರಲ್ ಕಾಲೇಜ್ ಕ್ರಿಕೆಟ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ಧೇಶಿಸಿ ಭಾಷಣ ಮಾಡುವರು.

6 ಜನರ ಉಚ್ಛಾಟನೆ
ಬೆಂಗಳೂರು, ಫೆ. 4 - ಈ ತಿಂಗಳು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕೃತ ಕಾಂಗ್ರೆಸ್ ಸ್ಪರ್ಧಿಗಳ ವಿರುದ್ಧ ಸ್ಪರ್ಧಿಸಿರುವ 6 ಮಂದಿ ಕಾಂಗ್ರೆಸ್ಸಿಗರನ್ನು, ಸಂಸ್ಥೆಯ ಬಗ್ಗೆ ವ್ಯಕ್ತಪಡಿಸಿರುವ ಅವಿಧೇಯತೆ ಹಾಗೂ ಬೇಜವಾಬ್ದಾರಿ ವರ್ತನೆಗಾಗಿ, ಮೈಸೂರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು 6 ವರ್ಷಗಳ ಕಾಲ ಸಂಸ್ಥೆಯಿಂದ ಉಚ್ಛಾಟನೆ ಮಾಡಿದ್ದಾರೆ.
ಈ ಆರು ಜನರು ಸೇರಿ ಇದುವರೆವಿಗೂ 45 ಜನರನ್ನು ಸಂಸ್ಥೆಯಿಂದ ಉಚ್ಛಾಟನೆ ಮಾಡಲಾಗಿದೆ.

ವಿರೋಧ ಪಕ್ಷಗಳ ನಿಷೇಧ ನೀತಿ ರಾಷ್ಟ್ರಕ್ಕೆ ಉಪಯುಕ್ತವಲ್ಲ

ವಿಜಯವಾಡ, ಫೆ. 4 - ರಾಷ್ಟ್ರದಲ್ಲಿರುವ ಎಲ್ಲಾ ವಿರೋಧ ಪಕ್ಷಗಳು ಅದರಲ್ಲೂ ವಿಶೇಷವಾಗಿ ಸ್ವತಂತ್ರ ಪಕ್ಷದ ನೀತಿಗಳು ನಿಷೇಧ ರೂಪದ ನೀತಿಗಳಾಗಿವೆಯೆಂದು ಇಂದು ಇಲ್ಲಿ ನುಡಿದ ಪ್ರಧಾನಿ ನೆಹರೂ ಅವರು ಈ ನೀತಿಗಳಿಂದ ರಾಷ್ಟ್ರದ ಪ್ರಗತಿಯ ಹಾದಿಗೆ ಅನುಕೂಲ ವಾಗುವುದಿಲ್ಲವೆಂದರು.

ಸ್ವತಂತ್ರ ಪಕ್ಷವನ್ನು ಕುರಿತು ಅವರು ಪ್ರಸ್ತಾಪಿಸುತ್ತಾ ಕಾಂಗ್ರೆಸ್ ಪಕ್ಷದ ವಿಫಲತೆಯನ್ನು ಕುರಿತು ಟೀಕೆ ಮಾಡುವುದೇ ಅದರ ನೀತಿಯಾಗಿದೆಯೆಂದು ನುಡಿದರು. ಪುರಾತನ ವಿಧಾನಗಳೇ ಮುಂದುವರಿಯುವಂತೆ ಮಾಡುವುದೂ ರಾಷ್ಟ್ರ ಪ್ರಗತಿ ಸಾಧಿಸದೆ ಇದ್ದಂತೆ ಇರಬೇಕೆಂಬುದೂ ಸ್ವತಂತ್ರ ಪಕ್ಷದ ನೀತಿಯಾಗಿದೆಯೆಂದರು.

ಕನ್ನಡಿಗರ ಹಿತರಕ್ಷಣೆಗೆ ಅಭಿಮಾನ ಬೆಳೆಯುವುದಗತ್ಯ

ಬೆಂಗಳೂರು, ಫೆ. 4 -  ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ `ಕನ್ನಡಿಗರ ಹಿತವನ್ನು~ ರಕ್ಷಿಸಿಕೊಳ್ಳುವ ಬಗ್ಗೆ ಇಂದು ಇಲ್ಲಿ ನಡೆದ ಕನ್ನಡಿಗರ ಸಮ್ಮೇಳನದಲ್ಲಿ ವಿಶೇಷವಾಗಿ ಚಿಂತನೆ ಮಾಡಿ ಯಾವುದೇ ಸಾಧನೆಗೆ ಅಗತ್ಯವಾದ ಅಭಿಮಾನವನ್ನು ಬೆಳೆಸಿಕೊಳ್ಳುವಂತೆ ಕನ್ನಡಿಗರಿಗೆ ಕರೆ ನೀಡಲಾಯಿತು.

ಯುವಜನರೇ ಹೆಚ್ಚು ಭಾಗವಹಿಸಿದ್ದ ಸಮ್ಮೇಳನದಲ್ಲಿ ನಡೆದ ಹಲವಾರು ಭಾಷಣಗಳಲ್ಲಿ ಕನ್ನಡನಾಡಿಗೆ `ಅನ್ಯಾಯವಾಗುತ್ತಿರುವುದಕ್ಕೆ~ ಇಲ್ಲಿ ಪ್ರಭಾವಶಾಲಿ ನಾಯಕತ್ವ `ಇಲ್ಲದಿರುವುದೇ~ ಕಾರಣವೆಂದು ಅಭಿಪ್ರಾಯ ಪಡಲಾಯಿತು.

ಕನ್ನಡ ನಾಡಿನ ಹಿತಕ್ಕಾಗಿ ಪ್ರಾಮಾಣಿಕತೆಯಿಂದ ಶ್ರಮಿಸುವ ನಾಯಕತ್ವವನ್ನು ಸೃಷ್ಟಿಸಿ ಅದನ್ನು ಪೋಷಿಸಿಕೊಂಡು ಬರಬೇಕೆಂದು ಮನವಿ ಮಾಡಿಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT