ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡ ಚಾಂಪಿಯನ್

Last Updated 24 ಡಿಸೆಂಬರ್ 2010, 8:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ತಂಡ ಬಾಂಗ್ಲಾದೇಶದಲ್ಲಿ ಗುರುವಾರ ಕೊನೆಗೊಂಡ ಚೊಚ್ಚಲ ಎಸ್‌ಎಎಫ್‌ಎಫ್ ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿತು.

ಚಿತ್ತಗಾಂಗ್‌ನ ಕಾಕ್ಸ್ ಬಜಾರ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 1-0 ಗೋಲಿನಿಂದ ನೇಪಾಳ ತಂಡವನ್ನು ಮಣಿಸಿತು. ಸಸ್ಮಿತಾ ಮಲ್ಲಿಕ್ ಅವರು 65ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತದ ಗೆಲುವಿನ ರೂವಾರಿ ಎನಿಸಿದರು.

ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದ ಮೊದಲ ಅವಧಿ ಗೋಲುರಹಿತವಾಗಿತ್ತು. ಆದರೆ ಎರಡನೇ ಅವಧಿಯಲ್ಲಿ ಸಸ್ಮಿತಾ ಭಾರತಕ್ಕೆ ಗೋಲು ತಂದಿತ್ತರಲ್ಲದೆ, ನೇಪಾಳ ತಂಡದ ಕನಸನ್ನು ನುಚ್ಚುನೂರು ಮಾಡಿದರು.

ಭಾರತ ಈ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಒಟ್ಟು 40 ಗೋಲುಗಳನ್ನು ಗಳಿಸಿತು. ಅದೇ ವೇಳೆ ಎದುರಾಳಿಗಳಿಗೆ ಒಂದೂ ಗೋಲನ್ನು ಬಿಟ್ಟುಕೊಡದೆ ಚಾಂಪಿಯನ್ ಆಗಿದೆ. ಪಾಕಿಸ್ತಾನದ ವಿರುದ್ಧದ ಸೆಮಿಫೈನಲ್‌ನಲ್ಲಿ ಹ್ಯಾಟ್ರಿಲ್ ಗೋಲು ಗಳಿಸಿದ್ದ ಬಾಲಾ ದೇವಿ ಅವರು ‘ಟೂರ್ನಿಯ ಶ್ರೇಷ್ಠ ಆಟಗಾರ್ತಿ’ ಗೌರವ ತಮ್ಮದಾಗಿಸಿಕೊಂಡರು.

ಈ ಹಿಂದಿನ ಪಂದ್ಯಗಳಲ್ಲಿ ಗೋಲಿನ ಮಳೆಯನ್ನೇ ಸುರಿಸಿದ್ದ ಭಾರತ ಫೈನಲ್‌ನಲ್ಲಿ ಗೆಲುವಿಗಾಗಿ ಸಾಕಷ್ಟು ಹೋರಾಟ ನಡೆಸಿತು. ಬಾಲಾ ದೇವಿ ಮತ್ತು ತಬಬಿ ದೇವಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ಲೀಗ್ ಹಂತದಲ್ಲಿ ಭಾರತ ತಂಡ ಭೂತಾನ್ ವಿರುದ್ಧ 18-0 ಗೋಲುಗಳ ಅಂತರದಲ್ಲೂ, ಶ್ರೀಲಂಕಾ ಎದುರು 7-0 ಅಂತರದಲ್ಲೂ ಜಯ ಪಡೆದಿತ್ತು. ಸೆಮಿಫೈನಲ್‌ನಲ್ಲಿ 8-0 ರಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT