ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ-ನೇಪಾಳ ಒಪ್ಪಂದಕ್ಕೆ ಅಪಸ್ವರ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಠ್ಮಂಡು, (ಐಎಎನ್‌ಎಸ್): ಭಾರತಕ್ಕೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಬಾಬುರಾಂ ಭಟ್ಟಾರಾಯ್ ಅವರು ಮಾಡಿಕೊಂಡಿರುವ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ರದ್ದುಪಡಿಸಬೇಕು ಇಲ್ಲವೆ ಸಂಸತ್ತಿನ ಅನುಮೋದನೆ ಪಡೆಯಬೇಕು ಎಂದು ಆಡಳಿತದಲ್ಲಿರುವ ಮಾವೋವಾದಿ ಪಕ್ಷದ ತೀವ್ರವಾದಿಗಳು ಒತ್ತಾಯಿಸುತ್ತಿರುವುದರಿಂದ ಹೊಸ ಸಮಸ್ಯೆ ತಲೆದೋರಿದೆ.

ಭಟ್ಟಾರಾಯ್ ಅವರು ಪ್ರಧಾನಿಯಾದ ನಂತರ ಪ್ರಥಮ ಬಾರಿಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಳೆದು ತೂಗಿ ಭಾರತದ ಜತೆ ಬಂಡವಾಳ ಹೂಡಿಕೆ ಮತ್ತು ರಕ್ಷಣೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಆದರೆ ಅವರದೇ ಪಕ್ಷದ ತೀವ್ರವಾದಿಗಳು ಮತ್ತು ವಿರೋಧ ಪಕ್ಷಗಳು ಈ ಒಪ್ಪಂದದ ಬಗ್ಗೆ ಅಪಸ್ವರ ಎತ್ತಿರುವುದರಿಂದ ಸಂಸತ್ತಿನಲ್ಲಿ ಭಾರಿ ಕಾವೇರಿದ ಚರ್ಚೆ ನಡೆಯುವ ಸಂಭವವಿದೆ.

ನಾಲ್ಕು ದಿನಗಳ ಭಾರತದ ಪ್ರವಾಸ ಮುಗಿಸಿ ಭಾನುವಾರ ಭಟ್ಟಾರಾಯ್ ಅವರು ಸ್ವದೇಶಕ್ಕೆ ಮರಳಿದಾಗ ವಿಮಾನ ನಿಲ್ದಾಣದಲ್ಲಿ ಮಾವೋವಾದ ಪಕ್ಷದ ಎರಡನೇ ನಾಯಕ ಮೋಹನ್ ವೈದ್ಯ ಅವರ ಬೆಂಬಲಿಗರು ಕಪ್ಪು ಬಾವುಟ ಪ್ರದರ್ಶಿಸಿ ಭಾರತದ ಜತೆಗಿನ ಒಪ್ಪಂದವನ್ನು ರಾಷ್ಟ್ರವಿರೋಧಿ ಎಂದು ಟೀಕಿಸಿದ್ದಾರೆ.

ನೇಪಾಳವನ್ನು ಭಾರತಕ್ಕೆ ಮಾರುವ ಪ್ರಯತ್ನ ಎಂದೂ ಟೀಕಿಸಿರುವ ಈ ತೀವ್ರವಾದಿಗಳು, ಒಪ್ಪಂದವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ವೈದ್ಯ  ಬಣಕ್ಕೆ ಸೇರಿದ ಸಂಸದ ಮತ್ತು ಮಾಜಿ ಸಚಿವ ದೇವ್ ಗುರುಂಗ್ ಅವರು ಒಪ್ಪಂದವನ್ನು ರದ್ದುಪಡಿಸಬೇಕು ಇಲ್ಲವೆ ಕೆಲವು ಬದಲಾವಣೆಗಳೊಂದಿಗೆ ಸಂಸತ್ತಿನ ಅನುಮೋದನೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಭಾರತಕ್ಕೆ ತೆರಳುವ ಮೊದಲು ಭಟ್ಟಾರಾಯ್ ಅವರಿಗೆ ಪಕ್ಷವು ಒಪ್ಪಂದ ಮಾಡಿಕೊಳ್ಳಬಾರದು ಎಂದು ಸ್ಪಷ್ಟವಾಗಿ ಸೂಚಿಸಿತ್ತು. ಆದರೆ ಅವರು ಪಕ್ಷದ ಆದೇಶವನ್ನು ಮೀರಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಅವರು ಆಪಾದಿಸಿದ್ದಾರೆ. ಸಶಸ್ತ್ರ ಬಂಡುಕೋರುತನ , ತುರ್ತು ಸ್ಥಿತಿ ಹೇರಿಕೆ ಮತ್ತು ಚಳವಳಿಗಳು ನಡೆದು ನಷ್ಟ ಸಂಭವಿಸಿದ ಸಂದರ್ಭದಲ್ಲಿ ನೇಪಾಳದಲ್ಲಿ ಬಂಡವಾಳ ಹೂಡಿದ ಭಾರತೀಯ ಉದ್ಯಮಿಗಳಿಗೆ ಪರಿಹಾರ ನೀಡಲು ಒಪ್ಪಂದದಲ್ಲಿ ಅವಕಾಶವಿದ್ದು, ಇದು ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾದುದು ಎಂದು ಟೀಕಿಸಿದ್ದಾರೆ. ಕಮ್ಯುನಿಸ್ಟ್ ಪಕ್ಷಗಳೂ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿ ಒಪ್ಪಂದವನ್ನು ವಿರೋಧಿಸಿವೆ.

ಈ ಒಪ್ಪಂದದ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಝಾಲಾನಾಥ್ ಖನಾಲ್ ಅವರು ಬೆದರಿಕೆ ಹಾಕಿದ್ದಾರೆ.

ಭಾರತದ ಜತೆ ಉತ್ತಮ ಬಾಂಧವ್ಯ ಹೊಂದಿರುವ ನಾಪಾಳಿ ಕಾಂಗ್ರೆಸ್ ಸಹ ಪರಿಹಾರ ನೀಡುವ ಅಂಶದ ಬಗ್ಗೆ ಚರ್ಚೆಯಾಗಬೇಕು ಎಂದು ಸಲಹೆ ಮಾಡಿದೆ.

ಆಕ್ಷೇಪಾರ್ಹ ಅಂಶಗಳಿಲ್ಲ:
ಭಾರತದ ಜತೆ ಮಾಡಿಕೊಂಡ ಒಪ್ಪಂದದಲ್ಲಿ ಯಾವುದೇ ಆಕ್ಷೇಪಾರ್ಹ ಅಂಶಗಳಿಲ್ಲ. ಅಮೆರಿಕ, ಜರ್ಮನಿ ಮತ್ತು ಫಿನ್‌ಲೆಂಡ್ ಜತೆ ಇಂತಹ ಒಪ್ಪಂದಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಭಟ್ಟಾರಾಯ್ ಅವರ ಹಣಕಾಸು ಸಲಹೆಗಾರ ರಾಮೇಶ್ವರ್ ಖನಾಲ್ ಅವರು ತಿಳಿಸಿದ್ದಾರೆ.

ಭಾರತದ ಭೇಟಿ ಫಲಪ್ರದ: ಭಾರತ ಭೇಟಿಯು ಸಂಪೂರ್ಣ ಫಲಪ್ರದವಾಗಿದ್ದು, ದ್ವಿಪಕ್ಷೀಯ ಒಪ್ಪಂದದಿಂದ ಎರಡೂ ರಾಷ್ಟ್ರಗಳ ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ಬಾಬುರಾಂ ಭಟ್ಟಾರಾಯ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT