ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಒಲಿಯುವುದೇ ಗೆಲುವು?

ಕ್ರಿಕೆಟ್‌: ಇಂದು ಅಂತಿಮ ಏಕದಿನ ಪಂದ್ಯ; ಸರಣಿ ‘ಕ್ಲೀನ್‌ ಸ್ವೀಪ್‌’ ಆತಿಥೇಯರ ಗುರಿ
Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸೆಂಚೂರಿಯನ್‌:  ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು ಈಗಾಗಲೇ ದಕ್ಷಿಣ ಆಫ್ರಿಕಾಕ್ಕೆ ಒಪ್ಪಿಸಿರುವ ಭಾರತ ತಂಡ ಇದೀಗ ‘ಮಾನ’ ಕಾಪಾಡಿಕೊಳ್ಳಲು ಹೋರಾಟ ನಡೆಸಲಿದೆ.

ಉಭಯ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಪಂದ್ಯ ಇಲ್ಲಿನ ಸೂಪರ್‌ ಸ್ಪೋರ್ಟ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿದೆ.
ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 141 ರನ್‌ಗಳ ಸೋಲು ಅನುಭವಿಸಿದ್ದ ಮಹೇಂದ್ರ ಸಿಂಗ್‌ ದೋನಿ ಬಳಗ, ಡರ್ಬನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 134 ರನ್‌ಗಳಿಂದ ಪರಾಭವಗೊಂಡಿತ್ತು.

ಸರಣಿಯಲ್ಲಿ ಈಗಾಗಲೇ 2-0 ರಲ್ಲಿ ಗೆಲುವಿನ ಮುನ್ನಡೆ ಪಡೆದಿರುವ ಎಬಿ ಡಿವಿಲಿಯರ್ಸ್‌ ಬಳಗ ‘ಕ್ಲೀನ್‌ ಸ್ವೀಪ್‌’ ಮಾಡುವ ಗುರಿ ಹೊಂದಿದೆ. ಅಂತಿಮ ಪಂದ್ಯದಲ್ಲಿ ಜಯ ಸಾಧಿಸಿ ಅಲ್ಪ ಸಮಾಧಾನ ಪಟ್ಟುಕೊಳ್ಳುವುದು ‘ಮಹಿ’ ಬಳಗದ ಲೆಕ್ಕಾಚಾರ.

ಆದರೆ ಮೊದಲ ಎರಡು ಪಂದ್ಯಗಳಲ್ಲಿ ತೋರಿದ ಪ್ರದರ್ಶನವನ್ನು ನೋಡಿದಾಗ ಭಾರತ ತಂಡ ಇಂದಿನ ಪಂದ್ಯದಲ್ಲಿ ಗೆಲುವು ಪಡೆಯುವ ಸಾಧ್ಯತೆ ತೀರಾ ಕಡಿಮೆ.

ಪ್ರವಾಸಿ ತಂಡ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸಿತ್ತು. ಡರ್ಬನ್‌ನಲ್ಲಿ ಬೌಲರ್‌ಗಳು ಅಲ್ಪ ಸುಧಾರಿತ ಪ್ರದರ್ಶನ ನೀಡಿದ್ದರೂ, ಬ್ಯಾಟ್ಸ್‌ಮನ್‌ಗಳು ನಿರಾಸೆ ಉಂಟುಮಾಡಿದ್ದರು.

ಭಾರತದ ನೆಲದಲ್ಲಿ ರನ್‌ಗಳ ಮಳೆಯನ್ನೇ ಸುರಿಸಿರುವ ರೋಹಿತ್‌ ಶರ್ಮ, ಶಿಖರ್‌ ಧವನ್‌ ಮತ್ತು ವಿರಾಟ್‌ ಕೊಹ್ಲಿ ಇಲ್ಲಿನ ಪಿಚ್‌ಗಳ ಮರ್ಮವನ್ನು ಅರಿಯುವಲ್ಲಿ ವಿಫಲರಾಗಿದ್ದಾರೆ. ಡೆಲ್‌ ಸ್ಟೇನ್‌ ಅವರನ್ನೊಳಗೊಂಡ ಆತಿಥೇಯ ಬೌಲರ್‌ಗಳ ವೇಗದ ದಾಳಿಗೆ ಭಾರತ ಬೆದರಿದೆ.

ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಪರ ಈಗಾಗಲೇ ಮೂರು ಶತಕಗಳು ದಾಖಲಾಗಿವೆ. ಕ್ವಿಂಟನ್‌ ಡಿ ಕಾಕ್‌ ಎರಡು ಶತಕಗಳನ್ನು ಸಿಡಿಸಿದ್ದರೆ, ಹಾಶಿಮ್‌ ಆಮ್ಲಾ ಒಂದು ಶತಕ ಗಳಿಸಿದ್ದಾರೆ. ಆದರೆ ದೋನಿ ಮೊದಲ ಪಂದ್ಯದಲ್ಲಿ ಗಳಿಸಿದ್ದ 65 ರನ್‌ಗಳು ಭಾರತದ ಬ್ಯಾಟ್ಸ್‌ಮನ್‌ನಿಂದ ಮೂಡಿಬಂದಿರುವ ಗರಿಷ್ಠ ಮೊತ್ತ ಎನಿಸಿಕೊಂಡಿದೆ.

ಸ್ಟೇನ್‌ ತಮ್ಮ ಮೊದಲ ಸ್ಪೆಲ್‌ನಲ್ಲಿಯೇ ಭಾರತದ ಬ್ಯಾಟಿಂಗ್‌ನ ದಿಕ್ಕು ತಪ್ಪಿಸುತ್ತಿದ್ದಾರೆ. ಧವನ್‌ ಮತ್ತು ರೋಹಿತ್‌ಗೆ ಉತ್ತಮ ಆರಂಭ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಳಿಕ ಬರುವ ಬ್ಯಾಟ್ಸ್‌ಮನ್‌ಗಳ ಮೇಲಿನ ಒತ್ತಡ ಹೆಚ್ಚುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ತವರು ನೆಲದಲ್ಲಿ ನಡೆದಿದ್ದ ಸರಣಿಯಲ್ಲಿ ರನ್‌ ಬೆನ್ನಟ್ಟುವ ವೇಳೆ ಅಮೋಘ ಆಟ ತೋರಿದ್ದ ಕೊಹ್ಲಿ, ಅದನ್ನು ದಕ್ಷಿಣ ಆಫ್ರಿಕಾ ನೆಲದಲ್ಲಿ ಪುನರಾವರ್ತಿಸುವಲ್ಲಿ ವಿಫಲರಾಗಿದ್ದಾರೆ.

ಯುವರಾಜ್‌ ಸಿಂಗ್‌ ಬದಲು ಎರಡನೇ ಪಂದ್ಯದಲ್ಲಿ ಸ್ಥಾನ ಪಡೆದಿದ್ದ ಅಜಿಂಕ್ಯ ರಹಾನೆ ಕೂಡಾ ವೈಫಲ್ಯ ಅನುಭವಿಸಿದ್ದಾರೆ. ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯ ಆಟವಾಡಿದರೆ ಮಾತ್ರ, ಭಾರತಕ್ಕೆ ಗೆಲುವು ಪಡೆಯಲು ಸಾಧ್ಯ.

ಈ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ಅಂತಿಮ ಇಲೆವೆನ್‌ನಲ್ಲಿ ಕೆಲವೊಂದು ಬದಲಾವಣೆ ಮಾಡುವ ಸಾಧ್ಯತೆಯಿದೆ. ಜಾಕ್‌ ಕಾಲಿಸ್‌ ಮತ್ತು ಸ್ಟೇನ್‌ಗೆ ವಿಶ್ರಾಂತಿ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಸ್ಟೇನ್‌ ಆಡದಿದ್ದರೆ ಭಾರತದ ಆಟಗಾರರು ಅಲ್ಪ ನಿಟ್ಟುಸಿರುವ ಬಿಡುವುದು ಖಚಿತ.

ತಂಡಗಳು ಇಂತಿವೆ
ಭಾರತ:
ಮಹೇಂದ್ರ ಸಿಂಗ್‌ ದೋನಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಯುವರಾಜ್‌ ಸಿಂಗ್‌, ಸುರೇಶ್‌ ರೈನಾ, ಆರ್‌. ಅಶ್ವಿನ್‌, ರವೀಂದ್ರ ಜಡೇಜ, ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಉಮೇಶ್‌ ಯಾದವ್‌, ಇಶಾಂತ್‌ ಶರ್ಮ, ಅಮಿತ್‌ ಮಿಶ್ರಾ, ಅಂಬಟಿ ರಾಯುಡು, ಅಜಿಂಕ್ಯ ರಹಾನೆ.

ದಕ್ಷಿಣ ಆಫ್ರಿಕಾ: ಎಬಿ ಡಿವಿಲಿಯರ್ಸ್‌ (ನಾಯಕ), ಹಾಶಿಮ್‌ ಆಮ್ಲಾ, ಕ್ವಿಂಟನ್‌ ಡಿ ಕಾಕ್‌, ಜೆಪಿ ಡುಮಿನಿ, ಇಮ್ರಾನ್‌ ತಾಹಿರ್, ಜಾಕ್‌ ಕಾಲಿಸ್‌,  ರ್‍್ಯಾನ್‌ ಮೆಕ್‌ಲಾರೆನ್‌, ಡೇವಿಡ್‌ ಮಿಲ್ಲರ್‌, ಮಾರ್ನ್‌ ಮಾರ್ಕೆಲ್‌, ವೇಯ್ನ್‌ ಪಾರ್ನೆಲ್‌, ವೆರ್ನಾನ್‌ ಫಿಲಾಂಡರ್‌, ಗ್ರೇಮ್‌ ಸ್ಮಿತ್‌, ಡೆಲ್‌ ಸ್ಟೇನ್‌, ಲೊನ್ವಾಬೊ ಸೊಸೊಬೆ
ಪಂದ್ಯದ ಆರಂಭ: ಸಂಜೆ 5.00ಕ್ಕೆ (ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT