ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಕೊನೆಗೂ ಒಲಿದ ಜಯ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್: ಆಸ್ಟ್ರೇಲಿಯಾ ನೆಲದಲ್ಲಿ ಸತತ ಸೋಲುಗಳಿಂದ ಸುದ್ದಿ ಮಾಡುತ್ತಿದ್ದ ಭಾರತ ಕೊನೆಗೂ ಗೆಲುವಿನ ಹಾದಿಗೆ ಮರಳಿದೆ. ಶುಕ್ರವಾರ ನಡೆದ ಎರಡನೇ ಹಾಗೂ ಕೊನೆಯ ಟ್ವೆಂಟಿ-20 ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಎಂಟು ವಿಕೆಟ್‌ಗಳ ಭರ್ಜರಿ ಜಯ ಲಭಿಸಿದೆ.

ಇದರಿಂದ ಎರಡು ಪಂದ್ಯಗಳ ಸರಣಿ ಸಮಬಲದಲ್ಲಿ ಕೊನೆಗೊಂಡಿದೆ. ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 31 ರನ್‌ಗಳ ಜಯ ಪಡೆದಿತ್ತು. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ 19.4 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟಾಯಿತು. ಭಾರತ ಕೊನೆಯ ಎರಡು ಎಸೆತಗಳಿರುವಂತೆಯೇ ಕೇವಲ ಎರಡು ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ ಜಯ ಸಾಧಿಸಿತು.

ಪ್ರಸಕ್ತ ಪ್ರವಾಸದಲ್ಲಿ ಸತತ ಐದು ಸೋಲುಗಳ ಬಳಿಕ (ನಾಲ್ಕು ಟೆಸ್ಟ್ ಹಾಗೂ ಒಂದು ಟ್ವೆಂಟಿ-20) ದೊರೆತ ಈ ಜಯದಿಂದ `ಮಹಿ~ ಬಳಗ ನಿಟ್ಟುಸಿರುಬಿಟ್ಟಿದೆ. ಮಾತ್ರವಲ್ಲ ಭಾನುವಾರ ಆರಂಭವಾಗುವ ತ್ರಿಕೋನ ಏಕದಿನ ಸರಣಿಗೆ ಮುನ್ನ ಅಗತ್ಯವಿದ್ದ ಆತ್ಮವಿಶ್ವಾಸ ಪಡೆದಿದೆ.

ಇಷ್ಟು ದಿನ ಭಾರತ ಆಸೀಸ್ ನೆಲದಲ್ಲಿ ಪರದಾಟ ನಡೆಸಿತ್ತು. ಆದರೆ ಶುಕ್ರವಾರ ಸಂಪೂರ್ಣ ಭಿನ್ನ ರೀತಿಯ ತಂಡವನ್ನು ಕಾಣಬಹುದಿತ್ತು. ಶಿಸ್ತಿನ ಬೌಲಿಂಗ್, ಚುರುಕಿನಫೀಲ್ಡಿಂಗ್ ಹಾಗೂ ಆ ಬಳಿಕ ತೋರಿದ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದಾಗಿ ಯಶಸ್ಸು ಲಭಿಸಿದೆ. ಪ್ರಭಾವಿ ಬೌಲಿಂಗ್ (16ಕ್ಕೆ 1) ಜೊತೆಗೆ ಎರಡು ರನೌಟ್‌ಗೆ ಕಾರಣವಾದ ರವೀಂದ್ರ ಜಡೇಜ `ಪಂದ್ಯ ಶ್ರೇಷ್ಠ~ ಎನಿಸಿಕೊಂಡರು.

ಆಕರ್ಷಕ ಅರ್ಧಶತಕ ಗಳಿಸಿದ ಗೌತಮ್ ಗಂಭೀರ್ (ಅಜೇಯ 56, 60 ಎಸೆತ, 4 ಬೌಂ) ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ (23, 16 ಎಸೆತ, 2 ಬೌಂ, 1 ಸಿಕ್ಸರ್) ಮೊದಲ ವಿಕೆಟ್‌ಗೆ 6.3 ಓವರ್‌ಗಳಲ್ಲಿ 43 ರನ್ ಸೇರಿಸಿದರು.

ಬ್ರಾಡ್ ಹಾಗ್ ಬೌಲಿಂಗ್‌ನಲ್ಲಿ ಶಾನ್ ಮಾರ್ಷ್ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಸೆಹ್ವಾಗ್ ಔಟಾದರು. ಆದರೆ ಗಂಭೀರ್ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸಿದರು. ಅಲ್ಪ ಮೊತ್ತ ಮುಂದಿದ್ದ ಕಾರಣ ಅತಿಯಾದ ಆಕ್ರಮಣಕ್ಕೆ ಮುಂದಾಗಲಿಲ್ಲ. ವಿರಾಟ್ ಕೊಹ್ಲಿ (31, 24 ಎಸೆತ, 3 ಬೌಂ) ಜೊತೆ ಎರಡನೇ ವಿಕೆಟ್‌ಗೆ 54 ರನ್ ಕಲೆಹಾಕಿದ ಅವರು ಬಳಿಕ ದೋನಿ (ಅಜೇಯ 21) ಅವರೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಪ್ರಭಾವಿ ಬೌಲಿಂಗ್: ಟಾಸ್ ಗೆದ್ದ ಆಸೀಸ್ ನಾಯಕ ಜಾರ್ಜ್ ಬೈಲಿ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಸೋಲಿನ ಸುಳಿಯಿಂದ ಹೊರಬರಬೇಕೆಂಬ ದೃಢ ನಿಶ್ಚಯದೊಂದಿಗೆ ದೋನಿ ಬಳಗ ಕಣಕ್ಕೆ ಇಳಿದಿತ್ತು. ಅದು ಪಂದ್ಯದ ಮೂರನೇ ಓವರ್‌ನಲ್ಲೇ ಸಾಬೀತಾಯಿತು.

ಪ್ರವೀಣ್ ಕುಮಾರ್ ಎದುರಾಳಿ ತಂಡಕ್ಕೆ ಅವಳಿ ಆಘಾತ ನೀಡಿದರು. ಅಪಾಯಕಾರಿ ಡೇವಿಡ್ ವಾರ್ನರ್ (8) ಮತ್ತು ಫಾರ್ಮ್ ಕಂಡುಕೊಳ್ಳಲು ಪರದಾಟ ನಡೆಸುತ್ತಿರುವ ಶಾನ್ ಮಾರ್ಷ್ (0) ವಿಕೆಟ್ ಪಡೆದ ಪ್ರವೀಣ್ ತಂಡಕ್ಕೆ ಕನಸಿನ ಆರಂಭ ದೊರಕಿಸಿಕೊಟ್ಟರು. ಈ ಯಶಸ್ಸು ತಂಡದ ಆಟಗಾರರಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಯಿತು. ಅದು ಫೀಲ್ಡಿಂಗ್‌ನಲ್ಲಿ ಪ್ರತಿಫಲಿಸಿತು.

ಆ್ಯರನ್ ಫಿಂಚ್ (36, 23 ಎಸೆತ, 6 ಬೌಂ) ಭಾರತದ ಬೌಲರ್‌ಗಳ ಮೇಲೆ ಒತ್ತಡ ಹೇರಲು ತಕ್ಕಮಟ್ಟಿನ ಪ್ರಯತ್ನ ನಡೆಸಿದರು. ಈ ಹಂತದಲ್ಲಿ ಜಡೇಜ ಅವರ ಚುರುಕಿನ ಫೀಲ್ಡಿಂಗ್‌ನಿಂದ ಫಿಂಚ್ ರನೌಟ್ ಆದ ಕಾರಣ ಆಸೀಸ್ ಒತ್ತಡಕ್ಕೆ ಒಳಗಾಯಿತು. ನಾಯಕ ಬೈಲಿ ಕೂಡಾ ಜಡೇಜ ಮಿಂಚಿನ ಫೀಲ್ಡಿಂಗ್‌ಗೆ ವಿಕೆಟ್ ಒಪ್ಪಿಸಿದರು. ಈ ಎರಡು ರನೌಟ್‌ಗಳು ಆಸೀಸ್‌ಗೆ ಹಿನ್ನಡೆ ಉಂಟುಮಾಡಿತು. ರನ್ ವೇಗಕ್ಕೆ ಕಡಿವಾಣ ಬಿತ್ತು.

ಡೇವಿಡ್ ಹಸ್ಸಿ (24) ಮತ್ತು ಕಳೆದ ಪಂದ್ಯದ ಹೀರೊ ಮ್ಯಾಥ್ಯೂ ವೇಡ್ (32, 29 ಎಸೆತ) ಐದನೇ ವಿಕೆಟ್‌ಗೆ 39 ರನ್ ಸೇರಿಸಿ ಭಾರತದ ಬೌಲರ್‌ಗಳ ಹಿಡಿತದಿಂದ ತಂಡವನ್ನು ಹೊರತರುವ ಪ್ರಯತ್ನ ನಡೆಸಿದರು. ಆದರೆ ಅವರಿಗೆ ಟ್ವೆಂಟಿ-20 ಪಂದ್ಯದ ಬೇಡಿಕೆಗೆ ತಕ್ಕಂತೆ ಬಿರುಸಿನ ಆಟವಾಡಲು ಸಾಧ್ಯವಾಗಲಿಲ್ಲ.

ತಂಡದ ಕೊನೆಯ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಪ್ರತಿರೋಧ ತೋರದೆ ಶರಣಾದರು. ಈ ಕಾರಣ ಇನ್ನೂ ಎರಡು ಎರಡು ಎಸೆತಗಳಿರುವಂತೆಯೇ ತಂಡ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಎದುರಾಳಿ ತಂಡದ ನಾಲ್ಕು  ಬ್ಯಾಟ್ಸ್‌ಮನ್‌ಗಳು ರನೌಟ್ ಆದದ್ದು ಭಾರತದ ಉತ್ತಮ ಫೀಲ್ಡಿಂಗ್‌ಗೆ ಸಾಕ್ಷಿ. ಪ್ರವೀಣ್ ಕುಮಾರ್ (21ಕ್ಕೆ2) ಮತ್ತು ರಾಹುಲ್ ಶರ್ಮ (29ಕ್ಕೆ 2) ತಲಾ ಎರಡು ವಿಕೆಟ್ ಪಡೆದರು. ಉಳಿದ ಬೌಲರ್‌ಗಳೂ ಆಸೀಸ್ ಬ್ಯಾಟ್ಸ್‌ಮನ್‌ಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟರು.

ಸ್ಕೋರು ವಿವರ
ಆಸ್ಟ್ರೇಲಿಯಾ: 19.4 ಓವರ್‌ಗಳಲ್ಲಿ 131

ಡೇವಿಡ್ ವಾರ್ನರ್ ಸಿ ಗಂಭೀರ್ ಬಿ ಪ್ರವೀಣ್ ಕುಮಾರ್  08
ಆ್ಯರನ್ ಫಿಂಚ್ ರನೌಟ್  36
ಶಾನ್ ಮಾರ್ಷ್ ಸಿ ದೋನಿ ಬಿ ಪ್ರವೀಣ್ ಕುಮಾರ್  00
ಡೇವಿಡ್ ಹಸ್ಸಿ ಸಿ ಮತ್ತು ಬಿ ರವೀಂದ್ರ ಜಡೇಜ  24
ಜಾರ್ಜ್ ಬೈಲಿ ರನೌಟ್  03
ಮ್ಯಾಥ್ಯೂ ವೇಡ್ ರನೌಟ್  32
ಮಿಷೆಲ್ ಮಾರ್ಷ್ ಸ್ಟಂಪ್ ದೋನಿ ಬಿ ರಾಹುಲ್ ಶರ್ಮ  13
ಬ್ರೆಟ್ ಲೀ ಔಟಾಗದೆ  06
ಕ್ಲಿಂಟ್ ಮೆಕೇ ಸಿ ದೋನಿ ಬಿ ವಿನಯ್ ಕುಮಾರ್  00
ಬ್ರಾಡ್ ಹಾಗ್ ಎಲ್‌ಬಿಡಬ್ಲ್ಯು ಬಿ ರಾಹುಲ್ ಶರ್ಮ  04
ಕ್ಸೇವಿಯರ್ ಡೊಹೆರ್ಟಿ ರನೌಟ್  01
ಇತರೆ: (ವೈಡ್-4)  04
ವಿಕೆಟ್ ಪತನ: 1-19 (ವಾರ್ನರ್; 2.2), 2-20 (ಶಾನ್; 2.5), 3-49 (ಫಿಂಚ್; 6.6), 4-54 (ಬೈಲಿ; 8.3), 5-93 (ಹಸ್ಸಿ; 13.3), 6-119 (ಮಿಷೆಲ್; 17.3), 7-121 (ವೇಡ್; 18.2), 8-121 (ಮೆಕೇ; 18.3), 9-130 (ಹಾಗ್; 19.3), 10-131 (ಡೊಹೆರ್ಟಿ; 19.4)
ಬೌಲಿಂಗ್: ಪ್ರವೀಣ್ ಕುಮಾರ್ 3-0-21-2, ಆರ್. ವಿನಯ್ ಕುಮಾರ್ 4-0-25-1, ವಿರಾಟ್ ಕೊಹ್ಲಿ 1-0-7-0, ರವೀಂದ್ರ ಜಡೇಜ 3-0-16-1, ರಾಹುಲ್ ಶರ್ಮ 3.4-0-29-2, ಸುರೇಶ್ ರೈನಾ 1-0-10-0, ಆರ್. ಅಶ್ವಿನ್ 4-0-23-0

ಭಾರತ: 19.4 ಓವರ್‌ಗಳಲ್ಲಿ 2 ವಿಕೆಟ್‌ಗೆ 135
ಗೌತಮ್ ಗಂಭೀರ್ ಔಟಾಗದೆ  56
ವೀರೇಂದ್ರ ಸೆಹ್ವಾಗ್ ಸಿ ಶಾನ್ ಮಾರ್ಷ್ ಬಿ ಬ್ರಾಡ್ ಹಾಗ್  23
ವಿರಾಟ್ ಕೊಹ್ಲಿ ಸಿ ವೇಡ್ ಬಿ ಮಿಷೆಲ್ ಮಾರ್ಷ್  31
ಮಹೇಂದ್ರ ಸಿಂಗ್ ದೋನಿ ಔಟಾಗದೆ  21
ಇತರೆ: (ವೈಡ್-4)  04
ವಿಕೆಟ್ ಪತನ: 1-43 (ಸೆಹ್ವಾಗ್; 6.3), 2-97 (ಕೊಹ್ಲಿ; 13.4)
ಬೌಲಿಂಗ್: ಬ್ರೆಟ್ ಲೀ 4-0-24-0, ಕ್ಲಿಂಟ್ ಮೆಕೇ 3.4-0-25-0, ಕ್ಸೇವಿಯರ್ ಡೊಹೆರ್ಟಿ 3-0-29-0, ಬ್ರಾಡ್ ಹಾಗ್ 3-0-19-1, ಮಿಷೆಲ್ ಮಾರ್ಷ್ 4-0-30-1, ಡೇವಿಡ್ ಹಸ್ಸಿ 2-0-8-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT