ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಆತಿಥ್ಯ

2017ರ ಫಿಫಾ ಜೂನಿಯರ್‌ ವಿಶ್ವಕಪ್‌
Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತವು 2017ರ ಫಿಫಾ 17 ವರ್ಷ ವಯಸ್ಸಿನೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಆತಿಥ್ಯದ ಹಕ್ಕು ತನ್ನದಾಗಿಸಿಕೊಂಡಿದೆ. ಬ್ರೆಜಿಲ್‌ನ ಸಾಲ್ವಡರ್‌ ಡ ಬಹಿಯಾದಲ್ಲಿ ಗುರುವಾರ ನಡೆದ ಫಿಫಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ  ಈ ನಿರ್ಧಾರ ಹೊರಬಿದ್ದಿದೆ.

ಈ ಟೂರ್ನಿಯ ಆತಿಥ್ಯದ ಹಕ್ಕನ್ನು ತನ್ನದಾಗಿಸಿಕೊಳ್ಳಲು ಭಾರತದ ಜೊತೆ ದಕ್ಷಿಣ ಆಫ್ರಿಕಾ, ಐರ್ಲೆಂಡ್‌ ಮತ್ತು ಉಜ್ಬೆಕಿಸ್ತಾನ ಸ್ಪರ್ಧೆಯಲ್ಲಿದ್ದವು. ಆದರೆ ಈ ಮೂರೂ ರಾಷ್ಟ್ರಗಳನ್ನು ಹಿಂದಿಕ್ಕಿದ ಭಾರತ ಪ್ರಮುಖ ಟೂರ್ನಿಯ ಆತಿಥ್ಯದ ಅವಕಾಶ ಪಡೆದಿದೆ.
‘ಹೌದು. 2017ರ ಫಿಫಾ ವಿಶ್ವಕಪ್‌ (17 ವರ್ಷ ವಯಸ್ಸಿನೊಳಗಿನವರ) ಫುಟ್‌ಬಾಲ್‌ ಟೂರ್ನಿಯ ಆತಿಥ್ಯದ ಹಕ್ಕನ್ನು ಭಾರತ ತನ್ನದಾಗಿಸಿಕೊಂಡಿದೆ’ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಕಾರ್ಯದರ್ಶಿ ಕುಶಾಲ್‌ ದಾಸ್‌ ಗುರುವಾರ ತಿಳಿಸಿದರು.

ಈ ಟೂರ್ನಿಯಲ್ಲಿ 24 ತಂಡಗಳು ಪಾಲ್ಗೊಳ್ಳಲಿವೆ. ಆತಿಥೇಯರು ಎಂಬ ಕಾರಣ ಭಾರತಕ್ಕೂ ಆಡಲು ಅವಕಾಶ ಲಭಿಸಿದೆ. ಈ ಮೂಲಕ ಭಾರತದ ಫುಟ್‌ಬಾಲ್‌ ತಂಡ ಇದೇ ಮೊದಲ ಬಾರಿಗೆ ಫಿಫಾ ಜೂನಿಯರ್‌ ವಿಶ್ವಕಪ್‌ನಲ್ಲಿ ಆಡಲಿದೆ. ಮಾತ್ರವಲ್ಲ, ಈ ಟೂರ್ನಿ ಭಾರತದಲ್ಲಿ ನಡೆಯಲಿರುವ ಅತಿದೊಡ್ಡ ಫುಟ್‌ಬಾಲ್‌ ಟೂರ್ನಿ ಎನಿಸಲಿದೆ. ಫಿಫಾ ಟೂರ್ನಿಯೊಂದು ಭಾರತದಲ್ಲಿ ನಡೆಯಲಿರುವುದು ಇದೇ ಮೊದಲು.

ಭಾರತ 2006 ರಲ್ಲಿ ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್ಸ್‌ನ ಯೂತ್‌ ಚಾಂಪಿಯನ್‌ಷಿಪ್‌ಅನ್ನು (20 ವರ್ಷ ವಯಸ್ಸಿನೊಳಗಿನವರ) ಮತ್ತು 2008 ರಲ್ಲಿ ಎಎಫ್‌ಸಿ ಚಾಲೆಂಜ್‌ ಕಪ್‌ನ್ನು ಆಯೋಜಿಸಿತ್ತು. ಆದರೆ ಒಮ್ಮೆಯೂ ಫಿಫಾ ಟೂರ್ನಿಗೆ ಆತಿಥ್ಯ ವಹಿಸಿರಲಿಲ್ಲ.
ಟೂರ್ನಿಯ ದಿನಾಂಕವನ್ನು ಫಿಫಾ ಕೆಲ ದಿನಗಳ ಬಳಿಕ ಪ್ರಕಟಿಸಲಿದೆ. ಪಂದ್ಯಗಳು ಆರು ಅಥವಾ ಎಂಟು ನಗರಗಳಲ್ಲಿ ನಡೆಯುವ ಸಾಧ್ಯತೆಯಿದೆ. ಬೆಂಗಳೂರು, ನವದೆಹಲಿ, ಕೋಲ್ಕತ್ತ, ಮುಂಬೈ, ಚೆನ್ನೈ, ಮಡಗಾಂವ್‌, ಗುವಾಹಟಿ ಮತ್ತು ಕೊಚ್ಚಿ ನಗರಗಳಲ್ಲಿ ಪಂದ್ಯಗಳು ನಡೆಯುವ ಸಾಧ್ಯತೆಯೇ ಅಧಿಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT