ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಕೊನೆಯ ಚಾ ಅಂಗಡಿ

Last Updated 6 ಜನವರಿ 2011, 11:20 IST
ಅಕ್ಷರ ಗಾತ್ರ

ಮಾನಾ, ಹಿಮಾಲಯದ ಸೆರಗಿನ ಪುಟ್ಟ ಹಳ್ಳಿ. ಭಾರತ-ಚೀನಾ ಗಡಿಯೀಚೆಗಿನ ಕೊನೆಯ ಜನವಸತಿ ಇರುವ ಪ್ರದೇಶ. ಪ್ರಕೃತಿ ಸೌಂದರ್ಯದ ಬೀಡಾಗಿರುವ, ಉತ್ತರಖಂಡ ರಾಜ್ಯದಲ್ಲಿಯೇ ಕಡಿಮೆ ಜನವಸತಿ ಇರುವ ಮಾನಾ ರಾಷ್ಟ್ರೀಯ ಹೆದ್ದಾರಿ ನಂ.58 ಕೊನೆಗೊಳ್ಳುವ ಸ್ಥಳವಾಗಿದೆ.

ಹರಿದ್ವಾರದಿಂದ ಸುಮಾರು 350 ಕಿ.ಮೀ. ದೂರ ಇರುವ ಮಾನಾಕ್ಕೆ ರಸ್ತೆ ಪ್ರಯಾಣದಲ್ಲಿ ತಲುಪಲು ಎರಡು ದಿನ ಬೇಕು. ಕಣಿವೆಯುದ್ದಕ್ಕೂ ಕಿರಿದಾದ ರಸ್ತೆ. ಆ ಕಾರಣದಿಂದಲೇ ತ್ವರಿತ ಪ್ರಯಾಣ ಅಸಾಧ್ಯ. ಭೂಕುಸಿತ ಸಾಮಾನ್ಯವಾದ್ದರಿಂದ ಪ್ರಯಾಣಕ್ಕೆ ಕಾಲಮಿತಿ ವಿಧಿಸುವುದೂ ಕಷ್ಟ. ರಾತ್ರಿಯಲ್ಲಿ ಪ್ರಯಾಣ ನಿಷೇಧ ರೂಢಿಯಲ್ಲಿದೆ. ಖ್ಯಾತ ಯಾತ್ರಾಸ್ಥಳವಾಗಿರುವ ಬದರಿನಾಥದಿಂದ ಕೇವಲ 4 ಕಿ.ಮೀ. ದೂರವಿರುವ ಮಾನಾಕ್ಕೆ ಹೋಗದಿರುವವರೇ ಹೆಚ್ಚು.

ಸಮುದ್ರ ಮಟ್ಟದಿಂದ ಸುಮಾರು 12 ಸಾವಿರ ಅಡಿ ಎತ್ತರದಲ್ಲಿರುವ ಮಾನಾದಲ್ಲಿ ವಾಸವಾಗಿರುವ ಕುಟುಂಬಗಳ ಸಂಖ್ಯೆ ಇನ್ನೂರಕ್ಕೂ ಕಡಿಮೆ. ಇಂಡೋ-ಮುಂಗೋಲಿಯನ್ ವರ್ಗದ ಭೂಟಿಯಾ ಜನಾಂಗದ ಇಲ್ಲಿಯ ಜನರು ಜೀವನ ನಿರ್ವಹಣೆಗಾಗಿ ಕುರಿ ಸಾಕಣೆ, ಹೈನುಗಾರಿಕೆ ಮಾಡುತ್ತಾರೆ. ಉಣ್ಣೆ ಉಡುಪು ತಯಾರಿಸಿ ಮಾರುತ್ತಾರೆ. ಮಾಂಸವನ್ನು ಒಣಗಿಸಿ ಮಾರಾಟ ಮಾಡುವುದು ಹಾಗೂ ಪ್ರವಾಸಿಗರಿಗೆ ಆಹಾರ ಒದಗಿಸುವ ಮೂಲಕವೂ ಆದಾಯ ಗಳಿಸುತ್ತಾರೆ. ಅಂದಹಾಗೆ, ಇಲ್ಲಿಯ ಜನರು ಇಲ್ಲಿರುವುದು ವರ್ಷದಲ್ಲಿ ಆರೇ ತಿಂಗಳು. ನವೆಂಬರ್ ಬಂತೆಂದರೆ ಮನೆಯಲ್ಲಿಯ ಆಹಾರ ಪದಾರ್ಥ, ಇತರ ವಸ್ತುಗಳನ್ನು ಮಾರಾಟ ಮಾಡಿ, ಬಾಗಿಲಿಗೆ ಬೀಗ ಜಡಿದು, ಕೆಳಗಡೆಯ ಗೋಪೇಶ್ವರ ಮುಂತಾದ ಪ್ರದೇಶಗಳಿಗೆ ಕೂಲಿಗಾಗಿ ವಲಸೆ ಹೋಗುತ್ತಾರೆ. ಮರಳುವುದು ಏಪ್ರಿಲ್‌ನಲ್ಲಿ. ಅಲ್ಲಿಯವರೆಗೂ ಮಾನಾದಲ್ಲಿ ಹಿಮದ ದಪ್ಪ ಹೊದಿಕೆ. ಪ್ರೀತಿಯಿಂದ ಬೆಳೆಸಿದ ಸಾಕು ಪ್ರಾಣಿಗಳನ್ನು ಮಾರಾಟ ಮಾಡಿ ಹೋಗುವವರೂ ಇದ್ದಾರೆ.

ಮಾನಾದ ಸುಮಾರು 8 ಕಿ.ಮೀ. ವ್ಯಾಪ್ತಿಯಲ್ಲಿ ವ್ಯಾಸ ಗುಹೆ, ಗಣೇಶ ಗುಹೆ, ವಸುಧಾರಾ ಜಲಪಾತ, ಲಕ್ಷ್ಮೀವನ, ಸತಿಪಂತ, ಮದುಕುಂಡ ಗುಹೆ, ದೇವತಾಲ, ರಾಕ್ಸಸತಾಲ, ವ್ಯಾಸತಾಲ ಮುಂತಾದ ಸ್ಥಳಗಳಿವೆ. ಗಂಗೋತ್ರಿಗೆ ಚಾರಣ, ಹಿಮಶಿಖರ ಏರುವ ಸಾಹಸ ಪ್ರವಾಸೋದ್ಯಮ ನಡೆಸುವ ಸಂಸ್ಥೆಗಳೂ ಇಲ್ಲಿವೆ.

ಬೆಳಗಿನಲ್ಲಿ ಮಾನಾದಿಂದ ಕಾಣುವ ಹಿಮಾಚ್ಚಾದಿತ ಶಿಖರಗಳನ್ನು ನೋಡುವುದು ಕಣ್ಣಿಗೆ ಹಬ್ಬ. ಭಾರತದ ಕೊನೆಯ ಚಾದಂಗಡಿ ಎಂದೂ ಅದನ್ನು ಕರೆಯಲಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT