ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಯೋಧರಿಗೆ ಪಾಕ್ ಪಡೆಯಿಂದ ಚಿತ್ರಹಿಂಸೆ

ಯುದ್ಧಾಪರಾಧದ ವಿವಾದ ಎಬ್ಬಿಸಿದ ಪಾಕ್ ಸೈನಿಕನ ಮಾಹಿತಿ
Last Updated 1 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಕಾರ್ಗಿಲ್ ಯುದ್ಧಕ್ಕೆ ಸ್ವಲ್ಪವೇ ಮುನ್ನ ಭಾರತದ ಯೋಧ ಸೌರಭ್ ಕಾಲಿಯಾ ಅವರನ್ನು ಹತ್ಯೆ ಮಾಡಿದ ರೀತಿಯ ಬಗ್ಗೆ ಪಾಕಿಸ್ತಾನಿ ಯೋಧ ಬಹಿರಂಗಗೊಳಿಸಿರುವ ಸಂಗತಿಗಳನ್ನು ಅಂತರ್ಜಾಲದಲ್ಲಿ ಹರಿಬಿಡಲಾಗಿದ್ದು, ಇದು ಯುದ್ಧಾಪರಾಧದ ಹೊಸ ವಿವಾದವನ್ನು ಹುಟ್ಟುಹಾಕಿದೆ.

ಯೂಟ್ಯೂಬ್‌ನಲ್ಲಿ ಈ ವಿಡಿಯೋ ಹಾಕಲಾಗಿದ್ದು, ಸೌರಭ್ ಕಾಲಿಯಾ ಅವರನ್ನು ಹತ್ಯೆ ಮಾಡುವ ಮುನ್ನ ಯಾತನೀಯ ಚಿತ್ರಹಿಂಸೆ ನೀಡಿರುವ ಆಪಾದನೆಗಳು ಕೇಳಿಬಂದಿವೆ.
23 ವರ್ಷದ ಕಾಲಿಯಾ ಹಾಗೂ ಇತರ ಐವರು ಸೈನಿಕರು ಹತ್ಯೆಯಾದ ರೀತಿಯ ಬಗ್ಗೆ ಪಾಕಿಸ್ತಾನದ ಯೋಧ ಭುಲೆ ಖಾಂದಾನ್ ನೀಡಿರುವ ವಿವರಗಳನ್ನು ಈ ವಿಡಿಯೊ ಒಳಗೊಂಡಿದೆ.

ಕಾರ್ಗಿಲ್ ಯುದ್ಧಕ್ಕೆ ಮುನ್ನ ಸೌರಭ್ ಮತ್ತು ಇತರ ಯೋಧರನ್ನು ಹತ್ಯೆ ಮಾಡಲಾಗಿತ್ತು. ಆಗ ನಡೆಸಿದ ಮರಣೋತ್ತರ ಪರೀಕ್ಷಾ ವರದಿಯಲ್ಲಿ, ಯೋಧರನ್ನು ಸಿಗರೇಟ್‌ನಿಂದ ಸುಟ್ಟು, ಕಿವಿಯ ತಮಟೆಗಳಿಗೆ ಕಾದ ಕಬ್ಬಿಣದ ಸರಳು ಚುಚ್ಚಿ, ಕಾಲುಗಳನ್ನು ಕತ್ತರಿಸಿ ಚಿತ್ರಹಿಂಸೆ ನೀಡಲಾಗಿದೆ ಎಂದು ಹೇಳಲಾಗಿತ್ತು. ಇದೀಗ ಪಾಕಿಸ್ತಾನದ ಸೈನಿಕನಿಂದಲೂ ಚಿತ್ರಹಿಂಸೆಯ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಈ ಪ್ರಕರಣವನ್ನು ಭಾರತವು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು ಎಂದು ಹುತಾತ್ಮ ಸೌರಭ್ ಕಾಲಿಯಾ ಅವರ ತಂದೆ ಎನ್.ಕೆ.ಕಾಲಿಯಾ ಒತ್ತಾಯಿಸಿದ್ದಾರೆ.

ಈ ಹತ್ಯೆ ವೇಳೆ ಪಾಕಿಸ್ತಾನದ ಒಳಾಡಳಿತ ಸಚಿವರಾಗಿದ್ದ ರೆಹಮಾನ್ ಮಲಿಕ್ ಅವರು, ಪ್ರತಿಕೂಲ ಹವಾಮಾನದಿಂದ ಕಾಲಿಯಾ ಸಾವಿಗೀಡಾಗಿರಬಹುದು ಎಂದು ಸಮರ್ಥಿಸಿಕೊಂಡಿದ್ದರು.

`1990ರ ಮೇ 13ರಂದು ಭಾರತದ ಪಡೆಯ ಆರು ಯೋಧರು ನಮ್ಮೆಡೆಗೆ ಧಾವಿಸಿ ಬಂದರು. ನಮ್ಮ ಸೇನಾ ಚೌಕಿಯನ್ನು ವಶಪಡಿಸಿಕೊಳ್ಳುವುದು ಅವರ ಗುರಿಯಾಗಿತ್ತು. ಒಂದೊಮ್ಮೆ ಅವರು ಅದರಲ್ಲಿ ಯಶಸ್ವಿಯಾಗಿದ್ದರೆ ಲೇಹ್‌ಗೆ ತೆರಳುವ ಮಾರ್ಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದರು. ಆದರೆ ಅವರ ಯೋಜನೆ ಕಾರ್ಯಗತವಾಗಲಿಲ್ಲ; ಬದಲಿಗೆ ನಾವೇ (ಪಾಕ್ ಯೋಧರು) ಅವರನ್ನು ಸೆರೆ ಹಿಡಿದೆವು' ಎಂದು ಪಾಕ್ ಯೋಧ ಹೇಳಿದ್ದಾನೆ.

`ಅವರು ನಮ್ಮ ಸಮೀಪಕ್ಕೆ ಬರುತ್ತಿದ್ದಂತೆ ಓಡಲು ಶುರು ಮಾಡಿದರು. ಆಗ ಗುಂಡು ಹಾರಿಸಲು ಮೊದಲಾದೆವು. ಗುಂಡೇಟಿನಿಂದಾಗಿ ಅವರೆಲ್ಲಾ ಹತರಾದರು. ನಂತರ ನಾವು ಗಡಿ ನಿಯಂತ್ರಣ ರೇಖೆಯ ಬಳಿ ನಿಂತು, ಹತ ಯೋಧರ ಶವವನ್ನು ತೆಗೆದುಕೊಂಡು ಹೋಗುವಂತೆ ಕೂಗಿ ಕೂಗಿ ಹೇಳಿದೆವು. ಆದರೆ ಭಾರತದ ಕಡೆಯವರಿಗೆ ತಮ್ಮವರ ಶವವನ್ನು  ತೆಗೆದುಕೊಂಡು ಹೋಗುವಷ್ಟು ಧೈರ್ಯ ಇರಲಿಲ್ಲ' ಎಂದೂ ಖಾಂದಾನ್ ಹೇಳಿದ್ದಾನೆ.

4ನೇ ಜಾಟ್ ತುಕಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸೌರಭ್ ಕಾಲಿಯಾ, ಭಾರತದ ಗಡಿಯೊಳಕ್ಕೆ ಪಾಕಿಸ್ತಾನ ಸೇನೆ ಭಾರಿ ಪ್ರಮಾಣದಲ್ಲಿ ನುಗ್ಗಿದ್ದನ್ನು ಗಮನಿಸಿ ವರದಿ ಮಾಡಿದ ಮೊತ್ತಮೊದಲ ಭಾರತೀಯ ಸೇನಾ ಅಧಿಕಾರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT