ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವರ್ತಕರ ರಕ್ಷಣೆ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಬೀಜಿಂಗ್ (ಪಿಟಿಐ): ಯಿವು ವ್ಯಾಪಾರ ಕೇಂದ್ರದಲ್ಲಿ ಒತ್ತೆಯಾಳಾಗಿದ್ದ ಇಬ್ಬರು ಭಾರತೀಯ ವ್ಯಾಪಾರಸ್ಥರನ್ನು ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಹೋಟೆಲ್‌ಗೆ ಸ್ಥಳಾಂತರಿಸಿದ್ದಾರೆ. ಇದೇ ವೇಳೆ, ಯಿವು ವ್ಯಾಪಾರ ಕೇಂದ್ರದ ಚಟುವಟಿಕೆಗಳಿಂದ ದೂರವಿರುವಂತೆ ಭಾರತದ ವ್ಯಾಪಾರಿಗಳಿಗೆ ಭಾರತೀಯ ರಾಯಭಾರ ಕಚೇರಿಯು ಸಲಹಾ ಪ್ರಕಟಣೆ ಹೊರಡಿಸಿದೆ.

 ಶಾಂಘೈ ನಗರಕ್ಕೆ ಸಮೀಪವಿರುವ ಜೆಜಿಂಗ್ ಪ್ರಾಂತ್ಯದ ಯಿವು ವ್ಯಾಪಾರ ಕೇಂದ್ರದಲ್ಲಿ ಒತ್ತೆಯಾಳಾಗಿದ್ದ  ಭಾರತದ ಶಾಮಸುಂದರ್ ಅಗರ್‌ವಾಲ್ ಮತ್ತು ದೀಪಕ್ ರಹೇಜಾ ಅವರನ್ನು ಪೊಲೀಸರು ಹೋಟೆಲ್‌ವೊಂದಕ್ಕೆ ಸ್ಥಳಾಂತರಿಸಿದ್ದು, ಅವರ ಕಾವಲಿಗೆ ಇಬ್ಬರು ಪೊಲೀಸರನ್ನು ನೇಮಿಸಲಾಗಿದೆ.

ದೊಡ್ಡ ಸಂಖ್ಯೆಯಲ್ಲಿ ಸ್ಥಳೀಯರು ಹೋಟೆಲ್ ಸುತ್ತ ನೆರೆದಿರುವುದರಿಂದ ನಮಗೆ ಇನ್ನೂ ಅಪಾಯದ ಆತಂಕವಿದೆ ಎಂದು ರಹೇಜಾ ಅವರು ದೂರವಾಣಿ ಮೂಲಕ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ಮಧ್ಯೆ ಈ ಇಬ್ಬರು ವ್ಯಾಪಾರಿಗಳನ್ನು ಶಾಂಘೈಗೆ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ತಾವು ಸ್ಥಳೀಯ ಕಂಪೆನಿಯೊಂದರ ಉದ್ಯೋಗಿಗಳಾಗಿದ್ದು, ಕಂಪೆನಿಯು ಸರಕು ಸರಬರಾಜು ಮಾಡಿದ ಸ್ಥಳೀಯ ವ್ಯಾಪಾರಿಗಳಿಗೆ ಹಣ ಪಾವತಿಸಬೇಕಾಗಿದೆ. ಅದಕ್ಕಾಗಿ ಕಂಪೆನಿಯ ಮಾಲೀಕನನ್ನು ಕೇಳುವುದನ್ನು ಬಿಟ್ಟು ತಮ್ಮನ್ನು ಡಿಸೆಂಬರ್ 15ರಂದು ಅಪಹರಿಸಿ ಚಿತ್ರಹಿಂಸೆ ನೀಡಲಾಗಿದೆ ಎಂದು ಅಗರ್‌ವಾಲ್ ಮತ್ತು ರಹೇಜಾ ದೂರಿದ್ದಾರೆ.

ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿರುವ ಸ್ಥಳೀಯ ವ್ಯಾಪಾರಿಗಳು, ತಮಗೆ ಬರಬೇಕಿರುವ ಲಕ್ಷಾಂತರ ಯುವಾನ್ (ಚೀನಾದ ಹಣ) ಸಂದಾಯವಾಗುವವರೆಗೆ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಒತ್ತೆಯಾಳಾಗಿದ್ದ ವ್ಯಾಪಾರಿಗಳನ್ನು ಬಿಡಿಸಿಕೊಳ್ಳಲು ನ್ಯಾಯಾಲಯಕ್ಕೆ ಹೋಗಿದ್ದ ಭಾರತದ ರಾಜತಾಂತ್ರಿಕ ಅಧಿಕಾರಿ ಎಸ್. ಬಾಲಚಂದ್ರನ್ ಅವರ ಮೇಲೆ ನ್ಯಾಯಾಲಯದ್ಲ್ಲಲೇ ಹಲ್ಲೆ ಮಾಡಲಾಗಿದ್ದು, ಅವರು ಈಗ ಶಾಂಘೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಿವು ವ್ಯಾಪಾರ ಕೇಂದ್ರದಲ್ಲಿ ಯಾವುದೆ ರೀತಿಯ ವಹಿವಾಟು ನಡೆಸಬಾರದು ಎಂದು ಭಾರತೀಯ ವ್ಯಾಪಾರಿಗಳಿಗೆ ಭಾರತದ ರಾಯಭಾರ ಕಚೇರಿಯು ಸಲಹೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT