ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಕ್ರೀಡೆ ಬೆಳೆದಿದೆ- ಬದಲಾಗಿಲ್ಲ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ಒಂದೂವರೆ ದಶಕದಿಂದ ಭಾರತ ಟೆನಿಸ್ ಲೋಕದಲ್ಲಿ ಹೊಳೆಯುತ್ತಿರುವ ಒಲಿಂಪಿಯನ್ ರುಷ್ಮಿ ಚಕ್ರವರ್ತಿ 12 ವರ್ಷಗಳಿಂದ ವಿಶ್ವ ಡಬ್ಲ್ಯೂಟಿಎ ಕ್ರಮಾಂಕ ಪಟ್ಟಿಯಲ್ಲಿ ನಿರಂತರವಾಗಿ ಸ್ಥಾನ ಉಳಿಸಿಕೊಂಡಿರುವವರು.  ಹಿಂದೊಮ್ಮೆ  310ನೇ ಡಬ್ಲ್ಯೂಟಿಎ ರ‌್ಯಾಂಕಿಂಗ್ ತಲುಪಿದ ಶ್ರೇಯ ಹೊಂದಿದ್ದಾರೆ.
 
ಹನ್ನೊಂದು ಐಟಿಎಫ್ ಟೂರ್ನಿಯ ಸಿಂಗಲ್ಸ್‌ಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಭಾರತದ ಟೆನಿಸ್ ತಾರೆಗಳಾದ ಸಾನಿಯಾ ಮಿರ್ಜಾ, ಸಾಯಿ ಜಯಲಕ್ಷ್ಮಿ, ಸನಾ ಭಾಂಬ್ರಿ, ಇಶಾ ಲಖಾನಿ ಮತ್ತಿತರರ ಜೊತೆಗೂಡಿ 32 ಡಬಲ್ಸ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕಾಮನ್‌ವೆಲ್ತ್  ಕ್ರೀಡಾಕೂಟ, ಆಫ್ರೋ ಏಷ್ಯನ್ ಗೇಮ್ಸ ಹೀಗೆ ಹಲವು ಕ್ರೀಡಾಕೂಟಗಳಲ್ಲೂ ಯಶಃ ಕಂಡಿದ್ದಾರೆ.

ತಮ್ಮ ಎಂಟನೇ ವರ್ಷದಿಂದ ಟೆನಿಸ್ ಆಡಲು ಆರಂಭಿಸಿದ ರುಷ್ಮಿ 3*ರ ಹರೆಯದಲ್ಲಿ ಈಚೆಗೆ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. ಹಲವು ಸಾಧನೆಗಳ ಜೊತೆ ಸುದೀರ್ಘ ಕಾಲ ಟೆನಿಸ್ ಆಡುತ್ತಿರುವ ರುಷ್ಮಿ, ಭಾರತದ ಮಹಿಳಾ ಟೆನಿಸ್ ಬೆಳವಣಿಗೆಯನ್ನು ಹತ್ತಿರದಿಂದ ಕಂಡವರು.

ಗುಲ್ಬರ್ಗ ಓಪನ್ ಟೂರ್ನಿಯಲ್ಲಿ ಭಾರತೀಯ ಎರಡನೇ ಶ್ರೇಯಾಂಕಿತೆ, ತನಗಿಂತ 15 ವರ್ಷ ಕಿರಿಯ  ಕೈರಾ ಶ್ರಾಫ್‌ಗೆ ಆಘಾತ ನೀಡಿ, ಆಟದ ಹಸಿವಿನ್ನೂ ಮುಗಿದಿಲ್ಲ ಎಂದು ತೋರಿಸಿಕೊಟ್ಟವರು. ಅವರು `ಪ್ರಜಾವಾಣಿ~ ಜೊತೆ ಹಂಚಿಕೊಂಡ ಅನಿಸಿಕೆಗಳು ಇಲ್ಲಿವೆ.

* ನೀವು ಟೆನಿಸ್ ಆಟ ಆಡಲು ಆರಂಭಿಸಿದಾಗ ಪರಿಸ್ಥಿತಿ ಹೇಗಿತ್ತು?
`ಟೆನಿಸ್...! ಏನದು?, ನೀವೇನು ಮಾಡುತ್ತೀರಿ?~ ಎಂದು ನನಗೇ ಕೇಳುತ್ತಿದ್ದರು. ಇದರಿಂದ ನಾನು ಬಾಲ್ಯದಲ್ಲಿ ಆಡಿದ್ದರೂ ಪೂರ್ಣ ಪ್ರಮಾಣಕ್ಕೆ ಬರುವುದು ನಿಧಾನವಾಯಿತು. ಪ್ರಮುಖ ಟೂರ್ನಿಯಲ್ಲಿ ಆಡಲು ವಿದೇಶಕ್ಕೆ ಹೋಗಬೇಕಿತ್ತು. ಖರ್ಚು-ವೆಚ್ಚ ಬೇರೆ. ಪ್ರಾಯೋಜಕರು -ಪ್ರೋತ್ಸಾಹಕರು ಇಲ್ಲ.

ಹೀಗಾಗಿ ಟೂರ್ನಿಗಳನ್ನು ಸೂಕ್ಷ್ಮವಾಗಿ ಆಯ್ಕೆ ಮಾಡಬೇಕಿತ್ತು. ಹಲವೆಡೆ ಸೂಕ್ತ ವ್ಯವಸ್ಥೆಯೂ ಇರುತ್ತಿರಲಿಲ್ಲ. ಆಟದ ಜೊತೆಗೆ ಪ್ರಯಾಣ, ತಂಗಲೂ ನಾವು ಹೆಣಗಾಡಬೇಕಿತ್ತು. ಇನ್ನೊಂದೆಡೆ ದೇಶದಲ್ಲಿ ಕೆಲವೇ ಕೋಚ್‌ಗಳು ಲಭ್ಯವಿದ್ದರು. ಆಧುನಿಕ ತರಬೇತಿಗಳ ಆಲೋಚನೆಯೂ ಇರಲಿಲ್ಲ. ಇದೊಂದು ವೃತ್ತಿ ಎಂದು ಸಮಾಜ ಪರಿಗಣಿಸುತ್ತಲೇ ಇರಲಿಲ್ಲ.

*ಉತ್ತೇಜನ ಹೇಗೆ ಸಿಕ್ಕಿತು?
-ನನ್ನ  ಬಾಲ್ಯದಿಂದ ಇಲ್ಲಿ ತನಕ ತಂದೆ-ತಾಯಿ ನಿರಂತರವಾಗಿ ಪ್ರೋತ್ಸಾಹಿಸಿದ್ದಾರೆ. ಬಾಲ್ಯದಲ್ಲಿ ಅಪ್ಪ ಮತ್ತು ಅಮ್ಮ ಅವರ ಸಮಸ್ಯೆಗಳನ್ನು ಬದಿಗೊತ್ತಿ, ಒಬ್ಬರು ನನ್ನ ಜೊತೆ ಟೂರ್ನಿ-ತರಬೇತಿಗಳಿಗೆ ಬರುತ್ತಿದ್ದರು. ನನ್ನ ಆಟಕ್ಕೆ ವೆಚ್ಚ ಮಾಡುತ್ತಿದ್ದರು. ಆದ್ದರಿಂದ ನಾನು ಇಲ್ಲಿದ್ದೇನೆ.

ಅಂತಹ ಅವಕಾಶ ಎಷ್ಟು ಹುಡುಗಿಯರಿಗೆ ಸಿಗಬಹುದು ಎಂಬುದು ನನಗೆ ಗೊತ್ತಿಲ್ಲ. ಆದರೆ ನಾನು ಅದೃಷ್ಟವಂತೆ. ಆ ಕಾಲದಲ್ಲೇ ಅಪ್ಪ-ಅಮ್ಮ ನನ್ನನ್ನು ಬೆಂಬಲಿಸಿದ್ದರು. ಪುರೋಗಾಮಿ ಆಲೋಚನೆ ಹೊಂದಿದ್ದರು. ಈಗ ಅಂತಹ ಪರಿಸ್ಥಿತಿ ಕಡಿಮೆಯಾಗಿದೆ. ಕೋಚ್‌ಗಳು ಇದ್ದಾರೆ. ತಕ್ಕಮಟ್ಟಿಗೆ ಟೂರ್ನಿಗಳು ನಡೆಯುತ್ತವೆ.

*ಯುರೋಪ್‌ನ ದೇಶಗಳ ಆಟಗಾರ್ತಿಯರ ಮಟ್ಟಕ್ಕೆ ನಮ್ಮವರು ಏರಿಲ್ಲ ಅನ್ನಿಸುತ್ತದಾ?
-ಭಾರತದಲ್ಲಿ ಮಹಿಳಾ ಟೆನಿಸ್ ಅಂದಿಗಿಂತ ಇಂದು ಬೆಳೆದಿದೆ. ಆದರೆ ಬದಲಾಗಿಲ್ಲ. ಇನ್ನೂ ಬಹುದೂರ ಸಾಗಬೇಕಾಗಿದೆ. ಮಹಿಳೆಯನ್ನು ನೋಡುವ ನಮ್ಮ ಮನಸ್ಥಿತಿಯೂ ಬದಲಾಗಿಲ್ಲ. ಇಲ್ಲಿನ ಸಂಸ್ಕೃತಿ, ಸಮಾಜ, ಕುಟುಂಬ ವ್ಯವಸ್ಥೆಗಳ ಜೊತೆ ಆಟದ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಆದರೆ ವಿದೇಶದ ಪರಿಸ್ಥಿತಿಯೇ ಬೇರೆ. ವೃತ್ತಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲು ಅವಕಾಶ ಇದೆ.

ಮತ್ತೊಂದೆಡೆ ಚೀನಾ ಮತ್ತಿತರ ದೇಶಗಳಲ್ಲಿ ಎಲ್ಲ ಸೌಕರ್ಯಗಳನ್ನು ಸರ್ಕಾರವೇ ನೀಡುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಟೂರ್ನಿಗಳನ್ನು ಆಯೋಜಿಸುತ್ತಾರೆ. ಚೀನಾ ಹಾಗೂ ಪಾಶ್ಚಾತ್ಯ ದೇಶಗಳಂತೆ ಶಿಕ್ಷಣದ ಜೊತೆಗೆ  ಉತ್ಕೃಷ್ಟ ಮಟ್ಟದ ಕ್ರೀಡಾ ತರಬೇತಿ ವ್ಯವಸ್ಥೆ ನಮ್ಮಲ್ಲಿ ಹೆಚ್ಚು ಬೆಳೆಯಬೇಕಿದೆ.
 
ಮತ್ತೊಂದೆಡೆ ಶಿಕ್ಷಣ ಮತ್ತು ಕ್ರೀಡೆ ಮಧ್ಯೆ ಆದ್ಯತೆ ನೀಡಬೇಕಾದ ದ್ವಂದ್ವ. ಅಂತಹ  ಪರಿಸ್ಥಿತಿ-ಸೌಕರ್ಯ ಪಡೆದು ಬರುವ ವಿದೇಶಿಯರ ಜೊತೆ ಸ್ಪರ್ಧಿಸಬೇಕಾದ ಸವಾಲು ಭಾರತೀಯ ಹೆಣ್ಣುಮಕ್ಕಳಿಗೆ ಇದೆ. ಆ ಪ್ರತಿಕೂಲ ಪರಿಸ್ಥಿತಿಗಳನ್ನು ಮೀರಿದರೆ, ಭಾರತದ ಹುಡುಗಿಯರು ಮೇಲುಗೈ ಸಾಧಿಸುವುದರಲ್ಲಿ ಸಂಶಯವೇ ಇಲ್ಲ.

*ಹೊಸ ಟೆನಿಸ್ ಪ್ರತಿಭೆಗಳಿಗೆ ನಿಮ್ಮ ಅನುಭವದ ಹಿತವಚನ?
ಯಾವುದೇ ಯಶಸ್ಸಿಗೆ ಅಡ್ಡದಾರಿ ಹುಡುಕಬೇಡಿ. ಯಾರು ಏನೇ ಹೇಳಿದರೂ ನೀವು ನಿಮ್ಮ ಆಟಕ್ಕೆ ಸಂಪೂರ್ಣ ಸಮರ್ಪಿಸಿಕೊಳ್ಳಿ. ವೈಜ್ಞಾನಿಕ ನೆಲೆಯ ಆಹಾರ ಪದ್ಧತಿ, ವ್ಯಾಯಾಮ, ತರಬೇತಿಗಳನ್ನು ಕಷ್ಟಪಟ್ಟು ರೂಢಿಸಿಕೊಳ್ಳಿ. ಈಗ ಅವಕಾಶಗಳು ಹೆಚ್ಚುತ್ತಿವೆ. ಶ್ರಮ ಪಟ್ಟರೆ ಎತ್ತರಕ್ಕೇರಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT